Udayavani | May 13, 2012
ಬೆಂಗಳೂರು:ಮುಖ್ಯಮಂತ್ರಿ ಪಟ್ಟಕ್ಕಾಗಿ ರಾಜ್ಯ ಬಿಜೆಪಿಯಲ್ಲಿ ಬಿಕ್ಕಟ್ಟು ಉಲ್ಬಣಿಸಿ ಸಚಿವರು ದೆಹಲಿಯತ್ತ ಮುಖ ಮಾಡಿರುವಾಗ ಕೇಂದ್ರದ ಬರ ಅಧ್ಯಯನ ತಂಡ ಸೋಮವಾರ ಮತ್ತು ಮಂಗಳವಾರ ಬರಪೀಡಿತ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದೆ.
ಪರ್ವೆಶ್‌ಶರ್ಮಾ ನೇತೃತ್ವದಲ್ಲಿ 12 ಅಧಿಕಾರಿಗಳ ಕೇಂದ್ರದ ಅಧ್ಯಯನ ತಂಡವು ಸೋಮವಾರ ಮತ್ತು ಮಂಗಳವಾರದಂದು ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಯ ಬರಪೀಡಿತ ಪ್ರದೇಶಗಳಲ್ಲಿ ಪ್ರವಾಸ ಕೈಗೊಳ್ಳಲಿದೆ. ಆದರೆ, ಬರದ ಪ್ರಭಾವ ಹೆಚ್ಚಿರುವ ಉತ್ತರ ಕರ್ನಾಟಕದ ಜಿಲ್ಲೆಗಳತ್ತ ಈ ತಂಡ ಭೇಟಿ ನೀಡುವ ಸಾಧ್ಯತೆಯಿಲ್ಲ ಎನ್ನಲಾಗಿದೆ.
ನಾಲ್ಕು ಜಿಲ್ಲೆಗಳ ಪ್ರವಾಸದ ನಂತರ ಮೇ 16 ರಂದು ಬುಧವಾರ ಬೆಂಗಳೂರಿನಲ್ಲಿ ಮುಖ್ಯ ಕಾರ್ಯದರ್ಶಿ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ದೆಹಲಿಗೆ ತೆರಳಲಿದೆ.
ಮೇ 17 ಅಥವಾ 18 ರಂದು ಕೃಷಿ, ಹಣಕಾಸು ಹಾಗೂ ಗೃಹ ಸಚಿವಾಲಯಕ್ಕೆ ಕೇಂದ್ರದ ತಂಡ ರಾಜ್ಯದ ಪರಿಸ್ಥಿತಿ ಬಗ್ಗೆ ವರದಿ ನೀಡಲಿದ್ದು, ಆ ಮೂರೂ ಇಲಾಖೆಗಳು ಚರ್ಚಿಸಿ ಎಷ್ಟು ಪರಿಹಾರ ನೀಡಬೇಕು ಎಂಬ ಬಗ್ಗೆ ಒಮ್ಮತಕ್ಕೆ ಬರಲಿದ್ದು ಆ ನಂತರ ಪರಿಹಾರ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಈ ಮಧ್ಯೆ, ರಾಜ್ಯದಲ್ಲಿ ಕಳೆದ 10 ದಿನಗಳಿಂದ ಬರಪೀಡಿತ ತಾಲೂಕುಗಳ ಬಹುತೇಕ ಕಡೆ ಮಳೆಯಾಗಿರುವುದರಿಂದ ಕೇಂದ್ರ ಅಧ್ಯಯನ ತಂಡ ಈಗಿನ ಸ್ಥಿತಿಯ ಆಧಾರದ ಮೇಲೆ ವರದಿ ನೀಡಿದರೆ ಎಷ್ಟರ ಮಟ್ಟಿಗೆ ಪರಿಹಾರ ದೊರಕಬಹುದು ಎಂಬ ಪ್ರಶ್ನೆಯೂ ಇದೆ.
ಇದೇ ಕಾರಣಕ್ಕಾಗಿ, ಬರಪೀಡಿತ ಜಿಲ್ಲೆಗಳಲ್ಲಿ ಆಗಿರುವ ನಷ್ಟ, ಇದುವರೆಗೂ ಕೈಗೊಂಡಿರುವ ಪರಿಹಾರ ಕಾಮಗಾರಿ, ಆಗಿರುವ ವೆಚ್ಚ ಹಾಗೂ ಅಗತ್ಯವಿರುವ ಅನುದಾನದ ಬಗ್ಗೆ ಕೇಂದ್ರ ಅಧ್ಯಯನ ತಂಡದ ಮನದಟ್ಟು ಮಾಡಿಕೊಡಲು ಆಯಾ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಸೂಚಿಸಿದೆ.
ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬರ ಪೀಡಿತ ಜಿಲ್ಲೆಗಳ ಉಸ್ತುವಾರಿ ಸಚಿವರು ಬಿರುಸಿನ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವುದರಿಂದ ಕೇಂದ್ರ ತಂಡಕ್ಕೆ ಬರ ಪರಿಸ್ಥಿತಿ ಬಗ್ಗೆ ಸೂಕ್ತ ಮಾಹಿತಿ ನೀಡುವ ಹೊಣೆ ಸಂಪೂರ್ಣವಾಗಿ ಅಧಿಕಾರಿಗಳ ಮೇಲೆ ಬಿದ್ದಿದೆ.
ಆರು ತಿಂಗಳ ನಿರೀಕ್ಷೆ
ಈ ಹಿಂದೆ ರಾಜ್ಯ ಸರ್ಕಾರ 123 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ ಸಂದರ್ಭದಲ್ಲಿ ಕೇಂದ್ರ ಕೃಷಿ ಇಲಾಖೆ ಹಿರಿಯ ಅಧಿಕಾರಿ ವಿಜಯಕುಮಾರ್ ನೇತೃತ್ವದ ತಂಡ ರಾಜ್ಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಆ ಸಂದರ್ಭದಲ್ಲಿ ರಾಜ್ಯ ಸರ್ಕಾರವು 2605 ಕೋಟಿ ರೂ. ನೆರವು ನೀಡುವಂತೆ ಪತ್ರ ಬರೆದಿತ್ತು. ಆದರೆ, ಕೇಂದ್ರ ಸರ್ಕಾರವು 186.68 ಕೋಟಿ ರೂ. ಮಂಜೂರು ಮಾಡಿ ಆ ಪೈಕಿ 70.23 ಕೋಟಿ ರೂ. ಬಿಡುಗಡೆ ಮಾಡಿ ಉಳಿದ 116.45 ಕೋಟಿ ರೂ. ಪ್ರಕೃತಿ ವಿಕೋಪ ನಿರ್ವಹಣೆ ನಿಧಿಯಡಿ ಬಿಡುಗಡೆ ಮಾಡುವ ಭರವಸೆ ನೀಡಿತ್ತು.
ಆ ನಂತರ ರಾಜ್ಯದಲ್ಲಿ ಬರ ಮತ್ತಷ್ಟು ತೀವ್ರಗೊಂಡು 193 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ 5866 ಕೋಟಿ ರೂ. ಬೆಳೆ ನಷ್ಟದ ಅಂದಾಜು ಮಾಡಿತ್ತು. ಆ ನಂತರ ವಿಧಾನಸೌಧದಲ್ಲಿ ಸರ್ವಪಕ್ಷ ಸಭೆ ನಡೆಸಿ ಕೇಂದ್ರದಿಂದ 4500 ಕೋಟಿ ರೂ. ನೆರವು ಕೋರಲು ನಿರ್ಧರಿಸಿತ್ತು. ದೆಹಲಿಗೆ ಸರ್ವಪಕ್ಷ ನಿಯೋಗ ಕೊಂಡೊಯ್ದಿದ್ದ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು, ಮಧ್ಯಂತರ ಪರಿಹಾರವಾಗಿ 1500 ಕೋಟಿ ರೂ. ನೆರವು, 3 ಲಕ್ಷ ಟನ್ ಅಕ್ಕಿ, 50 ಸಾವಿರ ಟನ್ ಗೋದಿ ಬಿಡುಗಡೆಗೆ ಮನವಿ ಸಲ್ಲಿಸಿದ್ದರು. ಕೇಂದ್ರದ ಅಧ್ಯಯನ ತಂಡವನ್ನು ರಾಜ್ಯಕ್ಕೆ ಕಳುಹಿಸಿ ವರದಿ ಬಂದ ನಂತರ ನೆರವು ನೀಡುವ ಭರವಸೆ ಕೊಟ್ಟು ಬರಿಗೈಲಿ ಕಳುಹಿಸಲಾಗಿತ್ತು.
ಉ.ಕ. ದತ್ತ ?
*ಕೇಂದ್ರದಿಂದ ಆಗಮಿಸುತ್ತಿರುವ ಬರ ಅಧ್ಯಯನ ತಂಡ ಉತ್ತರ ಕರ್ನಾಟಕದ ಜಿಲ್ಲೆಗಳತ್ತ ಹೋಗುವುದು ಅನುಮಾನ. ಏಕೆಂದರೆ ರಾಜಧಾನಿ ಬೆಂಗಳೂರಿಗೆ ಹತ್ತಿರ ಇರುವ ನಾಲ್ಕು ಜಿಲ್ಲೆಗಳ ಪ್ರವಾಸದ ಕಾರ್ಯಕ್ರಮ ಮಾತ್ರ ನಿಗದಿಯಾಗಿದೆ. ಸೋಮವಾರ ರಾಜ್ಯಕ್ಕೆ ಬಂದ ನಂತರ ಆ ಬಗ್ಗೆ ತೀರ್ಮಾನಿಸಬಹುದು ಎಂಬುದು ಅಧಿಕಾರಿಗಳ ಸಮಜಾಯಿಷಿ.
*ಕೇಂದ್ರದಿಂದ ಬರ ಅಧ್ಯಯನಕ್ಕಾಗಿ ಆಗಮಿಸಲಿರುವ ತಂಡದ ಜತೆ ರಾಜ್ಯದ ತಂಡವೂ ಪ್ರವಾಸ ಕೈಗೊಳ್ಳಲಿದೆ. ಎರಡು ದಿನಗಳ ಪ್ರವಾಸದ ನಂತರ ಬೆಂಗಳೂರಿನಲ್ಲಿ ಸಭೆ ನಡೆಯಲಿದ್ದು ಆ ಸಭೆಯಲ್ಲಿಯೂ ಬರ ಪರಿಸ್ಥಿತಿ ಬಗ್ಗೆ ಕೇಂದ್ರದ ತಂಡಕ್ಕೆ ಸಂಪೂರ್ಣ ಮಾಹಿತಿ ನೀಡಲಾಗುವುದು -ಎಸ್.ವಿ. ರಂಗನಾಥ್, ಸರ್ಕಾರದ ಮುಖ್ಯ ಕಾರ್ಯದರ್ಶಿ
*ಕೇಂದ್ರ ಸರ್ಕಾರದಿಂದ ಎರಡು ತಂಡಗಳು ಅಧ್ಯಯನಕ್ಕಾಗಿ ಆಗಮಿಸಲಿದ್ದು ಒಂದು ತಂಡ ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಗೂ ಮತ್ತೂಂದು ತಂಡ ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ಬರಪೀಡಿತ ಪ್ರದೇಶಗಳಲ್ಲಿ ಎರಡು ದಿನ ಪ್ರವಾಸ ಕೈಗೊಳ್ಳಲಿದೆ. ಆಯಾ ಜಿಲ್ಲಾಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳು ಕೇಂದ್ರ ತಂಡದ ಜತೆಯಲ್ಲೇ ಇದ್ದು ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ಈಗಾಗಲೇ ಕೇಂದ್ರದ ತಂಡಕ್ಕೆ ವಾಸ್ತವ ಸ್ಥಿತಿ ಬಗ್ಗೆ ಮಾಹಿತಿ ನೀಡುವ ಸಂಬಂಧ ಸಿದ್ಧತೆ ಮಾಡಿಕೊಳ್ಳಲಾಗಿದೆ - ಕೆ. ಅಮರ ನಾರಾಯಣ, ಕಂದಾಯ ಇಲಾಖೆ, ಕಾರ್ಯದರ್ಶಿ.