Saturday, May 18, 2013
Last Updated: 8:15:43 PM IST
  • ನಾನೆಲ್ಲಿರುವೆ:
  • ಮುಖಪುಟ ಪ್ರಾದೇಶಿಕ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಪ್ರದೇಶಾಭಿವೃದ್ಧಿಗೆ ಸಮಗ್ರ ಯೋಜನೆಗೆ ಪ್ರಸ್ತಾವ
    • ಪೇಜಾವರ ಶ್ರೀಗಳು ಮಾಳಿಗೆ ಮನೆಯಲ್ಲಿ ಊರವರ ಜತೆ ಸಂವಾದ ನಡೆಸಿದರು.

      • Udayavani | May 12, 2012

        ಪೇಜಾವರ ಶ್ರೀಬೆಳ್ತಂಗಡಿ : ನಕ್ಸಲ್‌ ಬಾಧಿತ ಪ್ರದೇಶದ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸಿ ಸರಕಾರದ ಜತೆ ಸಮಾಲೋಚಿಸಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ನುಡಿದರು.

        ಅವರು ಶನಿವಾರ ಸುಲ್ಕೇರಿಮೊಗ್ರು ಗ್ರಾಮದ ಹರೀಶ್‌ ಅವರ ಮಾಳಿಗೆಮನೆಯಲ್ಲಿ ಕುದುರೆಮುಖ ರಾಷ್ಟ್ರೀಯಯ ಉದ್ಯಾನ ವ್ಯಾಪ್ತಿಯ ಜನತೆಗೆ ಮಠದ ವತಿಯಿಂದ ಹಮ್ಮಿಕೊಂಡ ಮೂಲ ಸೌಕರ್ಯ ಕಲ್ಪಿಸಲು ಕಾರ್ಯಕ್ರಮದಲ್ಲಿ ಮಾತನಾಡಿದರು.

        ನಕ್ಸಲ್‌ ಬಾಧಿತ ಪ್ರದೇಶದ ಅಭಿವೃದ್ಧಿಗೆ ತಜ್ಞರ ಜತೆ ಚರ್ಚಿಸಿ, ಪರಿಹಾರಸೂತ್ರ ಸಿದ್ಧಪಡಿಸಿ ಸರಕಾರದ ಜತೆ ಸಮಾಲೋಚಿಸಲಾಗುವುದು. ಈಗ ಸಣ್ಣ ಪ್ರಮಾಣದಲ್ಲಿ ಪರಿಹಾರ ಕಾರ್ಯಾಚರಣೆ ಆರಂಭಿಸಲಾಗಿದೆ. ರಸ್ತೆ, ನೀರಿಗೆ ತೊಂದರೆ ಮಾಡಬಾರದು ಎಂಬುದು ನಮ್ಮ ಉದ್ದೇಶ. ಹುಲಿ ಸಂರಕ್ಷಣಾ ಯೋಜನೆ, ಕುದುರೆಮುಖ ರಾಷ್ಟ್ರೀಯಯ ಯೋಜನೆ ಎಂದು ಯೋಜನೆಗಳನ್ನು ಮಾಡಿ ಅಲ್ಲಿನ ಜನರನ್ನು ಒಕ್ಕಲೆಬ್ಬಿಸಿ ಅತಂತ್ರರಾಗಿಸುವ ಯೋಜನೆಗಳು ಖಂಡಿತ ಬೇಡ. ಜನರ ನೆಮ್ಮದಿಗೆ ಭಂಗ ತರುವ ರಾಷ್ಟ್ರೀಯಯ ಉದ್ಯಾನ ಯೋಜನೆ ರದ್ದಾಗಲಿ ಎಂದು ಶ್ರೀ ಗಳು ಒತ್ತಾಯಿಸಿದರು.

        ಶ‌ತಮಾನಗಳಿಂದ ಇರುವ ಜನರಿಗೆ ತೊಂದರೆ ಮಾಡಿದರೆ ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧ. ಸದಾ ನಿಮ್ಮ ಜತೆಗಿರುವೆ ಎಂದು ಭರವಸೆ ನೀಡಿದ ಅವರು, ರಸ್ತೆ ಅಭಿವೃದ್ಧಿಗೆ ಅವಶ್ಯವಿರುವ ಕಾನೂನು ತಿದ್ದುಪಡಿ ಮಾಡಬೇಕು. ಪ್ರಾಣಿಗಳನ್ನು ರಕ್ಷಿಸಲು ಜನರನ್ನು ಪ್ರಾಣಿಗಳಿಗಿಂತ ಕಡೆಯಾಗಿ ಕಾಣುವುದು ಬೇಡ ಎಂದರು.

        ಎಲ್ಲವನ್ನೂ ಒಬ್ಬನೇ ಮಾಡುತ್ತೇನೆ ಎಂದು ಭರವಸೆ ನೀಡಲಾರೆ. ಇಲ್ಲಿನ ಅಭಿವೃದ್ಧಿಗೆ ಚಾಲನೆ ನೀಡಿರುವುದು ಸರಕಾರಕ್ಕೆ ಹಾಗೂ ಇತರ ಸಂಘ ಸಂಸ್ಥೆಗಳಿಗೆ ಪ್ರಚೋದನೆ ನೀಡುವ ಕೆಲಸವಾಗಲಿ. ಸರಕಾರ ಹಾಗೂ ಸಂಘ ಸಂಸ್ಥೆಗಳು ಊರಿನ ಅಭಿವೃದ್ಧಿಗೆ ಮಗುವಿನ ಪೋಷಣೆಗೆ ತಂದೆ ತಾಯಿಯ ಸ್ಥಾನದಲ್ಲಿರುವಂತೆ ಜವಾಬ್ದಾರಿ ವಹಿಸಬೇಕು ಎಂದರು.

        ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಭಿಷೇಕ್‌ ಗೋಯಲ್‌ ಮಾತನಾಡಿ, ಅಭಿವೃದ್ಧಿ ಆಗದಿರಲು ಅನೇಕ ಕಾರಣಗಳು ಇರುತ್ತದೆ. ಸಮಾಜಬಾಹಿರ ಶಕ್ತಿಗಳಿಗೆ ಬೆಂಬಲ ನೀಡಿದರೆ ಖಂಡಿತ ಅಭಿವೃದ್ಧಿ ಅಸಾಧ್ಯ. ಪ್ರಜಾಸತ್ತಾತ್ಮಕ ವ್ಯಸ್ಥೆಯಲ್ಲಿಯೇ ಅಭಿವೃದ್ಧಿಗೆ ಅವಕಾಶ ಇದೆ. ಈ ಪ್ರದೇಶದ ಅಭಿವೃದ್ಧಿ ಬೇಡಿಕೆಗಳ ಪಟ್ಟಿ ನೀಡಿದರೆ ಜಿಲ್ಲಾಡಳಿತ ಜತೆ ಚರ್ಚಿಸುವುದಾಗಿ ಹೇಳಿದರು.

        ಪೊಲೀಸ್‌ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದರು. ಸ್ಥಳೀಯ ಯುವಕರಿಗೆ ಸರಕಾರಿ ಉದ್ಯೋಗ ನೀಡಿ, ಬೇಟೆ ಆಡಬಾರದು ಎಂಬ ಕಾನೂನು ತೆಗೆದು ಹಾಕಿ ವರ್ಗ ಸ್ಥಳದಲ್ಲಿ ಬೇಟೆ ಆಡಲು ಅವಕಾಶ ನೀಡಿ ಎಂದು ಬೇಡಿಕೆ ಇಟ್ಟರು.

        ಜಿ. ಪಂ. ಸದಸ್ಯೆ ತುಳಸಿ ಹಾರಬೆ ಅವರು ಈ ಪ್ರದೇಶದ ರಸ್ತೆ ಕಾಂಕ್ರಿಟ್‌ ಅಳವಡಿಕೆಗೆ 5 ಲಕ್ಷ ರೂ. ಮಂಜೂರಾಗಿದೆ ಎಂದರು.

        ಸಹಾಯಕ ಪೊಲೀಸ್‌ ವರಿಷ್ಠಾಧಿಕಾರಿ ಅನುಚೇತ್‌, ಸರ್ಕಲ್‌ ಇನ್ಸ್‌ಪೆಕ್ಟರ್‌ ಭಾಸ್ಕರ ರೈ, ವೇಣೂರು ಎಸ್‌ಐ ಉಮೇಶ್‌ ಉಪ್ಪಳಿಗೆ, ಬೆಳ್ತಂಗಡಿ ಎಸ್‌ಐ ಯೋಗೀಶ್‌ ಕುಮಾರ್‌, ತಾ. ಪಂ. ಸದಸ್ಯ ಸುಧೀರ್‌ ಸುವರ್ಣ, ಅಳದಂಗಡಿ ಪಂಚಾಯತ್‌ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು ಮೊದಲಾದವರು ಇದ್ದರು.

        ಅಳದಂಗಡಿ ಸಮೀಪದ ಕೇಡೇಲು, ಮಾಳಿಗೆ ಮನೆ ವ್ಯಾಪ್ತಿಯ ಪ್ರದೇಶಕ್ಕೆ 1.5 ಲಕ್ಷ ರೂ. ವೆಚ್ಚದಲ್ಲಿ ಗ್ರಾಮೀಣ ರಸ್ತೆ ನಿರ್ಮಾಣ ಯೋಜನೆಯಡಿ ನಿರ್ಮಿಸಿದ ರಸ್ತೆಯ ಉದ್ಘಾಟನೆ, ಗ್ರಾಮಸ್ಥರಿಗೆ 105 ಎಕರೆ ಕೃಷಿ ಭೂಮಿ ನೀರಾವರಿ ಸೌಲಭ್ಯ ಕಲ್ಪಿಸುವ 1.5 ಲಕ್ಷ ರೂ.ಗಳಿಂದ 2 ಲಕ್ಷ ರೂ.ಗಳ ಯೋಜನೆಗೆ ಚಾಲನೆ ನೀಡಿ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಗ್ರಾಮಗಳ ಸಮಸ್ಯೆಯ ಅವಲೋಕನ, ಊರವರ ಜತೆಗೆ ಸಂವಾದ ನಡೆಸಿದರು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus