ಬೀಜಿಂಗ್: ಚೀನದಲ್ಲಿ ತಯಾರಾಗಿರುವ ಗುಳಿಗೆಗಳಲ್ಲಿ ಪುಡಿಯ ರೂಪದಲ್ಲಿ ಶಿಶುಮಾಂಸದ ಮಿಶ್ರಣ ಪತ್ತೆಯಾಗಿದೆ ಎನ್ನುವ ವರದಿ ದೇಶದಲ್ಲಿ ಅಲ್ಲೋಲಕಲ್ಲೋಲ ಉಂಟು ಮಾಡಿದೆ. ದಕ್ಷಿಣ ಕೊರಿಯದ ಮಾಧ್ಯಮ ಚೀನದ ಗುಳಿಗೆಗಳಲ್ಲಿ ಶಿಶು ಮಾಂಸವಿರುವ ವರದಿಗಳನ್ನು ಪ್ರಕಟಿಸಿದೆ ಹಾಗೂ ಕೊರಿಯಾದ ಅಧಿಕಾರಿಗಳು ತಾವು ಗುಳಿಗೆಗಳನ್ನು ವಶಪಡಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ.ಚೀನದಲ್ಲಿ ತಯಾರಾಗಿರುವ ಔಷಧಗಳಲ್ಲಿ ಮಾನವ ದೇಹದ ಅಂಶಗಳು ಪತ್ತೆಯಾಗಿಲ್ಲ. ಆದರೂ ನಾವು ಇನ್ನಷ್ಟು ತನಿಖೆ ನಡೆಸಲಿದ್ದೇವೆ ಎಂದು ಚೀನದ ಆರೋಗ್ಯ ಇಲಾಖೆ ಮಾಧ್ಯಮ ವರದಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ಹೇಳಿದೆ. ಗರ್ಭಪಾತ ಮಾಡಿದ ಭ್ರೂಣಗಳನ್ನು ಬಳಸಿ ತಯಾರಿಸಿರುವ ಆರೋಗ್ಯವರ್ಧಕ ಗುಳಿಗೆಗಳನ್ನು ಚೀನದಿಂದ ದಕ್ಷಿಣ ಕೊರಿಯಾಕ್ಕೆ ರಫ್ತು ಮಾಡಲಾಗಿದೆ ಎಂದು ವರದಿಗಳು ಹೇಳಿವೆ.ಕಳೆದ ವರ್ಷ ಆಗಸ್ಟ್‌ನಲ್ಲಿ ಕೂಡ ಈ ಮಾದರಿಯ ಆರೋಪಗಳು ಕೇಳಿ ಬಂದಾಗ ಆರೋಗ್ಯ ಇಲಾಖೆ ತನಿಖೆ ನಡೆಸಿತ್ತು. ಆದರೆ ಈ ತನಿಖೆಯಲ್ಲಿ ಗುಳಿಗೆಗಳಲ್ಲಿ ಶಿಶುಮಾಂಸ ಇರುವ ಪುರಾವೆ ಪತ್ತೆಯಾಗಿಲ್ಲ. ಆದಾಗ್ಯೂ ಆರೋಗ್ಯ ಇಲಾಖೆ ಪೊಲೀಸ್, ಕಸ್ಟಮ್ಸ್ ಮತ್ತು ವಾಣಿಜ್ಯ ಇಲಾಖೆ ಜತೆ ಸೇರಿಕೊಂಡು ದಕ್ಷಿಣ ಕೊರಿಯಾ ಮಾಡಿರುವ ಆರೋಪದ ಬಗ್ಗೆ ತನಿಖೆ ನಡೆಸಲಿದೆ ಎಂದು ಆರೋಗ್ಯ ಇಲಾಖೆಯ ವಕ್ತಾರ ಡೆಂಗ್ ಹೈಹುವಾ ಹೇಳಿದ್ದಾರೆ.ಮೃತ ಶಿಶುಗಳನ್ನು , ಗರ್ಭಪಾತ ಮಾಡಿದ ಭ್ರೂಣಗಳನ್ನು ಮತ್ತು ಹೊಕ್ಕುಳ ಬಳ್ಳಿಯನ್ನು ವಿಲೇವಾರಿ ಮಾಡಲು ಚೀನದಲ್ಲಿ ಕಟ್ಟುನಿಟ್ಟಿನ ಕಾನೂನುಗಳಿವೆ. ಇವುಗಳನ್ನು ವೈದ್ಯಕೀಯ ತ್ಯಾಜ್ಯ ಎಂದು ಪರಿಗಣಿಸುವುದನ್ನು ನಿಷೇಧಿಸಲಾಗಿದೆ ಮತ್ತು ಮಾನವ ತ್ಯಾಜ್ಯ ಎಂದು ವರ್ಗೀಕರಿಸಿ ವಿಲೇವಾರಿ ಮಾಡಲಾಗುತ್ತದೆ ಎಂದು ಡೆಂಗ್ ತಿಳಿಸಿದ್ದಾರೆ.