ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಲ್ಲಿ ಎಡವಿದರೆ?ಉಡುಪಿ: ಉಡುಪಿ - ಮಣಿಪಾಲ ಮತ್ತು ಸುತ್ತಲಿನ ಕೆಲವು ಪ್ರದೇಶಗಳಲ್ಲಿ ಕುಡಿಯುವ ನೀರಿನ ಅಭಾವ ಸ್ಥಿತಿ ಗುರುವಾರವೂ ಹಾಗೆಯೇ ಮುಂದುವರೆದಿತ್ತು. ಹೇಳಿಕೊಳ್ಳುವಂತಹ ಚೇತರಿಕೆ ಆಗಿಲ್ಲ. ಸ್ವರ್ಣೆಯಲ್ಲಿ ಅಳಿದುಳಿದ ನೀರನ್ನು ಎತ್ತಲು ಪ್ರಯತ್ನಗಳು ಮುಂದುವರೆದಿರುವುದು ಬಿಟ್ಟರೆ ಉಳಿದಂತೆ ಮಳೆಗಾಗಿ ಆಕಾಶ ನೋಡುವ ಕೆಲಸ ಮಾತ್ರ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.ಏಕಾಏಕಿ ಕಾಡಿದ ಸಮಸ್ಯೆಯೇ?ಕಳೆದ ರವಿವಾರದವರೆಗೆ ಉಡುಪಿ ನಗರ, ಮಣಿಪಾಲ ಮತ್ತು ಸುತ್ತಲಿನ ಹಲವು ಪ್ರದೇಶಗಳಲ್ಲೂ ನೀರಿನ ಸರಬರಾಜು ಉತ್ತಮವಾಗಿಯೇ ಇತ್ತು. ಇದಕ್ಕೂ ಒಂದು ತಿಂಗಳ ಹಿಂದೆ ಮಂಗಳೂರಿನ ಕೆಲವೆಡೆ ನೀರಿನ ಅಭಾವ ತಲೆದೋರಿದಾಗ ಉಡುಪಿಯ ಜನ ವಿಚಲಿತಗೊಂಡಿರಲಿಲ್ಲ. ಯಾಕೆಂದರೆ ಅವರಿಗೆ ಇತ್ತೀಚಿನ ವರ್ಷಗಳಲ್ಲಿ ನೀರಿನ ಕೊರತೆ ಕಾಡಿರಲಿಲ್ಲ. ಅದಕ್ಕೆ ಸರಿಯಾಗಿ ಆಡಳಿತ ವರ್ಗ ಕೂಡ 'ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ' ಎಂದು ಹೇಳಿತ್ತು. ಆದರೆ ಯಾವಾಗ ಸ್ವರ್ಣೆಯಲ್ಲಿ ನೀರಿನ ಹರಿವು ಬಹುತೇಕ ನಿಂತುಹೋಗಿ ಪೈಪ್‌ಗ್ಳು ಒಣಗುವ ಸ್ಥಿತಿಗೆ ಬಂದವೋ ಆಗಲೇ ನೀರಿನ 'ಬಿಸಿ' ಅನುಭವಕ್ಕೆ ಬಂದದ್ದು.ಎಲ್ಲರಿಗೂ ನೀರು ಕೊಟ್ಟು...ಸ್ವರ್ಣಾ ಯೋಜನೆಯಿಂದಾಗಿ ಯಥೇತ್ಛ ಎನ್ನುವಷ್ಟು ನೀರು ಪಡೆಯುತ್ತಿದ್ದ ಉಡುಪಿ ತನಗೆ ಮಿಕ್ಕುಳಿದ ನೀರನ್ನು ಪಕ್ಕದ ಗ್ರಾಮಪಂಚಾಯತ್‌ಗಳಿಗೂ ನೀಡುತ್ತಿತ್ತು. ನಗರದ ನಿವಾಸಿಗಳಿಗೆ 24 ಗಂಟೆ ನೀರು ನೀಡಿದ್ದೂ ಉಂಟು. ಸಾರ್ವಜನಿಕರು ಕೂಡ ಯಾವುದೇ ಅಂಜಿಕೆ, ಕಾಳಜಿ ಇಲ್ಲದೆ ನೀರನ್ನು ಧಾರಾಳವಾಗಿ ಬಳಸಿದರು. ನಗರದಿಂದ 15-20 ಕಿ.ಮೀ.ದೂರದಲ್ಲಿ ಹರಿಯುವ ಸ್ವರ್ಣೆಯ ಒಡಲು ಬರಿದಾಗುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದಿರಲಿಲ್ಲ. ಈಗ ಅಳಿದುಳಿದ ನೀರನ್ನು ಪಂಪ್ ಮಾಡಬೇಕಾಗಿದೆ.ನೀರಿಲ್ಲದ ಬದುಕುನೀರಿಲ್ಲದಿದ್ದರೆ ಹೇಗೆ ಕಷ್ಟಪಡಬೇಕೆಂಬ ಪಾಠ ಇಲ್ಲಿನ ಕೆಲವು ಪ್ರದೇಶಗಳ ಜನರಿಗಾಗಿದೆ. ಗುರುವಾರದಂದು ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುವ ಕೆಲಸ ಹಲವೆಡೆ ನಡೆದಿದೆ. ಸಂಘ ಸಂಸ್ಥೆಗಳು ಕೂಡ ನೀರು ಪೂರೈಕೆಯಲ್ಲಿ ಕೈಜೋಡಿಸುತ್ತಿವೆ. ಹೆಚ್ಚುವರಿ ಹಣ ತೆತ್ತು ನೀರು ಪಡೆಯುವ ಸ್ಥಿತಿಯೂ ಹಲವೆಡೆ ಇದೆ. ನಗರದೊಳಗಿನ ಕೆಲವು ಬಾವಿ ನೀರುಗಳು ಕುಡಿಯಲು ಯೋಗ್ಯವಾಗಿಲ್ಲದ ಕಾರಣ ಇಂತಹ ಬಾವಿ ಇದ್ದವರೂ ಕೂಡ ಕುಡಿಯುವ ನೀರಿಗೆ ಟ್ಯಾಂಕರ್ ಅಥವಾ ನಗರಸಭೆ ನೀರನ್ನೇ ಅವಲಂಬಿಸುವಂತಾಗಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಸತಿ ಸಂಕೀರ್ಣ, ವಸತಿ ಬಡವಾಣೆಗಳಿಗೆ ಟ್ಯಾಂಕರ್ ನೀರು ಏನೂ ಸಾಲದು. ಹೊಟೇಲ್, ಆಸ್ಪತ್ರೆಗಳಿಗೆ ನೀರಿನ ಪೂರೈಕೆ ಸಮರ್ಪಕವಾಗುತ್ತಿಲ್ಲವಾದ್ದರಿಂದ ಇದು ಸಾರ್ವಜನಿಕರ ಮೇಲೆ ಪ್ರಭಾವ ಬೀರುತ್ತಿದೆ.
ಡಾ. ವಿ. ಸ್. ಆಚಾರ್ಯ ಅವರ ಪರಿಶ್ರಮ ದಿಂದ ಉಡುಪಿಗೆ ಸ್ವರ್ಣ ನದಿಯ ನೀರು ಬರಲು ಸಾಧ್ಯವಾಯಿತು. ಇಂದು ಅವರಿಲ್ಲದ ಉಡುಪಿಗೆ, ಬರಿದಾದ ಸ್ವರ್ಣ ನದಿಯ ಮೂಕ ಶೋಕದ ಸಂಕೇತವೇನೋ?