Saturday, May 25, 2013
Last Updated: 8:34:44 PM IST
  • ನಾನೆಲ್ಲಿರುವೆ:
  • ಮುಖಪುಟ ರಾಷ್ಟ್ರೀಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಮೈಸೂರು ಕಾಡಿಗೆ ಲಗ್ಗೆಯಿಡಲು ನಕ್ಸಲರ ಸಂಚು
      • Udayavani | May 10, 2012

        ನವದೆಹಲಿ: ನಕ್ಸಲರು ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳಲ್ಲಿ ಗೆರಿಲ್ಲಾ ವಲಯ ಸ್ಥಾಪಿಸಲು ಸಂಚು ಹೂಡಿದ್ದರು ಎಂಬ ಸುದ್ದಿಯ ಬೆನ್ನಲ್ಲೇ ಕರ್ನಾಟಕದ ಪಾಲಿಗೆ ಆಘಾತಕಾರಿಯಾಗಬಲ್ಲ ಮತ್ತೂಂದು ಸುದ್ದಿ ಹೊರ ಬಿದ್ದಿದೆ.

        ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಬೇರೂರಿರುವ ಕೆಂಪು ಉಗ್ರರು ಇದೀಗ ತಮ್ಮ ಕಾರ್ಯವ್ಯಾಪ್ತಿಯನ್ನು ಸಾಂಸ್ಕೃತಿಕ ನಗರಿ ಮೈಸೂರಿನ ಆಸುಪಾಸಿನವರೆಗೂ ವಿಸ್ತರಿಸಲು ಮುಂದಾಗಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಈ ವಿಷಯವನ್ನು ಸ್ವತಃ ಕೇಂದ್ರ ಸರ್ಕಾರವೇ ದೃಢಪಡಿಸಿದೆ.

        ದಕ್ಷಿಣದ ರಾಜ್ಯಗಳಾದ ಕರ್ನಾಟಕ, ಕೇರಳ, ತಮಿಳುನಾಡುಗಳಿಗೆ ಸಿಪಿಐ (ಮಾವೋವಾದಿ) ಸಂಘಟನೆಯ ನಕ್ಸಲರು ಉತ್ತರ ಭಾರತದಿಂದ ಅಕ್ರಮವಾಗಿ ನುಸುಳಿದ್ದು, ಬೇರು ಬಿಡಲು ಯತ್ನ ನಡೆಸಿದ್ದಾರೆ. ಅರಣ್ಯದಲ್ಲಿ ಮಾರ್ಗಗಳನ್ನು ನಿರ್ಮಿಸುವ ಯತ್ನದಲ್ಲಿ ನಿರತರಾಗಿದ್ದಾರೆ ಎನ್ನುವ ಆಘಾತಕಾರಿ ಸಂಗತಿಯನ್ನು ಸರ್ಕಾರ ತಿಳಿಸಿದೆ.

        ಬುಧವಾರ ರಾಜ್ಯಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್‌, ಕೇರಳ ಮತ್ತು ಕರ್ನಾಟಕದ ಗಡಿಯನ್ನು ತಮ್ಮ ಚಟುವಟಿಕೆಯ ಮೂಲವನ್ನಾಗಿಸಿಕೊಳ್ಳಲು ನಕ್ಸಲರು ಯೋಜಿಸಿದ್ದಾರೆ ಎನ್ನುವ ಮಾಹಿತಿಯನ್ನು ನೀಡಿದರು.

        ನಕ್ಸಲರು ಕೇರಳದ ವೈನಾಡ್‌ ಜಿಲ್ಲೆಯಿಂದ ಮೈಸೂರಿಗೆ ಅರಣ್ಯ ಮಾರ್ಗ ನಿರ್ಮಿಸುವ ಯೋಜನೆ ರೂಪಿಸಿದ್ದು, ಈ ಯತ್ನದಲ್ಲಿ ನಿರತರಾಗಿದ್ದಾರೆ. ನಕ್ಸಲರು ಮೂರು ರಾಜ್ಯಗಳಲ್ಲಿ ತಮ್ಮ ಚಟುವಟಿಕೆ ವಿಸ್ತರಿಸಿಕೊಳ್ಳುತ್ತಿದ್ದಾರೆ ಎಂದು ಸಿಂಗ್‌ ಹೇಳಿದ್ದಾರೆ.

        ಕೇಂದ್ರ ಸರ್ಕಾರ ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ನಕ್ಸಲರ ಅಕ್ರಮ ಚಟುವಟಿಕೆ ನಿಗ್ರಹಿಸಲು ಕೇರಳ, ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿಸಲಾಗಿದೆ ಎಂದು ಅವರು ಹೇಳಿದ್ದಾರೆ.

        ನಕ್ಸಲರು ಕರ್ನಾಟಕದಲ್ಲಿ ಗೆರಿಲ್ಲಾ ಮಾದರಿಯಲ್ಲಿ ಪಡೆಗಳನ್ನು ಸಿದ್ಧಪಡಿಸಲು ದಕ್ಷಿಣ ಕನ್ನಡದ ಬೆಳ್ತಂಗಡಿ ಸಮೀಪದ ಕಾಡಿನಲ್ಲಿ ಸಭೆ ನಡೆಸಿ ಚರ್ಚಿಸಿದ್ದರು ಎಂಬ ಸಂಗತಿ ಇತ್ತೀಚೆಗಷ್ಟೇ ಬೆಳಕಿಗೆ ಬಂದಿತ್ತು. ಹಾಗೆಯೇ ಉತ್ತರ ಭಾರತದ ನಕ್ಸಲರಿಗೆ ಕರ್ನಾಟಕದಲ್ಲಿನ ರಹಸ್ಯ ಶಸ್ತ್ರಾಸ್ತ್ರ ತಯಾರಿಕೆ ಘಟಕಗಳಿಂದ ಬಿಡಿಭಾಗಗಳನ್ನು ಪೂರೈಸಲಾಗುತ್ತಿತ್ತು ಎಂಬುದೂ ಬಯಲಾಗಿತ್ತು.

        ದಕ್ಷಿಣ ಭಾರತ ಯಾಕೆ?

        ದಕ್ಷಿಣದ ಮೂರು ರಾಜ್ಯಗಳಲ್ಲಿ ಗೆರಿಲ್ಲಾ ವಲಯವನ್ನು ಸ್ಥಾಪಿಸುವುದು. ಈ ಪ್ರದೇಶಗಳಲ್ಲಿ ತಮ್ಮ ಸಂಘಟನೆಯ ಕಾರ್ಯಕರ್ತರಿಗೆ ಮಿಲಿಟರಿ ತರಬೇತಿ ನೀಡುವುದು, ಅಲ್ಲಿಯೇ ಶಸ್ತ್ರಾಸ್ತ್ರ ತಯಾರಿಸುವುದು, ಅಗತ್ಯ ಮುದ್ರಣ ಕಾರ್ಯ ಕೈಗೊಳ್ಳುವುದು ಅವರ ಮೂಲ ಗುರಿ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus