ರಾಂಚಿ : ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ವೈ.ಎಸ್. ರಾಜಶೇಖರರೆಡ್ಡಿ ಹಾಗೂ ಅರುಣಾಚಲ ಪ್ರದೇಶದ ಮಾಜಿ ಸಿಎಂ ದೋರ್ಜಿ ಖಂಡು ಹೆಲಿಕಾಪ್ಟರ್ ದುರಂತ ಪ್ರಕರಣವನ್ನು ನೆನಪಿಸುವ ಘಟನೆಯೊಂದು ಬುಧವಾರ ಜಾರ್ಖಂಡ್‌ನಲ್ಲಿ ನಡೆದಿದೆ.ಮುಖ್ಯಮಂತ್ರಿ ಅರ್ಜುನ್ ಮುಂಡಾ ಹಾಗೂ ಐವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ 30 ಅಡಿ ಎತ್ತರದಿಂದ ನೆಲಕ್ಕಪ್ಪಳಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಮುಂಡಾ ಸೇರಿ ಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲರೂ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ಸ್ವಕ್ಷೇತ್ರ ಕುಚೈನಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಂಡಾ ಅವರು ತಮ್ಮ ಪತ್ನಿ ಮೀರಾ, ಒಬ್ಬ ಭದ್ರತಾಧಿಕಾರಿ ಹಾಗೂ ಬಿಜೆಪಿ ಶಾಸಕ ಗಾಗ್ರೇ ಅವರ ಜತೆ ರಾಂಚಿಯಲ್ಲಿ ಆಗಸ್ಟಾ ಕಂಪನಿಯ ಕಾಪ್ಟರ್ ಏರಿದ್ದರು. ಆದರೆ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಾಪ್ಟರ್ ಮಧ್ಯಾಹ್ನ 12.07ರ ವೇಳೆಗೆ ವಾಪಸ್ ರಾಂಚಿಯ ಬಿರ್ಸಾ ಮುಂಡಾ ಏರ್‌ಪೋರ್ಟಿಗೇ ಮರಳಿ ಆಗಮಿಸಿತು. ಇಬ್ಬರು ಪೈಲಟ್‌ಗಳು ಕಾಪ್ಟrರನ್ನು ಸುರಕ್ಷಿತವಾಗಿ ಇಳಿಸುವ ಸಲುವಾಗಿ ವಿಮಾನ ನಿಲ್ದಾಣದ ಸುತ್ತ ಹಲವು ಸುತ್ತು ಹಾಕಿ 5 ಬಾರಿ ಯತ್ನಿಸಿದರು. ಕೊನೆಗೆ ಸುರಕ್ಷಿತ ಲ್ಯಾಂಡಿಂಗ್ ಸಾಧ್ಯವಾಗದೇ ಹೆಲಿಕಾಪ್ಟರ್ ನೆಲಕ್ಕಪ್ಪಳಿಸಿ ಪಲ್ಟಿ ಹೊಡೆಯಿತು. ಈ ವೇಳೆ ಹೆಲಿಕಾಪ್ಟರಿನ ಹಲವಾರು ಭಾಗಗಳು ನಜ್ಜುಗುಜ್ಜಾಗಿವೆ.ಸಾಮಾನ್ಯವಾಗಿ ಇಂತಹ ಘಟನೆಗಳು ನಡೆದಾಗ ಕಾಪ್ಟರ್ ಆಗಲೀ, ವಿಮಾನವಾಗಲೀ ದಿಢೀರನೆ ಬೆಂಕಿಗೆ ತುತ್ತಾಗುತ್ತವೆ. ಆದರೆ ಈ ಪ್ರಕರಣದಲ್ಲಿ ಪವಾಡಸದೃಶವಾಗಿ ಅಂತಹ ದುರಂತ ಸಂಭವಿಸದೇ ಇರುವುದರಿಂದ ಪ್ರಯಾಣಿಕರೆಲ್ಲಾ ಸುರಕ್ಷಿತವಾಗಿದ್ದಾರೆ. ಇದೇ ಹೆಲಿಕಾಪ್ಟರ್ 15 ದಿನದ ಹಿಂದೆ ಕೆಟ್ಟ ಹವಾಮಾನದಿಂದ ಜಮೆÒಡ್‌ಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು.44 ವರ್ಷದ ಮುಂಡಾ ಅವರ ಭುಜ ಹಾಗೂ ಹಿಮ್ಮಡಿಯ ಮೂಳೆಗೆ ಪೆಟ್ಟಾಗಿದ್ದು, ರಾಂಚಿಯ ಅಪೋಲೋ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿಡಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾಪ್ಟರ್‌ನಲ್ಲಿದ್ದ ಮುಂಡಾ ಪತ್ನಿ, ಇಬ್ಬರು ಪೈಲಟ್‌ಗಳು, ಒಬ್ಬ ಬಿಜೆಪಿ ಶಾಸಕ, ಒಬ್ಬ ಭದ್ರತಾಧಿಕಾರಿಯೂ ಕ್ಷೇಮವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.ಈ ನಡುವೆ ಘಟನೆಯ ಕುರಿತು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ತನಿಖೆಗೆ ಆದೇಶಿಸಿದೆ. ಮುಂಡಾ ಮತ್ತು ಇತರರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಧಾನಿ ಮನಮೋಹನ ಸಿಂಗ್ ಸೇರಿದಂತೆ ಹಲವಾರು ರಾಜಕೀಯ ಮುಖಂಡರು ಹಾರೈಸಿದ್ದಾರೆ.ಆತಂಕದ ಕ್ಷಣಗಳು..- ಬೆಳಗ್ಗೆ 11.04ಕ್ಕೆ ರಾಂಚಿಯಿಂದ ಕಾಪ್ಟರ್ ನಭಕ್ಕೆ- 11.45ಕ್ಕೆ ರಾಡಾರ್‌ನಲ್ಲಿ ತಾಂತ್ರಿಕ ದೋಷ; ಎಟಿಸಿಗೆ ಮಾಹಿತಿ- 11.40ಕ್ಕೆ ತುರ್ತು ಭೂಸ್ಪರ್ಶ ಮಾಡಲು ಎಟಿಸಿಯಿಂದ ಅನುಮತಿ- 12.05ಕ್ಕೆ 5 ಬಾರಿ ಸುರಕ್ಷಿತ ಭೂಸ್ಪರ್ಶಕ್ಕೆ ಕಾಪ್ಟರ್ ವಿಫಲ ಯತ್ನ- ಮಧ್ಯಾಹ್ನ 12.07ಕ್ಕೆ 30 ಅಡಿ ಎತ್ತರದಿಂದ ನೆಲಕ್ಕಪ್ಪಳಿಸಿದ ಕಾಪ್ಟರ್