Thursday, May 23, 2013
Last Updated: 6:02:24 AM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಚಾಂಪಿಯನ್ಸ್‌ ಲೀಗ್‌ಗೆ ಪಾಕಿಸ್ಥಾನ
      • Udayavani | May 12, 2012

        ಚೆನ್ನೈ: ಮುಂಬರುವ ಚಾಂಪಿಯನ್ಸ್‌ ಲೀಗ್‌ ಟ್ವೆಂಟಿ-20 ಕ್ರಿಕೆಟ್‌ ಪಂದ್ಯಾವಳಿಗೆ ಪಾಕಿಸ್ಥಾನದ ತಂಡಗಳು ಮೆರುಗು ಹೆಚ್ಚಿಸಲಿವೆ.

        ಹೌದು, ಮುಂಬೈ ದಾಳಿ ಪ್ರಕರಣದ ಅನಂತರ ಪಾಕಿಸ್ಥಾನದ ಜೊತೆ ಆಡಲು ಮೂರು ವರ್ಷಗಳಿಂದ ನಿರಾಕರಿಸುತ್ತ ಬಂದಿದ್ದ ಬಿಸಿಸಿಐ, ಇದೇ ಮೊದಲ ಬಾರಿಗೆ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಆಡಲು ಪಾಕ್‌ ತಂಡವನ್ನು ಆಹ್ವಾನಿಸಲು ನಿರ್ಧರಿಸಿದೆ. ಇದರಿಂದ ಎರಡೂ ದೇಶಗಳ ನಡುವೆ ಮುರಿದುಬಿದ್ದ ಕ್ರಿಕೆಟ್‌ ಸಂಬಂಧ ಮತ್ತೆ ಜೀವ ಪಡೆಯುವ ಸಾಧ್ಯತೆಯೂ ಕಂಡುಬಂದಿದೆ.

        2008ರ ಮುಂಬೈ ದಾಳಿಯ ಬಳಿಕ ಭಾರತ-ಪಾಕಿಸ್ಥಾನ ನಡುವಿನ ಕ್ರಿಕೆಟ್‌ ಸಂಬಂಧ ಮುರಿದುಬಿದ್ದಿತ್ತು. ಮೊದಲ ಆವೃತ್ತಿಯ ಐಪಿಎಲ್‌ ಟ್ವೆಂಟಿ-20 ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಪಾಕ್‌ ಆಟಗಾರರು ಅನಂತರದ ನಾಲ್ಕೂ ಆವೃತ್ತಿಗಳಿಂದ ಹೊರಬಿದ್ದಿದ್ದರು.

        ಶನಿವಾರ ನಡೆದ ಬಿಸಿಸಿಐ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಕ್ಟೋಬರ್‌ನಲ್ಲಿ ನಡೆಯಲಿರುವ ಚಾಂಪಿಯನ್ಸ್‌ ಲೀಗ್‌ ಟ್ವೆಂಟಿ-20 ಕ್ರಿಕೆಟ್‌ ಪಂದ್ಯಾವಳಿಗೆ ಪಾಕಿಸ್ಥಾನ ತಂಡವನ್ನು ಆಹ್ವಾನಿಸಲು ನಿರ್ಧರಿಸಲಾಯಿತು.

        ಸಭೆಯ ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಸಿಸಿಐ ಅಧ್ಯಕ್ಷ ಎನ್‌. ಶ್ರೀನಿವಾಸನ್‌, ಪಾಕಿಸ್ಥಾನವನ್ನು ಆಹ್ವಾನಿಸುವ ಬಗ್ಗೆ ತಮ್ಮ ಅಭ್ಯಂತರ ಇಲ್ಲ ಎಂದು ಸಭೆಯಲ್ಲಿ ಕೈಗೊಂಡ ತೀರ್ಮಾನವನ್ನು ಬಿಸಿಸಿಐ, ಕ್ರಿಕೆಟ್‌ ಆಸ್ಟ್ರೇಲಿಯ, ಕ್ರಿಕೆಟ್‌ ದಕ್ಷಿಣ ಆಫ್ರಿಕಾ ಜಂಟಿ ಒಡೆತನದ ಚಾಂಪಿಯನ್ಸ್‌ ಲೀಗ್‌ ಆಡಳಿತ ಮಂಡಳಿಗೆ ಶಿಫಾರಸು ಮಾಡಲಾಗುವುದು ಎಂದರು.

        ಬಿಸಿಸಿಐ ನಿರ್ಧಾರದಿಂದ ಪಾಕಿಸ್ಥಾನದ ದೇಶೀಯ ಟ್ವೆಂಟಿ-20 ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಚಾಂಪಿಯನ್‌ ಆದ ಶೋಯಿಬ್‌ ಮಲಿಕ್‌ ನೇತೃತ್ವದ ಸಿಯಾಲ್‌ಕೋಟ್‌ ಸ್ಟಾಲಿನ್ಸ್‌ ತಂಡ ಮುಂಬರುವ ಚಾಂಪಿಯನ್ಸ್‌ ಲೀಗ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆಯಲಿದೆ.

        2009ರಿಂದ ಆರಂಭಗೊಂಡಿರುವ ಚಾಂಪಿಯನ್ಸ್‌ ಲೀಗ್‌ನಲ್ಲಿ ನಮ್ಮ ತಂಡವನ್ನು ಸೇರಿಸಿಕೊಳ್ಳಲು ಎಂದು ಪಾಕಿಸ್ಥಾನ ಒತ್ತಡ ಹೇರುತ್ತ ಬಂದಿತ್ತು. ಈ ಹಿನ್ನೆಲೆಯಲ್ಲಿ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗಿದೆ.

        ಮಾಜಿಗಳಿಗೆ ಬೋನಸ್‌

        ಇದೇ ವೇಳೆ ಐಪಿಎಲ್‌ನಿಂದ ಬಂದ ಲಾಭಾಂಶದಲ್ಲಿ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಆಡಿದ ದೇಶದ ಮಾಜಿ ಕ್ರಿಕೆಟಿಗರಿಗೆ 'ಒಂದು ಕಾಲದ ನೆರವು' ಯೋಜನೆಯಡಿ ಸುಮಾರು 70 ಕೋಟಿ ರೂ. ನೀಡಲಿದೆ. ಇದರಿಂದ ಸಮರು 160 ಮಾಜಿ ಕ್ರಿಕೆಟಿಗರಿಗೆ ಬೋನಸ್‌ ರೂಪದಲ್ಲಿ ನಗದು ಮೊತ್ತ ದೊರೆಯಲಿದೆ.

        2003ಕ್ಕಿಂತ ಮುನ್ನ ನಿವೃತ್ತಿ ಹೊಂದಿದ ಮಾಜಿ ಕ್ರಿಕೆಟಿಗರ ಸೇವೆಯನ್ನು ಗುರುತಿಸುವ ಸಲುವಾಗಿ ಬಿಸಿಸಿಐ ಕಾರ್ಯಕಾರಿ ಸಮಿತಿ ಈ ನಿರ್ಧಾರ ಕೈಗೊಂಡಿದೆ.

        ಭಾರತ ತಂಡವನ್ನು 100ಕ್ಕೂ ಅಧಿಕ ಟೆಸ್ಟ್‌ಗಳಲ್ಲಿ ಪ್ರತಿನಿಧಿಸಿದ ಆಟಗಾರರಿಗೆ ತಲಾ 1.5 ಕೋಟಿ ರೂ., 75ರಿಂದ 99 ಟೆಸ್ಟ್‌ ಆಡಿದ ಆಟಗಾರರಿಗೆ ತಲಾ 1 ಕೋಟಿ ರೂ., 50ರಿಂದ 74 ಪಂದ್ಯ ಆಡಿದವರಿಗೆ ತಲಾ 75 ಲಕ್ಷ, 25ರಿಂದ 49 ಟೆಸ್ಟ್‌ ಆಡಿದವರಿಗೆ 60 ಲಕ್ಷ, ಮತ್ತು 10ರಿಂದ 24 ಟೆಸ್ಟ್‌ ಆಡಿದವರಿಗೆ 50 ಲಕ್ಷ ರೂ. ಹಾಗೂ 1970ಕ್ಕಿಂತ ಮುನ್ನ ಕೊನೆಯ ಪಂದ್ಯ ಆಡಿದರಿಗೆ ತಲಾ 35 ಲಕ್ಷ ರೂ. ನೀಡಲು ಬಿಸಿಸಿಐ ಕಾರ್ಯಕಾರಿ ಸಮಿತಿ ನಿರ್ಧರಿಸಿದೆ.

        ಕೇವಲ ಏಕದಿನ ಪಂದ್ಯಗಳನ್ನು ಆಡಿದ ಆಟಗಾರರ ಸೇವೆಯಲ್ಲಿ ಮೂರು ಏಕದಿನ ಪಂದ್ಯಗಳು ಒಂದು ಟೆಸ್ಟ್‌ ಎಂದು ಪರಿಗಣಿಸಲಾಗುವುದು. ಅಲ್ಲದೇ ಕನಿಷ್ಠ ಒಂದು ಟೆಸ್ಟ್‌ ಆಡಿದವರು ಈ ಯೋಜನೆ ವ್ಯಾಪ್ತಿಗೆ ಬರಲಲಿದ್ದಾರೆ ಎಂದರು.

        ಅಲ್ಲದೇ ಬಿಸಿಸಿಐ ಕಠಿನ ನಿಯಮ ಹಾಗೂ ಪಿಚ್‌ ಕ್ಯೂರೇಟರ್‌ ಸಮಿತಿ ಒಳಗೊಂಡ ಭ್ರಷ್ಟಾಚಾರ ನಿಯಂತ್ರಣ ಘಟಕ ಸ್ಥಾಪಿಸಲು ನಿರ್ಧರಿಸಿದೆ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus