ಹೊಸದಿಲ್ಲಿ : ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸಯನ್ಸ್ ಎಜುಕೇಶನ್ ಆ್ಯಂಡ್ ರಿಸರ್ಚ್‌ನ ವಿದ್ಯಾರ್ಥಿಗಳು ತಮ್ಮ ಪದವಿ ಪಡೆಯುವುದಕ್ಕೆ ಹಾಗೂ ಎಂಟು ಹೊಸ ಐಐಟಿಗಳಿಗೆ ಅವುಗಳ ಸ್ಥಾನಮಾನ ಕಲ್ಪಿಸುವುದಕ್ಕೆ ಅನುವಾಗಿಸುವ ಎರಡು ಪ್ರಮುಖ ಮಸೂದೆಗಳನ್ನು ಸಂಸತ್ತು ಶುಕ್ರವಾರ ಅಂಗೀಕರಿಸಿತು.ರಾಜ್ಯಸಭೆ ಈಗಾಗಲೇ ಅಂಗೀಕರಿಸಿರುವ ದ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ತಿದ್ದುಪಡಿ) ಮಸೂದೆ, 2011 ಭುವನೇಶ್ವರ, ಗಾಂಧೀನಗರ, ಹೈದರಾಬಾದ್, ಇಂದೋರ್, ಜೋಧ್‌ಪುರ, ಮಂಡಿ, ಪಟ್ನಾ ಮತ್ತು ರೋಪಾರ್‌ಗಳಲ್ಲಿ ಎಂಟು ಹೊಸ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗಳನ್ನು ಸ್ಥಾಪಿಸಲು ಹಾಗೂ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯನ್ನು ಕಾಯಿದೆಯ ಕಕ್ಷೆಯೊಳಗೆ ತರಲು ಕೋರುತ್ತದೆ. ತಿದ್ದುಪಡಿ ಕಾಯಿದೆಯ ಪ್ರಕಾರ ಈ ಎಲ್ಲ ಸಂಸ್ಥೆಗಳನ್ನು ರಾಷ್ಟ್ರೀಯ ಮಹತ್ವದ ಸಂಸ್ಥೆಗಳೆಂದು ಘೋಷಿಸಲಾಗುವುದು.ರಾಜ್ಯಸಭೆಯಲ್ಲಿ ಈಗಾಗಲೇ ಅಂಗೀಕಾರಗೊಂಡಿರುವ ದ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ತಿದ್ದುಪಡಿ) ಮಸೂದೆ, 2010 ಕೆಲವು ಟೆಕ್ನಾಲಜಿ ಸಂಸ್ಥೆಗಳನ್ನು ರಾಷ್ಟ್ರೀಯ ಮಹತ್ವದ ಸಂಸ್ಥೆಗಳೆಂದು ಘೋಷಿಸುತ್ತದೆ ಮತ್ತು ಕೋಲ್ಕತಾ, ಪುಣೆ, ಮೊಹಾಲಿ, ಭೋಪಾಲ ಮತ್ತು ತಿರುವನಂತಪುರಗಳಲ್ಲಿನ ಐದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸಯನ್ಸ್ ಎಜುಕೇಶನ್ ಆ್ಯಂಡ್ ರಿಸರ್ಚ್‌ಗಳನ್ನು ರಾಷ್ಟ್ರೀಯ ಮಹತ್ವದ ಸಂಸ್ಥೆಗಳೆಂದು ಸೇರ್ಪಡೆಗೊಳಿಸಲು ಕೋರುತ್ತದೆ.ಪ್ರತಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರ ಸಂಖ್ಯೆಯನ್ನು ಅದು ನಿಗದಿಪಡಿಸುತ್ತದೆ ಮತ್ತು ಅಖೀಲ ಭಾರತ ಇನ್‌ಸ್ಟಿಟ್ಯೂಟ್ ಆಫ್ ಸಯನ್ಸ್ ಎಜುಕೇಶನ್ ಆ್ಯಂಡ್ ರಿಸರ್ಚ್‌ಗಳಿಗೆ ಮಂಡಳಿಯೊಂದನ್ನು ಸ್ಥಾಪಿಸಲು ಉದ್ದೇಶಿಸಿದೆ. ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಲ್ಲಿ ಬಿ.ಆರ್.ಅಂಬೇಡ್ಕರ್ ಅವರ ವ್ಯಂಗ್ಯಚಿತ್ರಕ್ಕೆ ಸಂಬಂಧಿಸಿ ಏರ್ಪಟ್ಟ ಗದ್ದಲದ ನಡುವೆ ಮಸೂದೆಗಳನ್ನು ಅಂಗೀಕರಿಸಲಾಯಿತು.