ಗೊರೇಬಾಳ: ಸಿಂಧನೂರು ತಾಲೂಕಿನ ಬೂದಿವಾಳ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದಿದೆ. ಹಳ್ಳದ ನೀರನ್ನೇ ನೆಚ್ಚಿಕೊಂಡು ಬದುಕುತ್ತಿರುವ ಜನರಿಗೆ ಶುದ್ಧ ಕುಡಿಯುವ ನೀರು ವರವಾಗಿ ಪರಿಣಮಿಸಿದೆ.ಗ್ರಾಮದಲ್ಲಿ ಹಳ್ಳದ ನೀರನ್ನೇ ಜನ ಅವಲಂಬಿಸಿದ್ದಾರೆ. ಹಳ್ಳಕ್ಕೆ ಹರಿದು ಬರುವ ನೀರು ತೀರಾ ಕಲುಷಿತವಾಗಿದ್ದು, ಕುಡಿಯಲು ಅಯೋಗ್ಯವಾಗಿದೆ. ಇಷ್ಟಾದರೂ ಅನಿವಾರ್ಯ ಎಂಬಂತೆ ಜನರು ಅದೇನೀರನ್ನು ಬಳಕೆ ಮಾಡುತ್ತಿದ್ದು, ಮೈಯಲ್ಲಿ ತುರಿಕಿ ಸೇರಿದಂತೆ ಕಾಯಿಲೆಗಳು ಉಲ್ಬಣಗೊಳ್ಳುತ್ತಿವೆ. ಜ್ವರ, ನೆಗಡಿ, ಕೆಮ್ಮುಗಳು ಜನರನ್ನು ಬಾಧಿಧಿಸುತ್ತಿವೆ. ಸದ್ಯ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಇಲ್ಲವಾದ್ದರಿಂದ ಎರಡು ಕಿಮೀ ದೂರದ ಬೂದಿವಾಳ ಕ್ಯಾಂಪಿಗೆ ತೆರಳಿ ನೀರು ತರಬೇಕಾದಂತ ಪರಿಸ್ಥಿತಿ ಎದುರಾಗಿದೆ. ಸಣ್ಣಪುಟ್ಟ ಮಕ್ಕಳೆಲ್ಲಾ ಬೆಳಗ್ಗೆಯಿಂದಲೇ ನೀರಿಗಾಗಿ ಸೈಕಲ್ ತಗೆದುಕೊಂಡು ಹೋಗುವುದು ಸಾಮಾನ್ಯವಾಗಿದೆ. ಗ್ರಾಮದಲ್ಲಿ 1200ಕ್ಕೂ ಅಧಿಧಿಕ ಜನರಿದ್ದಾರೆ. ಕೊಡಗಳನ್ನು ಹೊತ್ತು ಮಹಿಳೆಯರು ಹೋಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಶುದ್ಧ ಕುಡಿಯುವ ನೀರಿಲ್ಲದಿದ್ದರೆ ಜನ ಸಾಂಕ್ರಾಮಿಕ ಖಾಯಿಲೆಗೆ ಗುರಿಯಾಗಬೇಕಾಗುತ್ತದೆ.ಬೂದಿವಾಳ ಕ್ಯಾಂಪಿನ ಹತ್ತಿರ ರಾಜೀವ ಗಾಂಧಿಧಿ ಕುಡಿಯುವ ನೀರಿನ ಯೋಜನೆಯ ಟ್ಯಾಂಕ್ ನಿರ್ಮಿಸಲಾಗಿದೆ. ಆದರೆ ಕಟ್ಟಿಸಿ ಎರಡು ವರ್ಷಗಳಾದರೂ ಇನ್ನೂ ಪೈಪ್‌ಲೈನ್ ವ್ಯವಸ್ಥೆ ಕಲ್ಪಿಸಿಲ್ಲ. ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ದೃಷ್ಟಿಯಿಂದ ಕೃಗೊಂಡ ಯೋಜನೆ ಇನ್ನೂ ಅಪೂರ್ಣ ಸ್ಥಿತಿಯಲ್ಲಿದೆ. ಸದ್ಯ ಹಳ್ಳಕ್ಕೆ ಹರಿಯುತ್ತಿರುವ ನೀರು ತೀರಾ ಕಲ್ಮಷವಾಗಿದೆ. ಚರಂಡಿ ನೀರು ನದಿಗೆ ಹರಿದು ಬರುತ್ತಿದೆ. ಖಾಯಿಲೆ ಬಂದು ಆಸ್ಪತ್ರೆ ಸೇರುವಂತ ಪರಿಸ್ಥಿತಿ ಬಂದಿದೆ ಎಂದು ಜನರು ಆರೋಪ ಮಾಡುತ್ತಿದ್ದಾರೆ.ಸೈಕಲ್, ಬೈಕ್ ಇದ್ದವರು ತೆರಳಿ ನೀರು ತರುತ್ತಾರೆ. ಆದರೆ ಏನೂ ಇಲ್ಲದವರು ಅದೇ ನೀರನ್ನೇ ಅವಲಂಬಿಸುವಂತಹ ಪರಿಸ್ಥಿತಿ ಬಂದಿದೆ. ಈ ಬಗ್ಗೆ ಗ್ರಾ.ಪ.ನವರಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಈಗಲಾದರೂ ಸಂಬಂಧಿಸಿದವರು ಈ ಬಗ್ಗೆ ಗಮನಹರಿಸಿ ಗ್ರಾಮಸ್ಥರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಶ್ರಮವಹಿಸಬೇಕಿದೆ.