Udayavani | May 13, 2012
- ಯಡಿಯೂರಪ್ಪ ಕೈಕೊಟ್ಟರೆ ಜೆಡಿಎಸ್ ಜೊತೆ ಸರ್ಕಾರ?
- ಸಖ್ಯದ ಬಗ್ಗೆ ರಾಜಕೀಯ ವಲಯದಲ್ಲಿ ಗುಸು ಗುಸು
ಬೆಂಗಳೂರು: ಯಡಿಯೂರಪ್ಪ ಬಣದವರು ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆದರೆ ಸದಾನಂದಗೌಡರ ಬಣ ಜೆಡಿಎಸ್‌ನೊಂದಿಗೆ ಸಂಬಂಧ ಬೆಳೆಸಲಿದೆಯೇ?
ಇಂತಹದೊಂದು ಸಾಹಚರ್ಯ ಸಾಧ್ಯವೇ ಎಂಬ ಬಗ್ಗೆ ಇದೀಗ ರಾಜಕೀಯ ವಲಯದಲ್ಲಿ ಚರ್ಚೆ ಆರಂಭವಾಗಿದೆ. ಮೂಲಗಳ ಪ್ರಕಾರ, ಸಂದರ್ಭ ಬಂದಾಗ ಇರಲಿ ಎಂಬ ಕಾರಣಕ್ಕೆ ಜೆಡಿಎಸ್ ಹಾಗೂ ಬಿಜೆಪಿಯ ಸದಾನಂದಗೌಡರ ಬಣದ ನಡುವೆ ಸಂವಹನ ಆರಂಭವಾಗಿದೆ. ಆದರೆ, ಇದು ಸಖ್ಯದ ಸ್ವರೂಪ ಪಡೆಯುವ ಚರ್ಚೆ ನಡೆಸುವ ಮಟ್ಟಕ್ಕೆ ಇನ್ನೂ ಹೋಗಿಲ್ಲ.
ಏಕೆಂದರೆ, ಬಿಜೆಪಿ ಸರ್ಕಾರದ ಅಧಿಕಾರದ ಅವಧಿ ಕೆಲವೇ ತಿಂಗಳು ಉಳಿದಿರುವಾಗ ಇಂತಹದೊಂದು ಮೈತ್ರಿ ಮಾಡಿಕೊಂಡರೆ ಎರಡೂ ಪಾಳೆಯಕ್ಕೂ ಲಾಭಕ್ಕಿಂತ ನಷ್ಟವೇ ಹೆಚ್ಚು. ಹೀಗಾಗಿ ಸೊಳ್ಳೆ ತಿಂದು ಹೆಸರು ಕೆಡಿಸಿಕೊಳ್ಳುವ ಉಮೇದಿಯಲ್ಲಿ ಬಿಜೆಪಿಯಾಗಲೀ ಅಥವಾ ಜೆಡಿಎಸ್ ನಾಯಕರಾಗಲಿ ಇಲ್ಲ.
ಆದರೂ, ಸಂದರ್ಭ ಬಂದಾಗ ನೋಡೋಣ ಎಂಬ ಕಾರಣಕ್ಕೆ ತುಸು ಮಟ್ಟಿನ ಮಾತುಕತೆ ಆರಂಭವಾಗಿದೆ ಎನ್ನಲಾಗಿದೆ.
ಇಂತಹ ಚರ್ಚೆ ಆರಂಭವಾಗಿರುವುದು ಏಕೆ ಎಂದರೆ, ಯಡಿಯೂರಪ್ಪ ಬಣ ಬಿಜೆಪಿಯಿಂದ ಹೊರ ನಡೆದರೆ ಹೆಚ್ಚು ಎಂದರೆ 20ರಿಂದ 25 ಶಾಸಕರು ಅವರ ಜತೆ ಹೋಗಬಹುದು. ಆಗ ಜೆಡಿಎಸ್ ನೇರವಾಗಿಯೋ ಅಥವಾ ಪರೋಕ್ಷವಾಗಿಯೋ ಸರ್ಕಾರದ ಬೆಂಬಲಕ್ಕೆ ನಿಂತರೆ ಸದಾನಂದ ಗೌಡರ ಸರ್ಕಾರ ಉಳಿಯುತ್ತದೆ.
ಆದರೆ, ಇಂತಹ ಸರ್ಕಾರವನ್ನು ಉಳಿಸಿಕೊಳ್ಳುವುದರಿಂದ ಆಗುವ ಲಾಭವೇನು ಎಂಬ ಬಗ್ಗೆ ಎರಡು ಪಾಳೆಯಗಳಿಗೂ ಸಂಶಯವಿದೆ. ಅಲ್ಲದೆ, ಇಂತಹದೊಂದು ಸಂದರ್ಭ ನಿರ್ಮಾಣವಾದರೆ ಅದರಿಂದ ಬಿಜೆಪಿಯಿಂದ ಹೊರಹೋಗುವ ಯಡಿಯೂರಪ್ಪ ಅವರಿಗೆ ಲಾಭವಾಗುವ ಸಾಧ್ಯತೆ ಹೆಚ್ಚು. ತಮಗೆ ಮತ್ತೆ ವಿಶ್ವಾಸದ್ರೋಹ ಮಾಡಲಾಗಿದೆ ಎಂದು ಅನುಕಂಪದ ಗಾಳಿ ಎಬ್ಬಿಸಲು ಅವರು ರಾಜ್ಯಾದ್ಯಂತ ತಿರುಗಾಡಬಹುದು.
ಇಂತಹ ಸುವರ್ಣ ಅವಕಾಶವನ್ನು ಯಡಿಯೂರಪ್ಪ ಅವರಿಗೆ ಯಾವ ಕಾರಣಕ್ಕೂ ಕಲ್ಪಿಸುವ ಮನಸ್ಥಿತಿಯಲ್ಲಿ ಜೆಡಿಎಸ್ ನಾಯಕರು ಇಲ್ಲ. ಇದರ ಬದಲಾಗಿ ಸರ್ಕಾರ ಬಿದ್ದು ಚುನಾವಣೆ ಎದುರಾಗುವುದೇ ಜೆಡಿಎಸ್ ಪಾಲಿಗೆ ಒಳ್ಳೆಯದು ಎಂಬ ಮನಸ್ಥಿತಿ ಅದರ ನಾಯಕರದು.
ಇನ್ನು ಬಿಜೆಪಿಯ ಕೆಲವರಿಗೆ ಇಂತಹದೊಂದು ಮೈತ್ರಿ ನಿರ್ಮಾಣವಾದರೆ ತಾತ್ಕಾಲಿಕ ಲಾಭವಾಗಬಹುದು. ಆದರೆ, ಒಂದು ಪಕ್ಷವಾಗಿ ಬಿಜೆಪಿಗೆ ದೊಡ್ಡ ನಷ್ಟವಾಗುವ ಸಾಧ್ಯತೆಯಿದೆ. ರಾಜ್ಯಮಟ್ಟದ ಕೆಲ ನಾಯಕರು ಇಂತಹ ಪ್ರಯತ್ನಕ್ಕೆ ಕೈ ಹಾಕಿದ್ದರೂ ಇದಕ್ಕೆ ಪಕ್ಷದ ಹೈಕಮಾಂಡ್ ಸಹಕಾರ ನೀಡುವ ಸಾಧ್ಯತೆ ಅತ್ಯಂತ ಕಡಿಮೆ ಎನ್ನಲಾಗುತ್ತಿದೆ.
ಹೀಗಾಗಿ ಜೆಡಿಎಸ್ ಹಾಗೂ ಬಿಜೆಪಿ ನಡುವಿನ ಮರು ಮೈತ್ರಿ ಎಂಬ ವದಂತಿಗೆ ರೆಕ್ಕೆ ಪುಕ್ಕ ಮೂಡುವ ಮೊದಲೇ ಅಕಾಲ ಮರಣ ಸಂಭವಿಸುವ ಎಲ್ಲಾ ಸಾಧ್ಯತೆಯಿದೆ.
ಬಿಜೆಪಿಯವರು ತಮ್ಮ ಅನುಕೂಲಕ್ಕೆ ತಕ್ಕಂತೆ ಜೆಡಿಎಸ್ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಜೆಡಿಎಸ್ ಸದಾನಂದಗೌಡರಿಗೆ ಬೆಂಬಲ ಕೊಡುತ್ತದೆ ಎಂಬುದು ಶುದ್ಧ ಸುಳ್ಳು. - ವೈ.ಎಸ್.ವಿ. ದತ್ತ, ಜೆಡಿಎಸ್ ವಕ್ತಾರ