ಕುದಾಡಿ ವಿಶ್ವನಾಥ ರೈ | May 11, 2012
ಕೆ.ಎಸ್.ಇ.ಇ. ಬೋರ್ಡಿನ ಆಶ್ರಯದಲ್ಲಿ ಸುಮಾರು ಐವತ್ತು ವರ್ಷಗಳಿಂದ ಸಂಗೀತ ನೃತ್ಯ ಪರೀಕ್ಷೆಗಳು ವಿಶೇಷ ರೀತಿಯಲ್ಲಿ ಜರಗುತ್ತಿದ್ದು ಅದಕ್ಕೆ ತಾಳವಾದ್ಯಗಳ ಪರೀಕ್ಷೆಯೂ ಸೇರಿ ಪ್ರತೀ ವರ್ಷ ಸಾವಿರಾರು ಮಂದಿ ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಕುಳಿತು ತೇರ್ಗಡೆಯಾಗಿ ಸರ್ಟಿಫಿಕೇಟುಗಳನ್ನು ಪಡೆಯುತ್ತಿದ್ದರು. ನೂರಾರು ಮಂದಿ ಸಂಗೀತ ನೃತ್ಯಗುರುಗಳು ಇವುಗಳನ್ನು ವೃತ್ತಿಯಾಗಿ ಮಾಡಿಕೊಂಡು ಜೀವಿಸುತ್ತಿದ್ದರು. ಇದೊಂದು "ಮಾಸ್' ಮತ್ತು "ಕ್ಲಾಸ್' ಶಿಕ್ಷಣ ಹಾಗೂ ಪರೀಕ್ಷೆಗಳಾಗಿ ಸಾಗಿ ಬಂದಿದೆ. ಈ ಶಿಕ್ಷಣ ಪರೀಕ್ಷೆಗಳ ಪಾಠ ಪಟ್ಟಿ ಮತ್ತು ಪಠ್ಯಕ್ರಮಗಳು ಎರಡೆರಡು ಬಾರಿ ಪರಿಷ್ಕಾರ ಆಗಿದ್ದವು.
ಜೂನಿಯರ್, ಸೀನಿಯರ್, ವಿದ್ವತ್ ಎಂಬುದಾಗಿ ಪರಿಷ್ಕಾರಗೊಂಡ ಕೊನೆಯ ಹಂತದ ಪಠ್ಯಪುಸ್ತಕ ಅಥವಾ ಪಾಠಪಟ್ಟಿಗೆ ಅನುಗುಣವಾಗಿ ವಿದ್ವತ್ ಪ್ರಾಥಮಿಕ ಹಂತದವರೆಗೆ ಶಾಸ್ತ್ರ ಪಠ್ಯಪುಸ್ತಕಗಳು ತಯಾರಾಗಿ ಪರೀಕ್ಷೆಗಳು ಜರಗುತ್ತಾ ಬಂದಿವೆ. ವಿದ್ವತ್ ಕೊನೆಯ ಶಾಸ್ತ್ರ ಪಠ್ಯಪುಸ್ತಕಗಳು ತಯಾರಾಗದಿದ್ದರೂ
ಸಿಲೆಬಸ್‌ಗೆ ಅನುಗುಣವಾಗಿ ವಿದ್ವಾಂಸರು ಬರೆದ ಪುಸ್ತಕಗಳನ್ನು ಸವಿಸ್ತಾರವಾಗಿ ಅಧ್ಯಯನ ಮಾಡಿ ವಿದ್ಯಾರ್ಥಿಗಳು ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ಶಾಸ್ತ್ರ ಭಾಗ ಮತ್ತು ಪ್ರಯೋಗ ಪರೀಕ್ಷೆಗಳನ್ನು ಉತ್ತಮ ರೀತಿ ಯಲ್ಲಿ ಎದುರಿಸುತ್ತಿದ್ದರು. ಈಗ ಈ ಸತ್‌ಸಂಪ್ರದಾಯವನ್ನು ಅಲ್ಲಗಳೆದು ಪ್ರೌಢಶಿಕ್ಷಣ ಮಂಡಳಿಯು ಬೆಳೆಸಿದ ಸಂಗೀತ, ನೃತ್ಯ, ತಾಳ ವಾದ್ಯ ಶಿಕ್ಷಣ ಕ್ರಮವನ್ನು ಉನ್ನತೀಕರಣದ ಹೆಸರಿ ನಲ್ಲಿ ಕೈಬಿಟ್ಟುದು ಅವಸರದ ನಿರ್ಧಾರ.
ಸೆಕೆಂಡರಿ ಎಜ್ಯುಕೇಶನ್ ಬೋರ್ಡಿನವರು ನಡೆಸುತ್ತಾ ಬಂದಿರುವ ಪರೀಕ್ಷೆಗಳನ್ನು ವಿಶ್ವವಿದ್ಯಾಲಯದ ಮಟ್ಟಕ್ಕೆ ಪರಿವರ್ತಿಸು ವುದರಿಂದ ನೃತ್ಯ, ಸಂಗೀತ, ತಾಳ ವಾದ್ಯ ಇತ್ಯಾದಿ ಪರೀಕ್ಷೆಗಳು ಕೆಲವೇ ಮಂದಿ ಪಿ.ಜಿ. ಕೋರ್ಸಿನ ಮಂದಿಗಾಗಿ ಮಾಡಿಕೊಂಡ ವ್ಯವಸ್ಥೆ ಯಾಗಿಬಿಡುವ ಅಪಾಯವಿದೆ. ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರ ಪರೀಕ್ಷೆ ಗಳನ್ನು ನಿಲ್ಲಿಸಿದ್ದು ಈ ಶಿಕ್ಷಣದ ಅಡಿಪಾಯಕ್ಕೆ ದೊಡ್ಡ ಪೆಟ್ಟು ಆಗಿದೆ - ಆಗಲಿಕ್ಕಿದೆ. ಸಂಗೀತ, ನೃತ್ಯ, ತಾಳವಾದ್ಯ, ಚಿತ್ರ, ಶಿಲ್ಪ ಇತ್ಯಾದಿ ಲಲಿತಕಲಾ ಆಸಕ್ತ ವಿದ್ಯಾರ್ಥಿಗಳೆಲ್ಲರೂ ಪಿ.ಜಿ. ಕೋರ್ಸುಗಳಿಗೆ ಹೋಗುವುದಿಲ್ಲ. ಈಗಿರುವ ಪಿ.ಜಿ. ಕೋರ್ಸುಗಳಲ್ಲಿ ಇರುವ ವಿದ್ಯಾರ್ಥಿಗಳ ಅಂಕೆಸಂಖ್ಯೆಗಳಿಂದ ಇದನ್ನು ತಿಳಿದುಕೊಳ್ಳಬಹುದು. ಆ ರೀತಿಯ ಡಿಗ್ರಿ, ಪಿ.ಜಿ. ಕೋರ್ಸುಗಳನ್ನು ಪ್ರಾರಂಭಿಸಿ ವಿವಿಧ ವಿಶ್ವವಿದ್ಯಾನಿಲಯಗಳಿಂದ ಮಾನ್ಯತೆ ಪಡೆದ ಸಂಸ್ಥೆಗಳವರು ಈಗಿರುವ ಪ್ರೌಢ ಶಿಕ್ಷಣ ಮಂಡಳಿಯ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಖಾಸಗಿ ಸಂಸ್ಥೆಗಳ ಪ್ರತಿಭಾವಂತರಿಗೆ "ಹಲವು ರೀತಿಯ ಅನುಕೂಲ ಸೌಲಭ್ಯಗಳನ್ನು ಒದಗಿಸಿ ಕೊಡುತ್ತೇವೆ. ಕಳುಹಿಸಿ ಕೊಡಿ' ಎಂಬುದಾಗಿ ಪ್ರಚಾರ ಮಾಡುತ್ತಾರೆ, ವಿನಂತಿ ಮಾಡಿಕೊಳ್ಳುತ್ತಿದ್ದಾರೆಂಬ ಸತ್ಯವನ್ನು ಮರೆಮಾಚುವಂತಿಲ್ಲ.
ಪ್ರತಿಭೆಗೆ ಎಲ್ಲಿಯೂ ಅವಕಾಶವಿದೆ. ಕಲಿತವರು ಎಲ್ಲ ಕಲಾಕಾರರಾಗುವುದಿಲ್ಲ. ಹಾಗೆಂದು ಕಲಿಯದೆ, ಉತ್ತಮ ಮಾರ್ಗದರ್ಶನ ವಿಲ್ಲದೆ ಕಲೆಯೊಂದರಲ್ಲಿ ಉನ್ನತಿಯನ್ನು ಸಾಧಿಸಲೂ ಆಗುವುದಿಲ್ಲ. ಈ ಹಿಂದಿನ ಅನುಭವಗಳಿಂದ ನೋಡಿದರೆ, ಪ್ರೌಢ ಶಿಕ್ಷಣ ಮಂಡಳಿಯ ನೃತ್ಯ, ಸಂಗೀತ ಇತ್ಯಾದಿ ಪರೀಕ್ಷೆಗಳಿಂದ ಬಹಳಷ್ಟು ಮಂದಿ ಉತ್ತಮ ಕಲಾವಿದರಾಗಿ, ಗುರುಗಳಾಗಿ ಬೆಳಕಿಗೆ ಬಂದಿದ್ದಾರೆ. ಹಿಂದಿನ ಪರಂಪರೆಯ ಶಿಕ್ಷಣ ಕ್ರಮದಲ್ಲೂ ಉತ್ತಮ ಅಂಶಗಳೊಂದಿಗೆ ಕೆಲವು ನ್ಯೂನತೆಗಳು ಇದ್ದಿರಬಹುದೆಂಬ ಕಾರಣದಿಂದಲೇ ಸಾರ್ವಜನಿಕ ಶಿಕ್ಷಣ ಇಲಾಖೆಯು ಈ ಸಹಪಠ್ಯ ವಿಷಯಗಳ ಪರೀಕ್ಷಾ ಕ್ರಮವನ್ನು ಜಾರಿಗೆ ತಂದಿತ್ತು. ನೂರಾರು ಖಾಸಗಿ ಸಂಸ್ಥೆಗಳು ಗುರುಕುಲ ಪರಂಪರೆಯ ತತ್ವವನ್ನು ಇಟ್ಟುಕೊಂಡು ವಿದ್ಯಾರ್ಥಿ ಗಳಿಗೆ ನೃತ್ಯ, ಸಂಗೀತ, ಚಿತ್ರ, ತಾಳ ವಾದ್ಯ ಶಿಕ್ಷಣ ನೀಡಿ ಕಲಾವಿದರನ್ನು ರೂಪಿಸುತ್ತಾ ಬಂದಿವೆ. ಗುರು-ಶಿಷ್ಯ ಪರಂಪರೆಯನ್ನು ಉಳಿಸಿಕೊಂಡು ಬಂದವರು ಬಹುಸಂಖ್ಯೆಯಲ್ಲಿದ್ದಾರೆ.
ವ್ಯಾಪಾರೀಕರಣವಿಲ್ಲದೆ ಯಾವ ಡಿಗ್ರಿ ಕೋರ್ಸು, ಪಿ.ಜಿ. ಕೋರ್ಸುಗಳೂ ಲಭ್ಯವಲ್ಲ ಎಂಬುದೂ ಸತ್ಯ. ಪ್ರೌಢ ಶಿಕ್ಷಣ ಪದ್ಧತಿಯ ಒಳಗೆ ನಡೆಯುತ್ತಾ ಬಂದಿರುವ ಈ ಸಹಪಠ್ಯ ಶಿಕ್ಷಣ ಪರೀಕ್ಷೆಗಳಿಗೂ ಸಾಕಷ್ಟು ಮಂದಿ ಗುರುಗಳು ಶ್ರಮದಾಯಕವಾದ ಸೇವೆಯನ್ನು ನೀಡಿದ್ದಾರೆ - ನೀಡುತ್ತಿದ್ದಾರೆ. ಅವರ ದುಡಿಮೆಯನ್ನು ಹಗುರವಾಗಿ ಕಾಣುವಂತಿಲ್ಲ.
ಕೆ.ಎಸ್.ಇ.ಇ. ಬೋರ್ಡಿನವರು ತಮ್ಮ ಅಂಕೆಯಲ್ಲಿದ್ದ ಈ ವ್ಯವಸ್ಥೆ ಯನ್ನು ಏಕಾಏಕಿ ಕೈಬಿಟ್ಟು, ಕರ್ನಾಟಕದಲ್ಲಿ ಇತರ ರಾಜ್ಯಗಳಲ್ಲಿ ಇಲ್ಲದ ಒಂದು ಮಾದರಿ ಶಿಕ್ಷಣ ಸಂಪ್ರದಾಯವನ್ನು ಪರಿವರ್ತನೆಯ ಹೆಸರಲ್ಲಿ ವಿಶ್ವವಿದ್ಯಾನಿಲಯದ ಸುಪರ್ದಿಗೆ ವಹಿಸಿ, ಅವರು ಗಂಗೂಬಾಯಿ ಹಾನಗಲ್ ಅವರ ಹೆಸರಿನ ಅಕಾಡೆಮಿಗೆ ಕೊಟ್ಟು, ಅವರು ಯಾವುದೇ ವ್ಯವಸ್ಥೆಯನ್ನು ಮುಂಚಿತವಾಗಿ ರೂಪಿಸಿಕೊಳ್ಳದೆ ಅಧಿಕಾರ ಸ್ವೀಕರಿಸಿಕೊಂಡು ನಡುನೀರಲ್ಲಿ ಈ ನೃತ್ಯ ಸಂಗೀತ ಪರೀಕ್ಷೆಗಳನ್ನು ತೇಲಿಸುತ್ತಿದ್ದಾರೊ ಮುಳುಗಿಸುತ್ತಿದ್ದಾರೊ ಎಂಬುದನ್ನು ತಿಳಿಯುತ್ತಿಲ್ಲ. ಅಂತು ಈ ವರ್ಷ ಇಕ್ಕಡೆಗಳಿಂದಲೂ ಸರಿಯಾದ ಉತ್ತರ ಯಾರಿಂದಲೂ ಸಿಗುತ್ತಿಲ್ಲ.
ಒಂದು ಅಭಿಪ್ರಾಯವನ್ನು ಇಕ್ಕಡೆಯವರೂ ಪಾಲಿಸುವುದು ಸೂಕ್ತವೆಂದು ಕಾಣುತ್ತದೆ. ಪ್ರೌಢ ಶಿಕ್ಷಣ ಮಂಡಳಿಯು ಪರೀಕ್ಷೆಗಳನ್ನು ಹಿಂದಿನಂತೆ ನಡೆಸುತ್ತಾ ಬರಬೇಕು. ಸಾವಿರಾರು ಮಂದಿಯಲ್ಲ - ಲಕ್ಷಾಂತರ ಮಂದಿ ನೃತ್ಯ, ಸಂಗೀತ, ವಾದ್ಯ ಕಲಾವಿದರನ್ನು ತಯಾರು ಮಾಡುತ್ತಿರುವ ಈ ಅತ್ಯುತ್ತಮ ಶಿಕ್ಷಣ ವ್ಯವಸ್ಥೆಯನ್ನು, ಲಲಿತ ಕಲೆಗಳ ಬುನಾದಿ ಶಿಕ್ಷಣ ಪದ್ಧತಿಯ ಕರ್ನಾಟಕದ ಸಂಪ್ರದಾಯವನ್ನು ಅಗತ್ಯ ಮುಂದುವರಿಸಿ ಕೊಂಡು ಹೋಗಬೇಕು. ಈ ಕಡೆಗೆ ನಮ್ಮ ಶಿಕ್ಷಣ ಮಂತ್ರಿಗಳು, ಮುಖ್ಯಮಂತ್ರಿಗಳು ಅಗತ್ಯ ಗಮನ ಕೊಡುತ್ತಾರೆಂದು ನಾವು ಕಲಾ ಶಿಕ್ಷಕ ಬಳಗದವರು ನಿರೀಕ್ಷಿಸುತ್ತೇವೆ.
ಇನ್ನು, ಡಿಗ್ರಿ ಮಟ್ಟದಲ್ಲಿ ಪಿ.ಜಿ. ಕೋರ್ಸು, ಡಾಕ್ಟರೇಟ್ ಇತ್ಯಾದಿ ಉನ್ನತೀಕರಿಸುವ ಕೋರ್ಸುಗಳೂ ತಮ್ಮದೇ ಆದ ಮಾರ್ಗದಲ್ಲಿ ಮುಂದುವರಿಯುವುದು ಅಗತ್ಯ ಎಂಬುದರಲ್ಲಿ ಅನುಮಾನವಿಲ್ಲ. ಇವುಗಳೊಂದಿಗೆ ಯಾವುದೇ ಪರೀಕ್ಷೆಗಳ ಹಂಗು, ಆಸಕ್ತಿ ಇಲ್ಲದೇ ಸಾಧನೆ ಮಾಡುತ್ತೇವೆ ಎಂಬ ಸ್ವಂತಿಕೆಯ ಪರಂಪರೆ ಯವರಿದ್ದರೆ ಅದು ಸಾಧನೆಯ ಮಾರ್ಗೀಯ ಪದ್ಧತಿಯೇ ಆಗಿದೆ. ಇನ್ನೆಷ್ಟೋ ಮಾದರಿಗಳು ತಮ್ಮದೇ ಆದ ಕೈಬೆಳಕಿನಲ್ಲಿ ಮುನ್ನಡೆಯುತ್ತವೆ. ಅವುಗಳೂ ಸೇರಲಿ. ಆದರೆ ಭದ್ರವಾಗಿರುವ ಈಗಿನ ಪ್ರೌಢಶಿಕ್ಷಣವನ್ನು ಕೈಬಿಡದೆ ಕಾಪಾಡಿಕೊಂಡು ಬನ್ನಿ ಎಂಬ ನಮ್ಮ ವಿನಂತಿ ನಮ್ಮದು.