Wednesday, May 22, 2013
Last Updated: 6:07:02 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಸಾಪ್ತಾಹಿಕ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಮದ್ಯಮ ವರ್ಗವೆಂಬ ಇಲಿಯೂ ಜಾಗತೀಕರಣವೆಂಬ ಬೆಕ್ಕೂ
    • ಮದ್ಯಮ ವರ್ಗವೆಂಬ ಇಲಿಯೂ ಜಾಗತೀಕರಣವೆಂಬ ಬೆಕ್ಕೂ

      • Udayavani | Apr 29, 2012

        ಈಗ ಶಾಲಾಮಕ್ಕಳಿಗೆ ರಜಾಪರ್ವ. ಮಕ್ಕಳಿಗೆ ಕೈಯಲ್ಲಿ ರಿಮೋಟ್‌ ಹಿಡಿದುಕೊಂಡು ಟಿ. ವಿ. ಮುಂದೆ ಕುಳಿತುಕೊಳ್ಳಲು ಅನುಮತಿ ಸಿಕ್ಕಿಬಿಟ್ಟಿದೆ. ಪ್ರಪಂಚದಲ್ಲಿ ಬೆಕ್ಕು ಮತ್ತು ಇಲಿಗಳಲ್ಲದೆ ಬೇರೆ ಪ್ರಾಣಿಗಳೇ ಇಲ್ಲ ಎಂಬ ಸಂಕುಚಿತ ಕಲ್ಪನೆಯಲ್ಲಿ ಮಕ್ಕಳೂ ಹಿರಿಯರೂ ಮೈಮರೆತಿರುವಂತಿದೆ...

        ಎಂಜಿಎಂ ಸ್ಟುಡಿಯೋದವರು "ಕ್ಯಾಪ್ಟನ್‌ ಆ್ಯಂಡ್‌ ಕಿಡ್‌' ಯೋಜನೆಯಲ್ಲಿ ಭಾರೀ ಪ್ರಮಾಣದ ಹಣ ಕಳೆದುಕೊಳ್ಳದೇ ಇದ್ದಿದ್ದರೆ ಬಹುಶಃ ಮಕ್ಕಳಿಂದ ಆರಂಭಿಸಿ ದೊಡ್ಡವರ ತನಕ ಎಲ್ಲರೂ ಇಷ್ಟ ಪಡುವ ಟಾಮ… ಬೆಕ್ಕೂ ಜೆರಿ ಇಲಿಯೂ ಇರುತ್ತಿರಲೇ ಇಲ್ಲ.  1930ರ ದಶಕದಲ್ಲಿ ಎಂಜಿಎಂ ಸ್ಟುಡಿಯೋ ಸಾಕಷ್ಟು ಹೆಸರನ್ನೂ ಮಾಡಿತ್ತು. ದುಡ್ಡನ್ನೂ ಸಂಪಾದಿಸಿತ್ತು. ಆದರೆ, ಅದೆಲ್ಲವನ್ನೂ ಕಿತ್ತುಕೊಳ್ಳುವಷ್ಟು ದೊಡ್ಡ ನಷ್ಟ ಅನುಭವಿಸಿದ್ದು "ಕ್ಯಾಪ್ಟನ್‌ ಆ್ಯಂಡ್‌ ಕಿಡ್‌' ಯೋಜನೆಯಲ್ಲಿ. ಈ ನಷ್ಟದ ದಿನಗಳಲ್ಲಿ ರುಡಾಲ್ಫ್ ಘಟಕದಲ್ಲಿ ಕೆಲಸ ಮಾಡುವುದಕ್ಕಾಗಿ ಬಂದವರು ವಿಲಿಯಂ ಹನ್ನಾ ಮತ್ತು ಜೋಸೆಫ್ ಬಾರ್ಬರಾ.
        ಜೋಸೆಫ್ ಬಾರ್ಬರಾ ಬಹಳ ಒಳ್ಳೆಯ ಪಾತ್ರಗಳನ್ನು ಸೃಷ್ಟಿಸುವಂಥ ಕಥೆಗಾರನಾದರೆ ವಿಲಿಯಂ ಹನ್ನಾ ಅವುಗಳ ಸುಂದರ ದೃಶ್ಯ ಸಾûಾತ್ಕಾರವನ್ನು ಬಲ್ಲ ನಿರ್ದೇಶಕ. ಇಬ್ಬರು ಕೆಲಸ ಆರಂಭಿಸಿದ್ದು ಒಂದು ನಿರಾಶಾವಾದಿ ವಾತಾವರಣದÇÉೇ. ಎರಡು ಪಾತ್ರಗಳು ಬೇಕಿತ್ತು. ಜೋಸೆಫ್ ಬಾರ್ಬರಾ ಇಲಿ-ಬೆಕ್ಕಿನ ಕಥೆಯ ಮೂಲ ಕಲ್ಪನೆಯನ್ನು ಮುಂದಿಟ್ಟಾಗ ನಿರ್ದೇಶಕ ವಿಲಿಯಂ ಹನ್ನಾಗೆ ಇದು ಅಷ್ಟೇನೂ ಇಷ್ಟವಾಗಿರಲಿಲ್ಲ. ಇಡೀ ನಿರ್ದೇಶನ ವಿಭಾಗದ ಸದಸ್ಯರೆಲ್ಲ, " ಇದೇನೂ ಒರಿಜಿನಲ… ಐಡಿಯಾ ಅಲ್ಲ. ಇದೊಳ್ಳೆ ಕಾಗಕ್ಕ-ಗುಬ್ಬಕ್ಕನ ಕಥೆ ಆಯಿತು' ಎಂದೆಲ್ಲ ಗೊಣಗಿದ್ದರು.

        ರುಡಾಲ್ಫ್ ಘಟಕ ಏನಾದರೂ ಮಾಡಲೇಬೇಕಿತ್ತು. ಹೆಚ್ಚು ಸಮಯವೂ ಇರಲಿಲ್ಲ. ನಷ್ಟದ ದಿನಗಳಲ್ಲಿ ರೂಮ… ಹಾಕಿಕೊಂಡು ಕಥೆ ಮಾಡುತ್ತ ವರ್ಷ ಕಳೆಯುವುದಕ್ಕೆ ಎಂಜಿಎಂ ಸ್ಟುಡಿಯೋದವರೇನು ಗಾಂಧೀನಗರದ ನಿರ್ಮಾಪಕರೆ! ಅಷ್ಟೇಕೆ ಜೊಸೆಫ್ ಮತ್ತು ವಿಲಿಯಂ ಗಾಂಧೀನಗರದ ನಿರ್ದೇಶಕರೂ ಅಲ್ಲವಲ್ಲ ! ಹಾಗೂ ಹೀಗೂ ಕಥೆ ತಯಾರಾಗಿಯೇ ಬಿಟ್ಟಿತ್ತು. ಚಿತ್ರಕ್ಕೊಂದು ಹೆಸರೂ ಇಟ್ಟಾಯಿತು, ಪುಸ್‌ ಗೆಟ್ಸ್‌  ದ ಬೂಟ್‌'. ಬೆಕ್ಕಿನ ಹೆಸರು ಜಾಸ್ಪರ್‌. ಇಲಿಗೆ ಚಿತ್ರದಲ್ಲಿ ಯಾವ ಹೆಸರೂ ಇಲ್ಲವಾದರೂ ಅದನ್ನು ಜಿಂಕ್ಸ್‌ ಎಂದು ಕರೆಯಲಾಯಿತು. ನೀವೆಲ್ಲ ನೋಡಿರಬಹುದಾದ ಅನೇಕ ಟಾಮ್‌ ಅಂಡ್‌ ಜೆರಿ ಚಿತ್ರಗಳಲ್ಲಿ ಇರಬಹುದಾದಂಥ ಒಂದು ದೃಶ್ಯವೂ ಇಲ್ಲಿತ್ತು. ಜಾಸ್ಪರ್‌ ಹೆಸರಿನ ಬೆಕ್ಕನ್ನು ಮನೆಯಿಂದ ಹೊರಗೆ ಹಾಕಲು ಜಿಂಕ್ಸ್‌ ರೂಪಿಸುವ ತಂತ್ರ. ಆಯ ತಪ್ಪಿ ಪಿಂಗಾಣಿಯ ವಸ್ತುವೊಂದನ್ನು ಒಡೆಯುವ ಜಾಸ್ಪರ್‌ಗೆ ಮನೆಯ ಕೆಲಸದವಳು ಮಾಮಿ ಎಚ್ಚರಿಕೆ ನೀಡುತ್ತಾಳೆ. ಇದನ್ನು ಗಮನಿಸಿದ ಜಿಂಕ್ಸ್‌ ಅವನು ಮತ್ತಷ್ಟು ಪಾತ್ರೆಗಳನ್ನು ಒಡೆಯುವಂತೆ ತಂತ್ರ ರೂಪಿಸಿ ಮನೆಯಿಂದ ಹೊರ ತಳ್ಳಿಸುತ್ತಾನೆ. 1939ರ ಅಂತ್ಯದ ವೇಳೆಗೆ ಚಿತ್ರೀಕರಣ ಪೂರ್ಣಗೊಂಡಿತ್ತಾದರೂ ಇದು ಬಿಡುಗಡೆಯಾಗಿದ್ದು 1940ರಲ್ಲಿ. ಇದರ ಬಗ್ಗೆ ಗಮನವನ್ನೇ ಹರಿಸದೆ ನಿರ್ದೇಶಕ ಮತ್ತು ಕಥೆಗಾರ ತತ್‌ಕ್ಷಣ ಮತ್ಯಾವುದೋ ಕಥೆಯನ್ನು ಎತ್ತಿಕೊಂಡು ಅವರು ಕೆಲಸ ಆರಂಭಿಸಿದರು. ಆದರೆ, ಜನರು ಅದಕ್ಕೊಪ್ಪಲಿಲ್ಲ. ಅಂದರೆ ಆ ಹೊತ್ತಿಗಾಗಲೇ ಜಾಸ್ಪರ್‌ ಮತ್ತು ಜಿಂಕ್ಸ್‌ ಎಷ್ಟು ಪ್ರಖ್ಯಾತರಾಗಿಬಿಟ್ಟಿದ್ದರೆಂದರೆ ಈ ಚಿತ್ರ ಅಕಾಡೆಮಿ ಪ್ರಶಸ್ತಿಗೆ ನಾಮ ನಿರ್ದೇಶನಗಳಿಸಿಕೊಂಡಿತ್ತು.

        ಈ ಹೊತ್ತಿಗೆ ಕಥೆಗಾರ ಮತ್ತು ನಿರ್ದೇಶಕರಿಗೆ ಜ್ಞಾನೋದಯವಾಗದೇ ಇದ್ದರೂ ನಿರ್ಮಾಪಕ ಫ್ರೆಡ್‌ ಕುÌಂಬಿಗೆ ಜ್ಞಾನೋದಯವಾಗಿತ್ತು. ಈ ಇಲಿ-ಬೆಕ್ಕು ಸರಣಿಯ ಸಾಧ್ಯತೆಗಳೆಷ್ಟಿವೆ ಎಂಬುದು ಆತನಿಗೆ ಅರ್ಥವಾಗಿತ್ತು. ಜೋಸೆಫ್ ಮತ್ತು ವಿಲಿಯಂಗೆ ಮತ್ತೆ ಇಲಿ- ಬೆಕ್ಕಿನ ಸರಣಿ ಮುಂದುವರಿಸಲು ಒತ್ತಾಯಿಸಿದ. ಈ ಪ್ರಕ್ರಿಯೆಯಲ್ಲಿ ಈ ಜೋಡಿಗೆ ಈಗಿರುವ ಹೆಸರು ಚೆನ್ನಾಗಿಲ್ಲ. ಇನ್ನೂ ಚೆನ್ನಾಗಿರುವ ಅವಳಿ ಹೆಸರು ಬೇಕು ಎಂಬ ಅಭಿಪ್ರಾಯ ಬಂತು. ಈ ಜೋಡಿಗೆ ಟಾಮ… ಮತ್ತು ಜೆರಿ ಎಂಬ ಹೆಸರಿಟ್ಟ ಖ್ಯಾತಿ ಜಾನ್‌  ಕಾರ್‌ನದ್ದು. ಹೀಗೆ ಹೆಸರಿಡುವುದಕ್ಕಾಗಿ ಜೋಸೆಫ್ ಮತ್ತು ವಿಲಿಯಂ ತಮ್ಮ ಸ್ಟುಡಿಯೋದೊಳಗೆ ಒಂದು ಸ್ಪರ್ಧೆ ನಡೆಸಿದ್ದರು. ಈ ಸ್ಪರ್ಧೆಯಲ್ಲಿ ಗೆದ್ದವನು ಜಾನ ಕಾರ್‌. ಇದಕ್ಕಾಗಿ ಅವನಿಗೆ 20 ಡಾಲರ್‌ ಬಹುಮಾನ ಮೊತ್ತವೂ ದೊರೆಯಿತು. ಅಲ್ಲಿಂದೀಚೆಗೆ ಟಾಂ ಆ್ಯಂಡ್‌ ಜೆರಿ ಮಾಡದ ಸಾಹಸಗಳಿಲ್ಲ.

        ಹದಿಮೂರು ಬಾರಿ ಅಕಾಡೆಮಿ ಪ್ರಶಸ್ತಿಗೆ ನಾಮಕರಣಗೊಂಡ ಈ ಜೋಡಿಯ ತುಂಟಾಟಗಳಿಗೆ-  Yankee Doodle Mouse (1943), Quiet, Please(1945), The Cat Concerto (1947), Mouse Cleaning (1948), Two Mouseketeers (1952), and Johann Mouse(1953)- ಅಕಾಡೆಮಿ ಪ್ರಶಸ್ತಿಯೂ ದೊರೆತಿದೆ. 1940ರಲ್ಲಿ ಆರಂಭವಾದ ಈ ಸರಣಿ ಕೊನೆಗೊಂಡದ್ದು 1977ರಲ್ಲಿ.

        ಈ ಸರಣಿಯ ಕುರಿತಂತೆ ಇರುವ ಬಹುಮುಖ್ಯ ಟೀಕೆಗಳಲ್ಲಿ ಇದು ವರ್ಣಭೇದವನ್ನು ಪೋಷಿಸುತ್ತದೆ ಎಂಬುದು ಮೊದಲನೆಯದ್ದು  ಮತ್ತೂಂದು ಹಿಂಸೆಯನ್ನು ಪ್ರಚೋದಿಸುತ್ತದೆ ಎಂಬುದು. ಇವೆರಡೂ ಸ್ವಲ್ಪ ಮಟ್ಟಿಗೆ ನಿಜವೇ ಆದರೂ ಟಾಮ… ಮತ್ತು ಜೆರಿ ಕೇವಲ ಶತ್ರುಗಳಷ್ಟೇ ಅಲ್ಲ. ಇಬ್ಬರಿಗೂ ಒಟ್ಟಿಗೇ ಕಷ್ಟ ಎದುರಾದಾಗ ಇಲ್ಲವೇ ಒಬ್ಬ ಬಹುದೊಡ್ಡ ತೊಂದರೆಗೆ ಸಿಕ್ಕಾಗ ಪರಸ್ಪರ ಸಹಾಯ ಮಾಡುವುದೂ ಇದೆ.
        ಇತ್ತೀಚೆಗೆ ಕೇಳಿ ಬರುತ್ತಿರುವ ಟೀಕೆಯೆಂದರೆ ಇದು ಮಹಿಳೆಯರ ಕುರಿತಂತೆ ಅಸಂವೇದನಾಶೀಲವಾಗಿದೆ ಎಂಬುದು. ಇದಕ್ಕೆ ಸಂಬಂಧಿಸಿದಂತೆ ಹಲವು ಸ್ತ್ರೀವಾದಿ ಚಿಂತಕರು ಕೂದಲು ಸೀಳುವ ಕೆಲಸ ಮುಂದುವರಿಸಿ¨ªಾರೆ.

        -ಡಾ. ಸುಕೇಶ್‌ ಕುಮಾರ್‌


        ****

        ಈಗ ಟಿ. ವಿ. ಯಿಲ್ಲದ ಮನೆಗಳು ಬಹಳ ಕಡಿಮೆ.

        ಟಿ. ವಿ. ಗೆ ಕೇಬಲ್‌ ಸಂಪರ್ಕ ಅಥವಾ ಡಿಶ್‌ ಸಂಪರ್ಕವಿಲ್ಲದ ಮನೆಗಳು ಇನ್ನೂ ಕಡಿಮೆ. ಹಾಗಾಗಿ, ಹೆಚ್ಚಿನ ಮಕ್ಕಳು ಶಾಲೆಯಿಂದ ಬಂದ ಕೂಡಲೇ ಟಿ. ವಿ. ಯೆದುರು ರಿಮೋಟ್‌ ಹಿಡಿದುಕೊಂಡು ಹಾಜರು. ಹೆತ್ತವರು ಇಲ್ಲದಾಗ ಮಕ್ಕಳು ತಾನೆ ಏನು ಮಾಡುತ್ತಾರೆ! ಕೆಳ ಮತ್ತು ಮೇಲ್ವರ್ಗದ ಮಂದಿಗಿಂತ ಮಧ್ಯಮ ವರ್ಗದವರಲ್ಲಿ , ಟಿ. ವಿ. ಯಿಂದಾಗಿ ತಮ್ಮ ಮಕ್ಕಳು ಹಾಳಾಗುತ್ತಾರೆ' ಎಂಬ ಆತಂಕ ದಟ್ಟವಾಗಿದೆ. ಹೀಗೆ ಕಳವಳ ಪಡುವವರು ಕೂಡ ಟಿ. ವಿ. ಸ್ಕ್ರೀನ್‌ನಲ್ಲಿ ಟಾಮ್‌ ಆ್ಯಂಡ್‌ ಜೆರಿ ಕಾಟೂìನ್‌ ಇದ್ದರೆ ಒಂದು ಕ್ಷಣ ನಿಂತು ತಾವೂ ಖುಷಿ ಪಡುವುದು ಒಂದು ವಿಶೇಷ!

        ಅದೊಂದು ಸಾಮಾನ್ಯ ಕಥೆ. ಒಂದು ಬೆಕ್ಕು ಮತ್ತೂಂದು ಇಲಿಯ ಕಥೆ. ನಾವು ನೀವು ಕೇಳಿರಬಹುದಾದ ಅಜ್ಜಿಕಥೆಯ ಹಾಗೆ. ಪಂಚತಂತ್ರದಲ್ಲಿ ಮಾತನಾಡುವ ನಾಯಿ, ಬೆಕ್ಕು, ನರಿ, ಸಿಂಹಗಳ ಕಥೆಗಳನ್ನು ಓದಿದವರಿಗಂತೂ ಇದು ವಿಶೇಷವೇನೂ ಅಲ್ಲ. ಮಕ್ಕಳ ಕಥೆಗಳಲ್ಲಿ ಕಥೆಗಿಂತ, ನೀತಿಗಿಂತ, ವಾಸ್ತವಕ್ಕಿಂತ ಒಂದು ರೀತಿಯ ಬೆರಗು ಮತ್ತು ಆನಂದವಿರಬೇಕು. ಭಾರತೀಯ ಕಥಾಪರಂಪರೆಯಲ್ಲಿ ಮಕ್ಕಳ ಕಥೆಗಳೆಲ್ಲ ಇದೇ ಮಾದರಿಯವು. ಬ್ರಹ್ಮದತ್ತನೆಂಬ ಆನೆ, ರಾಜವರ್ಮನೆಂಬ ಕುದುರೆ, ವೇಣುಪಾಣಿಯೆಂಬ ಮೊಲ- ಈ ಮುಂತಾದ ಪಾತ್ರಗಳೆಲ್ಲ , ಪ್ರಾಣಿಗಳನ್ನೂ "ಮಾನವೀಯ' ಕಣ್ಣುಗಳಲ್ಲಿ ನೋಡಲು ಸಾಧ್ಯ ಎಂಬುದಕ್ಕೆ ಸಾಕ್ಷಿಯಾದ ಕಥೆಗಳು. ನಮ್ಮ ಅಜ್ಜಿಕಥೆಗಳಲ್ಲಂತೂ ಏಳು ಸಮುದ್ರದ ಆಚೆಗಿನ ಸಂಗತಿಗಳೇ. ಕಥೆಗಳನ್ನು ಹೇಳಬೇಕೇ, ಕೇಳಬೇಕೇ ಹೊರತು ಓದುವುದರಲ್ಲಿ ಸ್ವಾರಸ್ಯವಿಲ್ಲ. ಆದರೆ, ಅಕ್ಷರ ಪರಂಪರೆ ಆರಂಭವಾದ ಮೇಲೆ ಬರಹದಲ್ಲಿರುವ ಕಥೆಗಳು ನಮ್ಮ ಗಮನ ಸೆಳೆದವು. ಅವಿಭಕ್ತ ಕುಟುಂಬಗಳು ಒಡೆದ ಮೇಲೆ ಅಜ್ಜಿಯೂ ಹಳ್ಳಿ ಮನೆಯಲ್ಲಿಯೇ ಉಳಿದಳು. ಮಕ್ಕಳು ಚಂದಮಾಮ, ಬೊಂಬೆಮನೆ, ಬಾಲಮಿತ್ರಗಳಂಥ ಪುಸ್ತಕಗಳನ್ನು ಕೈಗೆತ್ತಿಕೊಂಡರು. ನಮ್ಮ ಮಕ್ಕಳ ಕಥಾಪುಸ್ತಕಗಳೂ ಕಾಲಕ್ಕನುಗುಣವಾಗಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡವು. "ದಾರಿ ತೋರಿಸಿ' , "ಚಿತ್ರ ಪೂರ್ಣಗೊಳಿಸಿ', "ಬಣ್ಣ ಹಚ್ಚಿರಿ' ಮುಂತಾದ ಆಕರ್ಷಕ ಉಪಶೀರ್ಷಿಕೆಗಳೊಂದಿಗೆ ಮಕ್ಕಳ ಕಲ್ಪನೆಗಳ ಮೂಲೆಗಳನ್ನು ಮುಟ್ಟುವ ಪ್ರಯತ್ನಗಳಾದವು. ಆದರೆ, ಮಕ್ಕಳ ಕಥೆಗಳ ಪರಂಪರೆ ಮೌಖೀಕವಾಗಿ, ಆಕ್ಷರಿಕವಾಗಿ ವಿಸ್ತಾರವಾದಷ್ಟು ದೃಶ್ಯಮಾಧ್ಯಮಗಳ ಮಟ್ಟಗಳಲ್ಲಿ ಆಗಲಿಲ್ಲ. ಮಕ್ಕಳ ನಾಟಕಗಳಲ್ಲೇನೋ ಬೆಕ್ಕು, ನಾಯಿಗಳನ್ನು ಮನುಷ್ಯರಂತೆ ಕಾಣಿಸುವ ಪ್ರಯತ್ನಗಳಾಗಿವೆ ನಿಜ, ಆದರೆ, ಇದನ್ನು ಬರೆಯುವ ಬುದ್ದಿಜೀವಿಗಳಾದ ಹಿರಿಯರು ತಮ್ಮ ಯೋಚನಾಕ್ರಮಗಳನ್ನು ಮಕ್ಕಳ ಮೇಲೆ ಹೇರುವ ಪ್ರಯತ್ನ ಮಾಡಿದರು ಮತ್ತು ಈಗಲೂ ಮಾಡುತ್ತಿದ್ದಾರೆ ಎಂಬುದರಿಂದಾಗಿ ಮಕ್ಕಳ ನಾಟಕಗಳು ಎಲ್ಲರಿಗೂ ಪ್ರಿಯವಾದ ಮಾಧ್ಯಮಗಳಾಗದೆ ಉಳಿದಿವೆ. ಅಲ್ಲದೆ, ಪೇಟೆ- ಪಟ್ಟಣಗಳಿಗೆ ಮೀಸಲಾಗಿ ನಡೆಯುವ ಮಕ್ಕಳ ನಾಟಕಗಳಂಥ ಚಟುವಟಿಕೆಗಳು ಅರೆಪಟ್ಟಣಗಳ, ಹಳ್ಳಿಗಳ ಮಕ್ಕಳಿಗೆ ದಕ್ಕಲಾರದೆ ಹೋದವು.
        "ಆಧುನಿಕತೆ ಬಂದು ಹಳ್ಳಿಗಳ ಸಂಸ್ಕೃತಿ ಹಾಳಾಗಿದೆ', "ಮಕ್ಕಳಿಗೂ ಹಕ್ಕುಗಳಿವೆ, ಅವುಗಳನ್ನು ಗೌರವಿಸಿ'- ಈ ಮುಂತಾದ ಪ್ರಬುದ್ಧ ಮತ್ತು ಅವಾಸ್ತವಿಕ ಆಶಯಗಳುಳ್ಳ ನಾಟಕಗಳನ್ನು ಮಕ್ಕಳು ಮೆಚ್ಚುವುದಾದರೂ ಹೇಗೆ? ಹಳ್ಳಿಯ ಶಾಲೆಗಳಲ್ಲಿ ನಡೆಯುವ ಮಕ್ಕಳ ನಾಟಕಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಹತ್ವದ ಕೆಲಸಗಳು ಇವತ್ತಿಗೂ ಆಗಿಲ್ಲ.

        ಟಿ. ವಿ. ಯೆಂಬ ಪುಟ್ಟ ಪೆಟ್ಟಿಗೆಯೊಂದು ಎಲ್ಲರ ಪಡಸಾಲೆಯಲ್ಲಿ ಆಗಲೇ ಸ್ಥಾಪನೆಯಾಗಿಬಿಟ್ಟದೆ. ಟಿ. ವಿ. ಸ್ಕ್ರೀನ್‌ನಲ್ಲಿ , ಹೊಸ ತಂತ್ರಜ್ಞಾನವನ್ನು ಬಳಸಿ ಮಕ್ಕಳ ಕಥಾಪರಂಪರೆಯನ್ನು ಹೇಗೆ ಹಿಗ್ಗಿಸಬೇಕು ಎಂಬ ಬಗ್ಗೆ ನಮ್ಮಲ್ಲಿ ಕೆಲಸಗಳೇ ಆಗಿಲ್ಲ. ರಾಮಾಯಣ, ಮಹಾಭಾರತಗಳಂಥ ಕಥೆಗಳು ಅನಿಮೇಶನ್‌ನ ಮೂಲಕ ಟಿ. ವಿ. ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳುವ ಸಾಕಷ್ಟು ಮೊದಲೇ ಟಾಮ್‌ ಆ್ಯಂಡ್‌ ಜೆರಿಯ ಕಥೆ ಜನಮನದಲ್ಲಿ ಬೇರೂರಿಬಿಟ್ಟಿತು.

        ಬೆಕ್ಕೊಂದು ಇಲಿಯನ್ನು ಹಿಡಿಯಲು, ತಿನ್ನಲು ಪ್ರಯತ್ನಿಸುವುದು, ಆದರೆ ಇಲಿ ಬೆಕ್ಕಿನ ಕೈಗೆ ಸಿಗದೆ ಅದನ್ನು ಸತಾಯಿಸುವುದು- ಇದು ಇಡೀ ಕಥೆಯ ಸಾರ. ಎಲ್ಲ ಎಪಿಸೋಡ್‌ಗಳಲ್ಲೂ ಇದೇ ಪುನಾರವರ್ತನೆಯಾಗುತ್ತಿರುತ್ತದೆ. ಕೆಲವೊಮ್ಮೆ ಇಲಿಯ ಬಗ್ಗೆ ಬೆಕ್ಕಿಗೆ ಕನಿಕರವುಂಟಾಗುವುದು, ಇಲಿಯು ಕೋಳಿಮರಿ, ಗಿಳಿ, ಬಾತುಗಳಂಥ ಇತರ ಜೀವಿಗಳ ಬಗ್ಗೆ ಅನುಕಂಪದಿಂದ ಅವುಗಳನ್ನು ಬೆಕ್ಕಿನಿಂದ ರಕ್ಷಿಸಲು ಪ್ರಯತ್ನಿಸುವುದು- ಇಂಥ ಸಂಗತಿಗಳು ಸಹಜವಾಗಿಯೇ ಮಕ್ಕಳೆಲ್ಲರಿಗೂ ಇಷ್ಟವಾಗುತ್ತವೆ. ಈ ದೃಶ್ಯಕಥೆ ಬಂದು ಇಷ್ಟು ದಿನಗಳಾದರೂ ಟಾಮ್‌, ಜೆರಿಯನ್ನು ಇನ್ನೂ ತಿಂದು ಮುಗಿಸದೆ ಇರುವುದು ಒಂದು ಸೋಜಿಗವೇ! ಅದೇ ಆ ಕಥೆಯ ಹೆಗ್ಗಳಿಕೆ ಕೂಡ.

        ಹೊಸ ತಂತ್ರಜ್ಞಾನದ ಸಾಧ್ಯತೆಯನ್ನು ಗರಿಷ್ಠವಾಗಿ ಬಳಸಿರುವುದು ಈ ಕಥೆ ಜನಪ್ರಿಯವಾಗಲು ಮುಖ್ಯ ಕಾರಣ. ಇಡೀ ಕಥೆ ನಡೆಯುವುದು ಹಳ್ಳಿಯಲ್ಲಲ್ಲ , ಸಾಮಾನ್ಯ ಮಧ್ಯಮ ವರ್ಗದ ಮನೆಯಲ್ಲಿ. ಒಂದು ವೇಳೆ ಅಪ್ಪಿ ತಪ್ಪಿ ಈ ಪ್ರಾಣಿಗಳು ಮಹಾನಗರಕ್ಕೆ ಹೋದರೂ ಅಲ್ಲಿನ ಸ್ಥಿತಿಗೆ ತಬ್ಬಿಬ್ಟಾಗುತ್ತವೆ. ಈ ಕಥೆಯ ಹಿಂದಿರುವ ಮಧ್ಯಮ ವರ್ಗದ ಮನೋಸ್ಥಿತಿ, ಜಗತ್ತಿನ ಎಲ್ಲ ಮಧ್ಯಮ ವರ್ಗದ ಮತ್ತು ಮೇಲ್ವರ್ಗದ ಹಿರಿಯರನ್ನೂ ಮಕ್ಕಳನ್ನೂ ವಿಶೇಷವಾಗಿ ಆಕರ್ಷಿಸಿದೆ. ಹಾಗಾಗಿ, ಹಿರಿಯರು ಕೂಡ, "ಅಡ್ಡಿಯಿಲ್ಲ, ಟಾಮ್‌ ಆ್ಯಂಡ್‌ ಜೆರಿಯಲ್ಲವೆ, ನೋಡಲಿ' ಎಂದು ಉದಾರವಾಗಿ ಭಾವಿಸುವಷ್ಟು ನಮ್ಮ ಯೋಚನೆಗಳಲ್ಲಿ ಆ ಕಾಟೂìನ್‌ ಜಾಗ ಕಂಡುಕೊಂಡಿದೆ. ಜಾಗತೀಕರಣವೆಂಬ ಮಾರ್ಜಾಲ, ಮೂರನೇ ಜಗತ್ತಿನ ಮಧ್ಯಮವರ್ಗದವರೆಂಬ ಮೂಷಿಕವನ್ನು ಬೆನ್ನು ಹತ್ತುವ ಮತ್ತು ಅದೇ ಸಂದರ್ಭದಲ್ಲಿ ಮೂಷಕವು ಮಾರ್ಜಾಲದ ಕೈಗೆ ಸಿಗದೆ ತಪ್ಪಿಸಿಕೊಳ್ಳಲು ಯತ್ನಿಸುವ ಪ್ರಹಸನದಂತೆ ತೋರುತ್ತಿದೆ, ಟಾಮ್‌ ಆ್ಯಂಡ್‌ ಜೆರಿ ಕಾಟೂìನ್‌ ಕಥಾನಕ.

        ಧಾರ್ಮಿಕ, ಮತೀಯ ಲೇಪನವುಳ್ಳ ಕತೆಗಳಿಗಿಂತ ಭಿನ್ನವಾಗಿರುವಂತೆ ಭಾಸವಾಗಿರುವುದರಿಂದ ಇದು ವ್ಯಾಪಕ ಜನಪ್ರಿಯತೆಯನ್ನೇನೋ ಪಡೆದಿದೆ. ಯೋಚಿಸಿ ನೋಡಿ, ನಮ್ಮಲ್ಲಿ ಬೆಕ್ಕು, ಇಲಿ, ನಾಯಿಗಳಲ್ಲದೆ ಬೇರೆ ಪ್ರಾಣಿಗಳೇ ಇಲ್ಲವೆ ? ನಮ್ಮ ಮಕ್ಕಳ ಕಲ್ಪನೆಯ ಸಾಧ್ಯತೆಯನ್ನು ಈ ಸಿದ್ಧ ಕಥಾನಕದ ಮೂಲಕ ಮೊಟಕುಗೊಳಿಸಿದಂತಾಗುವುದಿಲ್ಲವೆ? ಟಾಮ್‌ ಆ್ಯಂಡ್‌ ಜೆರಿಗೆ ಪ್ರತಿಯಾಗಿ ನಮ್ಮ ಕಥನ ಪರಂಪರೆಯನ್ನು ದೃಶ್ಯ ಮಾಧ್ಯಮಗಳಲ್ಲಿ ಕಾಣಿಸಲು ನಾವು ಏನು ಮಾಡುತ್ತಿದ್ದೇವೆ? ಟಾಮ್‌ ಆ್ಯಂಡ್‌ ಜೆರಿ ಮತ್ತು ಅದರಂತಿರುವ ಇತರ ಕಾಟೂìನ್‌ ಕಥೆಗಳು ಆಧ್ಯಾತ್ಮಿಕ ಸತ್ವವುಳ್ಳ ನಮ್ಮ ಮಹಾಕಾವ್ಯಗಳ ಕಥೆಗಳನ್ನು ಮರವೆಗೆ ಸರಿಸಲಿಕ್ಕಿಲ್ಲವೆ?

        - ಎ. ಎನ್‌. ಕೊಪ್ಪಳ್‌

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picವಿಷು ಇಡೀ ದೇಶದ ಹಬ್ಬ. ಭಾರತೀಯ ಸಂಸ್ಕೃತಿ ಕೃಷಿಯೊಂದಿಗೆ ತಳುಕು ಹಾಕಿಕೊಂಡಿರುವುದರ ಸಂಕೇತವಾಗಿ ಈ ಹಬ್ಬ ಜನಮಾನಸದಲ್ಲಿ ಭದ್ರವಾಗಿ ನೆಲೆಯೂರಿದೆ...
      image
      image
      • Copyright @ 2009 Udayavani.All rights reserved.
      • Designed & Hosted By 4cplus