ಹೈದರಾಬಾದ್ : ದೊಡ್ಡ ಗಾತ್ರದ ಚಂದ್ರನನ್ನು ನೋಡುವ ಆಸೆ ನಿಮಗಿದ್ದರೆ ಮೇ 6ರಂದು ರಾತ್ರಿ ಹೊತ್ತು ಆಕಾಶದತ್ತ ಕಣ್ಣು ಹಾಯಿಸಿ. ರವಿವಾರ ಚಂದ್ರ ಭೂಮಿಯ ಬಲು ಸಮೀಪಕ್ಕೆ ಬರುವುದರಿಂದ ದೊಡ್ಡ ಗಾತ್ರದ ಬೆಳ್ಳಿಯ ಬಟ್ಟಲಿನಂತೆ ಕಾಣಿಸಲಿದ್ದಾನೆ. ಈ ಅಪೂರ್ವ ದೃಶ್ಯ ಬುದ್ಧಪೂರ್ಣಿಮೆಯಂದೇ ಬಂದಿರುವುದು ಕಾಕತಾಲೀಯ.ರವಿವಾರ ರಾತ್ರಿ 9.05ಕ್ಕೆ ಚಂದ್ರ ಭೂಮಿಯ ಅತ್ಯಂತ ಸಮೀಪಕ್ಕೆ ಬರಲಿದ್ದಾನೆ. ಆ ವೇಳೆ ಭೂಮಿಯ ಮತ್ತು ಚಂದ್ರನ ಅಂತರ 3,56,955 ಕಿ.ಮೀ.ಗಳಾಗಲಿದೆ.ಮೇ 6ರ ಸೂರ್ಯೋದಯಕ್ಕಿಂತ ಕೆಲವು ನಿಮಿಷ ಮೊದಲೇ ಪಶ್ಚಿಮ ದಿಗಂತದಲ್ಲಿ ಚಂದ್ರ ಅಸ್ತಮಿಸಲಿದ್ದು, ಅದೇ ದಿನ ಸಂಜೆ ಸೂರ್ಯಾಸ್ತದ ಸ್ವಲ್ಪ ಸಮಯದ ಬಳಿಕ ಚಂದ್ರೋದಯವಾಗಲಿದೆ. ಖಗೋಳ ಪ್ರಿಯರಿಗೆ ಇದು ಆಸಕ್ತಿದಾಯಕ ವಿಚಾರವಾಗಲಿದೆ ಎಂದು ನೆಹರೂ ಪ್ಲಾನೆಟೋರಿಯಂನ ನಿರ್ದೇಶಕ ಅರವಿಂದ ಪರಾಂಜಪೆ ಹೇಳಿದ್ದಾರೆ.ನವೆಂಬರ್ 28ರಂದು ಚಂದ್ರ ಭೂಮಿಯಿಂದ ಗರಿಷ್ಠ ದೂರಕ್ಕೆ ಸಾಗಲಿದ್ದು ಆ ದಿನ ಸಣ್ಣವನಾಗಿ ಗೋಚರಿಸಲಿದ್ದಾನೆ. ನವೆಂಬರ್ 28ರ ಚಂದ್ರನಿಗಿಂತ ಮೇ 6ರ ಚಂದ್ರ ಶೇ. 11ರಷ್ಟು 'ದೊಡ್ಡ' ಗಾತ್ರದವನಾಗಿ ಕಾಣಿಸಲಿದ್ದಾನೆ.