ಬೆಂಗಳೂರು: ಕೆಲವು ಸಚಿವರು ಹಾಗೂ ಶಾಸಕರು ರಾಜಿನಾಮೆ ಪತ್ರ ನೀಡಿರುವುದನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.'ಮುಖ್ಯಮಂತ್ರಿ ಸದಾನಂದಗೌಡರು ಮಾಡಿರುವ ಅವಮಾನದಿಂದ ಬೇಸತ್ತು ಕೆಲವು ಸಚಿವರು ಹಾಗೂ ಶಾಸಕರು ನನಗೆ ರಾಜಿನಾಮೆ ಪತ್ರ ನೀಡಿದ್ದಾರೆ' ಎಂದು ಯಡಿಯೂರಪ್ಪ ತಿಳಿಸಿದ್ದಾರೆ.ಭಾನುವಾರ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಅಹವಾಲುಗಳನ್ನು ಆಲಿಸಲು ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಶಾಸಕರು ಒತ್ತಾಯಿಸುತ್ತಿದ್ದರೂ ಅದಕ್ಕೆ ಮುಖ್ಯಮಂತ್ರಿಗಳು ಆದ್ಯತೆ ನೀಡುವುದಕ್ಕೆ ಬೇಸರಗೊಂಡಿದ್ದಾರೆ. ಕಳೆದ ಎಂಟು ತಿಂಗಳಿಂದ ಶಾಸಕಾಂಗ ಪಕ್ಷದ ಸಭೆ ಕರೆದಿಲ್ಲ ಎಂದು ಹರಿಹಾಯ್ದರು.ತಮ್ಮ ಸಂಪುಟದ ಸಚಿವರ ವಿರುದ್ದ ಮುಖ್ಯಮಂತ್ರಿಗಳು ಪಕ್ಷದ ವರಿಷ್ಠರಿಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ದೂರು ನೀಡಿರುವುದು ಅವರಿಗೆ ನೋವು ತಂದಿದೆ. ಈ ಕಾರಣಕ್ಕಾಗಿಯೇ ಆ ಸಚಿವರು ರಾಜಿನಾಮೆ ನೀಡಿದ್ದಾರೆ ಎಂದರು.ತಾವೂ ರಾಜಿನಾಮೆ ನೀಡುವಿರಾ ಅಥವಾ ಬಿಜೆಪಿಯನ್ನೇ ತೊರೆಯುವಿರಾ ಎಂಬಿತ್ಯಾದಿ ಸುದ್ದಿಗಾರರ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಲು ಬಯಸದ ಯಡಿಯೂರಪ್ಪ, ಸೂಕ್ತ ಕಾಲದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ ಎಂದಷ್ಟೇ ಹೇಳಿದರು.