Friday, May 24, 2013
Last Updated: 1:47:42 PM IST
  • ನಾನೆಲ್ಲಿರುವೆ:
  • ಮುಖಪುಟ ರಾಜ್ಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ದೆವ್ವದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ
    • ಯಡಿಯೂರಪ್ಪ ವಾಗ್ಧಾಳಿ
    • ''''ಕುರ್ಚಿ ಹೋದಾಗ, ಜನರ ಸೇವೆ ಮರೆಯುವ ವ್ಯಕ್ತಿ ನಾನಲ್ಲ; ಚಿಕ್ಕ ವಯಸ್ಸಿನಿಂದ ಸಮಾಜದ ಕೆಲಸ ಮಾಡುತ್ತಿದ್ದೇನೆ.

      • Udayavani | May 13, 2012

        ಬೆಂಗಳೂರು : 'ತಪ್ಪು ಮಾಡಿ ಅನಂತರ ದೇವರಿಗೆ ಕಾಣಿಕೆ ಅರ್ಪಿಸುತ್ತಾರೆ' ಎಂದು ತಮ್ಮನ್ನು ಉದ್ದೇಶಿಸಿ ಪರೋಕ್ಷವಾಗಿ ವಾಗ್ಧಾಳಿ ಮಾಡಿದ್ದ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರ ಹೇಳಿಕೆಯನ್ನು 'ದೆವ್ವದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ' ಎನ್ನುವ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಈಗ ನೇರಾನೇರ ವಾಕ್ಸಮರಕ್ಕೆ ಮುಂದಾಗಿದ್ದಾರೆ.

        ನಗರದ ದೇವಸಂದ್ರದಲ್ಲಿ ಬಸವೇಶ್ವರ ಸೇವಾ ಸಮಿತಿ ಮತ್ತು ಅಕ್ಕನ ಬಳಗ ಮಹಿಳಾ ಸಮಾಜ ಸಂಯುಕ್ತವಾಗಿ ಭಾನುವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಹಾಗೂ ಶರಣ ಸಂಗಮ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೆಸರು ಪ್ರಸ್ತಾಪಿಸದಿದ್ದರೂ ನೇರವಾಗಿ ಸದಾನಂದಗೌಡರ ಮೇಲೆ ವಾಗ್ಧಾಳಿಗೆ ಇಳಿದರು.

        ವಿಶ್ವಾಸ ದ್ರೋಹ, ನಂಬಿಕೆ ದ್ರೋಹ ಮಾಡಿದ ವ್ಯಕ್ತಿ ಈಗ ಅಧಿಕಾರವಿದೆ, ಜನ ಸೇರಿದ್ದಾರೆ ಎಂದು ಉಪದೇಶ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

        'ಪ್ರಮುಖ ಕಾರ್ಯಕ್ರಮದಲ್ಲಿ ಕಿಕ್ಕಿರಿದು ತುಂಬಿದ್ದ ಜನರನ್ನು ನೋಡಿದಾಕ್ಷಣ ಬೇಕಾಬಿಟ್ಟಿ ಮಾತನಾಡುವುದಲ್ಲ; ತನ್ನ ಈ ಮಾತಿನಿಂದ ಏನು ಅಭಿಪ್ರಾಯ ಬರಬಹುದು ಎಂಬ ಅರಿವಿರಬೇಕು' ಎಂದು ಚಾಟಿ ಬೀಸಿದರು.

        ಈ ರೀತಿ ಸದಾನಂದಗೌಡರ ವಿರುದ್ಧ ಹರಿಹಾಯಲು ಕಾರಣವಾಗಿದ್ದು ಶನಿವಾರ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ನೀಡಿದ ಹೇಳಿಕೆ. ಅದರ ಬಗೆಗಿನ ಪತ್ರಿಕಾ ವರದಿಯಲ್ಲಿ ಯಥಾವತ್ತಾಗಿ ಓದಿದ ಯಡಿಯೂರಪ್ಪ ಈ ಹಿರಿಯ ಮುಖಂಡರೊಬ್ಬರು, ಸಮಾಜವು ಸ್ಥಾನಮಾನಗಳನ್ನು ನೀಡಿದಾಗ ಕರ್ತವ್ಯ ಮರೆಯುತ್ತಾರೆ. ಸ್ಥಾನಮಾನ ಹೋದಾಗ ಭಗ್ನಗೊಂಡು ತಮ್ಮದೇ ದಾರಿಯಲ್ಲಿ ಕಾರ್ಯಾಚರಣೆ ನಡೆಸುತ್ತಾರೆ ಎಂದು ಹೇಳಿದ್ದಾರೆ. ಆದರೆ, ಇದು ದೆವ್ವದ ಬಾಯಲ್ಲಿ ಭಗವದ್ಗೀತೆ ಕೇಳಿದಂತಿದೆ' ಎಂದರು.
        'ಪುಣ್ಯಕೋಟಿಯ ನಾಡಿದು. ಕಾಲ ಬಂದಾಗ ಜನ ತಕ್ಕ ಪಾಠ ಕಲಿಸಲಿದ್ದಾರೆ' ಎಂದು ಎಚ್ಚರಿಕೆ ನೀಡಿದ ಅವರು, 'ನನ್ನ ಆಡಳಿತದಲ್ಲಿ ಏನು ಮಾಡಿದ್ದೇನೆ? ಎಂಬುದು ಪ್ರತ್ಯಕ್ಷವಾಗಿ ಜನ ನೋಡುತ್ತಿದ್ದಾರೆ. ಬೆಂಗಳೂರು ಸೇರಿದಂತೆ ಎಲ್ಲ ತಾಲ್ಲೂಕುಗಳು ಹೇಗಿದ್ದವು ಮತ್ತು ಹೇಗಾಗಿವೆ ಎಂಬುದು ಜನಕ್ಕೆ ಗೊತ್ತಿದೆ. ಕೋಟ್ಯಂತರ ಜನ ಅದೇ ಪ್ರೀತಿ-ವಿಶ್ವಾಸ ನನ್ನ ಮೇಲೆ ಇಟ್ಟಿದ್ದಾರೆ. ನನಗೆ ಒಳ್ಳೆಯದಾಗಲಿ ಎಂದು ದೇವರ ಮುಂದೆ ದೀಪ ಹಚ್ಚುತ್ತಿದ್ದಾರೆ. ಹಾಗಾಗಿ, ನಾನು ವಿಚಲಿತನಾಗುವ ಪ್ರಶ್ನೆಯೇ ಇಲ್ಲ' ಎಂದು ಖಡ್ಡಕ್ಕಾಗಿ ಹೇಳಿದರು.

        'ಸೇವೆ ಮರೆಯುವ ವ್ಯಕ್ತಿಯಲ್ಲ'

        'ಕುರ್ಚಿ ಹೋದಾಗ, ಜನರ ಸೇವೆ ಮರೆಯುವ ವ್ಯಕ್ತಿ ನಾನಲ್ಲ; ಚಿಕ್ಕ ವಯಸ್ಸಿನಿಂದ ಸಮಾಜದ ಕೆಲಸ ಮಾಡುತ್ತಿದ್ದೇನೆ. ಮುಂದೆಯೂ ಮಾಡಿಕೊಂಡು ಹೋಗುತ್ತೇನೆ. ಕೋರ್ಟು-ಕಚೇರಿಗೆ ಓಡಾಡುವ ದಿನಗಳನ್ನು ಹೊರತುಪಡಿಸಿ, ರಾಜ್ಯಾದ್ಯಂತ ನಿರಂತರ ಪ್ರವಾಸ ಮಾಡುತ್ತೇನೆ. ಒಂದು ದಿನವೂ ಮನೆಯಲ್ಲಿ ಕೂರುವುದಿಲ್ಲ. ಸಣ್ಣ ಮತ್ತು ದೊಡ್ಡ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತೇನೆ' ಎಂದು ತಿಳಿಸಿದರು.

        'ಆದರೆ, ಯಾವುದೇ ಕಾರಣಕ್ಕೂ ಬೆನ್ನು ತೋರಿಸುವ ಪ್ರಶ್ನೆಯೇ ಇಲ್ಲ. ನನ್ನ ವಿರುದ್ದದ ಯಾವುದೇ ತನಿಖೆಯನ್ನು ಧೈರ್ಯದಿಂದ ಎದುರಿಸುತ್ತೇನೆ. ನ್ಯಾಯಾಲಯದ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ನ್ಯಾಯ ಸಿಗುತ್ತೆ. ಮತ್ತೆ ಆರೋಪ ಮುಕ್ತನಾಗಿ ನಿಮ್ಮ ಮುಂದೆ ನಿಲ್ಲುತ್ತೇನೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

        ಶರಣರಿಂದ ಶಾಂತಿಯ ಪಾಠ

        ನಂತರ ಮಾತನಾಡಿದ ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು, 'ಬಸವಣ್ಣ ಪ್ರಯೋಗ ಮಾಡಿದಾಗಲೂ ಆರೋಪಗಳು ಕೇಳಿಬಂದವು. ಆದರೆ, ಯಾವತ್ತೂ ಬಸವಣ್ಣ ಸಹನೆ ಕಳೆದುಕೊಳ್ಳಲಿಲ್ಲ. ಅದೇ ಹಂತದಲ್ಲಿ ನೀವೂ (ಯಡಿಯೂರಪ್ಪ) ಇದ್ದೀರಿ. ಬಸವಣ್ಣನ ಅನುಯಾಯಿಯಾಗಿದ್ದರಿಂದ ಯಾವುದೇ ಕಾರಣಕ್ಕೂ ಶಾಂತಿ-ಸಹನೆ ಕಳೆದುಕೊಳ್ಳಬೇಡಿ' ಎಂದು ಸಲಹೆ ಮಾಡಿದರು.

        'ಬಸವಣ್ಣ ಕೂಡ ಒಬ್ಬ ಮುತ್ಸದ್ದಿ ರಾಜಕಾರಣಿ. ಅವರೂ ಆರೋಪಗಳಿಂದ ಹೊರತಾಗಿರಲಿಲ್ಲ. ಹಾಗಂತಾ ಬಸವಣ್ಣನವರು ಕೆಂಡಾಮಂಡಲರಾದರೆ? ಇಲ್ಲ. ಬೈದವರನ್ನು ಬಂಧುಗಳು ಎಂದರು. ಬೈಗುಳಗಳು ದಾರ್ಶನಿಕನಿಗೆ ಸಲ್ಲುವ ಗೌರವ. ಸುಖ ಅನುಭವಗಳು ಶಾಶ್ವತವಲ್ಲ; ದುಃಖದ ಅನುಭವಗಳು ಪಾಠ ಕಲಿಸುತ್ತವೆ. ಅಧಿಕಾರ ಇದ್ದವರಿಗೆ ಮತ್ತು ಆದರ್ಶ ಮಾರ್ಗದಲ್ಲಿದ್ದವರಿಗೆ ಸಹಜವಾಗಿ ಆಪಾದನೆಗಳು ಬರುತ್ತವೆ. ಸಹನೆ ಕೆಣಕುವ ಸಂದರ್ಭಗಳು ಬಂದಾಗ, ಸಾವಧಾನಿ ಮತ್ತು ಸಹಿಷ್ಣುಗಳು ಎಂದು ತೋರಿಸಬೇಕು' ಎಂದು ಕಿವಿಮಾತು ಹೇಳಿದರು.

        ಈಗಿನ ಕಾಲಕ್ಕೆ ಅದು ಅರ್ಥವಾಗಬೇಕಲ್ಲಾ? ಎಂದು ಯಡಿಯೂರಪ್ಪನವರು ಪಾಠಕ್ಕೆ ತಡೆಯೊಡ್ಡಿದಾಗ, 'ಯಾರು ಅರ್ಥಮಾಡಿಕೊಳ್ಳದಿದ್ದರೂ ಪರವಾಗಿಲ್ಲ. ನಾವು ಸರಿಯಾಗಿ ಅರ್ಥಮಾಡಿಕೊಳ್ಳಬೇಕು' ಎಂದರು.

        'ವಿಧಿ ಯಾರನ್ನೂ ಬಿಟ್ಟಿಲ್ಲ'

        ಚಿಕ್ಕತೊಟ್ಲುಕೆರೆಯ ಅಟವಿ ಶಿವಲಿಂಗ ಸ್ವಾಮೀಜಿ, 'ವಿಧಿ ಯಾರನ್ನೂ ಬಿಡುವುದಿಲ್ಲ. ಆದ್ದರಿಂದ ಛಲದಂಕ ಮಲ್ಲ ಸಮಾಜದ ನಾಯಕ ಯಡಿಯೂರಪ್ಪ ಕೂಡ ವಿಲಚಿತರಾಗಬೇಕಿಲ್ಲ' ಎಂದರು.

        ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಬಿ.ಎಸ್‌. ಪರಮಶಿವಯ್ಯ, ಗುಬ್ಬಿ ತೋಟದಪ್ಪ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಎಚ್‌.ಕೆ. ಶಿವಾನಂದ, ಮೋನೋ ರೈಲಿನ ಸಿಇಒ ಎಂ.ಎಸ್‌. ನಾಗೇಂದ್ರ ಉಪಸ್ಥಿತರಿದ್ದರು. ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ವಿಶ್ವನಾಥಯ್ಯ ಸ್ವಾಗತಿಸಿದರು. ಉಪಾಧ್ಯಕ್ಷ ಗುರುಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus