ಲಕ್ನೋ : 86 ಕೋಟಿ ರೂ. ಇದ್ದರೆ ಅನೇಕ ಐಷಾರಾಮಿ ಬಂಗಲೆಗಳನ್ನೇ ನಿರ್ಮಿಸಬಹುದು. ಆದರೆ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅಧಿಕಾರ ಕಳೆದುಕೊಳ್ಳುವ ಕೆಲವೇ ತಿಂಗಳು ಮುನ್ನ ಒಂದೇ ಒಂದು ಮನೆ ನವೀಕರಿಸಲು ಇಷ್ಟೊಂದು ಮೊತ್ತ ವ್ಯಯಿಸಿ ಮತ್ತೆ ಸುದ್ದಿಯಾಗಿದ್ದಾರೆ. ಈ ಮೂಲಕ ಮಾಯಾವತಿ ಅವರು ತೆರಿಗೆದಾರರ ಹಣವನ್ನು ಯಾವ ರೀತಿ ದುಂದು ವೆಚ್ಚ ಮಾಡಿದರು ಎಂಬುದಕ್ಕೆ ಮತ್ತೂಂದು ನಿದರ್ಶನ ಸಿಕ್ಕಂತಾಗಿದೆ.ಲಕ್ನೋದಲ್ಲಿ ಐದು ಎಕರೆಯಷ್ಟು ಸವಿಸ್ತಾರವಾದ ಜಾಗದಲ್ಲಿ ಒಂದು ಬಂಗಲೆಯಿದೆ. ಮಾಯಾವತಿ ಅವರು 1990ರ ದಶಕದಲ್ಲಿ ಪ್ರತಿಪಕ್ಷ ನಾಯಕಿಯಾಗಿದ್ದಾಗ ಇದೇ ಬಂಗಲೆಯಲ್ಲಿ ವಾಸಿಸುತ್ತಿದ್ದರು. ಮುಖ್ಯಮಂತ್ರಿಯಾದ ನಂತರ ಬಹುಪಾಲು ಅವಧಿಯನ್ನು ಬೇರೊಂದು ನಿವಾಸದಲ್ಲಿ ಕಳೆದಿದ್ದರು. ಇನ್ನೇನು ಅಧಿಕಾರಾವಧಿ ಮುಗಿಯುವ ಸಮಯದಲ್ಲಿ 'ಅದೃಷ್ಟ'ದ ಮನೆ ಎಂದು ಐದು ಎಕರೆ ವಿಸ್ತೀರ್ಣದಲ್ಲಿರುವ ಬಂಗಲೆಗೆ ವರ್ಗವಾದರು. ಹಾಗೆ ಸ್ಥಳಾಂತರಗೊಳ್ಳುವ ಮುನ್ನ ನವೀಕರಣದ ಹೆಸರಲ್ಲಿ 86 ಕೋಟಿ ರೂ. ವ್ಯಯಿಸಿದ್ದಾರೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಉತ್ತರ ಸಿಕ್ಕಿದೆ.ಗುಂಡು ನಿರೋಧಕ ಅಂಗಳ, ಬಿಎಸ್ಪಿ ಚಿಹ್ನೆ ಆನೆ ಹಾಗೂ ಮಾಯಾವತಿ ಪ್ರತಿಮೆ, ಗ್ರಾನೈಟ್ ಗೋಡೆಗಳು, 14 ಕೋಣೆಯ ಅತಿಥಿಗೃಹಗಳನ್ನು ಈ ಬಂಗಲೆ ಒಳಗೊಂಡಿದೆ.'ಅದೃಷ್ಟ'ದ ಮನೆ ಎಂಬ ಕಾರಣಕ್ಕೆ ನವೀಕರಣ ಮಾಡಿಸಿ ಮಾಯಾವತಿ ಅವರು ಮನೆಗೆ ಬಂದರಾದರೂ ಅದೃಷ್ಟ ಕೈಕೊಟ್ಟು ಅಧಿಕಾರವನ್ನೇ ಅವರು ಕಳೆದುಕೊಳ್ಳಬೇಕಾಯಿತು.ಚುನಾವಣೆಗೂ ಮುನ್ನ ಆರ್‌ಟಿಐ ಅರ್ಜಿ ಸಲ್ಲಿಸಿ ಉತ್ತರ ಪಡೆದಿರುವ ಉತ್ತರಪ್ರದೇಶದ ಲೋಕೋಪಯೋಗಿ ಸಚಿವರೂ ಆಗಿರುವ ಅಖೀಲೇಶ್ ಯಾದವ್ ಚಿಕ್ಕಪ್ಪ ಶಿವಪಾಲ್ ಯಾದವ್, ನವೀಕರಣಕ್ಕೆ ಹಣ ಬಿಡುಗಡೆ ಮಾಡಿದ ಕುರಿತು ತನಿಖೆಗೆ ಆದೇಶಿಸಿದ್ದಾರೆ.