ನಾಸಿಕ್ : ನಗರದಲ್ಲಿ ನಿನ್ನೆ ಸಂಜೆ ಸುರಿದ ಸಿಡಿಲು ಮಿಂಚಿನಿಂದ ಕೂಡಿದ ಮಳೆಯ ಸಿಂಚನವು ಬಿಸಿಲ ಝಳದಿಂದ ತತ್ತರಿಸುತ್ತಿದ್ದ ನಿವಾಸಿಗಳಿಗೆ ತಂಪುಣಿಸಿದೆ.ಮಳೆಯಿಂದ ಸ್ಥಳೀಯ ನಿವಾಸಿಗಳು ಹರ್ಷಗೊಂಡಿದ್ದು, ಬಿರುಗಾಳಿಯಿಂದ ಮನೆಯೊಂದರ ಮೇಲ್ಛಾವಣಿ ಕುಸಿದು 35 ರ ಹರೆಯ ವ್ಯಕ್ತಿ ಸಾವನ್ನಪ್ಪಿದ್ದು, ಇತರ ಇಬ್ಬರು ಗಾಯಗೊಂಡಿರುವ ವರದಿಯಾಗಿದೆ. ಮೃತರನ್ನು ಖೆಡ್‌ಗಾಂವ್ ನಿವಾಸಿ ಗಣೇಶ್ ಪ್ರಭಾಕರ್ ಶೇವಾಲೆ ಎಂದು ಗುರುತಿಸಲಾಗಿದೆ.ಯೋಲಾ, ದಿಂಡೋರಿ, ನಂದಗಾಂವ್, ಸಿನ್ನಾರ್, ಮಾಲೇಗಾಂವ್ ಕಲ್ವಾಣ್, ಒಝಾರ್ ಮತ್ತು ಸತಾನಾ ಸಹಿತ ನಾಸಿಕ್‌ನ ಹಲವಾರು ಭಾಗಗಳಲ್ಲಿ ಬಿರುಗಾಳಿಯಿಂದ ಮಳೆಯಾಗಿರುವುದರಿಂದ ಮರಗಳು ಬುಡಸಮೇತ ಉರುಳಿದ್ದು, ಹಲವು ವಿದ್ಯುತ್ ತಂತಿಗಳು ತುಂಡಾದ ಬಗ್ಗೆ ವರದಿಗಳಾಗಿವೆ. ಎಷ್ಟೊಂದು ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ಇದುವರೆಗೆ ತಿಳಿದುಬಂದಿಲ್ಲ.ಧರೆಗುಳಿರುವ ವೃಕ್ಷವನ್ನು ತೆರವುಗೊಳಿಸುವ ವೇಳೆ ನಾಸಿಕ್ ನಗರದಲ್ಲಿ ಆಗ್ನಿಶಾಮಕ ದಳದ ಸಿಬಂದಿಯೊಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.