ಹೊಸದಿಲ್ಲಿ: ಮಣ್ಣಿನ ಫಲವತ್ತತೆ ಹಾಗೂ ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ರಸಗೊಬ್ಬರಗಳ ಬಳಕೆಯನ್ನು ಕಡಿಮೆಗೊಳಿಸುವ ಪ್ರಯತ್ನವಾಗಿ ಕೇಂದ್ರ ಸರಕಾರ, ಇವುಗಳ ಮೇಲಣ ಸಬ್ಸಿಡಿಯಲ್ಲಿ ಕಡಿತಗೊಳಿಸಲು ಚಿಂತನೆ ನಡೆಸಿದೆ.ರಾಸಾಯನಿಕ ಗೊಬ್ಬರಗಳಿಗೆ ನೀಡಲಾಗುತ್ತಿರುವ ಸಬ್ಸಿಡಿಯ ಹಣವನ್ನು ಸಾವಯವ ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಾವಯವ ಮತ್ತು ಹಸಿರು ಗೊಬ್ಬರಗಳಿಗಾಗಿ ವಿನಿಯೋಗಿಸಲು ಸರಕಾರ ನಿರ್ಧರಿಸಿದೆ ಎಂದು ಕೃಷಿ ಸಚಿವ ಶರದ್ ಪವಾರ್ ಲೋಕಸಭೆಗೆ ತಿಳಿಸಿದರು.ಪ್ರಥಮ ಹಸಿರು ಕ್ರಾಂತಿಯ ಸಂದರ್ಭದಲ್ಲಿ ರಸಗೊಬ್ಬರಗಳ ಬಳಕೆಯಿಂದ ದೇಶದ ಆಹಾರ ಉತ್ಪಾದನಾ ಪ್ರಮಾಣದಲ್ಲಿ ಶೇಕಡಾ 50ರಷ್ಟು ವೃದ್ಧಿಯಾಯಿತು. ಆದರೆ ವರ್ಷಗಳುರುಳಿದಂತೆಯೇ ಆಹಾರ ಉತ್ಪಾದನಾ ಪ್ರಮಾಣದಲ್ಲಿ ಭಾರೀ ಇಳಿಕೆ ಕಂಡುಬರುತ್ತಿದ್ದು, ಸಮತೋಲಿತ ಗೊಬ್ಬರಗಳು ಇಂದಿನ ಅಗತ್ಯವಾಗಿದೆ. ದೇಶದ ರೈತರು ಯೂರಿಯಾವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುತ್ತಿದ್ದು, ಇದು ಉತ್ಪಾದನಾ ಪ್ರಮಾಣದ ಮೇಲೆ ಪ್ರಭಾವ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಸರಕಾರ, ತನ್ನ ಸಬ್ಸಿಡಿ ನೀತಿಯಲ್ಲಿ ಬದಲಾವಣೆ ತರಲು ಚಿಂತನೆ ನಡೆಸಿದೆ ಎಂದವರು ಹೇಳಿದರು.ಸಮತೋಲಿತ ಗೊಬ್ಬರಗಳಿಗೆ ಹೆಚ್ಚಿನ ಸಬ್ಸಿಡಿ ನೀಡಲು ಉದ್ದೇಶಿಸಲಾಗಿದ್ದು, ಈ ನಿಟ್ಟಿನಲ್ಲಿ ಸಂಸತ್‌ನ ಸಹಕಾರ ಅತ್ಯಗತ್ಯವಾಗಿದೆ. ಪಂಜಾಬ್, ಹರಿಯಾಣ, ಉತ್ತರಪ್ರದೇಶದ ಪಶ್ಚಿಮ ಭಾಗಗಳಲ್ಲಿ ರಸಗೊಬ್ಬರಗಳ ಅತಿಯಾದ ಬಳಕೆಯಿಂದಾಗಿ ಭತ್ತವನ್ನು ಬೆಳೆಯಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪ್ರದೇಶಗಳಲ್ಲಿ ದ್ವಿದಳ ಧಾನ್ಯ, ತೈಲಬೀಜಗಳು ಅಥವಾ ಗೋಧಿಯನ್ನು ಬೆಳೆಯಲು ರೈತರಿಗೆ ಸರಕಾರ ಉತ್ತೇಜನ ನೀಡಲಿದೆ. ಪೂರ್ವ ಭಾರತದಲ್ಲಿ ಭತ್ತವನ್ನು ಬೆಳೆಯಲಾಗುತ್ತಿದೆ ಎಂದು ಪವಾರ್ ಪ್ರಶ್ನೋತ್ತರ ಅವಧಿಯಲ್ಲಿ ತಿಳಿಸಿದರು.ದೇಶದ ಸಮಗ್ರ ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಣ್ಣಿನ ಫಲವತ್ತತೆ ವೃದ್ಧಿಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಿದೆ. ಜೈವಿಕ, ಸಾವಯವ ಹಾಗೂ ಹಸಿರು ಗೊಬ್ಬರಗಳಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ದೇಶದ ಕೃಷಿ ಕ್ಷೇತ್ರವನ್ನು ಮತ್ತೂಮ್ಮೆ ಉತ್ತುಂಗಕ್ಕೆ ಕೊಂಡೊಯ್ಯುವ ದಿಸೆಯಲ್ಲಿ ಸರಕಾರ ಕಾರ್ಯೋನ್ಮುಖವಾಗಿದೆ ಎಂದು ಶರದ್ ಪವಾರ್ ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು. ಹಣ್ಣು ಹಾಗೂ ತರಕಾರಿಗಳ ತ್ಯಾಜ್ಯಗಳಿಂದ ಸಾವಯವ ಗೊಬ್ಬರಗಳ ಉತ್ಪಾದನೆಗೆ ಸರಕಾರ ಹಣಕಾಸಿನ ನೆರವು ನೀಡಲಿದೆ ಎಂದೂ ಸಚಿವರು ತಿಳಿಸಿದರು.