ಒಲಿಂಪಿಯಾ (ಗ್ರೀಸ್): ಗ್ರೀಸ್‌ನ ಪುರಾತನ ಒಲಿಂಪಿಯಾದಲ್ಲಿ ಗುರುವಾರ ಲಂಡನ್ ಒಲಿಂಪಿಕ್ಸ್ ಜ್ಯೋತಿ ಪ್ರಜ್ವಲಿಸಿದೆ. ಸಹಸ್ರಾರು ವರ್ಷಗಳ ಹಿಂದಿನ ಒಲಿಂಪಿಕ್ ಸಂಪ್ರದಾಯದ ಪುನರುತ್ಥಾನದಂತೆ ಕಂಡುಬಂದ ಈ ಕಾರ್ಯಕ್ರಮ ವಿಶ್ವದ ಮಹೋನ್ನತ ಕ್ರೀಡಾಕೂಟದ ಮತ್ತೂಂದು ಕಂತಿನ ಕ್ಷಣಗಣೆನೆಗೆ ನಾಂದಿ ಹಾಡಿತು.ಪುರಾತನ ಗ್ರೀಕ್ ಉಡುಗೆಯಲ್ಲಿದ್ದ ತಾರೆಯರು 2,600 ವರ್ಷಗಳಷ್ಟು ಹಳೆಯದಾದ ಹಿರಾ ದೇಗುಲದಲ್ಲಿ, ಅಪೊಲೊ ದೇವತೆಯ ಸಮ್ಮುಖದಲ್ಲಿ ಈ ಜ್ಯೋತಿಯನ್ನು ಬೆಳಗಿಸಿದರು. ಭೂತಗನ್ನಡಿಯನ್ನು ಸೂರ್ಯನ ಕಿರಣಗಳಿಗೊಡ್ಡಿ, ಅಗ್ನಿಜ್ವಾಲೆಯನ್ನು ಸೃಷ್ಟಿಸುವ ಮೂಲಕ ಜ್ಯೋತಿಯನ್ನು ಬೆಳಗಿಸಲಾಯಿತು.ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ ಕಮಿಟಿ ಅಧ್ಯಕ್ಷ ಜಾಕಸ್ ರೋಗ್, ಲಂಡನ್ ಒಲಿಂಪಿಕ್ಸ್ ಸಂಘಟನಾ ಸಮಿತಿಯ ಅಧ್ಯಕ್ಷ ಸೆಬಾಸ್ಟಿಯನ್ ಕೋ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಈ ಜ್ಯೋತಿ ಬ್ರಿಟನ್ ಹಾಗೂ ವಿಶ್ವಾದ್ಯಂತದ ಜನರ ಸ್ಫೂರ್ತಿ ಹಾಗೂ ಭರವಸೆಯನ್ನು ಎತ್ತಿ ಹಿಡಿಯಲಿದೆ ಎಂದು ಕೋ ಹಾರೈಸಿದರು.ಸೂರ್ಯರಾಜ ಹಾಗೂ ಜ್ಞಾನಜ್ಯೋತಿಯ ಸಂಕೇತವಾಗಿರುವ ಅಪೊಲೊ ದೇವತೆಗೆ ಪ್ರಾರ್ಥಿಸಿದ ಬಳಿಕ ಈ ಜ್ಯೋತಿಯನ್ನು ಗ್ರೀಸ್‌ನ ರೀಲೇ ಓಟಗಾರ ಸೈಪ್ರಸ್ ಜಿಯಾನಿಯೋಟಿಸ್ ಅವರಿಗೆ ಹಸ್ತಾಂತರಿಸಲಾಯಿತು. ಅವರು ಇದನ್ನು ಬ್ರಿಟಿಷ್ ಬಾಕ್ಸರ್ ಅಲೆಕ್ಸಾಂಡರ್ ಲ್ಯೂಕೊಸ್ ಅವರಿಗೆ ನೀಡಿದರು. ಇದು ಸುಮಾರು ಒಂದು ವಾರದ ತನಕ ಗ್ರೀಕ್‌ನ 5 ಪುರಾತನ ತಾಣಗಳಲ್ಲಿ ಸಂಚರಿಸಲಿದೆ. ಇದರಲ್ಲಿ 1896ರ ಆಧುನಿಕ ಒಲಿಂಪಿಕ್ ತಾಣವಾದ ಏಥೆನ್ಸ್‌ನ ಸ್ಟೇಡಿಯಂ ಮುಖ್ಯವಾದುದು.ಬಳಿಕ ಮೇ 17ರಂದು ಬ್ರಿಟಿಷ್ ನಿಯೋಗವೊಂದು ಈ ಜ್ಯೋತಿಯನ್ನು ಪಡೆಯಲಿದ್ದು, ಮೇ 19ರಂದು ಒಲಿಂಪಿಕ್ ಜ್ಯೋತಿಯ ಬ್ರಿಟನ್ ಯಾನ ಆರಂಭವಾಗಲಿದೆ. ಅಫ್ಘಾನಿಸ್ಥಾನದ ಗಾಯಾಳು ಸೈನಿಕ ಹಾಗೂ ನೂರರ ಹರೆಯದ ಮಹಿಳೆಯೋರ್ವಳ ಸಹಿತ ಒಟ್ಟು 7,300 ಮಂದಿ ಬ್ರಿಟನ್ ಜ್ಯೋತಿ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜು. 27ರಂದು ಇದು ಸಮಾಪನಗೊಳ್ಳಲಿದೆ.