ಅದೀಬ್ ಅಖ್ತರ್ | Apr 29, 2012
ಎಂದಾದರೂ ನಿಮ್ಮ ತಿಥಿಯಾಗಿದೆಯೆ ಎಂದು ಕೇಳಿದರೆ ಒಂದು ವೇಳೆ ನೀವೇನಾದರೂ ಮುಂಗೋಪಿಯಾಗಿದಿದ್ದರೆ ಉತ್ತರಿಸುವುದಕ್ಕೆ ಮೊದಲು ಒಂದೇ ಒಂದು ಕಪಾಳಕ್ಕೆ ಬಿಡುತ್ತೀರ - ಶಾಂತ ಸ್ವಭಾವದವರಾಗಿದ್ದರೆ ಇದೇನೂ ಈ ರೀತಿ ಕೇಳುತ್ತಿದ್ದೀರಲ್ಲ ನಿಮಗೆ ಒಂದು ಚೂರು ವಿವೇಕವಿಲ್ಲ ಎಂದು ಕೇಳಬಹುದು.
ಸತ್ತರೆ ತಾನೇ ತಿಥಿಯಾಗುವುದೆಂದು ನಿಮ್ಮ ಆಲೋಚನೆಯೇನೊ ಸರಿ. ಆದರೆ ಕೆಲವೊಮ್ಮೆ ಬದುಕಿಕೊಂಡಿರುವಾಗಲೇ ತಿಥಿ ಮಾಡಿಸಿಕೊಳ್ಳಬೇಕಾಗುತ್ತೆ - ಅಂಥ ಸಂದರ್ಭ ಒದಗಿ ಬರುವುದು ನೀವು ಯಾವುದಾದರೊಂದು ಸಭೆಗೆ ಮುಖ್ಯ ಅತಿಥಿಯಾಗಿಯೋ ಅಥವಾ ಮೂರನೆ ದರ್ಜೆಯ ಅತಿಥಿಯಾಗಿಯೋ ಹೋಗಬೇಕಾದಾಗ.
ನಾನು ಇದುವರೆಗೆ ನನ್ನ ತಿಥಿ ಅನೇಕ ಬಾರಿ ಮಾಡಿಸಿಕೊಂಡಿದ್ದೇನೆ, ಅಂದರೆ ಅನೇಕ ಕಡೆ ಸಭೆ ಸಮಾರಂಭಗಳಿಗೆ ಅತಿಥಿಯಾಗಿ ಹೋಗಿದ್ದೇನೆ. ಒಂದಿಷ್ಟು ಕಥೆಗಳನ್ನು ಬರೆದಿರುವುದರಿಂದ ಆಮೇಲೆ ವೇದಿಕೆ ಮೇಲೆ ನಿಂತು ಮಾತನಾಡುವುದರಿಂದ ಅನೇಕ ಕಡೆ ಮುಖ್ಯ ಅತಿಥಿಯಾಗಿ ಹೋಗಿ ತಿಥಿ ಮಾಡಿಸಿಕೊಂಡಿದ್ದೇನೆ.
ಹೆಚ್ಚಾಗಿ ನಾನು ಭಾಗವಹಿಸಿರುವುದು "ರಾಜ್ಯೋತ್ಸವ ಪಂಕ್ಷನ್'ಗಳಲ್ಲಿ. ನವೆಂಬರ್‌ನಲ್ಲಿ ಮಾತ್ರ ಕಾಣಿಸಿಕೊಳ್ಳುವ ಕನ್ನಡ ಅಭಿಮಾನಿಗಳು ನನಗೆ "ಚೀಫ್ ಗೆಸ್ಟ್' ಮಾಡಿದ್ದಾರೆ.
ಒಂದೊಂದು ಕಡೆ ಒಂದೊಂದು ಅನುಭವವಾಗಿದೆ - ಇಲ್ಲಿ ಕೆಲವು ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ತುಂಬ "ಸಂತೋಷ'ವಾಗುತ್ತಿದೆ.
ಒಂದು ಕಡೆ ಒಂದು ಸಮಾರಂಭಕ್ಕೆ ಹೋಗಿದ್ದೆ, ಸಭೆ ನಡೆಯುವುದಕ್ಕೆ ಮುಂಚೆ ಒಬ್ಬರು ಬಂದು, "ಸಭಿಕರಿಗೆ ನಿಮ್ಮ ಪರಿಚಯ ಮಾಡಿಸಬೇಕಾಗಿದೆ, ನೀವು ಕಥೆಗಾರರು ಎಂದು ಹೇಳಿದರೆ ಸಾಕಾಗುವುದಿಲ್ಲ. ಸಿನೆಮಾ ಕಥೆಗಾರರು ಎಂದರೆ ಒಳ್ಳೆಯದು. ನಿಮ್ಮ ಕಥೆ ಆಧರಿಸಿ ಯಾವುದಾದರೂ ಸಿನೆಮಾ ಬಂದಿದೆಯೇನು?'
"ಇಲ್ವಲ್ಲ' ಎಂದೆ ತಲೆ ಕೆದರಿಕೊಂಡು.
"ಹೋಗಲಿ ಯಾವುದಾದರೂ ಟಿ.ವಿ. ಸೀರಿಯಲ್ ಬಂದಿದೆಯೇನು?'
"ಇಲ್ಲ' ಈ ಸಲ ಉತ್ತರಿಸುವಾಗ ತಲೆ ತಗ್ಗಿಸಿಕೊಂಡೆ.
"ಮತ್ತೆ ಅದೆಂಥ ಸುಡುಗಾಡ ಕಥೆ ಬರಿತೀರಿ - ನಿಮ್ಮನ್ನು ಮುಖ್ಯ ಅತಿಥಿಯನ್ನಾಗಿ ಮಾಡಿದವರಿಗೆ ಬುದ್ಧಿ ಇಲ್ಲ' ಎಂದು ಹೇಳಿ ಸ್ವಲ್ಪ ಸಮಯದ ಬಳಿಕ "ನಮ್ಮ ಕಡೆಯವರೊಬ್ಬರು ನಿರ್ದೇಶಕರಿದ್ದಾರೆ, ಒಂದು ಒಳ್ಳೆ ಕತೆ ಬರೀಯಿರಿ, ಫೈಟ್ ಡ್ಯಾನ್ಸ್ ಎಲ್ಲಾ ಇರಬೇಕು. ಅಂಥ ಕಥೆ ಬರೀಯಿರಿ - ನಿರ್ದೇಶಕರ ಹತ್ತಿರ ಕರೆದುಕೊಂಡು ಹೋಗುತ್ತೇನೆ' ಎಂದರು.
ಇನ್ನೊಂದು ಕಡೆ ಇನ್ನೊಂದು ರೀತಿಯ ಅನುಭವ ಆಯಿತು-
"ಸಭೆ ನಂತರ ಯುವಕನೊಬ್ಬ ಬಂದು ತಾನು ಈ ಕನ್ನಡ ಸಂಘದ ಅಧ್ಯಕ್ಷ ಎಂದು ಹೇಳಿದ ಬಳಿಕ "ನಾನು ಸಿನೆಮಾಗಳಿಗೆ ಕಥೆಗಳನ್ನು ಬರೆಯಬೇಕೆಂದಿದ್ದೇನೆ, ತಮಿಳು ಸಿನೆಮಾದವರು ಕಥೆಗಳಿಗೆ ತುಂಬ ದುಡ್ಡು ಕೊಡುತ್ತಾರಂತಲ್ಲ ನಿಜವೇನು?' ಎಂದು ಕೇಳಿದ.
"ಹೌದು' ಎಂದೆ.
"ಹಾಗಿದ್ದರೆ ನೀವ್ಯಾಕೆ ತಮಿಳುನಾಡಿಗೆ ಹೋಗಿ ಕಥೆ ಬರೆಯಬಾರದು?'
"ನನಗೆ ತಮಿಳು ಬರುವುದಿಲ್ವಲ್ಲ'
"ಕಲಿತುಕೊಳ್ಳಬೇಕಾಗಿತ್ತು'.
"ನಾನೇನಾದರೂ ತಮಿಳು ಕಲಿತು ತಮಿಳುನಾಡಿನಲ್ಲಿರುತ್ತಿದ್ದರೆ ಇವತ್ತಿನ ನಿಮ್ಮ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ನಿಮ್ಮ ತಾತನನ್ನು ಕರೆಯುತ್ತಿದ್ದಿರೇನು?' ಎಂದು ಕೇಳಬೇಕೆಂದೆನಿಸಿತು. ಆದರೆ ಮೌನ ಧರಿಸಿಕೊಂಡೆ. ಕೆಲವು ಕಡೆ ಮೌನವಾಗಿರಬೇಕು - ಕೆಲವು ಕಡೆ ಹೆಚ್ಚಾಗಿ ಮಾತನಾಡಬಾರದು.
ಆಮೇಲೆ ಇಲ್ಲಿ ಇನ್ನೊಂದು ಮಾತು - ಇತ್ತೀಚೆಗೆ "ರಾಜ್ಯೋತ್ಸವ ಕಾರ್ಯಕ್ರಮ' ಎಂದರೆ ಅಲ್ಲಿ "ಸಂಗೀತ ರಸಮಂಜರಿ' ಕಾರ್ಯಕ್ರಮ ಇದ್ದೇ ಇರುತ್ತೆ. ಜನ "ಆರ್ಕೆಸ್ಟ್ರಾ' ಕೇಳಲು ಬಂದಿರುತ್ತಾರೆ ಅಂಥ ಕಡೆ "ಆರ್ಕೆಸ್ಟ್ರಾ' ಪ್ರಾರಂಭವಾಗುವುದಕ್ಕೆ ಮುಂಚೆ ಮುಖ್ಯ ಅತಿಥಿಯಾಗಿ ಆಗಮಿಸಿರುವ ಕನ್ನಡ ಸಾಹಿತಿಗೆ ಕನ್ನಡ ಬಗ್ಗೆ ನಾಲ್ಕು ಮಾತನಾಡಲು ಅವಕಾಶ ಕೊಡುತ್ತಾರೆ. ಅಲ್ಲಿ "ನಾಲ್ಕೇ ನಾಕು' ಮಾತಾಡಿದರೆ ಒಳ್ಳೆಯದು.
ಅಂಥ ಕಡೆ ಅವರೇ ಪಿಸುಮಾತಿನಲ್ಲಿ ಹೇಳುತ್ತಾರೆ.
"ಹೆಚ್ಚಾಗಿ ಮಾತನಾಡಲು ಹೋಗಬೇಡಿ. ಜನ ಸೇರಿರುವುದು "ಆಕ್ರೆಸ್ಟ್ರಾ' ಕೇಳಲು ನಿಮ್ಮ ಭಾಷಣ ಯಾರಿಗೆ ಬೇಕಾಗಿದೆ'.
ಸರ್ಕಾರಿ ಕನ್ನಡ ಶಾಲೆಗಳಲ್ಲಿ ಇನ್ನೊಂದು ರೀತಿಯ ಅನುಭವವಾಗಿದೆ - ಸಾಮಾನ್ಯವಾಗಿ ಸರ್ಕಾರಿ ಶಾಲೆಗಳಲ್ಲಿ ರಾಜ್ಯೋತ್ಸವ ಕಾರ್ಯಕ್ರಮವನ್ನು ಶನಿವಾರ "ಒಪ್ಪತ್ತಿನ ಸ್ಕೂಲ ಮುಗಿಸಿದ ಬಳಿಕ ಇಟ್ಟುಕೊಳ್ಳುತ್ತಾರೆ - ಅಲ್ಲಂತು ಎಲ್ಲಾ ತರಾತುರಿಯಿಂದ ನಡೆಯುತ್ತೆ. ಮಕ್ಕಳಕ್ಕಿಂತ ಶಿಕ್ಷಕರು ಮನೆಗೆ ಹೋಗುವ ಆತುರದಲ್ಲಿರುತ್ತಾರೆ - ಶಿಕ್ಷಕರು ಕನ್ನಡದ ಬಗ್ಗೆ ಮಾತು ಕೇಳುವುದರಲ್ಲಿ ಆಸಕ್ತಿ ತೋರಬಹುದೆಂಬ ಭ್ರಮೆಯಲ್ಲಿರಬಾರದು - ಅವರೆಲ್ಲರೂ ರೆಡಿಯಾಗಿ ಮನೆಗೆ ಹೋಗಲು ಚಡಪಡಿಸುತ್ತಿರುತ್ತಾರೆ ಮತ್ತು ಆಗಾಗ ಗಡಿಯಾರ ನೋಡಿಕೊಳ್ಳುತ್ತಾರೆ - ಕೆಲವರಂತೂ ಮೊಬೈಲ್‌ನಲ್ಲಿ ಮನೆಗೆ ಏನೇನೂ ಸಾಮಾನು ತರಬೇಕೆಂದು ಕೇಳಿ ಪಟ್ಟಿ ಮಾಡಿಕೊಳ್ಳುವುದರಲ್ಲಿ ಮಗ್ನರಾಗಿರುತ್ತಾರೆ.
ಎರಡು ವರ್ಷದ ಕೆಳಗೆ ನಾನು ನಮ್ಮೂರಿನ ಸರ್ಕಾರಿ ಶಾಲೆಗೆ ಹೋಗಿದ್ದೆ. ಕಾರ್ಯಕ್ರಮ ನಡೆಯುವುದಕ್ಕೆ ಮುನ್ನ ಕನ್ನಡ ಮೇಸ್ಟ್ರೆ ಬಂದು "ಕರ್ನಾಟಕದ ಬಾವುಟದಲ್ಲಿ ಯಾವ ಬಣ್ಣ ಮೇಲಿರಬೇಕು?' ಎಂದು ಕೇಳಿದರು.
"ಹಳದಿ' ಎಂದೆ.
"ನನಗೂ ಗೊತ್ತಿತ್ತು ನಿಮಗೆ ಗೊತ್ತಿದೆಯಾ ಇಲ್ಲ ಅಂತ ಕೇಳಿದೆ. ಪರವಾಗಿಲ್ಲ ಎಲ್ಲಾ ತಿಳಿದುಕೊಂಡಿದ್ದೀರಲ್ಲ' ಎಂದು ಹೊಗಳಿ ಹೋದರು - ಅವರು ಹೋದ ಬಳಿಕ ಮತ್ತೂಂದು ಮೇಸ್ಟ್ರೆ ಬಂದು,
"ಮಂಕಿ ಟೋಪಿ ಮತ್ತು ನಿಕ್ಕರ್‌ನಲ್ಲಿ ಬೆಳಗ್ಗೆ ಡೈರಿಗೆ ಹಾಲು ಕೊಳ್ಳಲು ನೀವೇ ಅಲ್ಲವೇನು ಬರುವುದು' ಎಂದು ಪ್ರಶ್ನಿಸಿದರು.
"ಹೌದು'
"ಅಷ್ಟೊತ್ತಿನಿಂದ ನಿಮಗೆ ಎಲ್ಲೋ ನೋಡಿದ್ದೇನೆಂದೆನಿಸುತ್ತಿತ್ತು - ಈಗ ನೆನಪಾಯಿತು' ಎಂದು ಹೇಳಿ ಸ್ವಲ್ಪ ಸಮಯ ಬಳಿಕ"ಒಂದೊಂದು ದಿನ ಡೈರಿಯವರು ತುಂಬ ತೆಳ್ಳಗೆ ಹಾಲು ಕೊಡುತ್ತಾರೆ ಅವರ ಮೇಲೊಂದು ಕಥೆ ಬರೆಯುವುದಕ್ಕಾಗುವುದಿಲ್ವೇನು?'
"ಬರೆಯಬಹುದು'
"ಹಾಗಿದ್ದರೆ ಬರೆಯಿರಿ, ಕಥೆಗಾರರಿಗೆ ಒಂದು ಚೂರು ಸುಳಿವು ಕೊಟ್ಟರೆ ಸಾಕು, ಎಳೆದು ಒಂದು ಬಿಡುತ್ತಾರೆಂದು ನಿಜ' ಎಂದರು.
ಇನ್ನೊಂದು ಶಾಲೆಯಲ್ಲಿÉ ಇನ್ನೊಂದು ರೀತಿಯ ಅನುಭವ ಆಯಿತು - ಸಭೆಯಲ್ಲಿ ನಾನು ಮಾತನಾಡುತ್ತಿರುವಾಗ ಒಬ್ಬ ಏಳನೇ ತರಗತಿಯ ಹುಡುಗ ಎದ್ದು "ಯಾವುದಾದರೊಂದು ಅಣ್ಣಾವರ ಸಿನೆಮಾದ ಹಾಡು ಹಾಡಿ' ಎಂದ.
"ನಾನು ಗಾಯಕನಲ್ಲ ಕಥೆಗಾರ' ಎಂದೆ.
ಆಮೇಲೆ ಇಲ್ಲಿ ಇನ್ನೊಂದು ಮುಖ್ಯವಾದ ವಿಷಯ ಹೇಳಿ ಬಿಡುತ್ತೇನೆ. ಡೈರಿಯಲ್ಲಿ ಬರೆದಿಟ್ಟುಕೊಳ್ಳಿ. ಅದೇನೆಂದರೆ - ಮುಖ್ಯ ಅತಿಥಿಯಾಗಿ ಹೋಗಬೇಕಾಗಿದ್ದªರೆ. ಸಮಯಕ್ಕೆ ಮುಂಚೆಯೂ ಹೋಗಬಾರದು.
ನಾನೊಂದು ಕಡೆ ಸಮಯಕ್ಕೆ ಮುಂಚೆ ಹೋದೆ. ತುಂಬ ಎಡವಟ್ಟಾಗಿ ಹೋಯಿತು - ನಾನು ಹೋದಾಗ ಮೈದಾನದಲ್ಲಿ ಶಾಮಿಯಾನ ಹಾಕುತ್ತಿದ್ದರು. ಶಾಮಿಯಾನ ಹಾಕುತ್ತಿದ್ದವರ ಪೈಕಿ ಒಬ್ಬ ನನ್ನ ಬಳಿ ಬಂದು
"ಕಾರ್ಯಕ್ರಮಕ್ಕೆ ಬಂದಿದ್ದಿರೇನು?'
"ಹೌದು' ಎಂದೆ.
"ನಮ್ಮ ಕಡೆಯವರಿಬ್ಬರು ಕೈ ಕೊಟ್ಟಿದ್ದಾರೆ. ನೀವು ಸ್ವಲ್ಪ ಸಹಾಯ ಮಾಡಿ'.
"ಹೇಳಿ'
"ಏನಿಲ್ಲ ಸ್ವಲ್ಪ ಕುರ್ಚಿಗಳನ್ನು ಸಾಲಾಗಿ ಜೋಡಿಸಿ ಬಿಡಿ' ಎಂದ.
"ನಾನು ಕುರ್ಚಿಗಳನ್ನು ಜೋಡಿಸುತ್ತಿರುವಾಗ ಆ ಸಭೆಯ ಆಯೋಜಕರೊಬ್ಬರು ಬಂದು "ನೀವು ತುಂಬ ಸರಳ ವ್ಯಕ್ತಿ ಎಂದು ಜನ ಹೊಗಳುವುದು ಸುಳ್ಳಲ್ಲ. ಬೇಜಾರು ಮಾಡಿಕೊಳ್ಳಬೇಡಿ, ಇದು ಸಹ ಒಂದು ರೀತಿ "ಕನ್ನಡ ಸೇವೆ' ಎಂದರು. "ಹೌದು... ಹೌದು... ಎಂದೆ ಕುರ್ಚಿಗಳನ್ನು ಜೋಡಿಸುತ್ತ.
ಸ್ವಲ್ಪ ಸಮಯದ ಬಳಿಕ ಶಾಮಿಯಾನದ ಕಡೆಯವನೊಬ್ಬ ಬಂದು ಪಿಸುಮಾತಿನಲ್ಲಿ "ಕುರ್ಚಿ ಜೋಡಿಸಲು ನಮಗೆ ಜನ ಬೇಕು, ನಿಮ್ಮ ಕಡೆಯವರು ಯಾರ್ಯಾರಿದ್ದಾರೆ ಕಳುಹಿಸಿ' ಎಂದು ವಿಸಿಟಿಂಗ್ ಕಾರ್ಡ್ ನೀಡಿದ. ಪುಣ್ಯಾತ್ಮ ನೇರವಾಗಿ ನನಗೆ ಕರೆದಿಲ್ಲವೆಂದು ಸಂತೋಷಪಟ್ಟುಕೊಂಡೆ.
ಒಂದು ಕಡೆ ಒಂದು ಸಭೆಗೆ ಸರಿಯಾದ ಸಮಯಕ್ಕೆ ಹೋದಾಗ ಸಭೆ ಮುಗಿದಿತ್ತು. ಸಭೆಯ ಆಯೋಜಕರು ಹೇಳಿದರು - "ನಮ್ಮ ಕಡೆಯ ಶಾಸಕರು ತುರ್ತಾಗಿ ಬೇರೆ ಕಡೆ ಹೋಗಬೇಕಾಗಿತ್ತು. ಅದಕ್ಕೆ ಸಭೆ ಬೇಗ ಮುಗಿಸಿಬಿಟ್ಟೆವು. ನೀವು ಸರಿಯಾದ ಸಮಯಕ್ಕೆ ಬಂದಿಲ್ಲ, ಸಾಹಿತಿಯಾಗಿ ಸಮಯದ ಬಗ್ಗೆ ಕಾಳಜಿ ಬೇಡವೇನು ಎಂದು ಪ್ರಶ್ನಿಸಿದರು.
ಅವರಿಂದ ಛೀಮಾರಿ ಹಾಕಿಸಿಕೊಂಡು ಮನೆಗೆ ಬರಿಕೈಯಲ್ಲಿ ತಲುಪಿದಾಗ ಹೆಂಡತಿ "ಶಾಲು ಹಣ್ಣು ಹಂಪಲು ಎಲ್ಲಿ' ಎಂದು ಕಿರಿಚಿಕೊಂಡಳು.
ಒಂದೊಂದು ಕಡೆ ಒಂದೊಂದು ರೀತಿ ಅನುಭವವಾಗಿದೆ. ಒಮ್ಮೆ ಒಂದು ಕಾಲೇಜಿನವರು ಮಾಡಿದ ಒಂದು ಸಮಾರಂಭಕ್ಕೆ ಹೋಗಿದ್ದೆ. ಬೋಧಕರೆಲ್ಲರೂ ಆವರಣದಲ್ಲಿ ವಿವಿಧ ಭಂಗಿಯಲ್ಲಿ ನಿಂತು ಫೋಟೋ ತೆಗೆಸಿಕೊಳ್ಳುತ್ತಿದ್ದರು. ನನ್ನನ್ನು ನೋಡಿದ ಕೂಡಲೇ ಕನ್ನಡ ಬೋಧಕರು ಬಂದು "ಕಾರ್ಯಕ್ರಮ ಸ್ವಲ್ಪ ಲೇಟಿದೆ, ದಯವಿಟ್ಟು ನೀವು ಪ್ರಿನ್ಸಿಪಾಲ್ ಚೇಂಬರ್‌ನಲ್ಲಿ ಕುಳಿತುಕೊಳ್ಳಿ , ಎಂದು ನನಗೆ ಪ್ರಿನ್ಸಿಪಾಲ್ ಚೇಂಬರ್‌ಗೆ ಕರೆದುಕೊಂಡು ಹೋಗಿ ಕೂರಿಸಿದರು - ಪ್ರಿನ್ಸಿಪಾಲ್ ಇರಲಿಲ್ಲ.
ನಾನೊಬ್ಬನೆ ಅಲ್ಲಿ ಕೂತಿರುವಾಗ ಪೊರಕೆ ಹಿಡಿದುಕೊಂಡು ಜವಾನ ಬಂದು ನಾನಲ್ಲಿರುವುದನ್ನು ಕಂಡು ಹೌಹಾರಿದ.
"ಯಾರಿ°àವು?'
"ನಾನು ಕಾರ್ಯಕ್ರಮಕ್ಕೆ ಬಂದಿದ್ದೇನೆ' ಎಂದೆ.
"ಕಾರ್ಯಕ್ರಮಕ್ಕೆ ಬಂದಿದ್ದರೆ ಶಾಮಿಯಾನ ಹತ್ತಿರ ಹೋಗಿ ಕುಳಿತುಕೊಳ್ಳಿ. ನೇರವಾಗಿ ಪ್ರಿನ್ಸಿಪಾಲ ಚೇಂಬರ್‌ಗೆ ಬಂದು ಕುಳಿತುಕೊಂಡರೆ ಹೇಗೆ. ಏನಾದರೂ ಹೆಚ್ಚು ಕಡಿಮೆಯಾದರೆ ಯಾರು ಜವಾಬ್ದಾರರು - ಮೊನ್ನೆ ತಾನೇ ಪ್ರಿನ್ಸಿಪಾಲ್‌ರವರ ಮೊಬೈಲ್ ಕಳುವಾಗಿದೆ' ಎಂದ ಪೊರಕೆಯನ್ನು ತೋರಿಸುತ್ತ - ನಾನು ಮೆಲ್ಲನೆ ಪ್ರಿನ್ಸಿಪಾಲ್ ಚೇಂಬರ್‌ನಿಂದ ಹೊರಬಂದೆ.
ಬೇರೆಯವರಿಗೆ ಸಭೆ ಸಮಾರಂಭಗಳಿಗೆ ಹೋಗಿ ಎಂಥ ಅನುಭವವಾಗಿದೆಯೆಂದು ಗೊತ್ತಿಲ್ಲ - ನನಗಂತು "ಅತಿಥಿ'ಯಾಗಿ ಹೋಗಿ "ತಿಥಿ' ಮಾಡಿಸಿಕೊಂಡಿರುವ ಅನುಭವ ಆಗಿರುವುದು ಹೆಚ್ಚು . ಇಂಥದರಲ್ಲಿ ಇನ್ನು ಯಾವ ಸಭೆಗೂ ಹೋಗಬಾರದೆಂದು ನಿರ್ಧರಿಸಿಕೊಂಡಿದ್ದೆ - ಆದರೆ ಮೊನ್ನೆ ಒಂದಿಷ್ಟು ಯುವಕರು ಬಂದು ರಾಜ್ಯೋತ್ಸವ ಫಂಕ್ಷನ್‌ನಲ್ಲಿ ನನಗೆ ಚೀಫ್ ಗೆಸ್ಟ್ ಆಗಿ ಬರಬೇಕೆಂದು ದುಂಬಾಲು ಬಿದ್ದರು.
"ಹೋದ ವರ್ಷ ಸಹ ನಿಮ್ಮ ಫಂಕ್ಷನ್‌ಗೆ ನಾನೇ ಚೀಫ್ ಗೆಸ್ಟ್ ಆಗಿ ಬಂದಿದ್ದಲ್ವವೇನು' ಎಂದೆ.
"ಹೌದು' ಎಂದ ಒಬ್ಬ.
"ಬೇರೆಯವರಿಗೆ ಕರೆಯಿರಿ'
"ನಮ್ಮೂರಿನಲ್ಲಿ ಕಥೆ ಗಿಥೆ ಅಂತ ಯಾರು ತಾನೇ ಬರೆಯುತ್ತಾರೆ', ಒಬ್ಬ "ಅದೊಂದು ಪುಕ್ಸಟ್ಟೆ ಕೆಲಸ ಅಂತ ಯಾರು ಮಾಡುವುದಿಲ್ಲ' ಇನ್ನೊಬ್ಬ - "ಹೋಗಲಿ ಬೇರೆ ಊರಿನವರಿಗೆ ಕರೆಸಿಕೊಳ್ಳಿ'
"ಬೇರೆ ಊರಿನವರಿಗೆ ಕರೆಸಿದರೆ ತುಂಬ ಖರ್ಚು ಬರುತ್ತೆ, ಕಾರು ಕಳುಹಿಸಿ ಕರೆಸಿಕೊಳ್ಳಬೇಕು, ಮತ್ತೆ ಕಾರಿನಲ್ಲಿ ಕಳುಹಿಸಬೇಕು - ನೀವಾದರೆ ನಡೆದುಕೊಂಡೆ ಸಭೆಗೆ ಬಂದು ಬಿಡುತ್ತೀರ - ನೀವೇ ಚೀಫ್. ಈ ಬಾರಿ ನಿಮಗೆ ಹೋದ ಸಲಕ್ಕಿಂತ ಇನ್ನು ಒಳ್ಳೆ ಕ್ವಾಲಿಟಯ ಇನ್ನೂರು ರೂಪಾಯಿಯ ಶಾಲು ಹಾಕುತ್ತೇವೆ. ಎರಡು ಕೆ.ಜಿ.ಯಷ್ಟು ಹಣ್ಣು ಕೊಡುತ್ತೇವೆ'
ಇವರೊಂದಿಗೆ ಮಾತನಾಡಲು ಹೋದರೆ ಇನ್ನು ಚೀಫ್ ಆಗಿ ಹೋಗುತ್ತೇನೆಂದು ಹೆದರಿಕೆಯಾಗಿ ಹೋಯಿತು. ಬರುತ್ತೇನೆ' ಎಂದೆ.
ಅಂದರೆ ಉಚಿತ ತಿಥಿ ಮಾಡಿಸಿಕೊಳ್ಳಲು ಒಪ್ಪಿಕೊಂಡೆ.