Sunday, May 26, 2013
Last Updated: 1:25:44 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಸಾಪ್ತಾಹಿಕ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
  • ಸರಕಾರಿ ಶಾಲೆಯ ಗಂಟೆ ಬಾರಿಸುತ್ತಿದೆ...
  • ಸರ್ಕಾರಿ ಶಾಲೆಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರ ಮಕ್ಕಳಿಗೆ ಮಾತ್ರ ಎಂಬಂತಾಗಿದೆ.

    • ಸುಮಂಗಲಾ | May 12, 2012

      ಜೂನ್‌ ತಿಂಗಳು ಹತ್ತಿರವಾದಂತೆ ನಗರಗಳ ಅಪ್ಪ, ಅಮ್ಮಂದಿರಿಗೆ ತಮ್ಮ ಚಿಣ್ಣರನ್ನು ಹತ್ತಿರದ ಯಾವ ಒಳ್ಳೆಯ ಶಾಲೆಗಳಿಗೆ ಸೇರಿಸುವುದು ಎಂಬ ಚಿಂತೆ. ಹಳ್ಳಿಗಳಲ್ಲಿಯೂ ಇಂಗ್ಲಿಷ್‌ ಶಾಲೆಗಳ ಮೋಹದಮಾಯೆ ಅಪ್ಪಅಮ್ಮಂದಿರನ್ನು ಆವರಿಸಿಬಿಟ್ಟಿದೆ. ಸರ್ಕಾರಿ ಶಾಲೆಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರ ಮಕ್ಕಳಿಗೆ ಮಾತ್ರ ಎಂಬಂತಾಗಿದೆ. ಹಾಗೆಂದು, ಖಾಸಗಿ ಶಾಲೆಗಳ ಪೈಪೋಟಿಯನ್ನು , ಇಂಗ್ಲಿಷ್‌ ಮಾಯೆಯನ್ನು ಎದುರಿಸಲು ಸರ್ಕಾರಿ ಶಾಲೆಗಳ ಶಿಕ್ಷಕರಾಗಲಿ ಶಿಕ್ಷಣ ಇಲಾಖೆಯಾಗಲಿ ಸಜ್ಜಾಗಿಲ್ಲ ಎಂದೇನಲ್ಲ. ಇಂದು ಸರ್ಕಾರಿ ಶಾಲೆಗಳಲ್ಲಿ ಎಲ್ಲ ಮಕ್ಕಳಿಗೆ ಗುಣಾತ್ಮಕ‌ ಶಿಕ್ಷಣ ನೀಡಲು ಇಲಾಖೆ ಮತ್ತು ಶಿಕ್ಷಕರು ಒಂದುಗೂಡಿ ಹಲವು ವಿನೂತನ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇದರ ಫ‌ಲವಾಗಿ ಸರ್ಕಾರಿ ಶಾಲೆಗಳ ಒಳ-ಹೊರಗಿನ ಚಿತ್ರಣ ಸಾಕಷ್ಟು ಬದಲಾಗಿರುವುದನ್ನು ಗಮನಿಸಬೇಕಾಗಿದೆ.

      ಅಂದು ಅರಸೀಕೆರೆ ದೊಡ್ಡೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪೋಷಕರು, ಅದರಲ್ಲಿಯೂ ಹೆಚ್ಚಿನವರು ಹೆಣ್ಣುಮಕ್ಕಳು ಸೇರಿದ್ದರು. ಯಾವಾಗಲೂ ಮಕ್ಕಳಿಗೆ ಸ್ಪರ್ಧೆ ನಡೆಸುವ ಅಲ್ಲಿಯ ಶಿಕ್ಷಕರು ಅಂದು ಅಮ್ಮಂದಿರಿಗೆ ಕಣ್ಣುಕಟ್ಟಿ , ಕೋಲಿನಿಂದ ಮಡಕೆ ಒಡೆಯುವ ಸ್ಪರ್ಧೆ, ಮ್ಯೂಸಿಕಲ್‌ ಚಯರ್‌ ಸ್ಪರ್ಧೆ ಏರ್ಪಡಿಸಿದ್ದರು. ಹೆಣ್ಣುಮಕ್ಕಳು ಭಾರೀ ಹುಮ್ಮಸ್ಸಿನಿಂದ ಭಾಗವಹಿಸಿದರೆ ನೋಡುತ್ತ ಕುಳಿತಿದ್ದ ಮಕ್ಕಳು ತಮ್ಮ ತಮ್ಮ ಅಮ್ಮಂದಿರಿಗೆ ಪ್ರೋತ್ಸಾಹಿಸುತ್ತ ಹುರ್ರೆà ಎನ್ನುತ್ತ ಕುಳಿತಿದ್ದರು. ಶಿಕ್ಷಕರು ಎಲ್ಲ ಬಿಟ್ಟು ಪೋಷಕರಿಗೆ ಯಾಕೆ ಸ್ಪರ್ಧೆ ಏರ್ಪಡಿಸಿದ್ದರು ಗೊತ್ತೆ? "ಮಕ್ಕಳ ಕಲಿಕೆ ವಿಚಾರ ಚರ್ಚಿಸೋಣ, ಬನ್ನಿ' ಎಂದರೆ ಶಾಲೆಯತ್ತ ಅಪ್ಪ, ಅಮ್ಮಂದಿರು ಸುಳಿಯುವುದೇ ಇಲ್ಲ, ಹೀಗಾಗಿ, ಅವರನ್ನು ಶಾಲೆಯತ್ತ ಸೆಳೆಯಲು ಸ್ಪರ್ಧೆ ಏರ್ಪಡಿಸಿ, ಸ್ಪರ್ಧೆಯಲ್ಲಿ ವಿಜೇತರಾದ ಅಮ್ಮಂದಿರಿಗೆ ಬಹುಮಾನ ನೀಡಿ, ನಂತರ ಮಕ್ಕಳ ಕಲಿಕೆ ಕುರಿತು ಚರ್ಚೆ ಆರಂಭಿಸಿದರು !

      ಪೋಷಕರು ಒಮ್ಮೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದ ನಂತರ ಮಕ್ಕಳು ಓದುತ್ತಾರೆಯೇ ಇಲ್ಲವೇ, ಶಾಲೆಗೆ ಸರಿಯಾಗಿ ಹೋಗುತ್ತಿದ್ದಾರೆಯೇ ಎಂದೆಲ್ಲ ನೋಡುವ ಗೋಜಿಗೇ ಹೋಗುವುದಿಲ್ಲ ಎನ್ನುವುದು ಹೆಚ್ಚಿನ ಶಿಕ್ಷಕರ ದೂರು. ಹಾಗೆಂದು, ಬರೀ ಪೋಷಕರನ್ನೇ ದೂರುತ್ತ ಕುಳಿತರೆ ಆಗುವುದಿಲ್ಲ ಎಂಬುದನ್ನು ಮನಗಂಡಿರುವ ಶಿಕ್ಷಕರೀಗ ಪೋಷಕರನ್ನು ಶಾಲೆಯತ್ತ ಸೆಳೆಯಲು, ಮಕ್ಕಳ ಕಲಿಕೆ ಕುರಿತು ಚರ್ಚಿಸಲು ವಿನೂತನ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅರಸೀಕೆರೆಯ ಸೋಮೇನಹಳ್ಳಿ ಶಾಲೆಯ ಮುಖ್ಯಶಿಕ್ಷಕಿ ಲೋಕೇಶಮ್ಮ ಪೋಷಕರಿಗೆ ಅವರ ಮಕ್ಕಳ ಹಸ್ತಾಕ್ಷರ ಗುರುತಿಸುವ ಸ್ಪರ್ಧೆ, ಪೋಂ ಟಿವಿ ಚಟುವಟಿಕೆ, ಬಣ್ಣದ ಕೋಲಿನ ಚಟುವಟಿಕೆ ಇತ್ಯಾದಿಗಳ ಮೂಲಕ ಪೋಷಕರನ್ನು ಶಾಲೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಭದ್ರಾವತಿಯ ಶಂಕರಘಟ್ಟ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಅಂಜಲಿ ಮಕ್ಕಳ ಸಭೆ ಮಾಡಿ, ಅವರ ಮೂಲಕ ಪೋಷಕರನ್ನು ಶಾಲೆಗೆ ಕರೆಸಿಕೊಂಡು, ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

      ಹೋಬಳಿ, ಪಂಚಾಯಿತಿ ಕೇಂದ್ರ ಗ್ರಾಮಗಳಲ್ಲಿಯೂ ಆರಂಭವಾಗುತ್ತಿರುವ ಖಾಸಗಿ ಶಾಲೆಗಳ ಹಾವಳಿಯಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಖಾಸಗಿ ಶಾಲೆಗಳ ಇಂಗ್ಲಿಷ್‌ ಮಾಧ್ಯಮದ ಭ್ರಮೆ ಎಷ್ಟರಮಟ್ಟಿಗೆ ಆವರಿಸಿದೆ ಎಂದರೆ ಫೀಸು ಕಟ್ಟುವುದು ಕಷ್ಟವಾಗಿದ್ದರೂ ಸಾಲ ಮಾಡಿಯಾದರೂ ಸರಿ, ಮಕ್ಕಳನ್ನು ಇಂಗ್ಲಿಷ್‌ ಶಾಲೆಗೆ ಸೇರಿಸುವ ಧಾವಂತದಲ್ಲಿದ್ದಾರೆ ಕೆಲ ಪೋಷಕರು. ಸರ್ಕಾರಿ ಶಾಲೆಗಳ ಶಿಕ್ಷಕರು ಇದನ್ನು ನೋಡಿ ಕೈಕಟ್ಟಿಕುಳಿತಿದ್ದಾರೆ ಎಂದೇನಲ್ಲ. "ಸರ್ಕಾರ ಖಾಸಗಿ ಇಂಗ್ಲಿಷ್‌ ಮಾಧ್ಯಮದ ಶಾಲೆಗಳನ್ನು ತೆರೆಯಲು ಯಾಕೆ ಅನುಮತಿ ನೀಡಬೇಕು' ಎಂದು ಪ್ರಶ್ನಿಸುತ್ತಲೇ ಖಾಸಗಿ ಶಾಲೆಗಳ ಪೈಪೋಟಿ ಎದುರಿಸಲು ತಮ್ಮದೇ ತಂತ್ರ ಬಳಸುತ್ತಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಸಮವಸ್ತ್ರ , ಪಠ್ಯಪುಸ್ತಕ, ಬಿಸಿಯೂಟ, ಗ್ರಂಥಾಲಯ, ಆಟದ ಮೈದಾನ ಹೀಗೆ ಏನೆಲ್ಲ ಸೌಲಭ್ಯಗಳು ಇವೆ, ಇಲ್ಲಿಯೂ ಗುಣಮಟ್ಟದ ಶಿಕ್ಷಣ ನೀಡಲು ತರಬೇತಿ ಹೊಂದಿದ ಶಿಕ್ಷಕರಿದ್ದಾರೆ ಎಂದು ಪೋಷಕರಿಗೆ ಮಾಹಿತಿ ಹಂಚಿಕೊಳ್ಳುವ ಪ್ರಯತ್ನವನ್ನು ಅನೇಕ ಕಡೆಗಳಲ್ಲಿ ಶಿಕ್ಷಕರು ಮಾಡುತ್ತಿದ್ದಾರೆ.

      ಬೇಸಿಗೆ ರಜೆ ಮುಗಿಯಲು ಬರುತ್ತಿದ್ದಂತೆ ಶಿಕ್ಷಕರು ಮತ್ತು ಎಸ್‌ಡಿಎಂಸಿ (ಶಾಲಾ ಮೇಲುಸ್ತುವಾರಿ ಸಮಿತಿ) ಯವರು ಸೇರಿ ಮನೆಮನೆಗೆ ಭೇಟಿ ನೀಡಿ, ಈ ಬಾರಿ ಅಂಗನವಾಡಿಯಿಂದ ಯಾವ ಮಕ್ಕಳು ಒಂದನೇ ತರಗತಿಗೆ ಸೇರುತ್ತಾರೆ ಎಂದು ಗುರುತಿಸಿ, ಆ ಮಕ್ಕಳನ್ನು ತಮ್ಮ ಶಾಲೆಗೇ ಸೇರಿಸುವಂತೆ ಮನವೊಲಿಸುತ್ತಿರುವುದಾಗಿ ಭದ್ರಾವತಿಯ ತಟ್ಟೆಹಳ್ಳಿಯ ಮುಖ್ಯಶಿಕ್ಷಕ ಚಂದ್ರಮೋಹನ್‌ ವಿವರಿಸುತ್ತಾರೆ.
      "ನಮ್ಮ ಎಚ್‌. ಎಂ. ಶಾಲಾ ನಾಯಕತ್ವ ತರಬೇತಿ ಕಾರ್ಯಕ್ರಮ ತಗಂಡ ಮೇಲೆ ನಮ್ಮ ಶಾಲೇಲಿ ಒಳ್ಳೆ ಗ್ರಂಥಾಲಯ ಆಗೈತೆ, ಮಕಿÛಗೆ ಓದಕ್ಕೆ ಕಾನ್ವೆಂಟಿಗಿಂತ್ಲೂ ಒಳ್ಳೆ ಅನುಕೂಲಗಳಿವೆ ಅಂತ ಮನಿಮನಿಗಿ ಹೋಗಿ, ಕರಪತ್ರ ಕೊಟ್ಟುಹೇಳ್ತಿದೀವಿ' ಎಂದು ತಟ್ಟೆಹಳ್ಳಿ ಶಾಲೆಯ ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ರುದ್ರೇಶ್‌ ಮತ್ತು ಇತರೆ ಸದಸ್ಯರು ಹೇಳುತ್ತಾರೆ. ಹಲವಾರು ಶಾಲೆಗಳಲ್ಲಿ ಹೀಗೆ ಕರಪತ್ರವನ್ನು ಹಂಚಿ, ಸರ್ಕಾರಿ ಶಾಲೆಯಲ್ಲಿ ಏನೆಲ್ಲ ಉತ್ತಮ ಸೌಲಭ್ಯಗಳು ಇವೆ ಎಂದು ಸಮುದಾಯಕ್ಕೆ ಹೇಳುವ ಪ್ರಯತ್ನ ನಡೆದಿದೆ.

      ಪೋಷಕರ ಇಂಗ್ಲಿಷ್‌ ವ್ಯಾಮೋಹಕ್ಕೆ ಹಲವು ಮುಖಗಳಿವೆ. ಇಂಗ್ಲಿಷ್‌ ಮಾಧ್ಯಮದಲ್ಲಿ ಓದಿದ್ರೆ ಕೆಲಸ ಸಿಗುತ್ತೆ, ಅಲ್ಲಿ ಮಕ್ಕಳು ಟೈ, ಸಾಕ್ಸ್‌ , ಶೂಸ್‌, ಬೆಲ್ಟ್ ಎಂದು ಶಿಸ್ತಾಗಿ ಕಾಣ್ತವೆ, ಪಟಪಟನೆ ಕಂಠಪಾಠ ಮಾಡಿದ ಉತ್ತರಗಳನ್ನು ಉದುರಿಸುತ್ತಾರೆ, ತರಗತಿಗೊಬ್ಬ ಶಿಕ್ಷಕಕರು ಇರ್ತಾರೆ ಹೀಗೆ. ಆದರೆ ತಾಲ್ಲೂಕು ಕೇಂದ್ರ, ಹೋಬಳಿ ಕೇಂದ್ರಗಳಲ್ಲಿರುವ ಚಿಕ್ಕ ಚಿಕ್ಕ ಕಾನ್ವೆಂಟ್‌ಗಳಲ್ಲಿ ಉತ್ತಮ ತರಬೇತಿ ಪಡೆದ ಶಿಕ್ಷಕರು ಇರುವುದಿಲ್ಲ, ಪಿಯುಸಿ ಅಥವಾ ಪದವಿ ಮುಗಿಸಿದವರು ಇರ್ತಾರೆ, ಹೊರಗಿನ ಥಳುಕಿಗೆ ಮಾರುಹೋಗುವ ಪೋಷಕರು ಇಂಥ ಖಾಸಗಿ ಶಾಲೆಗಳ ತರಗತಿಗಳ ಒಳಗೆ ಏನಿದೆ ಎಂದು ನೋಡುವ ಗೋಜಿಗೆ ಹೋಗುವುದಿಲ್ಲ.

      "ಕಾನ್ವೆಂಟ್‌ಗಳಲ್ಲಿ ತರಗತಿವಾರು ಶಿಕ್ಷಕರು ಇರುತ್ತಾರೆ. ಹಿರಿಯ ಪ್ರಾಥಮಿಕ ಶಾಲೆಗಳಿಗೂ ಹೀಗೆ ತರಗತಿವಾರು ಅಥವಾ ವಿಷಯವಾರು ಶಿಕ್ಷಕರನ್ನು ನೀಡಿದರೆ ಖಾಸಗಿ ಶಾಲೆಗಳನ್ನು ಮೀರಿಸುವ ರೀತಿಯಲ್ಲಿ ನಾವು ಗುಣಮಟ್ಟದ ಶಿಕ್ಷಣ ಕೊಡುತ್ತೇವೆ' ಎಂದು ತೀರ್ಥಹಳ್ಳಿಯ ಪತ್ರಕಟ್ಟೆ ಶಾಲೆಯ ನಾಗರಾಜ್‌ ವಿವರಿಸುತ್ತಾರೆ. ಹಾಗೆಂದು, ಶಿಕ್ಷಕರ ಕೊರತೆ ತುಂಬಿಕೊಳ್ಳಲು ಸ್ಥಳೀಯ ಹಂತದಲ್ಲಿ ಪ್ರಯತ್ನಗಳು ನಡೆದಿಲ್ಲ ಎಂದೇನಲ್ಲ. ಪತ್ರಕಟ್ಟೆ ಶಾಲೆಯಲ್ಲಿ ಶಾಲಾ ಮೇಲುಸ್ತುವಾರಿ ಸಮಿತಿಯವರು ಮತ್ತು ಶಿಕ್ಷಕರ ಪ್ರಯತ್ನದಿಂದ ಅದೇ ಊರಿನ ಬಿಎಡ್‌ ಪದವೀಧರೆ ಜ್ಯೋತಿ ಪ್ರತಿದಿನ ಕೆಲವು ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಭದ್ರಾವತಿಯ ಕಲ್ಲಿಹಾಳ್‌ ಶಾಲೆಯ ಶಿಕ್ಷಕರು ಮತ್ತು ಗ್ರಾ. ಪಂ. ಸದಸ್ಯರೊಬ್ಬರು ಸೇರಿ, ಇಂಗ್ಲಿಷ್‌ ಕಲಿಸಲು ಗೌರವಶಿಕ್ಷಕಿಯನ್ನು ನೇಮಿಸಿಕೊಂಡಿದ್ದು, ಗೌರವಧನವನ್ನು ಇವರೇ ಭರಿಸುತ್ತಿದ್ದಾರೆ.

      ಬೇಲೂರಿನ ಪ್ರಸಾದಿಹಳ್ಳಿಯ ಶಾಲೆಯ ಮುಖ್ಯ ಶಿಕ್ಷಕ ರೆಹಮತ್‌ ಪ್ರತಿಮಗುವಿನ ಎಲ್ಲ ಮಾಹಿತಿ ಇರುವಂತೆ ವಿಶೇಷ ಪ್ರಗತಿಪತ್ರ ಮುದ್ರಿಸಿ, ಪೋಷಕರು ಯಾವುದೇ ಸಮಯದಲ್ಲಿ ಬಂದು ಪರಿಶೀಲನೆ ಮಾಡುವ ವ್ಯವಸ್ಥೆ ಮಾಡಿದ್ದಾರೆ. ತಾಯಂದಿರು ಬಂದು ಬಿಸಿಯೂಟದ ರುಚಿ ನೋಡುವುದು ಮಾತ್ರವಲ್ಲ, ಆಗೀಗ ತರಕಾರಿ, ಕಾಳುಕಡ್ಡಿಗಳನ್ನೂ ತಂದುಕೊಡುತ್ತಿದ್ದಾರೆ. ಕೊಡಗು ಜಿಲ್ಲೆಯ ಗುಡ್ಡೆಹೊಸೂರು ಶಾಲೆಯ ಮುಖ್ಯಶಿಕ್ಷಕ ಸಣ್ಣಸ್ವಾಮಿಯವರು ಸಹಶಿಕ್ಷಕರು, ಶಾಲಾ ಮೇಲುಸ್ತುವಾರಿ ಸಮಿತಿ, ಊರಿನವರ ಸಹಭಾಗಿತ್ವದಲ್ಲಿ ಗ್ರಂಥಾಲಯ ಅಭಿವೃದ್ಧಿಪಡಿಸಿದ್ದಲ್ಲದೆ, ಮಕ್ಕಳಲ್ಲಿ ಸಾಹಿತ್ಯಕೃತಿಗಳನ್ನು ಓದುವ ಹವ್ಯಾಸ, ಒಗಟು, ಗಾದೆಗಳು ಸೂಕ್ತಿಗಳನ್ನು ಸಂಗ್ರಹಿಸುವ ಅಭ್ಯಾಸ ಬೆಳೆಸಿದ್ದಾರೆ. ಮಕ್ಕಳ ಸ್ವರಚಿತ ಕವನಗಳು, ಪುಟ್ಟ ಕಥೆಗಳು, ಮಕ್ಕಳೇ ಸಂಗ್ರಹಿಸಿದ ವಿವಿಧ ವಿಷಯಗಳ ಪೇಪರ್‌ ಕಟಿಂಗ್‌ಗಳು ಎಲ್ಲವನ್ನು ಪ್ಯಾನೆಲ್‌ಬೋರ್ಡ್‌ ನಲ್ಲಿ ಹಾಕಿಡುವ ವ್ಯವಸ್ಥೆ ಮಾಡಿದ್ದಾರೆ. ಅರಸೀಕೆರೆಯ ಕಲ್ಯಾಡಿ ಶಾಲೆಯ ಮುಖ್ಯ ಶಿಕ್ಷಕರಾದ ಬೀರಲಿಂಗಯ್ಯ ಮಾದರಿ ಎನ್ನಬಹುದಾದ ಗ್ರಂಥಾಲಯ ಅಭಿವೃದ್ಧಿಪಡಿಸಿದ್ದು, ಮಕ್ಕಳು ಮಾತ್ರವಲ್ಲದೇ ಊರಿನವರೂ ಪುಸ್ತಕಗಳನ್ನು ಓದಲು ಗ್ರಂಥಾಲಯಕ್ಕೆ ಬರುವಂತೆ ಪ್ರೇರೇಪಿಸಿದ್ದಾರೆ.
      ಮೊದಲೆಲ್ಲ ಮಕ್ಕಳು ಪುಸ್ತಕ ಹರಿಯುತ್ತಾರೆ ಎಂದು ವಾರಕ್ಕೊಮ್ಮೆ ಪುಸ್ತಕ ವಿತರಿಸಲೂ ಹಿಂದೆ ಮುಂದೆ ನೋಡುತ್ತಿದ್ದ ಶಿಕ್ಷಕರು ಈಗ ಪುಸ್ತಕ ಹರಿದರೂ ಅಡ್ಡಿಯಿಲ್ಲ, ನಮ್ಮ ಮಕ್ಕಳು ಓದಬೇಕು ಎಂದು ಬದಲಾಗಿದ್ದಾರೆ. ಅಷ್ಟೇ ಅಲ್ಲ, ಈಗ ಹೆಚ್ಚಿನ ಶಾಲೆಗಳಲ್ಲಿ ಮಕ್ಕಳೇ ತಮಗೆ ಬೇಕಿರುವ ಪುಸ್ತಕಗಳನ್ನು ಆಯ್ಕೆ ಮಾಡಿಕೊಂಡು, ಓದಿದ ನಂತರ ಅವರೇ ಸ್ವಸ್ಥಾನಕ್ಕೆ ಇಟ್ಟು, ಗ್ರಂಥಾಲಯದ ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ಮಕ್ಕಳಿಗೇ ವಹಿಸಿದ್ದಾರೆ. ಮೊದಲೆಲ್ಲ ಅರ್ಧ ಗಂಟೆಯಲ್ಲಿ ಮುಗಿಯುತ್ತಿದ್ದ ಶಾಲೆೆಯ ಪ್ರಾರ್ಥನಾ ಅವಧಿ ಈಗ ಒಂದು ಗಂಟೆಗೆ ವಿಸ್ತರಿಸಿದೆ. ಏಕೆಂದರೆ ಪ್ರಾರ್ಥನಾ ಅವಧಿಯಲ್ಲಿ ಪೇಪರ್‌ ಓದಿಸುವುದು, ಮಕ್ಕಳು ಓದಿದ ಪುಸ್ತಕಗಳ ಕಿರುಹಂಚಿಕೆ, ದಿನಕ್ಕೊಂದು ಪ್ರಶ್ನೆ , ಹೀಗೆ ಗ್ರಂಥಾಲಯದ ಪುಸ್ತಕಗಳ ಓದನ್ನು ಮಕ್ಕಳ ಕಲಿಕೆಗೆ ಕೊಂಡಿಯಾಗಿಸಿ, ಶಿಕ್ಷಕರು ಹತ್ತು ಹಲವು ಚಟುವಟಿಕೆಗಳನ್ನು ವಿನೂತನವಾಗಿ ಮಾಡಿಸುತ್ತಿದ್ದಾರೆ.

      ನಿಜ, ಹಲವು ಸರ್ಕಾರಿ ಶಾಲೆಗಳಲ್ಲಿ ಕಳೆದ ಶೈಕ್ಷಣಿಕ ವರ್ಷವೊಂದರಲ್ಲಿಯೇ ಸಾಕಷ್ಟು ಬದಲಾವಣೆಗಳು ಎದ್ದು ಕಾಣುವಂತಿವೆ. ಇದಕ್ಕೆ ಮುಖ್ಯ ಕಾರಣ, ಈ ಶಿಕ್ಷಕರು ಶಾಲಾನಾಯಕತ್ವ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ತರಬೇತಿ ಪಡೆದಿದ್ದು ಎನ್ನಬಹುದು. "ಸಹಶಿಕ್ಷಕರ, ಪೋಷಕರ ಕುರಿತು ನನ್ನ ನಂಬಿಕೆಗಳನ್ನು ಬದಲಿಸಿಕೊಂಡರೆ, ಅವರ ಸಹಭಾಗಿತ್ವ ಪಡೆಯಲು ಸಾಧ್ಯ. ವ್ಯವಸ್ಥೆಯ ಬಲಿಪಶು ಎಂದುಕೊಳ್ಳದೇ ಯಾವುದೇ ಸನ್ನಿವೇಶವಿರಲಿ, ಅದನ್ನು ಸವಾಲಿನಂತೆ ಸ್ವೀಕರಿಸಿ, ಸನ್ನಿವೇಶದ ನಾಯಕನಾಗಲು ಪ್ರಯತ್ನಿಸಬೇಕು' ಎನ್ನುವ ಭದ್ರಾವತಿಯ ಕಲ್ಲಿಹಾಳ್‌ ಶಾಲೆಯ ಮುಖ್ಯಶಿಕ್ಷಕ ಬಸವರಾಜಪ್ಪಬದಲಾವಣೆ ಎನ್ನುವುದು ನನ್ನಿಂದಲೇ ಆರಂಭಗೊಳ್ಳಬೇಕು ಎಂಬುದನ್ನು ಒತ್ತಿ ಹೇಳುತ್ತಾರೆ.

      ಶಾಲೆಗಳಲ್ಲಿ ತರಗತಿ ಕೋಣೆಯ ಕಲಿಕಾ-ಬೋಧನಾ ಪ್ರಕ್ರಿಯೆಯನ್ನು ಪ್ರಭಾವಿಸುವ ಹಲವು ಅಂಶಗಳಲ್ಲಿ ಮುಖ್ಯ ಶಿಕ್ಷಕರ ನಿರ್ವಹಣಾ ಸಾಮರ್ಥ್ಯ ಮತ್ತು ನಾಯಕತ್ವದ ಕೌಶಲ ಬಹಳ ಮುಖ್ಯವಾದ ಅಂಶಗಳು ಎಂಬುದನ್ನು ಹಲವು ಸಂಶೋಧನೆಗಳು ದೃಢಪಡಿಸಿವೆ. ಮುಖ್ಯಶಿಕ್ಷಕರಲ್ಲಿ ನಾಯಕತ್ವದ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಿ, ಆ ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ಧಿ ಸಾಧಿಸಲುಮತ್ತು ಗುಣಾತ್ಮಕ ಶಿಕ್ಷಣ ನೀಡಲು ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ, ಪಾಲಿಸಿ ಪ್ಲಾನಿಂಗ್‌ ಯುನಿಟ್‌ ಮತ್ತು ಅಜೀಂ ಪ್ರೇಮ್‌ಜಿ ಫೌಂಡೇಶನ್‌ ಹಾಗೂ ಐದು ಪ್ರಾದೇಶಿಕ ಸಂಪನ್ಮೂಲ ಕೇಂದ್ರಗಳ (ಇಫಿಲ್‌, ಸಿಲ್ಯಾಂಪ್ಸ್‌, ವಿಲೀಡ್‌, ವಿದ್ಯಾಪೋಷಕ್‌ ಮತ್ತು ಕೆ.ಎಸ್‌.ಟಿ.ಸಿ. ಸಂಸ್ಥೆಗಳು) ಸಹಯೋಗದಲ್ಲಿ ಶಾಲಾನಾಯಕತ್ವ ಅಭಿವೃದ್ಧಿ ಕಾರ್ಯಕ್ರಮವನ್ನು (ಎಸ್‌.ಎಲ್‌.ಡಿ.ಪಿ.) ಹಾಸನ, ಕೊಡಗು, ಶಿವಮೊಗ್ಗ ಮತ್ತು ಕೋಲಾರ ಜಿಲ್ಲೆಗಳ 7 ಶೈಕ್ಷಣಿಕ ಬ್ಲಾಕ್‌ಗಳಲ್ಲಿ ನಡೆಸಲಾಗಿರುವುದನ್ನು ಇಲ್ಲಿ ಉಲ್ಲೇಖೀಸಬೇಕಾಗಿದೆ. 15 ವಾರಗಳ ಈ ಕಾರ್ಯಕ್ರಮವು ತರಬೇತಿ, ಅನ್ವಯ ಮತ್ತು ಮಾರ್ಗದರ್ಶನ (ಟ್ರೆ„ನಿಂಗ್‌, ಅಪ್ಲಿಕೇಶನ್‌ ಮತ್ತು ಕೋಚಿಂಗ್‌) ಮಾದರಿಯಲ್ಲಿ ನಡೆದಿದ್ದು, ಏಳು ಬ್ಲಾಕ್‌ಗಳ ಸುಮಾರು 140 ಮುಖ್ಯ ಶಿಕ್ಷಕರು ತರಬೇತಿ ಪಡೆದ ನಂತರ ತಮ್ಮ ಶಾಲೆಗಳಲ್ಲಿ ಶಾಲಾಭಿವೃದ್ಧಿ ಉಪಕ್ರಮವನ್ನು ಅನುಷ್ಠಾನಗೊಳಿಸಿದ್ದಾರೆ.

      ಎಸ್‌.ಎಲ್‌.ಡಿ.ಪಿ. ಅಡಿಯಲ್ಲಿ ತರಬೇತಿ ಪಡೆದ ಮುಖ್ಯ ಶಿಕ್ಷಕರ ಶಾಲೆಗಳ ಭೌತಿಕ ಮತ್ತು ಬೌದ್ಧಿಕ ಪರಿಸರದಲ್ಲಿ ಸಾಕಷ್ಟು ಎದ್ದು ಕಾಣುವ ಬದಲಾವಣೆಗಳಾಗಿವೆ. ಶಾಲೆಗಳಲ್ಲಿ ಪೋಷಕರ ಸಕ್ರಿಯ ಭಾಗವಹಿಸುವಿಕೆ ಅಧಿಕಗೊಂಡಿದೆ, ತನ್ಮೂಲಕ ಶಾಲಾ ಚಟುವಟಿಕೆಗಳಲ್ಲಿ ಪಾರದರ್ಶಕತೆ ಇದೆ. ಸಂಪನ್ಮೂಲ ಕ್ರೋಢೀಕರಣದ ಮೂಲಕ ಶಾಲೆಯ ಮೂಲಸೌಕರ್ಯಗಳು ಇನ್ನಷ್ಟು ಉತ್ತಮಗೊಂಡಿದೆ, ಮಕ್ಕಳಿಗೆ ಅನುಕೂಲಕರ ಕಲಿಕಾ ವಾತಾವರಣ ನಿರ್ಮಾಣಗೊಂಡಿದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಎಲ್ಲ ಶಾಲೆಗಳ ಮುಖ್ಯಶಿಕ್ಷಕರ ದೃಷ್ಟಿಕೋನ, ಮನೋಭಾವದಲ್ಲಿ ಸಾಕಷ್ಟು ಬದಲಾಗಿದ್ದು, ಕೆಲವು ಕೌಶಲಗಳು ಮತ್ತು ಸಾಮರ್ಥ್ಯಗಳನ್ನು ಗಳಿಸಿಕೊಂಡು ಸಹಶಿಕ್ಷಕರು, ಪೋಷಕರು, ಎಸ್‌ಡಿಎಂಸಿಯವರು, ಗ್ರಾಮ ಪಂಚಾಯಿತಿ ಹೀಗೆ ಎಲ್ಲರ ಸಹಭಾಗಿತ್ವದಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ದಿಕ್ಕಿನಲ್ಲಿ ಹೊಸ ಆಲೋಚನೆಗಳಿಗೆ ತೆರೆದುಕೊಳ್ಳುತ್ತಿದ್ದಾರೆ. ನಿಧಾನವಾಗಿ ಸರ್ಕಾರಿ ಶಾಲೆಗಳಲ್ಲಿ ಬದಲಾವಣೆಯ ಹೊಸಗಾಳಿ ಬೀಸುತ್ತಿದೆ.

      ತನ್ನನ್ನು ಲೇಖಕನಾಗಿಸಿದ್ದು ಏನು ಎಂಬ ಪ್ರಶ್ನೆಗೆ ಉತ್ತರವೆಂಬಂತೆ ಯು. ಆರ್‌. ಅನಂತಮೂರ್ತಿ ಯವರು ರೂಪಕಾತ್ಮಕ ಎನ್ನಬಹುದಾದ ವಿವರಣೆಯೊಂದನ್ನು ನೀಡುತ್ತಾರೆ. ಸಂಪ್ರದಾಯಬದ್ಧ ವಾದ ಕುಟುಂಬವೊಂದರಲ್ಲಿ ಹುಟ್ಟಿದ್ದ ಅವರು ಶಾಲೆಗೆ ಹೋಗಿ ಹಿಂದಿರುಗುತ್ತಿದ್ದಾಗಿನ ಅನುಭವವದು.
      ವೇದಪಾಠಕ್ಕೆ ಹೋಗುವಾಗ ಬೇಕಿಲ್ಲದ ಅಂಗಿ ಅವರಿಗೆ ಶಾಲೆಗೆ ಹೋಗು ವುದಕ್ಕೆ ಬೇಕಿತ್ತು. ಆದರೆ, ಶಾಲೆಯಿಂದ ಹಿಂದಿರುಗಿದ ತತ್‌ಕ್ಷಣ ಅದನ್ನು ಮನೆಯ ಹೊರಾವ ರಣದ ಗೋಡೆಯಲ್ಲಿರುವ ಗೂಟಕ್ಕೆ ನೇತು ಹಾಕಿ ಸ್ನಾನ ಮುಗಿಸಿಕೊಂಡು ಮನೆಯೊಳಕ್ಕೆ ಹೋಗಬೇಕಿತ್ತು. ಕಾರಣ ಸರಳ. ಶಾಲೆಯೊಳಗೆ ಇದ್ದ ಅನ್ಯ ಹುಡುಗರೊಂದಿಗೆ ಒಡನಾಡಿ ಮನೆಗೆ ಬರುವ ಮಗ "ಸ್ನಾನ ಮಾಡಿಕೊಂಡು ಶುದ್ಧನಾಗಿ' ಒಳಬರಬೇಕೆಂಬುದು ಪಾಲಕರ ನಿರೀಕ್ಷೆ. ಬಾಲಕ ಅನಂತಮೂರ್ತಿ ಅದನ್ನು ಮಾಡಿಯೂ ಮಾಡುತ್ತಾರೆ.

      ಅದನ್ನೇ ಅವರು ಲೇಖಕನಾದ ಮೇಲೆ ಹಿಂದಿರುಗಿ ನೋಡುವಾಗ ಕಾಣಿಸುವ ಸತ್ಯವೇ ಬೇರೆ. ಇದನ್ನು ಅವರ ಮಾತಿನÇÉೇ ಹೇಳುವುದಾದರೆ "ಶಾಲೆಗೆ ಹೋಗಿ ಮೈಲಿಗೆಯಾಗುವ ಮೂಲಕ ನಾನು ಲೇಖಕನಾದೆ'.

      ಈ ಮಾತುಗಳಿಗೆ ಬೇರೆ ವಿವರಣೆಯ ಅಗತ್ಯವಿಲ್ಲ ಎನಿಸುತ್ತದೆ. ಅನಂತಮೂರ್ತಿ ಯವರು ಹೋಗುತ್ತಿದ್ದದ್ದು ಸರ್ಕಾರಿ ಶಾಲೆಗೆ. ಸರ್ಕಾರಿ ಶಾಲೆ ಎಂಬುದು ಯಾರು ಏನೇ ಹೇಳಿದರೂ ಅದಕ್ಕೆ ಸಮಾನತೆಯನ್ನು ಪ್ರತಿಪಾದಿಸಿ ಅನುಸರಿಸಲೇ ಬೇಕಾದ ಅನಿವಾರ್ಯತೆ ಇದೆ. ಏಕೆಂದರೆ, ಅದು ಸಂವಿಧಾನ ಬದ್ಧವಾಗಿ ಆಯ್ಕೆಯಾಗಿರುವ ಸರ್ಕಾರದ ನಿರ್ವಹಣೆಯಲ್ಲಿರುವ ಸಂಸ್ಥೆ. ಸಂವಿಧಾನ ಪ್ರತಿಪಾದಿಸುವ ಸಮಾನತೆಯನ್ನು ಕಾರ್ಯರೂಪಕ್ಕೆ ತರುವ ಕ್ರಿಯೆ ಅದರ ನೌಕರರ ಮಟ್ಟಿಗೆ ಮತ್ತು ಅವರ ಮೇಲಿರುವ ಸರ್ಕಾರದ ಮಟ್ಟಿಗೆ ಒಂದು ರೀತಿಯ ಬದ್ಧತೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆ ಎಂಬುದು ಅದರ ಕೆಟ್ಟ ಸ್ಥಿತಿಯಲ್ಲಿಯೂ ಒಂದು ಖಾಸಗಿ ಶಾಲೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸಮಾನತೆಯ ಮೌಲ್ಯವನ್ನು ಪ್ರತಿಪಾದಿಸುತ್ತದೆ ಮತ್ತು ಪ್ರತಿಬಿಂಬಿಸುತ್ತದೆ.

      ಒಂದು ವಿಪರ್ಯಾಸವೆಂದರೆ, ಕೇಂದ್ರೀಯ ವಿದ್ಯಾಲಯಗಳಿಗೆ ಮಕ್ಕಳನ್ನು ಸೇರಿಸಲು ಎÇÉಾ ಪ್ರತಿಷ್ಠಿತರೂ ಸಂಸದರ ಮನೆಗೆ ಎಡತಾಕುತ್ತಾರೆ. ಅವರಿಗಿರುವ ಎರಡು ಕೂಪನ್‌ಗಳಲ್ಲಿ ಒಂದು ತಮಗೆ ಸಿಗಲಿ ಎಂಬುದು ಅವರ ಅಭಿಲಾಷೆ. ಎÇÉಾ ಕೇಂದ್ರೀಯ ವಿದ್ಯಾಲಯಗಳೂ ಸರ್ಕಾರಿ ಶಾಲೆಗಳೇ ಅಲ್ಲವೆ? ನಮ್ಮ ಸರ್ಕಾರಿ ಶಾಲೆಗಳನ್ನೂ ಆ ಮಟ್ಟಕ್ಕೇರಿಸಬಹುದಲ್ಲ?

    Share your views-post your Comment below
    blog comments powered by Disqus
    ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
    picವಿಷು ಇಡೀ ದೇಶದ ಹಬ್ಬ. ಭಾರತೀಯ ಸಂಸ್ಕೃತಿ ಕೃಷಿಯೊಂದಿಗೆ ತಳುಕು ಹಾಕಿಕೊಂಡಿರುವುದರ ಸಂಕೇತವಾಗಿ ಈ ಹಬ್ಬ ಜನಮಾನಸದಲ್ಲಿ ಭದ್ರವಾಗಿ ನೆಲೆಯೂರಿದೆ...
    image
    • Copyright @ 2009 Udayavani.All rights reserved.
    • Designed & Hosted By 4cplus