ಹೊಸದಿಲ್ಲಿ: ಅಡುಗೆ ಅನಿಲಕ್ಕೆ ನೀಡುತ್ತಿರುವ ಸಬ್ಸಿಡಿಯನ್ನು ಹಂತ ಹಂತವಾಗಿ ರದ್ದುಪಡಿಸಲು ಕೇಂದ್ರ ಸರಕಾರ ತೀರ್ಮಾನಿಸಿದೆ. ಸಂಸತ್ ಸದಸ್ಯರು, ಶಾಸಕರು ಮತ್ತು ಎಲ್ಲ ಗಜೆಟೆಡ್ ಅಧಿಕಾರಿಗಳು ಬಳಸುವ ಅಡುಗೆ ಅನಿಲದ ಸಬ್ಸಿಡಿಯನ್ನು ರದ್ದುಗೊಳಿಸುವುದರೊಂದಿಗೆ ಈ ಪ್ರಕ್ರಿಯೆ ಪ್ರಾರಂವಾಗಲಿದೆ.ಎರಡನೇ ಹಂತದಲ್ಲಿ ಮಾಸಿಕ 50,000 ರೂ.ಗಿಂತ ಅಧಿಕ ಆದಾಯವಿರುವ ಪರಿವಾರಗಳ ಸಬ್ಸಿಡಿ ರದ್ದಾಗಲಿದೆ. ಸಬ್ಸಿಡಿ ರದ್ದಾದರೆ ಎಲ್‌ಪಿಜಿ ಸಿಲಿಂಡರ್‌ಗೆ ಪೂರ್ತಿ ಬೆಲೆ ಪಾವತಿಸಬೇಕಾಗುತ್ತದೆ. ಇದರ ಜತೆಗೆ ಸಂಸದರು, ಶಾಸಕರು ಮತ್ತು ಒಂದನೇ ವರ್ಗದ ಸರಕಾರಿ ಅಧಿಕಾರಿಗಳಿಗೆ 19 ಕಿ. ಗ್ರಾಂನ ಸಿಲಿಂಡರ್ ಬಳಸಲು ಅನುಮತಿ ಸಿಗಲಿದೆ. 19 ಕಿ. ಗ್ರಾಂ ಸಿಲಿಂಡರ್‌ಗೆ ಪ್ರಸ್ತುತ 1,200 ರೂ. ಬೆಲೆಯಿದೆ.ಅಡುಗೆ ಅನಿಲ ಬೆಲೆಯನ್ನು ನಿಯಂತ್ರಣ ಮುಕ್ತಗೊಳಿಸುವ ಮತ್ತು ಸರಕಾರದ ಸಬ್ಸಿಡಿ ಹೊರೆಯನ್ನು ಕಡಿಮೆಗೊಳಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲುದ್ದೇಶಿಸಲಾಗಿದೆ. ಎರಡು ಹಂತಗಳ ಎಲ್‌ಪಿಜಿ ಸಬ್ಸಿಡಿ ಕಡಿತದಿಂದ ಸರಕಾರದ ಬೊಕ್ಕಸಕ್ಕೆ ಸುಮಾರು 5,000 ಕೋ. ರೂ. ಸಬ್ಸಿಡಿ ಮೊತ್ತ ಉಳಿತಾಯವಾಗಲಿದೆ. 2011-12ರಲ್ಲಿ ಸರಕಾರ ಕೇವಲ ಅಡುಗೆ ಅನಿಲಕ್ಕೆ ಸುಮಾರು 25,000 ಕೋ. ರೂ. ಸಬ್ಸಿಡಿ ಕೊಟ್ಟಿದೆ.ಎಲ್‌ಪಿಜಿ ಸಬ್ಸಿಡಿ ರದ್ದು ಹೊಸ ಹಣಕಾಸು ವರ್ಷದಲ್ಲಿ ಖರ್ಚುವೆಚ್ಚಗಳಿಗೆ ಕಡಿವಾಣ ಹಾಕುವ ಸರಕಾರದ ಬದ್ಧತೆಯ ಬಲವಾದ ಸಂಕೇತ ಎನ್ನಲಾಗುತ್ತಿದೆ. 2012-13ನೇ ಹಣಕಾಸು ವರ್ಷದಲ್ಲಿ ನಿರೀಕ್ಷಿಸಲಾಗಿರುವ 5.13 ಲಕ್ಷ ಕೋ. ರೂ. ವಿತ್ತೀಯ ಕೊರತೆಯೆದುರು 5,000 ಕೋ. ರೂ. ಉಳಿತಾಯ ಜುಜುಬಿಯಂತೆ ಕಂಡರೂ ಸರಕಾರ ಕ್ರಮೇಣ ಎಲ್‌ಪಿಜಿಯನ್ನು ಪೂರ್ತಿಯಾಗಿ ನಿಯಂತ್ರಣ ಮುಕ್ತಗೊಳಿಸುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬಂದಿದೆ.ಕಠಿಣ ನಿರ್ಧಾರ ಕೈಗೊಳ್ಳಲು ತಾನು ಹಿಂದೇಟು ಹಾಕುವುದಿಲ್ಲ ಎನ್ನುವ ಸಂದೇಶವನ್ನು ಮಾರುಕಟ್ಟೆಗೆ ರವಾನಿಸುವುದರ ಜತೆಗೆ ಸಂಸದರು, ಶಾಸಕರು ಮತ್ತು ಗಜೆಟೆಡ್ ಅಧಿಕಾರಿಗಳ ಗ್ಯಾಸ್ ಸಬ್ಸಿಡಿಯನ್ನು ಮಾತ್ರ ಕಡಿತಗೊಳಿಸುವ ಮೂಲಕ ತಾನು ದೇಶದ ಜನಸಾಮಾನ್ಯರು ಮತ್ತು ಬಡವರ ಪರವಾಗಿ ಇದ್ದೇನೆ ಎಂದು ಸಾಬೀತುಪಡಿಸಲು ಸರಕಾರ ಈ ಕ್ರಮ ಕೈಗೊಂಡಿದೆ.ಸಬ್ಸಿಡಿ ವ್ಯವಸ್ಥೆಯ ದುರುಪಯೋಗವಾಗುತ್ತಿರುವುದನ್ನು ತಡೆಯುವುದು ಸರಕಾರದ ಈ ನಿರ್ಧಾರದ ಹಿಂದಿನ ಮುಖ್ಯ ಆಶಯ. ಸಬ್ಸಿಡಿ ರದ್ದು ಪಡಿಸುವ ವಿಚಾರವಾಗಿ ಹಣಕಾಸು ಸಚಿವಾಲಯ ಪೆಟ್ರೋಲಿಯಂ ಸಚಿವಾಲಯದ ಜತೆಗೆ ಮಾತುಕತೆ ನಡೆಸುತ್ತಿದೆ.ದೇಶದಲ್ಲಿ ಒಟ್ಟಾರೆ 12.5 ಕೋಟಿ ಗೃಹ ಬಳಕೆಯ ಎಲ್‌ಪಿಜಿ ಸಂಪರ್ಕಗಳಿವೆ ಹಾಗೂ ಪ್ರತಿ ಮನೆಯಲ್ಲಿ ವಾರ್ಷಿಕವಾಗಿ ತಲಾ 8 ಸಿಲಿಂಡರ್‌ಗಳು ಬಳಕೆಯಾಗುತ್ತವೆ ಎನ್ನುವುದು ಹಣಕಾಸು ಸಚಿವಾಲಯದ ಲೆಕ್ಕಾಚಾರ.