Saturday, May 25, 2013
Last Updated: 9:50:51 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಅಂಕಣ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಜನಪ್ರತಿನಿಧಿಗಳ ನಿಂದೆ ಜನಪ್ರಿಯಗೊಳಿಸಿದ್ದು ಅಣ್ಣಾ ಟೀಂ
    • ಸಂಸದರಿಗೆ ಬೈಯುವ ಚಾಳಿ ನಿಲ್ಲಿಸಿ
      • Udayavani | May 03, 2012

        ನಿಷೇಧಾಜ್ಞೆ ಉಲ್ಲಂ ಸಿ ಜನಪರ ಹೋರಾಟ ಮಾಡಿದ ರಾಜಕಾರಣಿಗಳ ಮೇಲೂ ಕ್ರಿಮಿನಲ್‌ ಕೇಸುಗಳಿರುತ್ತವೆ. ಆದ್ದರಿಂದ ಕ್ರಿಮಿನಲ್‌ ಕೇಸು ಹೊಂದಿರುವವರೆಲ್ಲ ಕ್ರಿಮಿನಲ್‌ಗ‌ಳು ಎನ್ನಲಾಗದು.

        ಶಾಸಕರು, ಸಂಸದರೂ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳ ಬಗ್ಗೆಯೂ ಜನಸಾಮಾನ್ಯರಿಗೆ ಒಂದು ರೀತಿಯ ಅಲರ್ಜಿ ಶುರುವಾಗಿ ಬಹಳ ಕಾಲವಾಯಿತು. ರಾಜಕೀಯವೆಂದರೆ ಹೊಲಸು ಎಂಬ ಭಾವನೆ ಮೂಡಿದ ದಿನದಿಂದಲೇ ಅದರಲ್ಲಿರುವವರು ಕೆಟ್ಟವರು ಎಂಬ ಸಾರ್ವತ್ರಿಕ ನಂಬಿಕೆ ಬಹುತೇಕ ಎಲ್ಲ ನಾಗರಿಕರಲ್ಲೂ ಮನೆ ಮಾಡಿರುವುದು ಸುಳ್ಳಲ್ಲ. ಅರಳಿಕಟ್ಟೆಯ ಮಟ್ಟದ ಬೈಗುಳದಲ್ಲಿ ಅಂತ್ಯವಾಗುತ್ತಿದ್ದ ಈ ಅಸಹನೆ ಇದೀಗ ದೊಡ್ಡ ಮಟ್ಟದಲ್ಲಿ ಕೇಳಿಸತೊಡಗಿದೆ. ಬೈಯುತ್ತಿರುವವರು ಕೂಡ ಗಣ್ಯರೇ.
        ಸಂಸತ್ತಿನಲ್ಲಿ ಡಕಾಯಿತರು ಮತ್ತು ಕೊಲೆಗಡುಕರಿದ್ದಾರೆ ಎಂದು ಖ್ಯಾತ ಯೋಗಗುರು ಬಾಬಾ ರಾಮದೇವ್‌ ಮೊನ್ನೆ ಹೇಳಿದ್ದು ರಾಜಕೀಯ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಅವರ ವಿರುದ್ಧ ಸಂಸತ್ತಿನಲ್ಲಿ ಹಕ್ಕುಚ್ಯುತಿ ನಿಲುವಳಿ ಮಂಡಿಸಲು ನೋಟಿಸ್‌ ನೀಡಲಾಗಿದೆ. ಇದಕ್ಕೆ ರಾಮದೇವ್‌ ಸೂಕ್ತ ಸ್ಪಷ್ಟನೆ ನೀಡದಿದ್ದಲ್ಲಿ ಅವರನ್ನು ಸದನಕ್ಕೆ ಕರೆಸಿ ಛೀಮಾರಿ ಹಾಕಬಹುದು.ಇವೆಲ್ಲ ಆನಂತರದ ಕ್ರಮಗಳಾದುವು. ಆದರೆ, ಹೀಗೆ ಜನಪ್ರತಿನಿಧಿಗಳನ್ನು ಸಾರಾಸಗಟಾಗಿ ನಿಂದಿಸುವ ಪರಿಪಾಠ ಹೀಗೆ ಜನಪ್ರಿಯವಾಗಿದ್ದು ಏಕೆ ಎಂಬುದನ್ನು ಅವಲೋಕಿಸುವುದು ಅಗತ್ಯ.

        ಇತ್ತೀಚಿನ ದಿನಗಳಲ್ಲಿ ಸಂಸದರನ್ನು ಹಿಗ್ಗಾಮುಗ್ಗಾ ತೆಗಳುವ ಪರಿಪಾಠ ಆರಂಭಿಸಿದ್ದು ಅಣ್ಣಾ ಹಜಾರೆ ಮತ್ತವರ ತಂಡ ಎಂಬುದನ್ನು ಹೇಳಲೇಬೇಕಾಗಿದೆ. ಲೋಕಪಾಲ ಮಸೂದೆಗಾಗಿ ಅಣ್ಣಾ ಹಜಾರೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ಉಪವಾಸ ಕುಳಿತಾಗ ಸರ್ಕಾರ ಅದಕ್ಕೆ ಓಗೊಡದೆ ಮೊಂಡು ಹಠ ಮಾಡುತ್ತಿದ್ದ ವೇಳೆ ದೇಶಾದ್ಯಂತ ಸಂಸದರ ವಿರುದ್ಧ ಅಸಹನೆಯ ಅಲೆ ಮೂಡಿತ್ತು. ಆ ಸಮಯದಲ್ಲಿ ಅಣ್ಣಾ ತಂಡದ ಕಿರಣ್‌ ಬೇಡಿ, ಕೇಜ್ರಿವಾಲ, ಸಿಸೋಡಿಯಾ ಸೇರಿದಂತೆ ಹಲವರು ಕಟು ಭಾಷಣಗಳನ್ನು ಮಾಡಿ ಉಪವಾಸದ ಮೈದಾನದಲ್ಲಿ ನೆರೆದಿದ್ದ ಜನರನ್ನು ಹಿಡಿದಿಟ್ಟುಕೊಳ್ಳುತ್ತಿದ್ದರು. ಒಮ್ಮೊಮ್ಮೆ ಆ ಮಾತುಗಳು ಹಿಡಿತ ತಪ್ಪಿ ಸಂಸದರನ್ನು ತೆಗಳಬಾರದ ರೀತಿಯಲ್ಲಿ ತೆಗಳುವ ಮಟ್ಟಕ್ಕೆ ಹೋಗುತ್ತಿದ್ದವು. ಸಂಸದರೆಲ್ಲ ಹಿಂದೊಂದು ಮುಂದೊಂದು ಮುಖವುಳ್ಳವರು ಎಂದು ಕಿರಣ್‌ ಬೇಡಿ ನಿಂದಿಸಿದ್ದು ಈ ದಿಸೆಯಲ್ಲಿ ಮೊದಲನೆಯದು. ನಂತರ ಸಂಸದರನ್ನು ಅತ್ಯಾಚಾರಿಗಳು ಮತ್ತು ಡಕಾಯಿತರು ಎಂದು ಕೇಜ್ರಿವಾಲ ಬಹಿರಂಗವಾಗಿ ಬೈದರು. ಈಗ ಬಾಬಾ ರಾಮದೇವ್‌ ಸರದಿ. ಬಾಬಾ ಬೈದಿದ್ದನ್ನು ಅಣ್ಣಾ ಕೂಡ ಸಮರ್ಥಿಸಿಕೊಂಡಿದ್ದಾರೆ.

        ಸಂಸದರೆಲ್ಲ ಕ್ರಿಮಿನಲ್‌ಗ‌ಳು ಎಂಬ ಈ ರೀತಿಯ ಸಾರ್ವತ್ರೀಕರಣವನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಜನಪ್ರತಿನಿಧಿಗಳಲ್ಲೂ ಬಹಳ ಮಂದಿ ಒಳ್ಳೆಯವರಿದ್ದಾರೆ ಮತ್ತು ಅವರೆಲ್ಲ ದೇಶಕ್ಕಾಗಿ ಒಳ್ಳೆಯ ಕೆಲಸವನ್ನೇ ಮಾಡುತ್ತಿದ್ದಾರೆ. ನಿರಕ್ಷರಿ ಜನಪ್ರತಿನಿಧಿಗಳೆಲ್ಲ ಅಪ್ರಯೋಜಕರಲ್ಲ ಎಂಬುದನ್ನೂ ಅರ್ಥಮಾಡಿಕೊಳ್ಳಬೇಕು.
        ಇಷ್ಟಕ್ಕೂ ಕ್ರಿಮಿನಲ್‌ ಮೊಕದ್ದಮೆಗಳನ್ನು ಹೊಂದಿರುವ ಸಂಸದರೆಲ್ಲ ಕ್ರಿಮಿನಲ್‌ಗ‌ಳು ಎಂದೂ ಹೇಳಲಾಗದು. ಅತ್ಯಾಚಾರ, ಕೊಲೆ, ದರೋಡೆ ಮಾಡಿ ಇಂತಹ ಕೇಸು ಹಾಕಿಸಿಕೊಂಡಿದ್ದರೆ ಅವರನ್ನು ಕ್ರಿಮಿನಲ್‌ಗ‌ಳೆಂದು ಕರೆಯುವುದು ತಪ್ಪಲ್ಲ. ಆದರೆ, ಹೋರಾಟಗಳನ್ನು ನಡೆಸುವಾಗ ನಿಷೇಧಾಜ್ಞೆ ಉಲ್ಲಂ ಸಿದ, ರೈಲು ತಡೆ ನಡೆಸಿದ, ಭದ್ರತೆ ಭೇದಿಸಿ ನುಗ್ಗಿದವರ ಮೇಲೂ ಕ್ರಿಮಿನಲ್‌ ಕೇಸು ಹಾಕಲಾಗುತ್ತದೆ. ಬಹುತೇಕ ರಾಜಕಾರಣಿಗಳು ಹೋರಾಟದಿಂದ ಬಂದವರೇ. ಅವರ ವಿರುದ್ಧ ಇಂತಹ ಕೇಸುಗಳು ಇದ್ದೇ ಇರುತ್ತವೆ. ಆದ್ದರಿಂದ, ದಾಖಲೆಗಳನ್ನು ನೋಡಿಕೊಂಡು ಕ್ರಿಮಿನಲ್‌ ಕೇಸು ಎದುರಿಸುತ್ತಿರುವವರ ಪಟ್ಟಿ ಮಾಡಿದರೆ ಅದಕ್ಕೆ ತಲೆಬುಡ ಇರುವುದಿಲ್ಲ.

        ಸಂಸದರು ಮತ್ತು ಶಾಸಕರು ಈ ದೇಶದ ನೀತಿ ನಿರೂಪಕರು. ಅವರಿಗೆ ಸಾಂವಿಧಾನಿಕ ಮಾನ್ಯತೆಯಿದೆ. ನಮ್ಮನ್ನಾಳಲೆಂದು ಅವರನ್ನು ನಾವೇ ಆರಿಸಿ ಕಳಿಸಿರುತ್ತೇವೆ. ಅವರು ತಪ್ಪು ಮಾಡಿದರೆ ಪಾಠ ಕಲಿಸಲು ಪ್ರಜಾಪ್ರಭುತ್ವದಲ್ಲಿ ಮತದಾರರ ಕೈಗೆ ಮತವೆಂಬ ಅಸ್ತ್ರ ನೀಡಲಾಗಿದೆ. ಅಥವಾ ಸಾತ್ವಿಕವಾಗಿ ಚುರುಕು ಮುಟ್ಟಿಸಲು ಹಲವು ದಾರಿಗಳಿವೆ.

        ಸಂಸದರಿಗೆ ಬೈದರೆ ಪ್ರಚಾರ ಗಿಟ್ಟಿಸಬಹುದು ಎಂದು ಅವರ ವಿರುದ್ಧ ಅವಾಚ್ಯ ಪದಗಳನ್ನು ಬಳಸುವುದು- ಅವರು ಅಣ್ಣಾ ಹಜಾರೆಯೇ ಆಗಿರಲಿ, ರಾಮದೇವರೇ ಆಗಿರಲಿ, ಕೇಜ್ರಿವಾಲರೇ ಆಗಿರಲಿ- ಖಂಡಿತ ಅಕ್ಷಮ್ಯ ಮತ್ತು ಅನಾಗರಿಕ ವರ್ತನೆ. ಇಂತಹ ಪರಿಪಾಠ ನಿಲ್ಲಬೇಕು. ಪ್ರಜಾಪ್ರಭುತ್ವದ ಗರ್ಭಗುಡಿಯಲ್ಲಿರುವವರಿಗೆ ಕನಿಷ್ಠ ಗೌರವ ನೀಡುವುದು ಎಲ್ಲರ ಕರ್ತವ್ಯ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus