ಹೊಸದಿಲ್ಲಿ : ಕೆಲವು ನಿರ್ಣಾಯಕ ವಿಚಾರಗಳಿಗೆ ಸಂಬಂಧಿಸಿದಂತೆ ತಮ್ಮ ಮನಸ್ಸಿಗೆ ತೋಚಿದಂತೆ ಬಹಿರಂಗ ಹೇಳಿಕೆ ನೀಡುವ ಬಿಜೆಪಿ ನಾಯಕರ ನಾಲಗೆಗೆ ಲಗಾಮು ಹಾಕಲು ಬುಧವಾರ ನಡೆದ ಪಕ್ಷದ ಉನ್ನತ ಮಟ್ಟದ ಸಭೆಯಲ್ಲಿ ನಿರ್ಧರಿಸಲಾಗಿದೆ. ಪಕ್ಷದ ಒಗ್ಗಟ್ಟನ್ನು ತೋರಿಸಿಕೊಡುವ ಸಲುವಾಗಿ ಪ್ರತಿ 15 ದಿನಗಳಿಗೊಮ್ಮೆ ಸಭೆ ಸೇರಿ ಚರ್ಚಿಸಿ ಎಲ್ಲ ಮುಖ್ಯ ವಿಚಾರಗಳಿಗೆ ಸಂಬಂಧಿಸಿ ಒಮ್ಮತದ ತೀರ್ಮಾನವನ್ನು ಕೈಗೊಳ್ಳುವುದು ಹಾಗೂ ಈ ಮೂಲಕ ನಾಯಕರು ಭಿನ್ನ ಹೇಳಿಕೆಗಳನ್ನು ನೀಡುವುದನ್ನು ತಪ್ಪಿಸುವುದು ಕೋರ್ ಗ್ರೂಪ್ ಕೈಗೊಂಡಿರುವ ಮುಖ್ಯ ತೀರ್ಮಾನ.ಅಧ್ಯಕ್ಷ ನಿತಿನ್ ಗಡ್ಕರಿ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಉನ್ನತ ನಾಯಕರು ಮುಂಬರುವ ರಾಷ್ಟ್ರಪತಿ ಚುನಾವಣೆಯ ಬಗ್ಗೆ ಕೂಡ ಚರ್ಚಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯನ್ನು ವಿರೋಧಿಸಬೇಕೆಂಬ ಭಾವನೆ ಈಗಲೂ ಪಕ್ಷದಲ್ಲಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಚುನಾವಣೆಯ ರಣತಂತ್ರವನ್ನು ನಾಯಕರು ಚರ್ಚಿಸಿದರು.ನಾಯಕರು ಕೆಲವು ವಿಚಾರಗಳಿಗೆ ಸಂಬಂಧಿಸಿ ಭಿನ್ನ ಹೇಳಿಕೆಗಳನ್ನು ನೀಡುವುದಕ್ಕೆ ಸಭೆಯಲ್ಲಿ ಗಂಭೀರ ಕಳವಳ ವ್ಯಕ್ತವಾಯಿತು ಹಾಗೂ ಕೊನೆಯಲ್ಲಿ ನಾಯಕರ ನಾಲಗೆಗೆ ಲಗಾಮು ಹಾಕುವ ತೀರ್ಮಾನಕ್ಕೆ ಬರಲಾಯಿತು.ರಾಷ್ಟ್ರಪತಿ ಚುನಾವಣೆ ಮತ್ತು ರಾಜ್ಯಸಭೆಗೆ ಜಾರ್ಖಂಡ್‌ನಿಂದ ಅಭ್ಯರ್ಥಿಯನ್ನು ಆರಿಸುವ ವಿವಾದ ಬಿಜೆಪಿ ನಾಯಕರ ಭಿನ್ನ ಹೇಳಿಕೆಗಳಿಗೆ ಇತ್ತೀಚೆಗಿನ ಉದಾಹರಣೆ. ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿರುವುದರಿಂದ ಬಿಜೆಪಿಯಲ್ಲಿ ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿ ಗೊಂದಲವುಂಟಾಗಿದೆ. ಸಂಸದೀಯ ಪಕ್ಷದಲ್ಲೂ ಈ ಬಗ್ಗೆ ಭಿನ್ನಾಭಿಪ್ರಾಯವಿರುವುದರಿಂದ ಇನ್ನು ಮುಂದಿನ ಸಂಸದೀಯ ಪಕ್ಷದ ಸಭೆಯಲ್ಲಿ ನಿತಿನ್ ಗಡ್ಕರಿಯವರೂ ಭಾಗವಹಿಸುವುದೆಂದು ತೀರ್ಮಾನಿಸಲಾಯಿತು.ಹಿರಿಯ ನಾಯಕ ಯಶವಂತ್ ಸಿನ್ಹ ರಾಷ್ಟ್ರಪತಿ ಚುನಾವಣೆಯಲ್ಲಿ ಹಣಕಾಸು ಸಚಿವ ಪ್ರಣವ್ ಮುಖರ್ಜಿಯನ್ನು ಬೆಂಬಲಿಸಬೇಕೆಂದು ಹೇಳಿದರೆ , ಇದರಿಂದ ಬಿಜೆಪಿ ಕಾಂಗ್ರೆಸ್ಸನ್ನು ಬೆಂಬಲಿಸುತ್ತಿದೆ ಎಂಬ ಭಾವನೆ ಬರಬಹುದು ಎಂದು ಇತರ ಕೆಲವು ನಾಯಕರು ಆಕ್ಷೇಪಿಸುತ್ತಿದ್ದಾರೆ. ಮುಖರ್ಜಿ ಅಥವಾ ಕಾಂಗ್ರೆಸಿನ ಬೇರೆ ಯಾವುದೇ ಅಭ್ಯರ್ಥಿಯನ್ನು ಬಿಜೆಪಿ ಬೆಂಬಲಿಸುವುದಿಲ್ಲ ಎಂದು ಲೋಕಸಭೆಯ ವಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಹೇಳಿದ್ದಾರೆ.ಅಂತೆಯೇ ರಾಜಸ್ಥಾನದಲ್ಲಿ ಉದ್ಭವಿಸಿರುವ ಬಿಕ್ಕಟ್ಟಿನ ಕುರಿತು ಕೂಡ ಕೋರ್ ಗ್ರೂಪ್ ಚರ್ಚಿಸಿದೆ. ಪಕ್ಷದ ನಾಯಕ ಗುಲಾಬ್‌ಚಂದ್ ಕಟಾರಿಯ ಮುಂದಿನ ಚುನಾವಣೆಯಲ್ಲಿ ತನ್ನನ್ನು ಮುಖ್ಯಮಂತ್ರಿಯಾಗಿ ಅಭ್ಯರ್ಥಿಯಾಗಿ ಬಿಂಬಿಸುವ ಉದ್ದೇಶದಿಂದ ಕೈಗೊಳ್ಳುತ್ತಿರುವ ಯಾತ್ರೆಗೆ ವಸುಂಧರಾ ರಾಜೆ ಬೆಂಬಲಿಗರು ಆಕ್ಷೇಪ ಎತ್ತಿರುವುದರಿಂದ ರಾಜಸ್ಥಾನದಲ್ಲಿ ಗಂಭೀರವಾದ ಬಿಕ್ಕಟ್ಟು ತಲೆದೋರಿದೆ.ಕರ್ನಾಟಕದ ಬಿಜೆಪಿ ನಾಯಕರು ಮುಗಿಯದ ಕಚ್ಚಾಟದ ಬಗ್ಗೆಯೂ ಕೋರ್ ಗ್ರೂಪ್ ಸಭೆಯಲ್ಲಿ ಚರ್ಚಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಕೆ. ಎಸ್. ಈಶ್ವರಪ್ಪ ಮತ್ತು ಮುಖ್ಯಮಂತ್ರಿ ಸದಾನಂದ ಗೌಡ ಅಧ್ಯಕ್ಷ ಗಡ್ಕರಿಗೆ ಪತ್ರ ಬರೆದಿದ್ದರೆ ಯಡಿಯೂರಪ್ಪ ತನ್ನನ್ನು ಮರಳಿ ಮುಖ್ಯಮಂತ್ರಿ ಮಾಡಬೇಕೆಂಬ ಬೇಡಿಕೆಯನ್ನು ನವೀಕರಿಸಿಕೊಂಡು ಇನ್ನೊಂದು ಸುತ್ತಿನ ಹೋರಾಟದಲ್ಲಿ ತೊಡಗಿದ್ದಾರೆ. ಈ ಎಲ್ಲ ವಿಚಾರಗಳನ್ನು ನಾಯಕರು ಕೂಲಂಕಷವಾಗಿ ಚರ್ಚಿಸಿದ್ದಾರೆಂದು ಮೂಲವೊಂದು ತಿಳಿಸಿದೆ.ಹೊಸದಿಲ್ಲಿಯಲ್ಲಿ ಶುಕ್ರವಾರ ನಡೆಯಲಿರುವ ಪದಾಧಿಕಾರಿಗಳ ಸಮಾವೇಶ ಅಂತೆಯೇ ಮೇ 24 ಮತ್ತು 25ರಂದು ಮುಂಬಯಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಕಾರ್ಯಕಾರಿಣಿಯ ಕುರಿತು ಚರ್ಚಿಸಲಾಗಿದೆ.