Sunday, May 19, 2013
Last Updated: 1:15:04 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಅಂಕಣ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಕಾಲಕಾರಣ
    • ಮಾಧ್ಯಮಗಳ ನಿಯಂತ್ರಣ: ಮತ್ತೆ ಚರ್ಚೆ
      • ನಾರಾಯಣ ಎ. | May 04, 2012

        ಈಗ ನ್ಯಾಯಾಂಗವೇ ಮಾಧ್ಯಮ ನಿಯಂತ್ರಣಕ್ಕೆ ಯೋಚಿಸಿರುವುದು ಚಿಂತನಾರ್ಹ

        ಕಾನೂನಿನ ಅಸ್ತ್ರ ಬಳಸಿ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರುವುದು ಸುಲಭದ ವಿಚಾರವಲ್ಲ ಎನ್ನುವ ಸತ್ಯ ಕಾಂಗ್ರೆಸ್‌ಗೆ ಗೊತ್ತಿದೆ. ಹಿಂದೆ ನಡೆಸಿದ ಇಂಥ ಯತ್ನ ವಿಫ‌ಲವಾಗಿದೆ. ಆದರೂ ಈ ಹಂತದಲ್ಲಿ ಮೀನಾಕ್ಷಿ ನಟರಾಜನ್‌ ಅವರ ಮೂಲಕ ಮಾಧ್ಯಮ ನಿಯಂತ್ರಣದ ಗುಮ್ಮ ಬಿಡಲಾಗಿದೆ.

        ಹಳೆಯ ಪ್ರಶ್ನೆ ಮತ್ತೆ ಹೊಸತಾಗಿ ಚರ್ಚೆಯಾಗುತ್ತಿದೆ. ಮಾಧ್ಯಮಗಳಿಗೆ ನಿಯಂತ್ರಣ ಬೇಕೇ ಬೇಡವೇ ಎಂಬ ಪ್ರಶ್ನೆ. ಈಗಾಗಲೇ ಸಂವಿಧಾನ ದತ್ತವಾಗಿ ಇರುವ ನಿಯಂತ್ರಣಗಳಿಗಿಂತ ಹೆಚ್ಚಿನ ಹತೋಟಿ ಮಾಧ್ಯಮಗಳ ಮೇಲೆ ಬೇಕು ಎಂದು ಕಾಲಕಾಲಕ್ಕೆ ವಾದಿಸುತ್ತ ಬಂದವರ ಬಳಿ ಕೂಡ ನಿಯಂತ್ರಣ ಹೇಗೆ ಮತ್ತು ಯಾರಿಂದ ಎಂಬ ಪ್ರಶ್ನೆಗಳಿಗೆ ಉತ್ತರ ಸ್ಪಷ್ಟವಿರಲಿಲ್ಲ. ಆದುದರಿಂದ ಮಾಧ್ಯಮಗಳು ಒಂದು ರೀತಿಯಲ್ಲಿ ಯಾರಿಂದಲೂ ನಿಯಂತ್ರಿಸಲ್ಪಡದೆ ಮತ್ತು ಒಂದು ರೀತಿಯಲ್ಲಿ ಎಲ್ಲರಿಂದಲೂ ನಿಯಂತ್ರಿಸಲ್ಪಡುತ್ತಲೂ ಮುಂದುವರಿದಿವೆ. ಮಾಧ್ಯಮಗಳು ತಮ್ಮ ನಿಯಂತ್ರಣ ತಪ್ಪಿ ಯಾರುಯಾರಿಂದಲೋ ನಿಯಂತ್ರಿಸಲ್ಪಡುತ್ತವೆ ಎನ್ನುವ ಕಾರಣಕ್ಕಾಗಿಯೇ ಬಹುಶಃ ಮಾಧ್ಯಮಗಳ ನಿಯಂತ್ರಣ ಈಗ ಮತ್ತೆ ಚರ್ಚೆಗೆ ಬಂದಿರುವುದು! ಮಾಧ್ಯಮಗಳು ಅಂಕೆ ತಪ್ಪಿವೆ ಎನ್ನುವ ಕಾರಣಕ್ಕಲ್ಲ ನಿಯಂತ್ರಣ, ಅವು ಸಿಕ್ಕ ಸಿಕ್ಕವರ ಅಂಕೆಯಲ್ಲಿ ಸೊರಗಿವೆ ಎನ್ನುವ ಕಾರಣಕ್ಕೆ ಕಡಿವಾಣ ಬೇಕು ಎಂಬ ವಾದ ಈಗ ಎದ್ದಿರುವುದು. ಹಿಂದೆ ಹಲವು ಬಾರಿ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರುವ ಪ್ರಯತ್ನಗಳು ನಡೆದಿದ್ದವು. ಆದರೆ, ಅವುಗಳ ಹಿಂದೆ ಇದ್ದದ್ದು ಅಧಿಕಾರಸ್ಥ ರಾಜಕಾರಣಿಗಳು. ಮಾಧ್ಯಮಗಳು ತಮ್ಮ ನಿಯಂತ್ರಣಕ್ಕೆ ಸಿಗುವುದಿಲ್ಲ ಅಥವಾ ಅವು ತಮ್ಮ ಹಿತಾಸಕ್ತಿಗೆ ವಿರುದ್ಧವಾಗಿ ವ್ಯವಹರಿಸುತ್ತವೆ ಎಂಬಂತಿರುವಾಗ ರಾಜಕಾರಣಿಗಳು ಮಾಧ್ಯಮಗಳಿಗೆ ಮೂಗುದಾರ ಹಾಕುವ ಬಗ್ಗೆ ಪ್ರಯತ್ನಿಸಿದ್ದುಂಟು. ಉದಾಹರಣೆಗೆ, ರಾಜೀವ್‌ ಗಾಂಧಿಯವರು ಹಗರಣಗಳಲ್ಲಿ  ಸಿಲುಕಿಕೊಂಡಿದ್ದಾಗ ಮಾಧ್ಯಮಗಳನ್ನು ನಿಯಂತ್ರಿಸುವ ಬಗ್ಗೆ ಯೋಚನೆ ಮಾಡಿದ್ದರು. ಆದರೆ, ಈ ಬಾರಿ ಹಾಗಲ್ಲ , ಸುಪ್ರೀಂ ಕೋರ್ಟು ಕೂಡ ಮಾಧ್ಯಮಗಳ ಮೇಲೊಂದು ನಿಯಂತ್ರಣ ಹೇರಲು ಉತ್ಸುಕವಾಗಿದೆ ಎಂಬುದನ್ನು ವಿಶೇಷವಾಗಿ ಗಮನಿಸಬೇಕಾಗಿದೆ.

        ಅತ್ತ ಸುಪ್ರೀಂ ಕೋರ್ಟು ಈ ವಿಚಾರದಲ್ಲಿ ಗಂಭೀರವಾದ ಚಿಂತನೆಯಲ್ಲಿ ತೊಡಗಿ ವಾದಪ್ರತಿವಾದಗಳನ್ನು ಆಲಿಸುತ್ತಿದ್ದಂತೆಯೇ ಇತ್ತ ಪಾರ್ಲಿಮೆಂಟಿನಲ್ಲಿ ಮೀನಾಕ್ಷಿ ನಟರಾಜನ್‌ ಎಂಬ ಮಹಿಳಾ ಸಂಸದೆ ಮಾಧ್ಯಮ ನಿಯಂತ್ರಣಕ್ಕಾಗಿ ಖಾಸಗಿ ಮಸೂದೆಯೊಂದನ್ನು ಮಂಡಿಸಿ¨ªಾರೆ. ಮೀನಾಕ್ಷಿ ನಟರಾಜನ್‌ ಸಾಮಾನ್ಯ ಕುಟುಂಬದಿಂದ ಬಂದ ಹೊಸ ತಲೆಮಾರಿನ ಸಂಸದೆ. ಅದಕ್ಕಿಂತ ಹೆಚ್ಚಾಗಿ ಅವರು ಈ ಮಸೂದೆಯನ್ನು ಮಂಡಿಸಿ ಸುದ್ದಿಯಾಗುವುದಕ್ಕೆ ಕಾರಣವಾದ ಅಂಶ ಎಂದರೆ ಅವರು ರಾಹುಲ್‌ ಗಾಂಧಿಯವರ ಯುವ ಬ್ರಿಗೇಡ್‌ಗೆ ಸೇರಿದವರು ಎಂಬುದು. ಮಸೂದೆಯ ಬಗ್ಗೆ ವಿವಾದವೇಳುತ್ತಿದ್ದಂತೆ ರಾಹುಲ್‌ ಗಾಂಧಿಯವರಿಗೂ ಈ ಮಸೂದೆಗೂ ಸಂಬಂಧ ಇಲ್ಲ ಎಂದು ಕಾಂಗ್ರೆಸ್‌ ಕೈತೊಳೆದುಕೊಂಡಿದೆ. ಆದರೆ, ರಾಹುಲ್‌ ರಾಜಕೀಯದಿಂದ ಪ್ರಭಾವಿತರಾಗಿ ರಾಜಕಾರಣಕ್ಕೆ ಬಂದು ಪ್ರಥಮ ಬಾರಿಗೆ ಸಂಸತ್ತು ಪ್ರವೇಶಿಸಿರುವವರೊಬ್ಬರು ಸಂಪೂರ್ಣ ಸ್ವಪ್ರೇರಣೆಯಿಂದಲೇ ಇಂತಹ¨ªೊಂದು ವಿವಾದಿತ ಮಸೂದೆಯನ್ನು ಮಂಡಿಸಿ¨ªಾರೆ ಎಂದರೆ ಅದನ್ನು ನಂಬುವುದು ಹೇಗೆ?  ರಾಹುಲ್‌ ಗಾಂಧಿಯವರ ಮುತ್ತಾತ ಜವಹರಲಾಲ್‌ ನೆಹರೂ ಮಾಧ್ಯಮಗಳು ಎಷ್ಟೇ ಕೆಟ್ಟು ಹೋದರೂ ಅವುಗಳನ್ನು ನಿಯಂತ್ರಿಸಬಾರದು ಎಂಬ ಸ್ಪಷ್ಟ ನಿಲುವು ತಳೆದಿದ್ದರಂತೆ. ಈಗ ಮಾಧ್ಯಮಗಳ ಸ್ವಾತಂತ್ರ್ಯದ ಬಗ್ಗೆ ವಾದಿಸುವವರೆಲ್ಲ ನೆಹರೂ ಅವರ ಈ ಮಾತುಗಳನ್ನು ತಪ್ಪದೆ ಉದ್ಧರಿಸುತ್ತಾ¤ರೆ. ರಾಹುಲ್‌ ಗಾಂಧಿಯವರ ತಾತ ಫಿರೋಜ್‌ ಗಾಂಧಿ ಮಾಧ್ಯಮ ಸ್ವಾತಂತ್ರ್ಯದ ದೊಡ್ಡ ಪ್ರತಿಪಾದಕ. ನೆಹರೂ ಸರಕಾರದಲ್ಲಿ ವಾರ್ತಾ ಸಚಿವರಾಗಿದ್ದ ಫಿರೋಜ್‌ ಗಾಂಧಿ ಸಂಸತ್ತಿನ ಕಲಾಪಗಳನ್ನು ವರದಿ ಮಾಡುವಲ್ಲಿ ಮಾಧ್ಯಮಗಳಿಗಿರುವ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಮಸೂದೆಯೊಂದನ್ನು ಜಾರಿಗೆ ತಂದು ಪ್ರಸಿದ್ಧರಾದವರು. ಆದರೆ, ರಾಹುಲ್‌ ಅವರ ತಂದೆ ರಾಜೀವ್‌ ಗಾಂಧಿ ಮಾತ್ರ ಮಾನನಷ್ಟ ವಿರೋಧಿ ಮಸೂದೆಯೊಂದರ ಮೂಲಕ ಮಾಧ್ಯಮಗಳ ಬಾಯಿಗೆ ಬೀಗ ಹಾಕುವುದಕ್ಕೆ ಮುಂದಾಗಿ ಆನಂತರ ಟೀಕೆಗಳಿಗೆ ಸೋತು ಸುಮ್ಮನಾದವರು. ಈಗ ರಾಹುಲ್‌ ಗಾಂಧಿಯವರ ಶಿಷ್ಯೆಯ ಸರದಿ. ತುರ್ತು ಪರಿಸ್ಥಿತಿಯ ವಿಚಾರ ಸದ್ಯ ಪಕ್ಕಕ್ಕಿಟ್ಟು ನೋಡಿದರೂ ರಾಹುಲ… ಅವರ ಅಜ್ಜಿ ಇಂದಿರಾಗಾಂಧಿ ಮಾಧ್ಯಮಗಳ ಜತೆ ಬೇರೆ ಬೇರೆ ರೀತಿಯಲ್ಲಿ ಸೆಣಸಿದವರು. ಈ ಹಿನ್ನೆಲೆಯಲ್ಲಿ ರಾಜಕೀಯವಾಗಿ ಕಾನೂನಿನ ಅಸ್ತ್ರ ಬಳಸಿ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರುವುದು ಸುಲಭದ ವಿಚಾರವಲ್ಲ ಎನ್ನುವ ಸತ್ಯ ಕಾಂಗ್ರೆಸ್‌ಗೆ ಗೊತ್ತಿದೆ. ಹಿಂದಿನ ಅಂತಹ ಎÇÉಾ ಪ್ರಯತ್ನಗಳು ವಿಫಲವಾಗಿವೆ ಎನ್ನುವ ಸತ್ಯ ಕೂಡ ಗೊತ್ತಿದೆ. ಆದರೂ ಈ ಹಂತದಲ್ಲಿ ಮೀನಾಕ್ಷಿ ನಟರಾಜನ್‌ ಅವರ ಮೂಲಕ ಮಾಧ್ಯಮ ನಿಯಂತ್ರಣದ ಗುಮ್ಮ ಬಿಡಲಾಗಿದೆ. ಇದರ ಹಿಂದಿನ ರಾಜಕೀಯ ಲೆಕ್ಕಾಚಾರ ನಿಜಕ್ಕೂ ಕುತೂಹಲಕಾರಿ.

        ಅದೇನೇ ಇರಲಿ, ರಾಜಕಾರಣಿಗಳು ಮಾಧ್ಯಮಗಳ ಮೇಲೆ ಸರಕಾರಿ ನಿಯಂತ್ರಣ ಹೇರಲು ಮುಂದಾಗಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಆದರೆ, ಸುಪ್ರೀಂ ಕೋರ್ಟು ಈಗ ನಿಯಂತ್ರಣದ ಬಗ್ಗೆ ಯೋಚಿಸುವ ಸ್ಥಿತಿ ಬಂದಿರುವುದರ ಬಗ್ಗೆ ಚಿಂತಿಸುವ ಅಗತ್ಯವಿದೆ. ಯಾಕೆಂದರೆ, ಸಂವಿಧಾನ ಜಾರಿಯಾದಂದಿನಿಂದಲೂ ಇಡೀ ನ್ಯಾಯಾಂಗ, ಮುಖ್ಯವಾಗಿ ಸುಪ್ರೀಂ ಕೋರ್ಟು, ಮಾಧ್ಯಮಗಳ ಬೆನ್ನಿಗೆ ನಿಂತಿತ್ತು. ಸರಕಾರ ಮಾಧ್ಯಮಗಳನ್ನು ಬೇರೆ ಬೇರೆ ರೀತಿಯಲ್ಲಿ ನಿಯಂತ್ರಣ ಮಾಡುವುದಕ್ಕೆ ಮುಂದಾದ ಸಂದರ್ಭಗಳಲ್ಲಿ ಸುಪ್ರೀಂ ಕೋರ್ಟು ಮತ್ತೆ ಮತ್ತೆ ಮಾಧ್ಯಮ ಸ್ವಾತಂತ್ರ್ಯ ಇಲ್ಲದೇ ಹೋದರೆ ಪ್ರಜಾತಂತ್ರಕ್ಕೆ ಅರ್ಥವಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ರವಾನಿಸಿತ್ತು. ತೆಹಲ್ಕಾ ಪ್ರಕರಣದ ಮೂಲಕ ಪ್ರಾರಂಭವಾದ ಕುಟುಕು ಕಾರ್ಯಾಚರಣೆ-ಆಧಾರಿತ ಮಾಧ್ಯಮೋದ್ಯಮ ಒಂದು ಪಿಡುಗು ಆಗಿ ಕಾಡಲಾರಂಭಿಸಿದಾಗ ಇದಕ್ಕೊಂದು ಅಂಕೆ ಅಗತ್ಯ ಅಂತ ಬಹಳ ಮಂದಿ ವಾದಿಸಿದರು. ಆದರೆ ಸುಪ್ರೀಂ ಕೋರ್ಟು ಮಾತ್ರ, "ಪರವಾಗಿಲ್ಲ. ಮುಂದುವರಿಸಿ' ಅಂತ ಮಾಧ್ಯಮಗಳ ಬೆನ್ನುತಟ್ಟಿ ತೀರ್ಪುನೀಡಿತ್ತು. ಮಾಧ್ಯಮಗಳೇ ಕೋರ್ಟುಗಳಂತೆ ವರ್ತಿಸುತ್ತವೆ (Trial by Media) ಎನ್ನುವ ವಿಚಾರದಲ್ಲಿ ದೊಡ್ಡ ಆತಂಕ ಪಡಬೇಕಾದದ್ದಿಲ್ಲ ಅಂತ ಹೇಳಿತ್ತು. ಅಂತಹ ಸುಪ್ರೀಂ ಕೋರ್ಟು ಕೂಡ ಈಗ ಮಾಧ್ಯಮಗಳ ಮೇಲೆ ಇರುವ ನಂಬಿಕೆ ಕಳೆದುಕೊಂಡು ಮಾಧ್ಯಮಗಳನ್ನು ಹೀಗೆ ಬಿಡಬಾರದು ಎನ್ನುವ ನಿಲುವು ತಳೆಯುವ ಹಾದಿಯಲ್ಲಿದೆ. ಮಾಧ್ಯಮಗಳ ಮಟ್ಟಿಗೆ ಇದೊಂದು ಚಾರಿತ್ರಿಕ ಪತನದ ಸನ್ನಿವೇಶ. ಮತ್ತೆ ಮತ್ತೆ ವಾಕ್‌ ಸ್ವಾತಂತ್ರÂ, ಅಭಿವ್ಯಕ್ತಿ ಸ್ವಾತಂತ್ರ್ಯ ಇತ್ಯಾದಿಗಳ ಮೊರೆ ಹೊಕ್ಕು ತಮ್ಮನ್ನು ತಾವು ಸಮರ್ಥಿಸುವ ಜತೆಗೆ ಹೀಗೇಕಾಯಿತು ಅಂತ ಮಾಧ್ಯಮಗಳ ಮಂದಿ ಈಗ ತಮ್ಮನ್ನು ತಾವೇ ಕೇಳಿಕೊಳ್ಳಬೇಕು.

        ಮಾಧ್ಯಮಗಳ ಮೇಲೆ ನಿಯಂತ್ರಣ ಹೇರಲು ಹೊರಟಿರುವ ಸುಪ್ರೀಂ ಕೋರ್ಟಿನ ಯೋಜನೆಯ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿರುವುದು ಮಾಧ್ಯಮಗಳ ಮಂದಿ ಮಾತ್ರವಲ್ಲ. ನ್ಯಾಯಾಂಗದ ಹಲವರು ಈಗಲೂ ಮಾಧ್ಯಮಗಳಿಗೆ ನಿಯಂತ್ರಣ ಹೇರುವುದಕ್ಕೆ ಸುಪ್ರೀಂ ಕೋರ್ಟು ಮುಂದಾಗಬಾರದು ಎನ್ನುತ್ತಿ¨ªಾರೆ. ಆದರೆ, ಇವರುಗಳ ಮಾತನ್ನು ಸೂಕ್ಷ್ಮವಾಗಿ ಗಮನಿಸಬೇಕು. ಯಾರೂ ಮಾಧ್ಯಮಗಳಿಗೆ ನಿಯಂತ್ರಣದ ಅಗತ್ಯವಿಲ್ಲ ಅಂತ ವಾದಿಸುತ್ತಿಲ್ಲ. ಅಂತಹ ನಿಯಂತ್ರಣ ತರಲು ಸಾಧ್ಯವಾಗದು ಎನ್ನುತ್ತಿದ್ದಾರೆ. ಅಂದರೆ ಮಾಧ್ಯಮಗಳ ನಿಯಂತ್ರಣ ಬೇಡ ಎನ್ನುವವರು ಮಾಧ್ಯಮಗಳನ್ನು ಸಮರ್ಥಿಸಿ ಈ ನಿಲುವನ್ನು ತಳೆಯುತ್ತಿಲ್ಲ. ಬದಲಾಗಿ ಅಂತಹ ನಿಯಂತ್ರಣದಿಂದ ಹೊಸ ಸಮಸ್ಯೆ ಬರ ಬಹುದು ಎಂಬ ಆತಂಕದಿಂದ ಹಾಗೆ ಹೇಳುತ್ತಿ¨ªಾರೆ. ನಿಯಂತ್ರಣ ಎನ್ನುವುದು ಸುಲಭದ ವಿಚಾರವಲ್ಲ. ನಿಯಂತ್ರಣ ಹೇರಿದಷ್ಟೂ ನಿಯಂತ್ರಕರನ್ನು ನಿಯಂತ್ರಿಸುವ ಸಮಸ್ಯೆ ಎದುರಾಗುತ್ತದೆ. ಮಾಧ್ಯಮಗಳನ್ನು ನಿಯಂತ್ರಿಸಲು ಹೋದಾಗ ಮುಂದೆ, ಈಗಾಗಲೇ ಮಾಧ್ಯಮಗಳಿಂದಾಗಿ ನಿಯಂತ್ರಣಕ್ಕೊಳಗಾದವರೆಲ್ಲ  ಸುಲಭವಾಗಿ ಮುಕ್ತರಾಗಿ ಬಿಟ್ಟರೆ ಅದರಿಂದ ಆಗಬಹುದಾದ ಒಟ್ಟು ಪರಿಣಾಮ ಅದು ಮಾಧ್ಯಮದ ಸ್ವೇಚ್ಛೆ ಉಂಟುಮಾಡುವ ಪರಿಣಾಮಗಳಷ್ಟೇ ಅಪಾಯಕಾರಿಯಾಗಿರುತ್ತದೆ. ಅದಕ್ಕಾಗಿಯೇ ನೆಹರೂ, "ಮಾಧ್ಯಮಗಳು ಕೆಟ್ಟರೂ ಅವುಗಳ ಸ್ವಾತಂತ್ರ್ಯ ಹರಣ ಮಾಡುವುದು ಬೇಡ' ಅಂದದ್ದು. ಅದಕ್ಕಾಗಿಯೇ ಥಾಮಸ್‌  ಜಾಫರ್ಸನ್‌ ಎನ್ನುವ ಮಹಾನುಭಾವ, "ಪತ್ರಿಕೆಗಳಿಲ್ಲದೆ ಸರಕಾರ ಮಾತ್ರ ಇರುವ ಸ್ಥಿತಿ ಮತ್ತು  ಸರಕಾರವಿಲ್ಲದೆ ಪತ್ರಿಕೆಗಳು ಮಾತ್ರ ಇರುವ ಸ್ಥಿತಿ- ಇವೆರಡರಲ್ಲಿ  ನನ್ನ ಆಯ್ಕೆ ಎರಡನೆಯದಾಗಿರುತ್ತದೆ ಎಂದದ್ದು. ಆದರೆ, ಇಂದು ಮಾಧ್ಯಮಗಳು ತಮ್ಮ ಸ್ವಾತಂತ್ರ್ಯವನ್ನು ಈ ದೊಡ್ಡ ಜವಾಬ್ದಾರಿಗೆ ಬದ್ಧರಾಗಿದ್ದುಕೊಂಡು ಉಳಿಸಿಕೊಳ್ಳುತ್ತಿಲ್ಲ. ಬದಲಾಗಿ, ನಂಬಿಕೆಗೆ ಅರ್ಹವಾದ ಒಂದು ನಿಯಂತ್ರಣ ವ್ಯವಸ್ಥೆಯನ್ನು ರೂಪಿಸುವಲ್ಲಿ ಇರುವ ಸಂದಿಗ್ಧ ಮಾಧ್ಯಮಗಳನ್ನು ನಿಯಂತ್ರಣದಿಂದ ಮುಕ್ತವಾಗಿ ಇರುವಂತೆ ನೋಡಿಕೊಳ್ಳುತ್ತಿದೆ. ಈ ಸೂಕ್ಷ್ಮ ಬದಲಾವಣೆ ಗಮನಿಸದೆ ಮಾಧ್ಯಮಗಳ ಸ್ವಾತಂತ್ರ್ಯ ಉಳಿಸಿಕೊಂಡಿದ್ದೇವೆಂದು ಬೀಗುವುದರಲ್ಲಿ ಅರ್ಥವಿಲ್ಲ. ಹಾಗೆಯೇ ಮಾಧ್ಯಮಗಳನ್ನು ಕಾನೂನಿನ ಮೂಲಕ ನಿಯಂತ್ರಿಸ ಹೊರಟಾಗ ಮರುಗುವ ನಾವು ಮಾಧ್ಯಮಗಳ ಮೇಲೆ ಹಲವು ಶಕ್ತಿಗಳು ಹಲವು ರೀತಿಯ ನಿಯಂತ್ರಣಗಳನ್ನು ಸಾಧಿಸಿರುವುದನ್ನು ತೆಪ್ಪಗೆ ಒಪ್ಪಿಕೊಳ್ಳುತ್ತಿದ್ದೇವೆ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus