ಪುತ್ತೂರು : ರಾಜ್ಯ ಸರಕಾರದ ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರರಿಗೆ ಇತರ ಜಿಲ್ಲೆಗಳಲ್ಲಿ ಕಾಮಗಾರಿಯ ಬಿಲ್ ಪಾವತಿಯಾಗಿದೆಯೋ? ಅಥವಾ ಇಲ್ಲವೋ? ಗೊತ್ತಿಲ್ಲ. ಮುಖ್ಯಮಂತ್ರಿಗಳ ತವರು ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಮಾತ್ರ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರಿಗೆ ಸರಕಾರ ಈ ಬಾರಿ ನಯಾಪೈಸೆ ಬಿಲ್ ಪಾವತಿಸಿಲ್ಲ.ಜಿಲ್ಲೆಯ ಗುತ್ತಿಗೆದಾರರಿಗೆ ಬರಬೇಕಾದ ಒಟ್ಟು ಮೊತ್ತ ಕೇವಲ 30 ಕೋಟಿ ರೂ. ! ರಾಜ್ಯ ಸರಕಾರ ಉಳಿಯುತ್ತದೋ? ಉರುಳುತ್ತದೋ? ಎಂಬ ಪ್ರಶ್ನೆಗಿಂತಲೂ ಗುತ್ತಿಗೆದಾರರು ಮುಂದಿನ ವರ್ಷ ಯಾವುದೇ ಕಾಮಗಾರಿಗಳನ್ನು ನಡೆಸಲು ಅವರಿಗೆ ಆರ್ಥಿಕ ಸಂಕಷ್ಟ ಎದುರಾಗಲಿದೆ. ಹಣ ಕೊಟ್ಟರೂ ಕೊಡದಿದ್ದರೂ ಈ ಬಾರಿ ವಹಿಸಿಕೊಂಡ ಕಾಮಗಾರಿಗಳನ್ನು ಗುತ್ತಿಗೆದಾರರು ಮಳೆಯ ಉಪಟಳದ ನಡುವೆಯೂ ಪೂರ್ಣಗೊಳಿಸುತ್ತಿದ್ದಾರೆ.ಗುತ್ತಿಗೆದಾರರಿಗೆ ಬಿಲ್ ಪಾವತಿಸಲು ಸರಕಾರದ ಖಜಾನೆಯಲ್ಲಿ ಹಣ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ! ಯಾಕೆಂದರೆ ರಾಜ್ಯದ ಮುಖ್ಯಮಂತ್ರಿಗಳೇ ಹಣಕಾಸು ಪರಿಸ್ಥಿತಿ ಉತ್ತಮವಾಗಿದೆ; ಸಂಪನ್ಮೂಲಗಳ ಸಂಗ್ರಹಕ್ಕೆ ಯಾವುದೇ ತೊಡಕು ಇಲ್ಲ ಎಂದು ಬಜೆಟ್ ಅನಂತರದ ಸಾರ್ವಜನಿಕ ಸಭೆಗಳಲ್ಲಿ ಹೇಳುತ್ತಿದ್ದಾರೆ. ಹಾಗಾದರೆ ಗುತ್ತಿಗೆದಾರರಿಗೆ ಬಿಲ್ ಪಾವತಿ ಯಾಕಾಗಿಲ್ಲ.ಮುಖ್ಯಮಂತ್ರಿಗಳನ್ನು ಈಗಾಗಲೇ ಲೋಕೋಪಯೋಗಿ ಇಲಾಖಾ ಗುತ್ತಿಗೆದಾರರು ಭೇಟಿ ಮಾಡಿ ತಮ್ಮ ಸಂಕಷ್ಟಗಳನ್ನು ಹೇಳಿಕೊಂಡಿದ್ದಾರೆ. ಹಣ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಆದರೆ ಇಲ್ಲಿಯ ತನಕ ಬಾಕಿ ಬಿಲ್ ಪಾವತಿಗೆ ಸರಕಾರದಿಂದ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಸರಕಾರದ ಈ ಕ್ರಮ ಮುಂದಿನ ಸಾಲಿನಲ್ಲಿ ಯಾವುದೇ ಕಾಮಗಾರಿಗಳಿಗೆ ಟೆಂಡರ್ ಹಾಕಲು ಗುತ್ತಿಗೆದಾರರು ಮುಂದೆ ಬರುವ ಸಾಧ್ಯತೆಗಳಿಲ್ಲ.ಗುತ್ತಿಗೆದಾರರ ಬಿಲ್ಲು ಬಾಕಿಯ ಹಿಂದೆ ರಾಜ್ಯ ಸರಕಾರದಲ್ಲಿನ ಭಿನ್ನಮತ ಕೂಡಾ ಪರೋಕ್ಷ ಕಾರಣವಾಗಿದೆ. ರಾಜ್ಯದ ಹಣಕಾಸು ಖಾತೆ ಮುಖ್ಯಮಂತ್ರಿಗಳ ಕೈಯಲ್ಲಿದ್ದರೆ, ಲೋಕೋಪಯೋಗಿ ಖಾತೆ ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿರುವ ಸಿ.ಎಂ. ಉದಾಸಿ ಅವರ ಕೈಯಲ್ಲಿದೆ. ಮುಖ್ಯಮಂತ್ರಿಗಳ ಯಾವುದೇ ಸೂಚನೆಯನ್ನು ಲೋಕೋಪಯೋಗಿ ಸಚಿವರು ಪಾಲಿಸುತ್ತಿಲ್ಲ ಎಂದು ಗುತ್ತಿಗೆದಾರರು ದೂರಿಕೊಂಡಿದ್ದಾರೆ.