ಡಾ| ವಿಶಾಖ್ ಆಚಾರ್ಯ ಕೆ. ತಜ್ಞರು, ಪಲ್ಮನರಿ ಮೆಡಿಸಿನ್ ವಿಭಾಗ, | May 06, 2012
ಆಸ್ತಮಾ ಎಂಬುದು ಶ್ವಾಸಕೋಶಕ್ಕೆ ಗಾಳಿ ಹಾದಿಯ ದೀರ್ಘಕಾಲಿಕ ತೊಂದರೆ. ಈ ಗಾಳಿ ಹಾದಿಯ (ಬ್ರಾಂಕಿಯಲ್ ನಾಳಗಳು) ಮೂಲಕ ಶ್ವಾಸಕೋಶಕ್ಕೆ ಗಾಳಿ ತಲಪುತ್ತದೆ ಮತ್ತು ಅಲ್ಲಿಂದ ಹೊರ ತೆರಳುತ್ತದೆ.
ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ ವಿಶ್ವದಾದ್ಯಂತ ಸುಮಾರು 200 ಮಿಲಿಯ ಮಂದಿ ಆಸ್ತಮಾದಿಂದ ಬಳಲುತ್ತಿದ್ದು, ಅವರಲ್ಲಿ ಸುಮಾರು 2 ಲಕ್ಷ ಮಂದಿ ಪ್ರತೀ ವರ್ಷ ಈ ತೊಂದರೆಯಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲೇ ಈ ತೊಂದರೆಯ ಸಾಂದ್ರತೆ ಹೆಚ್ಚಾದರೂ, ಅಭಿವೃದ್ಧಿಶೀಲ - ಬಡದೇಶಗಳಲ್ಲಿ ಜನಸಂಖ್ಯೆಯ ಪ್ರಮಾಣದಿಂದಾಗಿ ಈ ತೊಂದರೆಯಿರುವವರ ಸಂಖ್ಯೆಯೂ ಹೆಚ್ಚಿದೆ. ಭಾರತದಲ್ಲಿ ಒಂದು ಅಂದಾಜಿನ ಪ್ರಕಾರ, ಆಸ್ತಮಾ ರೋಗಿಗಳ ಸಂಖ್ಯೆ ಸುಮಾರು ಒಂದೂವರೆ ಕೋಟಿ. ಮಕ್ಕಳಲ್ಲಿನ ಆಸ್ತಮಾ ಮತ್ತು ಅಲರ್ಜಿ ಅಧ್ಯಯನಗಳ ವರದಿಯ ಪ್ರಕಾರ ದಕ್ಷಿಣ ಭಾರತದಲ್ಲಿ ನೂರಕ್ಕೆ 12 ಮಕ್ಕಳಲ್ಲಿ ಆಸ್ತಮಾ ಇದೆ.
ಆಸ್ತಮಾ ಇರುವವರಲ್ಲಿ ಯಾವುದಾದರೂ ಕಾರಣದಿಂದ ಆಸ್ತಮಾ ದಾಳಿ ಆದಾಗ, ಶ್ವಾಸಕೋಶಕ್ಕೆ ತಲುಪುವ ಗಾಳಿ ಹಾದಿ ಉರಿಯೂತಕ್ಕೀಡಾಗುತ್ತದೆ. ಅದು ಊದಿಕೊಂಡು, ಅಲ್ಲಿನ ಸ್ನಾಯುಗಳು ಬಿಗಿದುಕೊಂಡು, ಗಾಳಿಯ ಚಲನೆಗೆ ದಾರಿ ಇಲ್ಲದಾಗುತ್ತದೆ. ಹೀಗಾದಾಗ, ಗಾಳಿ ಶ್ವಾಸಕೋಶದಿಂದ ಹೊರಗೆ ಮತ್ತೆ ಒಳಗೆ ಚಲಿಸಲು ಕಷ್ಟವಾಗುತ್ತದೆ ಮತ್ತು ಕೆಮ್ಮು, ದಮ್ಮು, ಉಸಿರಾಟಕ್ಕೆ ಕಷ್ಟವಾಗುವುದು, ಎದೆ ಬಿಗಿತದಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಹೆಚ್ಚಿನ ಆಸ್ತಮಾ ರೋಗಿಗಳಲ್ಲಿ ಈ ರೋಗ ಲಕ್ಷಣಗಳಿಗೂ, ದೈಹಿಕ ಚಟುವಟಿಕೆಗಳಿಗೂ ನಿಕಟ ಸಂಬಂಧ ಇರುತ್ತದೆ. ಕೆಲವೊಮ್ಮೆ ಆರೋಗ್ಯವಂತ ವ್ಯಕ್ತಿಗಳಿಗೂ ಕೂಡ ವ್ಯಾಯಾಮದ ವೇಳೆ ಆಸ್ತಮಾ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇದಕ್ಕೆ ವ್ಯಾಯಾಮ ಪ್ರೇರಿತ ಶ್ವಾಸ ಹಾದಿ ಬಿಗಿತ (EIB) ಅಥವಾ ವ್ಯಾಯಾಮ ಪ್ರೇರಿತ ಆಸ್ತಮಾ (EIA) ಎನ್ನುತ್ತಾರೆ.
ಆಸ್ತಮಾದಲ್ಲಿ ಸಾವು ನೋವಿಗೆ ಹೆಚ್ಚಾಗಿ ಕಾರಣವಾಗುವುದು, ಸೂಕ್ತ ಪ್ರಮಾಣದಲ್ಲಿ ಸುಸೂತ್ರವಾದ ಚಿಕಿತ್ಸೆ ಪಡೆಯದಿರುವುದು. ಸೂಕ್ತ ಪ್ರಾಥಮಿಕ ಆರೈಕೆ ದೊರೆತರೆ, ಆಸ್ತಮಾ ರೋಗಿಗಳಿಗೆ ಆಸ್ಪತ್ರೆಗೆ ಪದೇ ಪದೇ ದಾಖಲಾಗುವ ಆವಶ್ಯಕತೆ ಇರುವುದಿಲ್ಲ.
ಈ ದೀರ್ಘಕಾಲಿಕ ಗಾಳಿ ಹಾದಿಯ ತೊಂದರೆಯಲ್ಲಿ ಹಲವು ಕೋಶಗಳು ಮತ್ತು ಕೋಶಾಂಶಗಳು ಪ್ರಮುಖ ಪಾತ್ರ ವಹಿಸುತ್ತವೆ. ಅವುಗಳೆಂದರೆ, ಮಾಸ್ಟ್ ಕೋಶಗಳು, ಇಯಸಿನೋಫಿಲ್‌ಗಳು, ಟಿ-ಲಿಂಫೋಸೈಟ್‌ಗಳು, ಮ್ಯಾಕ್ರೊಫೇಜ್‌ಗಳು, ನ್ಯೂಟ್ರೊಫಿಲ್‌ಗಳು ಮತ್ತು ಎಪಿಥೀಲಿಯಲ್ ಕೋಶಗಳು.
ಪರಿಸರ ಮತ್ತಿತರ ಅಂಶಗಳೂ ಆಸ್ತಮಾ ರೋಗಿಗಳಲ್ಲಿ ಆಸ್ತಮಾ ದಾಳಿ ಕಾಣಿಸಿಕೊಳ್ಳಲು ಕಾರಣ ಆಗಬಹುದು. ರೋಗಿಗಳಿಗೆ ಅಲರ್ಜಿಕಾರಕವಾಗಿರುವ, ರೋಗಿಗಳಿಗೆ ಸೂಕ್ಷ್ಮ ಸಂವೇದಿಯಾಗಿರುವ, ರೋಗಿಗಳಿಗೆ ಕಿರಿಕಿರಿ ಉಂಟು ಮಾಡುವ ಅಂಶಗಳು ಮತ್ತು ಕೆಲವು ವೈರಸ್‌ಗಳು ಆಸ್ತಮಾಕ್ಕೆ ಪ್ರೇರಕವಾಗಿ ವರ್ತಿಸಬಹುದು. ಆಸ್ತಮಾದ ತೀವ್ರತೆ ಏನೇ ಇದ್ದರೂ, ಈ ಉರಿಯೂತವು ರೋಗಿಗಳಲ್ಲಿ ಅಲ್ಪ ಪ್ರಮಾಣದಲ್ಲಾದರೂ, ಯಾವಾಗಲೂ ಇರುತ್ತದೆ. ಹೀಗೆ ಗಾಳಿ ಹಾದಿಯ ಉರಿಯೂತದಿಂದಾಗಿ ದಮ್ಮು, ಉಸಿರಾಟ ಇಲ್ಲದಿರುವಿಕೆ, ಎದೆಯಲ್ಲಿ ಬಿಗಿತ ಮತ್ತು ಕೆಮ್ಮು ಕಾಣಿಸಬಹುದು. ಇದು ಹೆಚ್ಚಾಗಿ ರಾತ್ರಿ ಅಥವಾ ಬೆಳಗಿನ ಜಾವ ಕಾಣಿಸಿಕೊಳ್ಳುತ್ತದೆ.
ಆಸ್ತಮಾ ಲಕ್ಷಣಗಳು ವಿವಿಧ ದರ್ಜೆಯ ಗಾಳಿ ಹಾದಿಯ ಅಡ್ಡಿಯಿಂದ ಕಾಣಿಸಿಕೊಳ್ಳಬಹುದಾಗಿದ್ದು, ಕೆಲವು ತಂತಾನೆ ಮತ್ತು ಇನ್ನು ಕೆಲವು ಪ್ರಕರಣಗಳಲ್ಲಿ ಚಿಕಿತ್ಸೆಯಿಂದ ಈ ಲಕ್ಷಣಗಳನ್ನು ನಿವಾರಿಸ ಬಹುದು. ಗಾಳಿ ಹಾದಿಯಲ್ಲಿ ಅಡ್ಡಿಗೆ ಕಾರಣ ಗಳೂ ಹಲವಾರು. ಅವುಗಳಲ್ಲಿ ಗಾಳಿ ಹಾದಿ ಸಪುರವಾಗುವುದು, ಗಾಳಿ ಹಾದಿಯಲ್ಲಿ ದ್ರವತುಂಬಿದ ಊತ, ಕಫದಿಂದಾಗಿ ಅಡ್ಡಿ, ಗಾಳಿ ಹಾದಿ ಮರುರೂಪುಗೊಳ್ಳುವುದು... ಇತ್ಯಾದಿ ಕಾರಣಗಳಿರುತ್ತವೆ. ಇದಕ್ಕೆ ಅಲರ್ಜಿ ಕಾರಕಗಳು, ಕಿರಿಕಿರಿಕಾರಕಗಳು, ತಂಪಾದ ಗಾಳಿ, ವೈರಸ್‌ಗಳ ಪ್ರಭಾವವೂ ಸೇರಿದಾಗ ಇರುವ ಉರಿಯೂತದ ಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ ಮತ್ತು ರೋಗಿಯಲ್ಲಿ ಉಬ್ಬಸದ ಲಕ್ಷಣಗಳು ಪ್ರಕಟಗೊಳ್ಳುತ್ತವೆ.
ಆಸ್ತಮಾ ಲಕ್ಷಣಗಳು
ಆಸ್ತಮಾದ ಅತ್ಯಂತ ಸಾಮಾನ್ಯ ಲಕ್ಷಣ ಎಂದರೆ ದಮ್ಮು. ಇದು ಉಸಿರಾಟದ ವೇಳೆ ಕಾಣಿಸಿಕೊಳ್ಳುವ ಸಿಳ್ಳಿನಂತಹ ಧ್ವನಿ. ಇನ್ನಿತರ ಲಕ್ಷಣಗಳೆಂದರೆ -
ಉಸಿರಾಟ ಕಷ್ಟವಾಗವುದು.
ಎದೆ ಬಿಗಿತ ಅಥವಾ ನೋವು.
ದೀರ್ಘಕಾಲಿಕ ಕೆಮ್ಮು.
ಕೆಮ್ಮು ಮತ್ತು ದಮ್ಮಿನ ಕಾರಣದಿಂದಾಗಿ ಮಲಗಲು ಕಷ್ಟವಾಗುವುದು.
ಆಸ್ತಮಾ ಲಕ್ಷಣಗಳಿಗೆ ಹೆಚ್ಚಾಗಿ ಕಾರಣವಾಗುವ ಅಲರ್ಜಿಕಾರಕಗಳೆಂದರೆ ಸಾಕುಪ್ರಾಣಿಗಳ ಚರ್ಮದ ಹೊಟ್ಟು, ಧೂಳಿನ ಕೀಟಗಳು, ಪರಾಗರೇಣುಗಳು... ಇತ್ಯಾದಿ. ಅಲರ್ಜಿ ಕಾರಕಗಳಲ್ಲದ ಪ್ರೇರಕಗಳೆಂದರೆ ಹೊಗೆ, ಕಲುಷಿತ ವಾತಾವರಣ ಅಥವಾ ತಂಪಾದ ಗಾಳಿ ಇಲ್ಲವೇ ವಾತಾವರಣದಲ್ಲಾಗುವ ಹಠಾತ್ ಬದಲಾವಣೆಗಳು. ವ್ಯಾಯಾಮದ ವೇಳೆ, ಶೀತ ಇರುವಾಗ ಅಥವಾ ತೀವ್ರ ಮಾನಸಿಕ ಒತ್ತಡದ ವೇಳೆ, ರಾತ್ರಿ ಅಥವಾ ಬೆಳಗಿನ ಜಾವದಲ್ಲಿ ಆಸ್ತಮಾ ಲಕ್ಷಣಗಳು ತೀವ್ರಗೊಳ್ಳಬಹುದು. ಕೆಲವೊಮ್ಮೆ ಅತಿಯಾದ ಊಟ ಅಥವಾ ಹಸಿವಿಲ್ಲದಿರುವಿಕೆ ಮತ್ತು ಕಿಬ್ಬೊಟ್ಟೆ ಊದಿಕೊಳ್ಳುವಿಕೆ ಇದ್ದಾಗಲೂ, ಅದು ಆಸ್ತಮಾಕ್ಕೆ ಕಾರಣ ಆಗುವುದಿದೆ. ಹೆಚ್ಚಿನ ರೋಗಿಗಳಿಗೆ ಇದರ ಜೊತೆಗೆ ಅಲರ್ಜಿ ಮೂಲದ ಮೂಗಿನ ಉರಿಯೂತ (ಅಲರ್ಜಿಕ್ ರೈನೈಟಿಸ್) ಅಥವಾ ಅಕಾರಣ ಚರ್ಮದ ಉರಿಯೂತ (ಅಟೋಪಿಕ್ ಡರ್ಮಾಟೈಟಿಸ್) ಕೂಡ ಇರುತ್ತದೆ. ಆಸ್ತಮಾ ಇರುವವರಲ್ಲಿ ಹೆಚ್ಚಾಗಿ, ಆ ತೊಂದರೆಯ ಕೌಟುಂಬಿಕ ಹಿನ್ನೆಲೆ ಇರುತ್ತದೆ. ಅವರ ಹತ್ತಿರದ ಸಂಬಂ—ಗಳಲ್ಲಿ ಆಸ್ತಮಾ, ಅಲರ್ಜಿಕ್ ಸೈನಸೈಟಿಸ್, ರೈನೈಟಿಸ್ ಕಂಡು ಬರುತ್ತದೆ.
ನಿಮ್ಮ ಮಗುವಿಗೆ ಈ ಕೆಳಗಿನ ಒಂದು ಅಥವಾ ಅದಕ್ಕಿಂತ ಹೆಚ್ಚು ರೋಗ ಲಕ್ಷಣಗಳಿದ್ದಲ್ಲಿ , ನೀವು ಮಗುವನ್ನು ಸೂಕ್ತ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಬೇಕು.
ಸತತ ಕೆಮ್ಮು, ವೈರಲ್ ಸೋಂಕು ಕಾಣಿಸಿಕೊಂಡಾಗ ತೀವ್ರವಾಗುವುದು ಮತ್ತು ಮಗು ಮಲಗಿದ್ದಾಗ ಕಾಣಿಸಿಕೊಳ್ಳುವುದು ಅಥವಾ ವ್ಯಾಯಾಮ ಇಲ್ಲವೇ ಶೀತಗಾಳಿಗೆ ತೀವ್ರಗೊಳ್ಳುವುದು.
ಮಗು ಉಸಿರಾಡುವಾಗ ಸಿಳ್ಳೆಯಂತಹ ಶಬ್ದ ಕೇಳಿಸುವುದು.
ಉಸಿರಾಟಕ್ಕೆ ಕಷ್ಟ ಮತ್ತು ಕ್ಷಿಪ್ರ ಉಸಿರಾಟ, ವ್ಯಾಯಾಮದ ಜೊತೆಗೆ ಕಾಣಿಸಿಕೊಳ್ಳುತ್ತದೆ.
ಎದೆಯಲ್ಲಿ ಬಿಗಿತ - ಮಗು ಇದನ್ನು ಎದೆ ನೋವು ಅಥವಾ ಎದೆಯಲ್ಲಿ ವಿಚಿತ್ರ ಅನುಭವ ಎಂದು ವಿವರಿಸಬಹುದು.
ಸುಸ್ತು (ಮಗು ನಿಧಾನಿ ಆಗುವುದು, ಆಡಲು ಹೋಗದಿರುವುದು)
ಸ್ತನ ಪಾನಕ್ಕೆ ತೊಂದರೆ, ಸ್ತನಪಾನ ಕಷ್ಟ ಆಗುತ್ತದೆ.
ಕ್ರೀಡಾ, ಸಾಮಾಜಿಕ ಪರಿಸರಗಳಿಂದ ದೂರ ಇರುವುದು.
ಕೆಮ್ಮಿನಿಂದಾಗಿ ಮಲಗಲು ಕಷ್ಟ ಅಥವಾ ಉಸಿರಾಟಕ್ಕೆ ಕಷ್ಟ.
ಆಸ್ತಮಾ ರೋಗ ಪತ್ತೆ
ಶ್ವಾಸಕೋಶದ ಸಮರ್ಥ್ಯ ತಪಾಸಣೆ ಹಾಗೂ ರೋಗಿ ನೀಡುವ ವಿವರಗಳ ಆಧಾರದಲ್ಲಿ ಅಲರ್ಜಿ ತಜ್ಞರು ಆಸ್ತಮಾವನ್ನು ಪತ್ತೆ ಮಾಡಬಲ್ಲರು.
ಸ್ಪೈರೊಮೆಟ್ರಿ ಇಂತಹ ಒಂದು ತಪಾಸಣೆ. ಈ ಯಂತ್ರದಲ್ಲಿರುವ ಸೆನ್ಸರ್‌ಗೆ ನೀವು ದೀರ್ಘವಾಗಿ ಉಸಿರೆಳೆದುಕೊಂಡು ಹೊರಗೆ ಊದಿಬಿಟ್ಟಾಗ ನಿಮ್ಮ ಶ್ವಾಸಕೋಶ ಹಿಡಿದಿಟ್ಟುಕೊಳ್ಳಬಹುದಾದ ಗಾಳಿಯ ಪ್ರಮಾಣ, ನೀವು ಉಸಿರು ಒಳಗೆಳೆದು ಕೊಳ್ಳುವ -ಹೊರಬಿಡುವ ವೇಗ ಇತ್ಯಾದಿಗಳ ವಿಶ್ಲೇಷಣೆ ಸಿಗುತ್ತದೆ. ಈ ತಪಾಸಣೆಯಿಂದ ಆಸ್ತಮಾ ತೀವ್ರತೆ ಮಾತ್ರವಲ್ಲದೆ, ಚಿಕಿತ್ಸೆಯ ಪರಿಣಾಮಗಳನ್ನು ಕೂಡ ವಿಶ್ಲೇಷಿಸಬಹದು. ಆಸ್ತಮಾ ರೋಗಿಗಳಲ್ಲಿ ಮೊದಲ ಸೆಕೆಂಡ್‌ನಲ್ಲಿ ಹೊರ ಊದುವ ಗಾಳಿಯ ಪ್ರಮಾಣ ಇರಬೇಕಾದ ಪ್ರಮಾಣಕ್ಕಿಂತ (ಊಉVಐ) ಸುಮಾರು 80%ನಷ್ಟು ಕಡಿಮೆ ಇರುತ್ತದೆ.
ಸ್ಪೈರೊಮೆಟ್ರಿಯ ಅನುಕೂಲಗಳು
ಆಸ್ತಮಾವನ್ನು ಖಚಿತ ಪಡಿಸಿಕೊಳ್ಳಲು.
ಆಸ್ತಮಾ ತೀವ್ರತೆಯ ಪ್ರಮಾಣ ಮತ್ತು ಗಾಳಿ ಹಾದಿಯಲ್ಲಿ ಅಡ್ಡಿಯ ಪ್ರಮಾಣಗಳ ವಿಶ್ಲೇಷಣೆಗೆ.
ತೀವ್ರತೆಗೆ ಅನುಗುಣವಾಗಿ ಸೂಕ್ತ ಚಿಕಿತ್ಸೆ ನೀಡಲು.
ಔಷಧಿಯ ಸೂಕ್ತ ಡೋಸ್ ನಿರ್ಧರಿಸಲು.
ಚಿಕಿತ್ಸೆಗೆ ರೋಗಿಯ ಪ್ರತಿಕ್ರಿಯೆಯನ್ನು ವಿಶ್ಲೇಷಿಸಲು.
ರೋಗದ ಭವಿಷ್ಯದ ಹಾದಿಯ ಬಗ್ಗೆ ತೀರ್ಮಾನಗಳನ್ನು ಕೈಗೊಳ್ಳಲು.
ಆಸ್ತಮಾ ಇರುವ ಹೆಚ್ಚಿನವರಲ್ಲಿ ಅಲರ್ಜಿ ಕೂಡಾ ಇರುತ್ತದೆ. ಹಾಗಾಗಿ, ವೈದ್ಯರು ರೋಗಿಗೆ ಅಲರ್ಜಿ ತಪಾಸಣೆ ಮತ್ತು ರಕ್ತದಲ್ಲಿ ಅಲರ್ಜಿ ಅಂಶಗಳ ಪ್ರಮಾಣದ ತಪಾಸಣೆ ಕೂಡ ನಡೆಸಬಹುದು.
ಎದೆಯ ಕ್ಷ-ಕಿರಣಬಿಂಬ ಪಡೆದು, ದಮ್ಮಿಗೆ ಕಾರಣವಾಗಬಲ್ಲ ಇತರ ತೊಂದರೆಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು. ರೋಗಿಯಲ್ಲಿ ಅಲರ್ಜಿ ಮೂಲದ ಸೈನಸೈಟಿಸ್ ಅಥವಾ ಪಾಲಿಪ್‌ಗ್ಳಿಲ್ಲ ಎಂದು ಖಚಿತ ಪಡಿಸಿಕೊಳ್ಳಲು, ಆ ಭಾಗದ ಕ್ಷ-ಕಿರಣ ಬಿಂಬ ಕೂಡ ಅಗತ್ಯವಾಗಬಹುದು. ಯಾಕೆಂದರೆ, ಅವು ಆಸ್ತಮಾ ಪ್ರೇರಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಬಲ್ಲವು.
ಚಿಕಿತ್ಸೆ ಮತ್ತು ನಿರ್ವಹಣೆ
ಆಸ್ತಮಾ ಸಂಪೂರ್ಣವಾಗಿ ಗುಣ ಆಗಬಲ್ಲ ತೊಂದರೆ ಅಲ್ಲ. ಅದನ್ನು ಹೆಚ್ಚೆಂದರೆ ಒಳ್ಳೆಯ ಪರಿಣಾಮಕಾರಿ ಚಿಕಿತ್ಸೆ ನೀಡುವ ಮೂಲಕ ನಿಯಂತ್ರಣದಲ್ಲಿ ಇರಿಸಿಕೊಳ್ಳಬಹದು. ಇದರಲ್ಲಿ ವೈದ್ಯರು ಸೂಚಿಸಿದಂತೆ ಔಷಧಿಗಳನ್ನು ಚಾಚೂ ತಪ್ಪದೆ ತೆಗೆದುಕೊಳ್ಳುವುದು, ಆಸ್ತಮಾಕ್ಕೆ ಕಾರಣವಾಗಬಲ್ಲ ಪ್ರೇರಕಗಳನ್ನು ಗುರುತಿಸಿಕೊಂಡು, ಅವುಗಳಿಂದ ದೂರ ಇರುವುದು ಸೇರಿವೆ. ನಿಮ್ಮ ಅಲರ್ಜಿ ತಜ್ಞರು ನಿಮಗೆ ಸೂಕ್ತ ಎನ್ನಿಸುವ ಔಷಧಿ ಯನ್ನು ಗುರುತಿಸಿ, ಅದನ್ನು ಹೇಗೆ ತೆಗೆದು ಕೊಳ್ಳಬೇಕೆಂದು ನಿಮಗೆ ತಿಳಿ ಹೇಳುತ್ತಾರೆ.
ಆಸ್ತಮಾ ಚಿಕಿತ್ಸೆಯ
ಸಾಮಾನ್ಯ ಗುರಿಗಳು
ಆಸ್ತಮಾದ ದೀರ್ಘಕಾಲಿಕ ಲಕ್ಷಣಗಳು ಮತ್ತು ರಾತ್ರಿ - ಹಗಲಿನ ತೊಂದರೆಗಳಿಂದ ಮುಕ್ತಿ. ಇದಕ್ಕೆ ಮಾನದಂಡಗಳು: ನಿದ್ದೆಗೆ ತೊಂದರೆ ಆಗಬಾರದು, ಶಾಲೆ-ಕೆಲಸಗಳಿಗೆ ಹೋಗಲು ತೊಂದರೆ ಇರಬಾರದು, ತುರ್ತು ಚಿಕಿತ್ಸೆಗಳಿಗಾಗಿ ಆಸ್ಪತ್ರೆ ಭೇಟಿ ಇಲ್ಲ; ಅಥವಾ ಕನಿಷ್ಠ ಪ್ರಮಾಣದಲ್ಲಿರಬೇಕು.
ಎಂದಿನ ಚಟುವಟಿಕೆಗಳನ್ನು ಮಾಡಲು ಅಡ್ಡಿ ಇರದಂತೆ - ವ್ಯಾಯಾಮಗಳು ಮತ್ತು ದೈಹಿಕ ಚಟುವಟಿಕೆಗಳೂ ಸೇರಿದಂತೆ - ನೋಡಿಕೊಳ್ಳುವುದು.
ಶ್ವಾಸಕೋಶದ ಸಾಮರ್ಥ್ಯ ಬಹುತೇಕ ಸಹಜಕ್ಕೆ ಹತ್ತಿರ ಇರಬೇಕು.
ರೋಗಿಗೆ ದೊರೆಯುತ್ತಿರುವ ಚಿಕಿತ್ಸೆಯ ಬಗ್ಗೆ ತೃಪ್ತಿ ಇರಬೇಕು.
ಬೇಕಾದಷ್ಟೇ ಪ್ರಮಾಣದಲ್ಲಿ ಔಷಧ ನೀಡಿ, ಅಡ್ಡ ಪರಿಣಾಮಗಳನ್ನು ಕನಿಷ್ಠ ಗೊಳಿಸಿಕೊಳ್ಳುವುದು.
ಆಸ್ತಮಾ ಚಿಕಿತ್ಸೆಗೆ ಮೂಲಭೂತವಾಗಿ 2 ವಿಧದ ಔಷಧಿಗಳಿವೆ.
ಆಸ್ತಮಾ ದಾಳಿ ತಡೆಯಲು ನಿಯಂತ್ರಕ ಔಷಧಿಗಳು
ಆಸ್ತಮಾ ದಾಳಿಯಿಂದ ಪರಿಹಾರ ನೀಡುವ ಔಷಧಿಗಳು
ನಿಯಂತ್ರಕ ಔಷಧಿಗಳು
ನಿಯಂತ್ರಕ ಔಷಧಿಗಳು ಆಸ್ತಮಾ ಲಕ್ಷಣಗಳನ್ನು ನಿಯಂತ್ರಿಸುವ ಮತ್ತು ಆಸ್ತಮಾಕ್ಕೆ ಕಾರಣವಾಗಿ ಮೂಲದಲ್ಲಿರುವ ಗಾಳಿ ಹಾದಿಯ ಉರಿಯೂತವನ್ನು ಶಮನಗೊಳಿಸುವ ಕೆಲಸ ಮಾಡುತ್ತವೆ. ಇವನ್ನು° ಪ್ರತಿದಿನ ತೆಗೆದುಕೊಳ್ಳುವುದು ಅಗತ್ಯ. ಆಗ ಮಾತ್ರ ಅವು ಸಮರ್ಪಕವಾಗಿ ಕೆಲಸ ಮಾಡಬಲ್ಲವು. ನೀವು ಆರೋಗ್ಯ ವಂತರಾಗಿದ್ದಾಗಲೂ ಅವನ್ನು ತೆಗೆದು ಕೊಳ್ಳಬೇಕು. ಉಸಿರಿನ ಮೂಲಕ ತೆಗೆದುಕೊಳ್ಳುವ ಸ್ಟೀರಾಯ್ಡಗಳು ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬಲ್ಲ ದೀರ್ಘ ಕಾಲಿಕ ನಿಯಂತ್ರಣ ಔಷಧಿಗಳು.
ಹೆಚ್ಚಾಗಿ ಬಳಸಲಾಗುವ ನಿಯಂತ್ರಕ ಔಷಧಿಗಳೆಂದರೆ-
ಉಸಿರಿನ ಮೂಲಕ ತೆಗೆದುಕೊಳ್ಳುವ ಕಾರ್ಟಿಕೊ ಸ್ಟೀರಾಯ್ಡ ಔಷಧಿಗಳಾದ ಫುÉಟಿಕಾಸೋನ್, ಬುಡೆಸೊನೈಡ್, ಮೆಮೊಟಾಸೋನ್, ಸೈಕ್ಲೆಸೊನೈಡ್, ಫುÉನಿಸೊಲೈಡ್, ಬೆಕ್ಲೊ ಮೆಥಾಸೋನ್. ಇವನ್ನೆಲ್ಲ ಪ್ರತಿದಿನ ತೆಗೆದುಕೊಳ್ಳಬೇಕಾಗುತ್ತದೆ.
ದೀರ್ಘ ಪರಿಣಾಮಕಾರಿ ಬೀಟಾ ಅಗೊನಿಸ್ಟ್ ಇನ್‌ಹೇಲರ್‌ಗಳು ಕೂಡ (ಔಅಆಅ) ಆಸ್ತಮಾ ಲಕ್ಷಣಗಳನ್ನು ನಿವಾರಿಸಬಲ್ಲವು. ಆದರೆ ಕೆಲವರಲ್ಲಿ ಇವು ಅಡ್ಡ ಪರಿಣಾಮಗಳನ್ನು ಹೊಂದಿವೆ. ಅವನ್ನು ರೋಗಿಗಳಿಗೆ ಯಾವತ್ತೂ ಏಕಮಾತ್ರ ಚಿಕಿತ್ಸೆ ಆಗಿ ನೀಡಬಾರದು. ಅವನ್ನು ಹೆಚ್ಚಾಗಿ ಇನ್‌ಹೇಲರ್ ಸ್ಟೀರಾಯ್ಡಗಳಿಗೆ ಜೊತೆಯಾಗಿ ನೀಡಲಾಗುತ್ತದೆ. ಕಾಂಬಿನೇಶನ್ ಇನ್‌ಹೇಲರ್‌ಗಳು ಹೆಚ್ಚಾಗಿ ಈ ಮಿಶ್ರಣ ಹೊಂದಿರುತ್ತವೆ. ಅಂತಹ ಕೆಲವು ಮಿಶ್ರಣಗಳೆಂದರೆ ಫುÉಟಿಕಾಸೋನ್ ಮತ್ತು ಸಾಲ್ಮೆಟೆರಾರ್, ಬುಡೆಸೊನೈಡ್ ಮತ್ತು ಫೋರೊ¾ಟೆರಾಲ್, ಮೊಮೆಟಾಸೋನ್,ಫೋರೆ¾¾ಟೆರಾಲ್.
ಸ್ಟೀರಾಯ್ಡಗಳ ಪ್ರತಿದಿನದ ಇನ್‌ಹೆಲೇಶನ್‌ನಿಂದಾಗಿ
ಆಸ್ತಮಾ ಲಕ್ಷಣಗಳು ಕಡಿಮೆ ಯಾಗಿ, ಪರಿಸ್ಥಿತಿ ಸುಧಾರಿಸುತ್ತಾ ಬರುತ್ತದೆ.
ಆಸ್ತಮಾದ ತೀವ್ರ ದಾಳಿ ತುಂಬಾ ಕಡಿಮೆ ಆಗುತ್ತದೆ.
ತುರ್ತು ರಕ್ಷಣಾ ಔಷಧಿಗಳ ಬಳಕೆ ಕಡಿಮೆ ಆಗುತ್ತದೆ.
ಶ್ವಾಸಕೋಶದ ಸಾಮರ್ಥ್ಯ ಹೆಚ್ಚುತ್ತಾ ಸಾಗುತ್ತದೆ.
ಬಳಸಬಹುದಾದ ಇತರ ನಿಯಂತ್ರಣ ಔಷಧಿಗಳೆಂದರೆ
ಲ್ಯೂಕೊಟ್ರೈನ್ ಮೊಡಿಫಯರ್‌ಗಳೆಂಬ ಬಾಯಿಯ ಮೂಲಕ ಸೇವಿಸುವ ಔಷಧಿಗಳು -
ಮೊಂಟೆಲುಕಾಸ್ಟ್, ಜಾಫಿರ್‌ಲುಕಾಸ್ಟ್, ಜೈಲ್ಯುಟಾನ್ ಅಂತಹ ಕೆಲವು ಔಷಧಿಗಳು.
ಓಮಾಲಿಜುಮಾಬ್
ಕ್ರೊಮೊಲಿನ್ ಸೋಡಿಯಂ ಅಥವಾ ನೆಡೊಕ್ರೊಮಿಲ್ ಸೋಡಿಯಂ
ಅಮೈನೊಫಿಲೈನ್ ಅಥವಾ ಥಿಯೋಫಿಲೈನ್
ರಕ್ಷಕ ಔಷ—ಗಳು
ರಕ್ಷಕ ಔಷಧಿಗಳೆಂದರೆ ಆಸ್ತಮಾ ದಾಳಿ ಆದಾಗ, ಗಾಳಿ ಹಾದಿಯನ್ನು ತೆರೆದು ಉಸಿರಾಟಕ್ಕೆ ಅವಕಾಶ ಮಾಡಿಕೊಡುವ ಔಷಧಿಗಳು. ಇವನ್ನು ಆಸ್ತಮಾ ದಾಳಿ ಆದಾಗ ಅಥವಾ ವೈದ್ಯರು ಸೂಚಿಸಿದ್ದಲ್ಲಿ ವ್ಯಾಯಾಮಕ್ಕಿಂತ ಮೊದಲು ತೆಗೆದುಕೊಳ್ಳಲಾಗುತ್ತದೆ. ಇವುಗಳಲ್ಲಿ ಅಲ್ಪಕಾಲಿಕ ಪರಿಣಾಮ ಬೀರುವ ಬೀಟಾ ಅಗೊನಿಸ್ಟ್‌ಗಳು ಸೇರಿವೆ. ಅವುಗಳೆಂದರೆ ಸಾಲ್ಪುಟಮಾಲ್, ಲೆವಾಲ್‌ಬ್ಯುಟೆರಾಲ್, ಟಬುìಟಾಲೈನ್‌ಗಳು ಸೇರಿದ್ದು, ಇವು ಆಸ್ತಮಾ ಲಕ್ಷಣಗಳ ನಿಯಂತ್ರಣಕ್ಕೆ ಕ್ಷಿಪ್ರವಾಗಿ ವರ್ತಿಸುತ್ತವೆ.
ಕೆಮ್ಮು, ದಮ್ಮು, ಉಸಿರಾಟಕ್ಕೆ ಕಷ್ಟ, ಆಸ್ತಮಾ ದಾಳಿ ಇರುವಾಗ ಇವನ್ನು ತೆಗೆದುಕೊಳ್ಳಬೇಕಾಗಿದ್ದು, ಇವನ್ನು ರಕ್ಷಕ ಔಷಧಿಗಳೆನ್ನುತ್ತಾರೆ.
ವ್ಯಾಯಾಮ ಪ್ರೇರಿತ ಆಸ್ತಮಾ ಇರುವವರು, ವೈದ್ಯರ ಸಲಹೆಯ ಮೇರೆಗೆ ಇವನ್ನು° ವ್ಯಾಯಾಮ ಆರಂಭಿಸುವ ಮೊದಲು ತೆಗೆದುಕೊಳ್ಳಬಹುದು.
ಇವು ನಿಯಂತ್ರಕ ಔಷಧಿಗಳ ಸ್ಥಾನವನ್ನು ಗಳಿಸಲಾರವು.
ನೀವು ಈ ರಕ್ಷಕ ಔಷಧಿಗಳನ್ನು ವಾರದಲ್ಲಿ 2ಕ್ಕಿಂತ ಹೆಚ್ಚು ಸಲ ಬಳಸುತ್ತಿದ್ದಲ್ಲಿ, ನಿಮ್ಮ ವೈದ್ಯರಿಗೆ ಈ ಬಗ್ಗೆ ತಿಳಿಸಿ. ನಿಮ್ಮ ಆಸ್ತಮಾ ನಿಯಂತ್ರಣದಲ್ಲಿ ಇಲ್ಲ ಎಂದು ಕಂಡು ಬಂದಲ್ಲಿ ನಿಮ್ಮ ವೈದ್ಯರು ನಿಮ್ಮ ನಿಯಂತ್ರಕ ಔಷಧಿ ಅಥವಾ ಅದರ ಡೋಸನ್ನು ಬದಲಿಸಬೇಕಾಗಬಹುದು.
ತೀವ್ರವಾದ ರೋಗ ಲಕ್ಷಣ ಗಳಿರುವವರಿಗೆ ರಕ್ತನಾಳಗಳ ಮೂಲಕ ಕಾರ್ಟಿಕೊಸ್ಟೀರಾಯ್ಡ ನೀಡಬೇಕಾಗಬಹುದು. ಪ್ರಡ್ನಿಸಲೋನ್, ಮೆಥೈಲ್‌ಪ್ರಡ್ನಿಸಲೋನ್, ಅಂಥ ಕಾರ್ಟಿಕೊ ಸ್ಟೀರಾಯ್ಡಗಳು. ಇವನ್ನು ದೀರ್ಘಕಾಲ ಬಳಸಿದಲ್ಲಿ , ಅದರಿಂದ ಗಂಭೀರ ಅಡ್ಡ ಪರಿಣಾಮಗಳುಂಟಾಗಬಹುದು.
ಆಸ್ತಮಾ ತಜ್ಞರ ಭೇಟಿ
ಯಾವಾಗ?
ರೋಗ ಪತ್ತೆ ಮತ್ತು ತೀವ್ರತೆಯ ವಿಶ್ಲೇಷಣೆಗಾಗಿ (ಉದಾ: ಬೇರೆ ತೊಂದರೆಗಳಿಂದಾಗಿ ಅಲ್ಲ ಎಂಬುದು ಖಚಿತವಿಲ್ಲದಾಗ, ಬೇರೆ ರೋಗಗಳಿಂದ ಆಸ್ತಮಾ ತೀವ್ರಗೊಳ್ಳುತ್ತಿದ್ದರೆ, ಪರಿಸರ - ಉದ್ಯೋಗ ಸಂಬಂಧಿ ಕಾರಣಗಳಿಂದ ಆಸ್ತಮಾ ಕಾಣಿಸಿಕೊಳ್ಳುತ್ತಿದ್ದರೆ ಅದನ್ನು ಖಚಿತಪಡಿಸಿಕೊಳ್ಳಲು).
ವಿಶೇಷ ಚಿಕಿತ್ಸೆ - ಶಿಕ್ಷಣಕ್ಕಾಗಿ (ಉದಾ: ಇಮ್ಯುನೊತೆರಪಿ ಅಥವಾ ಅಲರ್ಜಿ ಕಾರಕಗಳಿಂದ ದೂರ ಇರುವ ಬಗ್ಗೆ ತರಬೇತಿಗಾಗಿ).
ಇತರ ಪ್ರಕರಣಗಳು:
ರೋಗಿ ಆಸ್ತಮಾ ಚಿಕಿತ್ಸೆಯ ಗುರಿಗಳನ್ನು 3ರಿಂದ 6 ತಿಂಗಳ ಬಳಿಕವೂ ತಲಪದಿದ್ದರೆ ಅಥವಾ ಇದೇ ವೇಳೆಗೆ, ವೈದ್ಯರಿಗೆ ರೋಗಿ ಚಿಕಿತ್ಸೆಗೆ ಪ್ರತಿಕ್ರಿಯಿಸುತ್ತಿಲ್ಲ ಅನ್ನಿಸಿದರೂ ತಜ್ಞರಿಗೆ ಶಿಫಾರಸು ಮಾಡಬಹುದು.
ಮಾರಣಾಂತಿಕವಾಗಬಲ್ಲ ತೀವ್ರತೆ ಯಲ್ಲಿ ಆಸ್ತಮಾ ದಾಳಿ ಆಗುತ್ತಿದ್ದರೆ.
ರೋಗಿಗೆ ವರ್ಷದಲ್ಲಿ ಎರಡಕ್ಕಿಂತ ಹೆಚ್ಚು ಬಾರಿ ಬಾಯಿಯ ಮೂಲಕ ನೀಡುವ ಸ್ಟೀರಾಯ್ಡ ನೀಡಬೇಕಾಗುತ್ತಿದ್ದರೆ.
ಮಾನಸಿಕ, ಮನೋ ಸಾಮಾಜಿಕ ತೊಂದರೆಗಳು ಆಸ್ತಮಾ ಚಿಕಿತ್ಸೆಗೆ ಅಡ್ಡಿ ಆಗುತ್ತಿದ್ದರೆ, ರೋಗಿಗೆ ಮಾನಸಿಕ ಆರೋಗ್ಯ ತಜ್ಞರ ಭೇಟಿಗೂ ಶಿಫಾರಸು ಮಾಡಬೇಕು.
ಮನೆಯಲ್ಲಿ ಆಸ್ತಮಾ ಆರೈಕೆ
ಆಸ್ತಮಾ ನಿಭಾಯಿಸುವಲ್ಲಿ ಸ್ವಯಂ ಆರೈಕೆಯ ಕೌಶಲಗಳ ಪಾತ್ರವೂ ದೊಡ್ಡದು. ಅಂತಹ ಕೌಶಲಗಳೆಂದರೆ -
ಯಾವ ಆಸ್ತಮಾ ಲಕ್ಷಣಗಳಿಗಾಗಿ ಎದುರು ನೋಡಬೇಕೆಂದು ತಿಳಿದಿರುವುದು.
ಪೀಕ್‌ಫ್ಲೋ ರೀಡಿಂಗ್ ನೋಡಲು ತಿಳಿದಿರುವುದು ಮತ್ತು ಹಾಗೆಂದರೆ ಏನೆಂದು ಗೊತ್ತಿರುವುದು.
ನಿಮ್ಮ ಮಗುವಿನ ವೈದ್ಯರ ದೂರವಾಣಿ ಸಂಖ್ಯೆಯನ್ನು ಕೈಯೆಟುಕಿನಲ್ಲಿ ಇರಿಸಿಕೊಂಡಿರುವುದು.
ಯಾವುದರಿಂದ ಆಸ್ತಮಾ ತೀವ್ರಗೊಳ್ಳುತ್ತದೆ ಮತ್ತು ಅದಕ್ಕೆ ಏನು ಮಾಡಬೇಕೆಂದು ತಿಳಿದಿರುವುದು.
ಆಸ್ತಮಾ ಇರುವ ಮಕ್ಕಳಿಗೆ ಶಾಲೆಯಲ್ಲಿ ಸೂಕ್ತ ಬೆಂಬಲ ಅಗತ್ಯ ಇರುತ್ತದೆ. ಶಾಲೆಯ ಸಿಬಂದಿಗಳ ಸಹಾಯವೂ ಇದಕ್ಕೆ ಅಗತ್ಯವಾಗಬಹುದು.
ಆಸ್ತಮಾಕ್ಕೆ ಕ್ರಿಯಾ ಯೋಜನೆ
ಆಸ್ತಮಾ ಇರುವ ಎಲ್ಲರಿಗೂ ಇರ ಬೇಕಾದ ಕ್ರಿಯಾ ಯೋಜನೆ ಇದಾಗಿದ್ದು, ಅದರಲ್ಲಿ ಇವೆಲ್ಲ ಒಳಗೊಂಡಿರಬೇಕು.
ಪರಿಸ್ಥಿತಿ ಸ್ಥಿರವಾಗಿರುವಾಗ ತೆಗೆದುಕೊಳ್ಳಬೇಕಾದ ಆಸ್ತಮಾ ಔಷಧಿಗಳ ಅರಿವು.
ಆಸ್ತಮಾ ಪ್ರೇರಕಗಳ ಪಟ್ಟಿ, ಅವುಗಳಿಂದ ದೂರ ಇರುವುದು ಹೇಗೆಂಬ ಯೋಜನೆ.
ಆಸ್ತಮಾ ತೀವ್ರವಾಗುತ್ತಿರುವು ದನ್ನು ಗುರುತಿಸುವುದು ಹೇಗೆ ಮತ್ತು ಯಾವಾಗ ವೈದ್ಯರಲ್ಲಿಗೆ ಹೋಗಬೇಕು ಎಂದು ಗೊತ್ತಿರುವುದು.
ಪೀಕ್‌ಫ್ಲೋ ಮೀಟರ್
ನಿಮ್ಮ ಶ್ವಾಸಕೋಶಕ್ಕೆ ಗಾಳಿ ಎಷ್ಟು ವೇಗವಾಗಿ ಎಷ್ಟು ಪ್ರಮಾಣದಲ್ಲಿ ತಲುಪುತ್ತದೆ ಮತ್ತು ಹೊರಬರುತ್ತದೆ ಎಂಬುದನ್ನು ವಿಶ್ಲೇಷಿಸುವ ಸರಳ ಮಾಪಕ ಇದು.
ಇದು ಆಸ್ತಮಾ ದಾಳಿ ಬರುವುದಿದ್ದರೆ ಎಚ್ಚರಿಸುತ್ತದೆ. ಯಾವಾಗ ಔಷಧಿ ಬೇಕು ಎಂಬುದನ್ನು ಇದು ಸೂಚಿಸಬಲ್ಲುದು .
50-80% ಪೀಕ್ ಫ್ಲೋ ವ್ಯಾಲ್ಯು ಇರವುದು ಸಾಧಾರಣ ಪ್ರಮಾಣದ ಆಸ್ತಮಾ ಸೂಚನೆ. ಈ ಮೌಲ್ಯ 50%ಗಿಂತ ಕಡಿಮೆ ಇದ್ದರೆ, ಆಸ್ತಮಾ ತೀವ್ರವಾಗಿದೆ ಎಂದರ್ಥ.
ಪರಿಸ್ಥಿತಿ ಹೀಗಿದ್ದರೆ
ತುರ್ತು ಚಿಕಿತ್ಸೆ ಪಡೆಯಿರಿ.
ತಲೆ ಸುತ್ತು - ಗೊಂದಲ.
ವಿಶ್ರಾಂತಿಯಲ್ಲಿರುವಾಗಲೂ ಉಸಿರಾಟಕ್ಕೆ ತೊಂದರೆ.
ಪೀಕ್ ಫ್ಲೋ ಮಾಪನ ನಿಮ್ಮ ಎಂದಿನ ಅತ್ಯುತ್ತಮದ ಕೇವಲ 50% ಅಥವಾ ಕಡಿಮೆ ಇದ್ದರೆ.
ತೀವ್ರ ಎದೆನೋವು.
ತುಟಿ - ಮುಖ ನೀಲಿಯೇರಿದ್ದರೆ.
ಉಸಿರಾಟಕ್ಕೆ ತೀರಾ ಕಷ್ಟ.
ನಾಡಿಮಿಡಿತ ತೀವ್ರಗತಿಯಲ್ಲಿ.
ಉಸಿರಾಟಕ್ಕೆ ಕಷ್ಟದ ಕಾರಣದಿಂದ ತೀವ್ರ ಆತಂಕ.
ಪ್ರತಿಬಂಧ ಹೇಗೆ?
ಆಸ್ತಮಾ ಪ್ರೇರಕಗಳಿಂದ ದೂರ ಇರುವ ಮೂಲಕ, ಆಸ್ತಮಾವನ್ನು ಪ್ರತಿಬಂಧಿಸಬಹುದು.
ಧೂಳಿನ ಕೀಟಗಳಿರದಂತೆ, ಅಲರ್ಜಿಕಾರಕಗಳಿರದಂತೆ ಹಾಸಿಗೆ-ಹೊದಿಕೆಗಳನ್ನು ಜತನ ಮಾಡಿ.
ಬೆಡ್ ರೂಂನ ಎಲ್ಲ ಕಾಪೆìಟ್‌ಗಳನ್ನು ತೆಗೆದು ಹಾಕಿ ಮತ್ತು ಇದ್ದರೆ ನಿಯಮಿತವಾಗಿ ವ್ಯಾಕ್ಯೂಂ ಕ್ಲೀನಿಂಗ್ ಮಾಡಿ.
ಮನೆಯಲ್ಲಿ ಬಟ್ಟೆ ಒಗೆಯಲು ಪರಿಮಳ ರಹಿತ ಸೋಪು ಬಳಸಿ.
ಹ್ಯುಮಿಡಿಟಿ ಮಟ್ಟ ಮನೆಯಲ್ಲಿ ಕನಿಷ್ಠ ಇರಿಸಿ ಮತ್ತು ಬೂಸ್ಟ್ , ಶಿಲೀಂದ್ರ ಗಳು ಬೆಳೆಯದಂತೆ ಎಚ್ಚರಿಕೆ ವಹಿಸಿ.
ಮನೆಯನ್ನು ಶುಚಿಯಾಗಿರಿಸಿ, ಆಹಾರ ವಸ್ತುಗಳನ್ನು ಬೆಡ್‌ರೂಂಗೆ ಒಯ್ಯಬೇಡಿ. ಆಹಾರದ ಡಬ್ಬಿಗಳನ್ನು ಚೆನ್ನಾಗಿ ಮುಚ್ಚಿಡಿ. ಜಿರಳೆಗಳು ಬರದಂತೆ ನೋಡಿಕೊಳ್ಳಿ.
ಮನೆಯಲ್ಲಿರುವ ಪ್ರಾಣಿ ಯೊಂದು ಅಲರ್ಜಿ ಮೂಲವಾಗಿದ್ದರೆ, ಅದನ್ನು ಬೆಡ್‌ರೂಂನಿಂದ ದೂರ ಇಡಿ; ಪ್ರಾಣಿ ಹೊಟ್ಟನ್ನು ನಿವಾರಿಸಲು ಕೋಣೆಗೆ ಫಿಲ್ಟರಿಂಗ್ ಪರಿಕರವನ್ನು ಬಿಸಿಕಾರಕಗಳ ಬಳಿ ಅಳವಡಿಸಿ.
ಮನೆಯಲ್ಲಿ ಧೂಮಪಾನ ಬೇಡ. ಇದು ಮಕ್ಕಳ ಆಸ್ತಮಾಕ್ಕೆ ಮಹಾಮಾರಿ. ಮನೆಯ ಹೊರಗೆ ಧೂಮಪಾನ ಮಾಡಿ ದ್ದರೂ, ಅದರ ಅಂಶ ಬಟ್ಟೆ ಮೇಲೆ ಇರುತ್ತದೆ. ಅದು ಆಸ್ತಮಾಕ್ಕೆ ಕಾರಣ ಆಗಬಹುದು.