ಭೋಪಾಲ: ಹುಲಿ ಸಂರಕ್ಷಣೆಗೆಂದು ಕರ್ನಾಟಕದಿಂದ 11 ಆನೆಗಳನ್ನು ಖರೀದಿಸಿರುವ ಮಧ್ಯಪ್ರದೇಶ ಸರ್ಕಾರಕ್ಕೆ ಅವುಗಳನ್ನೀಗ ಸಾಗಿಸುವುದು ಹೇಗೆಂಬುದೇ ತಿಳಿಯುತ್ತಿಲ್ಲ. ಎರಡು ಬಾರಿ ಟೆಂಡರ್ ಕರೆದರೂ ಈ ಕೆಲಸಕ್ಕೆ ಯಾರೂ ಮುಂದೆ ಬರುತ್ತಿಲ್ಲ.ಆನೆಗಳನ್ನು ಕೊಡುತ್ತೇವೆ, ತೆಗೆದುಕೊಂಡು ಹೋಗುವುದು ನಿಮ್ಮ ಕೆಲಸ ಎಂದು ಕರ್ನಾಟಕ ಸರ್ಕಾರ ಸುಮ್ಮನಾಗಿಬಿಟ್ಟಿದೆ. ಇವು ಪಳಗಿಸಿದ ಆನೆಗಳೇ ಆಗಿದ್ದರೂ ಅವುಗಳ ದೈತ್ಯ ಗಾತ್ರ ಹಾಗೂ ಭಾರದ ಕಾರಣ ಲಾರಿ ಮಾಲಿಕರು ರಿಸ್ಕ್ ತೆಗೆದುಕೊಳ್ಳಲು ಸಿದ್ಧರಾಗುತ್ತಿಲ್ಲ. ಹೀಗಾಗಿ ಈಗ ಮೂರನೇ ಬಾರಿ ಆನೆಗಳ ಸಾಗಾಟಕ್ಕೆ ಟೆಂಡರ್ ಕರೆಯಲು ಮಧ್ಯಪ್ರದೇಶ ಅರಣ್ಯ ಇಲಾಖೆ ನಿರ್ಧರಿಸಿದೆ.ಈ ಮಧ್ಯೆ, ಆನೆಗಳನ್ನು ಗೂಡ್ಸ್ ರೈಲಿನಲ್ಲಿ ತೆಗೆದುಕೊಂಡು ಹೋದರೆ ಹೇಗೆ ಎಂಬ ಚಿಂತನೆಯೂ ಅರಣ್ಯ ಇಲಾಖೆಗೆ ಬಂದಿತ್ತು. ಆದರೆ, ರೈಲಿನೊಳಗಿನ ನಿರಂತರ ಸದ್ದು ಹಾಗೂ ಕುಲುಕಾಟಕ್ಕೆ ಆನೆಗಳು ರೊಚ್ಚಿಗೆದ್ದರೆ ಕಷ್ಟವಾಗುತ್ತದೆ ಎಂದು ಪ್ರಾಣಿತಜ್ಞರು ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ರೈಲಿನ ಯೋಚನೆಯನ್ನು ಸರ್ಕಾರ ಕೈಬಿಟ್ಟಿದೆ.ಈಗ ಮೂರನೇ ಬಾರಿ ಟೆಂಡರ್ ಕರೆಯುವ ವೇಳೆ ಲಾರಿ ಮಾಲಿಕರ ಬಳಿ ಸ್ವತಃ ಮಾತನಾಡಿ ಚೌಕಾಸಿ ನಡೆಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಏನಾದರೂ ಮಾಡಿ ಈ ಮಳೆಗಾಲದೊಳಗೆ ಆನೆಗಳನ್ನು ತರಬೇಕೆಂಬುದು ಅವರ ಹಠ.ಮ.ಪ್ರ.ಕ್ಕೆ ಆನೆಗಳೇಕೆ ಬೇಕು?:ಹುಲಿಗಳ ಸಂಖ್ಯೆ ಹೆಚ್ಚಿರುವ ರಾಜ್ಯಗಳಲ್ಲಿ ಮಧ್ಯಪ್ರದೇಶವೂ ಒಂದು. ಅಭಯಾರಣ್ಯಗಳಲ್ಲಿ ಹುಲಿಗಳ ಮೇಲೆ ನಿಗಾ ಇಡಲು ಗಸ್ತು ತಿರುಗಲು ಆನೆಗಳು ಬೇಕಾಗುತ್ತವೆ. ಆನೆ ಮೇಲೆ ಕುಳಿತು ಸಫಾರಿ ನಡೆಸಿ ಹುಲಿಗಳ ಯೋಗಕ್ಷೇಮ ನೋಡಿಕೊಳ್ಳಲಾಗುತ್ತದೆ. ಇದಕ್ಕೆ ಬೇಕಾದಷ್ಟು ಆನೆಗಳು ಮಧ್ಯಪ್ರದೇಶದಲ್ಲಿಲ್ಲ.ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಕರ್ನಾಟಕ ಸರ್ಕಾರಕ್ಕೆ ಮಧ್ಯಪ್ರದೇಶ ಸರ್ಕಾರ ಆನೆಗಳನ್ನು ನೀಡುವಂತೆ ಕೋರಿತ್ತು. ಅದಕ್ಕೆ ಕರ್ನಾಟಕ ಒಪ್ಪಿಕೊಂಡಿತ್ತು. ಮೊದಲ ಹಂತದಲ್ಲಿ 11 ಆನೆಗಳನ್ನು ಕೊಂಡೊಯ್ದ ಮೇಲೆ ಇನ್ನೂ 10 ಆನೆಗಳನ್ನು ನೀಡುವಂತೆ ಕರ್ನಾಟಕವನ್ನು ಕೋರಲು ಅಧಿಕಾರಿಗಳು ನಿರ್ಧರಿಸಿದ್ದಾರೆ.ಆನೆ ಸಾಕಲು ಕರ್ನಾಟಕದಲ್ಲಿ ದುಡ್ಡಿಲ್ವಂತೆ!ಆನೆಗಳನ್ನು ಸಾಕಲು ಕರ್ನಾಟಕ ಸರ್ಕಾರದ ಬಳಿ ಸಾಕಷ್ಟು ದುಡ್ಡಿಲ್ಲ, ಆದ್ದರಿಂದಲೇ ಬೇರೆ ರಾಜ್ಯಗಳಿಗೆ ಸಾಗಹಾಕುತ್ತಿದೆ ಎಂಬ ವದಂತಿಯೊಂದು ಮಧ್ಯಪ್ರದೇಶದಲ್ಲಿ ಹರಡಿದೆ. ಕರ್ನಾಟಕದ ಅರಣ್ಯಾಧಿಕಾರಿಗಳೇ ಇದನ್ನು ತಿಳಿಸಿರುವುದಾಗಿ ಮಧ್ಯಪ್ರದೇಶದ ಅಧಿಕಾರಿಗಳು ವದಂತಿ ಹಬ್ಬಿಸಿದ್ದಾರೆ.ಒಂದು ಆನೆ ಸಾಕಲು ವರ್ಷಕ್ಕೆ 1.3 ಲಕ್ಷ ರೂ. ಬೇಕು. ಅದನ್ನು ನೋಡಿಕೊಳ್ಳಲು ಮಾವುತ, ಆತನಿಗೆ ಸಹಾಯಕ, ಪೌಷ್ಟಿಕ ಆಹಾರ ಹೀಗೆ ಹಲವು ಖರ್ಚುಗಳಿವೆ. ತನ್ನೆಲ್ಲಾ ಶಿಬಿರದಲ್ಲಿರುವ ಆನೆಗಳನ್ನು ಸಾಕುವಷ್ಟು ಹಣ ಕರ್ನಾಟಕದ ಅರಣ್ಯ ಇಲಾಖೆಯಲ್ಲಿಲ್ಲ ಎಂದು ಹೇಳಲಾಗುತ್ತಿದೆ.