Udayavani | May 09, 2012
ಜೈಪುರ: ಸತತ ಎರಡು ಗೆಲುವುಗಳಿಂದ ಸ್ಫೂರ್ತಿ ಪಡೆದಿರುವ ರಾಜಸ್ಥಾನ್ ರಾಯಲ್ಸ್ ಗುರುವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ತವರಿನ ಪಂದ್ಯವನ್ನು ಗೆದ್ದು ಪ್ಲೇ-ಆಫ್ ಸುತ್ತಿಗೆ ಮತ್ತಷ್ಟು ಹತ್ತಿರವಾಗಲು ಹವಣಿಸುತ್ತಿದೆ. ಇನ್ನೊಂದೆಡೆ ಕಳೆದೆರಡು ಬಾರಿಯ ಚಾಂಪಿಯನ್ ಆಗಿದ್ದರೂ ಈ ಬಾರಿ ಎಂದಿನ ಛಾತಿ ಪ್ರದರ್ಶಿಸದ ಚೆನ್ನೈಗೂ ಗೆಲುವು ಅನಿವಾರ್ಯವಾಗಿದೆ.

ಸತತ ನಾಲ್ಕು ಸೋಲುಗಳಿಂದ ಕಂಗೆಟ್ಟಿದ್ದ ರಾಜಸ್ಥಾನ್ ರಾಯಲ್ಸ್ ಅಚ್ಚರಿ ಎಂಬಂತೆ ಸತತ ಎರಡು ಗೆಲುವು ದಾಖಲಿಸಿ ಪ್ಲೇ-ಆಫ್ ಸುತ್ತು ಪ್ರವೇಶಿಸುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಪುಣೆ ವಾರಿಯರ್ ವಿರುದ್ಧದ ಗೆಲುವಿನಿಂದ ದ್ರಾವಿಡ್ ಪಡೆ ಆತ್ಮವಿಶ್ವಾಸದಿಂದ ಬೀಗುತ್ತಿದೆ.

ರಾಜಸ್ಥಾನ್ 12 ಪಂದ್ಯಗಳಿಂದ ತಲಾ 6 ಜಯ ಹಾಗೂ ಸೋಲಿನೊಂದಿಗೆ 12 ಅಂಕ ಗಳಿಸಿದ್ದು, ಚೆನ್ನೈಗಿಂತ ಮೇಲಿನ ಸ್ಥಾನದಲ್ಲಿದೆ. ಚೆನ್ನೈ ಕೂಡ ಆಡಿದ 12 ಪಂದ್ಯಗಳಿಂದ 5 ಜಯ ಹಾಗೂ 6 ಸೋಲಿನೊಂದಿಗೆ 11 ಅಂಕ ಪಡೆದಿದೆ.

ಕಳೆದೆರಡು ಪಂದ್ಯಗಳಲ್ಲಿ ತಂಡವನ್ನು ಸೇರಿಕೊಂಡ ಆಸೀಸ್ ಆಲ್‌ರೌಂಡರ್ ಶೇನ್ ವಾಟ್ಸನ್ ಮತ್ತು ಶಾನ್ ಟೇಟ್ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ವಾಟ್ಸನ್ ಬ್ಯಾಟ್ ಮತ್ತು ಬಾಲ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ. ಟೇಟ್ ಟೈಟ್ ದಾಳಿಯ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುತ್ತಿದ್ದಾರೆ.
ಅಜಿಂಕ್ಯ ರಹಾನೆ ಮತ್ತು ಆರಂಭಿಕನ ಸ್ಥಾನವನ್ನೇ ಖಾಯಂಗೊಳಿಸಿರುವ ದ್ರಾವಿಡ್ ಉತ್ತಮ ಅಡಿಪಾಯ ನಿರ್ಮಿಸುತ್ತಿರುವುದು ತಂಡದ ಯಶಸ್ಸಿಗೆ ಮೂಲ. ಕಳೆದ ಪಂದ್ಯದಲ್ಲಿ ರಹಾನೆ ಖಾತೆ ತೆರೆಯದೇ ಹೋದರೂ ಈ ವೈಫಲ್ಯವನ್ನು ಶೇನ್ ವಾಟ್ಸನ್ ತುಂಬಿಕೊಟ್ಟದ್ದನ್ನು ಮರೆಯುವಂತಿಲ್ಲ. ಅಶೋಕ್ ಮೆನಾರಿಯ, ಬ್ರಾಡ್ ಹಾಜ್ ಮತ್ತು ಓವೇಸ್ ಶಾ ರೂಪದಲ್ಲಿ ಬ್ಯಾಟಿಂಗ್ ಬಾಲ ಬೆಳೆಯುತ್ತಿದೆ.
ಬೌಲಿಂಗ್‌ನಲ್ಲಿ ಟೇಟ್ ಅಲ್ಲದೇ ಸಿದ್ಧಾರ್ಥ್ ತ್ರಿವೇದಿ, ಜೊಹಾನ್ ಬೋಥ, ಸ್ಟುವರ್ಟ್ ಬಿನ್ನಿ ಮತ್ತು ಅಂಕಿತ್ ಚ್ಯವನ್ ತಕ್ಕಮಟ್ಟಿಗೆ ಯಶಸ್ಸು ಸಾಧಿಸುತ್ತಿದ್ದಾರೆ.
ಚೆನ್ನೈ ತಂಡ ಈ ಬಾರಿ ಟೂರ್ನಿಯಲ್ಲಿ ಅಧಿಕಾರ ಸ್ಥಾಪಿಸುವಲ್ಲಿ ವಿಫಲವಾಗಿದೆ. ಮೈಕಲ್ ಹಸ್ಸಿ, ಫಾ ಡು ಪ್ಲೆಸಿಸ್ ಉತ್ತಮ ಆರಂಭ ನೀಡಿದರೂ ಮಧ್ಯಮ ಕ್ರಮಾಂಕದಲ್ಲಿ ಧೋನಿ, ರೈನಾ, ಜಡೇಜ, ಬದರೀನಾಥ್ ಮೊದಲಾದವರು ತಂಡವನ್ನು ಬೃಹತ್ ಮೊತ್ತದೆಡೆಗೆ ಮುನ್ನಡೆಸುವಲ್ಲಿ ಎಡವುತ್ತಿದ್ದಾರೆ.
ಮಧ್ಯಮ ವೇಗಿ ಅಲ್ಬಿ ಮಾರ್ಕೆಲ್ ಬೌಲಿಂಗ್‌ನಲ್ಲಿ ಯಶಸ್ಸು ಸಾಧಿಸಿದ್ದರೂ ಉಳಿದವರಿಂದ ನಿರೀಕ್ಷಿತ ಬೆಂಬಲ ದೊರೆಯುತ್ತಿಲ್ಲ. ಬೆನ್ ಹಿಲ್ಫೆನಾಸ್ ಅಪಾಯಕಾರಿಯಾದರೂ ಮುಂಬೈ ವಿರುದ್ಧದ ಅಂತಿಮ ಓವರ್ ಈಗಲೂ ದುಃಸ್ವಪ್ನವಾಗಿ ಕಾಡುತ್ತಿರಬಹುದು. ಜಡೇಜ, ಬ್ರಾವೊ, ಜಕಾತಿ, ಅಶ್ವಿನ್ ಬಗ್ಗೆ ಏನು ಹೇಳಲಿಕ್ಕೂ ಧೈರ್ಯ ಸಾಲದು. ಪ್ಲೇ-ಆಫ್ ಸುತ್ತು ಪ್ರವೇಶದ ಕನಸು ಜೀವಂತವಾಗಿರಿಸಿಕೊಳ್ಳಬೇಕಾದರೆ ಚೆನ್ನೈಗೆ ರಾಜಸ್ಥಾನ್ ವಿರುದ್ಧ ಗೆಲುವು ಅನಿವಾರ್ಯ. ಇಲ್ಲದಿದ್ದರೆ ಪರಿಸ್ಥಿತಿ ಕೈ ಮೀರುವ ಸಾಧ್ಯತೆ ಇದೆ.
ಎ. 21ರಂದು ಚೆನ್ನೈಯಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ಸೋಲುಂಡಿತ್ತು. ಇದಕ್ಕೆ ತವರಿನಲ್ಲಿ ಮುಯ್ಯಿ ತೀರಿಸಿಕೊಳ್ಳುವುದು ದ್ರಾವಿಡ್ ಪಡೆಯ ಗುರಿ.
ಸ್ಪರ್ಧಾತ್ಮಕ ಪಿಚ್ ಆಗಿದ್ದರೂ ಎರಡನೇ ಅವಧಿಯಲ್ಲಿ ಬ್ಯಾಟ್ ಮಾಡುವುದು ಕಷ್ಟ. ಹೀಗಾಗಿ ಟಾಸ್ ಗೆಲುವು ನಿರ್ಣಾಯಕ.