Wednesday, May 22, 2013
Last Updated: 8:37:10 PM IST
  • ನಾನೆಲ್ಲಿರುವೆ:
  • ಮುಖಪುಟ ರಾಷ್ಟ್ರೀಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಒಮ್ಮತದ ಬಳಿಕ ಲೋಕ್‌ಪಾಲ್‌ ಮಸೂದೆ ಮಂಡನೆ
    • ಸಲ್ಮಾನ್‌ ಖುರ್ಷಿದ್‌
    • ಸರಕಾರ ಮೊದಲಾಗಿ ಸಹಮತ ಮೂಡಿಸುವ ಪ್ರಯತ್ನ ನಡೆಸಲಿದೆ...

      • Udayavani | May 10, 2012

        ಹೊಸದಿಲ್ಲಿ : ರಾಜಕೀಯ ಪಕ್ಷಗಳ ನಡುವೆ ಸಹಮತ ಮೂಡಿದ ಬಳಿಕ ಲೋಕಪಾಲ್‌ ಮಸೂದೆಯನ್ನು ರಾಜ್ಯಸಭೆಯಲ್ಲಿ ಸರಕಾರ ಮಂಡಿಸಲಿದೆ ಎಂದು ಕಾನೂನು ಸಚಿವ ಸಲ್ಮಾನ್‌ ಖುರ್ಷಿದ್‌ ಹೇಳಿದ್ದಾರೆ.

        ರಾಜಕೀಯ ಪಕ್ಷಗಳ ನಡುವೆ ಮಸೂದೆಯ ಕುರಿತಂತೆ ಒಮ್ಮತ ಮೂಡದೇ ಸದನದಲ್ಲಿ ಮಸೂದೆಯನ್ನು ಮಂಡಿಸಿದಲ್ಲಿ ಕೆಲವೊಂದು ಸಮಸ್ಯೆಗಳು ಎದುರಾಗುವ ಹಿನ್ನೆಲೆಯಲ್ಲಿ ಸರಕಾರ ಮೊದಲಾಗಿ ಸಹಮತ ಮೂಡಿಸುವ ಪ್ರಯತ್ನ ನಡೆಸಲಿದೆ ಎಂದು ಅವರು ಸಂಸತ್ತಿನ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.

        ವಿರೋಧ ಪಕ್ಷಗಳು ಹಾಗೂ ಯುಪಿಎನ ಪ್ರಧಾನ ಅಂಗಪಕ್ಷವಾಗಿರುವ ತೃಣಮೂಲ ಕಾಂಗ್ರೆಸ್‌ನ ವಿರೋಧದ ಹಿನ್ನೆಲೆಯಲ್ಲಿ ಲೋಕಪಾಲ್‌ ಮಸೂದೆಯಡಿ ರಾಜ್ಯಗಳಲ್ಲಿ ಲೋಕಾಯುಕ್ತವನ್ನು ರಚಿಸುವ ಬಗೆಗಿನ ನಿಯಮಾವಳಿಯನ್ನು ಕೈಬಿಡುವ ಬಗೆಗೆ ಸರಕಾರ ಚಿಂತನೆ ನಡೆಸಿದೆ. ಭ್ರಷ್ಟಾಚಾರ ತಡೆಗೆ ಕಾವಲುಗಾರರ ನೇಮಕದ ವಿಚಾರವಾಗಿಯೂ ಸರಕಾರ ರಾಜಕೀಯ ಪಕ್ಷಗಳಲ್ಲಿ ಸಹಮತ ಮೂಡಿಸುವ ಯತ್ನದಲ್ಲಿದೆ ಎಂದು ಮೂಲಗಳು ತಿಳಿಸಿವೆ.

        ಮಸೂದೆಯ ಕುರಿತಾಗಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವ ಸಂಬಂಧ ರಾಜಕೀಯ ಪಕ್ಷಗಳ ನಡುವೆ ಮಾತುಕತೆ ನಡೆಯುತ್ತಿದೆ ಎಂದು ಕಾನೂನು ಸಚಿವರು ಹೇಳಿದ್ದಾರೆ.

        ರಾಜ್ಯಗಳಲ್ಲಿ ಲೋಕಾಯುಕ್ತರ ನೇಮಕದ ಬಗೆಗಿನ ಅಣ್ಣಾ ಹಜಾರೆ ಅವರ ಬೇಡಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಹಜಾರೆ ಅವರು ಲೋಕಾಯುಕ್ತರ ನೇಮಕಕ್ಕೆ ಆಗ್ರಹಿಸಿದರೆ ಇತ್ತ ದಿಲ್ಲಿಯಲ್ಲಿ ಅವರ ಬೆಂಬಲಿಗರು, ಸರಕಾರ ಲೋಕಪಾಲ್‌ ಮಸೂದೆಯಿಂದ ಲೋಕಾಯುಕ್ತರನ್ನು ಹೊರಗಿಡುವ ಪ್ರಯತ್ನ ನಡೆಸಿದೆ ಎಂದು ಆರೋಪಿಸುತ್ತಿದ್ದಾರೆ ಎಂದರು.

        ಪ್ರಧಾನಿ ಮನಮೋಹನ್‌ ಸಿಂಗ್‌ ಅವರು, ಮಾರ್ಚ್‌ 23ರಂದು ಮಸೂದೆಗೆ ಸಂಬಂಧಿಸಿದಂತೆ ಸಹಮತ ಮೂಡಿಸುವ ನಿಟ್ಟಿನಲ್ಲಿ ಸರ್ವಪಕ್ಷ ಸಭೆ ನಡೆಸಿದ್ದರು. ಆದರೆ ಈ ಸಭೆ, ಯಾವುದೇ ಸಕಾರಾತ್ಮಕ ನಿರ್ಧಾರವನ್ನು ಕೈಗೊಳ್ಳುವಲ್ಲಿ ವಿಫ‌ಲವಾಯಿತಾದರೂ ಮಾತುಕತೆಯನ್ನು ಮುಂದುವರಿಸಲು ನಿರ್ಣಯಿಸಲಾಗಿತ್ತು.

        ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ಮಸೂದೆಯ ಬಗೆಗೆ ವ್ಯಾಪಕ ಗದ್ದಲ ವ್ಯಕ್ತವಾದ ಹಿನ್ನೆಲೆಯಲ್ಲಿ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ರಾಜ್ಯಸಭೆಯಲ್ಲಿ ಯುಪಿಎಗೆ ಬಹುಮತ ಇಲ್ಲದಿರುವುದರಿಂದ ಮಸೂದೆಯನ್ನು ಮತ್ತೆ ಮಂಡಿಸಲು ಸರಕಾರ ಹಿಂದೇಟು ಹಾಕುತ್ತಿದೆ. ಲೋಕಸಭೆಯಲ್ಲಿ ಈಗಾಗಲೇ ಮಸೂದೆಗೆ ಒಪ್ಪಿಗೆ ದೊರೆತಿದೆ. ಸರ್ವ ಪಕ್ಷ ಸಭೆಯಲ್ಲಿ ಯುಪಿಎನ ಅಂಗಪಕ್ಷವಾಗಿರುವ ಡಿಎಂಕೆ ಹಾಗೂ ತೃಣಮೂಲ ಕಾಂಗ್ರೆಸ್‌, ಲೋಕಾಯುಕ್ತ ರಚನೆ ವಿಚಾರವಾಗಿ ರಾಜ್ಯ ಸರಕಾರಗಳಿಗೆ ಮುಕ್ತ ಸ್ವಾತಂತ್ರ್ಯ ನೀಡಬೇಕು ಎಂದು ಆಗ್ರಹಿಸುತ್ತಾ ಬಂದಿವೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus