Saturday, May 25, 2013
Last Updated: 8:34:44 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಅಂಕಣ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಪ್ರಾಮಾಣಿಕ ಅಧಿಕಾರಿಗಳ ರಕ್ಷಣೆ ಸರಕಾರದ ಜವಾಬ್ದಾರಿ
    • ಕನ್ನಡ ನಾಡಲ್ಲೂ ಗೂಂಡಾರಾಜ್‌?
      • Udayavani | May 17, 2012

        ರಾಜಕಾರಣಿಗಳ ಭದ್ರತೆಗೆ ಮೊದಲ ಆದ್ಯತೆ ನೀಡುವ ನಮ್ಮ ಸರ್ಕಾರಗಳು ದಕ್ಷ ಅಧಿಕಾರಿಗಳು ಹಾಗೂ ಜನಸಾಮಾನ್ಯರ ಭದ್ರತೆಗೆ ಕೊನೆಯ ಆದ್ಯತೆ ನೀಡುತ್ತವೆ. ಸರ್ಕಾರಿ ವ್ಯವಸ್ಥೆಯೊಳಗೆ ಪ್ರಾಮಾಣಿಕರು ಅಮೂಲ್ಯ ಆಸ್ತಿ. ಅವರಿಗೆ ರಕ್ಷಣೆ ಬೇಕು. ಅದನ್ನು ಸರ್ಕಾರವೇ ನೀಡಬೇಕು.

        ಈ ಹಿಂದೆ ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್‌ ಸರಕಾರವಿದ್ದಾಗ ಸಮಾಜಘಾತುಕರನ್ನು ಮೆರೆಸುತ್ತಿದ್ದ ರೀತಿ ನೋಡಿ ಮಾಧ್ಯಮಗಳು ಆ ರಾಜ್ಯಕ್ಕೆ ಗೂಂಡಾರಾಜ್‌ ಎಂಬ ಬಿರುದು ನೀಡಿದ್ದವು. ಅದೇ ವೇಳೆಯಲ್ಲಿ ಬಿಹಾರದಲ್ಲಿ ಲಾಲು ಪ್ರಸಾದ್‌ ಆಳ್ವಿಕೆಗೂ ಆ ಹೆಸರಿತ್ತು. ಮಧ್ಯಪ್ರದೇಶದಲ್ಲಿ ಚಂಬಲ್‌ ಕಣಿವೆಯ ಡಕಾಯಿತರ ಉಪಟಳ ಮಿತಿಮೀರಿದಾಗ ಅದನ್ನೂ ಗೂಂಡಾ ಆಳ್ವಿಕೆ ಎಂದೇ ಹೇಳಲಾಗುತ್ತಿತ್ತು.
        ಕರ್ನಾಟಕದಲ್ಲೂ ಈಗ ಕರ್ತವ್ಯನಿರತ ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ರಾಷ್ಟ್ರೀಯ ಸುದ್ದಿವಾಹಿನಿಗಳು ಹೆಚ್ಚುಕಮ್ಮಿ ಇದೇ ರೀತಿ ಬಿಂಬಿಸುವ ಪ್ರಯತ್ನ ಮಾಡುತ್ತಿವೆ. ನಿಜ, ಇದು ಮಾಧ್ಯಮಗಳ ತಪ್ಪಲ್ಲ. ದಕ್ಷ ಅಧಿಕಾರಿಗಳಿಗೆ ಭದ್ರತೆ ನೀಡದೆ ಇರುವುದು ಸರ್ಕಾರದ್ದೇ ತಪ್ಪು.

        ಇತ್ತೀಚೆಗಷ್ಟೇ ದಾಂಡೇಲಿಯಲ್ಲಿ ಅರಣ್ಯಾಧಿಕಾರಿಯನ್ನು ಕುಡುಕ ಉಡಾಳರು ಹತ್ಯೆಗೈದರು. ಕಾಳಿ ನದಿಯಲ್ಲಿ ಮೊಸಳೆಗಳಿಗೆ ಆಹಾರ ಎಸೆದು ಮೋಜು ಮಾಡುತ್ತಿದ್ದವರನ್ನು ತಡೆಯಲು ಹೋದ ತಪ್ಪಿಗೆ ದಕ್ಷ ಅಧಿಕಾರಿ ಎಸಿಎಫ್ ಮದನ್‌ ನಾಯ್ಕ ಜೀವ ತೆರಬೇಕಾಯಿತು. ಮೊನ್ನೆ ಬೆಂಗಳೂರಿನಲ್ಲಿ ರಾಜ್ಯ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ಉಪ ನಿರ್ದೇಶಕ ಎಸ್‌.ಪಿ.ಮಹಾಂತೇಶ್‌ ಮೇಲೆ ಮಾರಣಾಂತಿಕ ಹಲ್ಲೆ ನಡೆಯಿತು. ಕೋ ಆಪರೇಟಿವ್‌ ಸೊಸೈಟಿಯೊಂದರ ಲೆಕ್ಕ ಪರಿಶೋಧನೆ ಮುಗಿಸಿ ಮನೆಗೆ ಮರಳುತ್ತಿದ್ದಾಗ ಈ ಹಲ್ಲೆ ನಡೆಸಲಾಯಿತು. ಹಲ್ಲೆ ನಡೆಸಿದವರು ಯಾರು ಎಂಬುದು ತಿಳಿದಿಲ್ಲವಾದರೂ, ಕೋ ಆಪರೇಟಿವ್‌ ಸೊಸೈಟಿಗಳಲ್ಲಿ ಬಹಳ ಹಿಂದಿನಿಂದಲೂ ನಡೆಯುತ್ತಿದೆ ಎನ್ನಲಾದ ಬ್ರಹ್ಮಾಂಡ ಭ್ರಷ್ಟಾಚಾರದ ಜೊತೆ ಇದನ್ನು ತಾಳೆ ಹಾಕಿ ನೋಡಲೇಬೇಕಾಗುತ್ತದೆ.
        ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ತಡೆಯಲು ಹೋದ ಐಎಎಸ್‌ ಅಧಿಕಾರಿಯೊಬ್ಬರ ಮೇಲೆ ಟ್ರಾಕ್ಟರ್‌ ಹರಿಸಿ ಅವರನ್ನು ಕೊಂದಿದ್ದು, ಅದಕ್ಕೂ ಕೆಲ ವರ್ಷಗಳ ಹಿಂದೆ ಉತ್ತರ ಪ್ರದೇಶದಲ್ಲೇ ತೈಲ ಮಾಫಿಯಾಕ್ಕೆ ಕಡಿವಾಣ ಹಾಕಲು ಹೋದ ಕೋಲಾರ ಮೂಲದ ಅಧಿಕಾರಿ ಮಂಜುನಾಥ್‌ರನ್ನು ಹತ್ಯೆಗೈದಿದ್ದನ್ನು ಕೂಡ ಇಲ್ಲಿ ನೆನಪಿಸಿಕೊಳ್ಳಬೇಕು.

        ದಕ್ಷ ಅಧಿಕಾರಿಗಳಿಗೆ ಎರಡು ರೀತಿಯಲ್ಲಿ ಕಂಟಕಗಳು ಬಂದೆರಗುತ್ತವೆ. ವ್ಯವಸ್ಥೆಯೊಳಗಿನ ಭ್ರಷ್ಟಾಚಾರವನ್ನು ಬಯಲಿಗೆಳೆದು ಆ ವ್ಯವಸ್ಥೆಯೊಳಗೇ ಇರುವ ಭ್ರಷ್ಟ ಗೂಂಡಾಗಳಿಂದ ಎದುರಿಸುವ ಅಪಾಯ ಮೊದಲನೆಯದು. ಮತ್ತೂಂದು, ವ್ಯವಸ್ಥೆಯ ಹೊರಗಿರುವ ಭೂಗತ ಅಥವಾ ಸಮಾಜಘಾತುಕ ಶಕ್ತಿಗಳಿಂದ ಎದುರಿಸುವ ಅಪಾಯ. ಹದಗೆಡುತ್ತಿರುವ ಸಾಮಾಜಿಕ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡಲು ಶ್ರಮಿಸುವ ಕರ್ತವ್ಯನಿಷ್ಠರೇ ಈ ಎರಡೂ ಸಂದರ್ಭಗಳಲ್ಲಿ ನಷ್ಟ ಅನುಭವಿಸುತ್ತಾರೆಂಬುದು ಮುಖ್ಯ.
        ರಾಜಕಾರಣಿಗಳ ಭದ್ರತೆಗೆ ಮೊದಲ ಆದ್ಯತೆ ನೀಡುವ ನಮ್ಮ ಸರ್ಕಾರಗಳು ದಕ್ಷ ಅಧಿಕಾರಿಗಳು ಹಾಗೂ ಜನಸಾಮಾನ್ಯರ ಭದ್ರತೆಗೆ ಕೊನೆಯ ಆದ್ಯತೆ ನೀಡುತ್ತವೆ. ಗೃಹ ಮಂತ್ರಿಗಳು ಏನೇ ಸಮರ್ಥನೆ ನೀಡಿದರೂ ಈ ವ್ಯವಸ್ಥೆ ಕೆಲಸ ಮಾಡುವುದೇ ಹೀಗೆ. ಅದನ್ನು ಬದಲಿಸುವುದು ಪುನಃ ಇದೇ ರಾಜಕೀಯ ವ್ಯವಸ್ಥೆಯೊಳಗಿನ ಪಟ್ಟಭದ್ರರ ಮರ್ಜಿಯಲ್ಲೇ ಇರುತ್ತದೆಯೆಂಬುದು ದುರ್ದೈವ.

        ಎಲ್ಲಾ ರಂಗದಲ್ಲೂ ಹಣಕ್ಕೆ ಮಾತ್ರ ಪ್ರಾಮುಖ್ಯತೆ ನೀಡುವ ಕೆಟ್ಟ ಪದ್ಧತಿ ರೂಢಿಗೆ ಬಂದಿರುವ ಈ ದಿನಗಳಲ್ಲಿ ದೇಶದ ಒಳಿತಿಗೆಂದು ನಿಸ್ವಾರ್ಥ ಹಾಗೂ ಪ್ರಾಮಾಣಿಕ ಸೇವೆಗೆ ಬದ್ಧರಾಗಿರುವ ದಕ್ಷ ಅಧಿಕಾರಿ ವರ್ಗಕ್ಕೆ ಅಪಾಯ ಇದ್ದಿದ್ದೇ. ಸರ್ಕಾರ ಇವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಹೇಳಿದರೆ, ದಕ್ಷರು ಯಾರು ಅದಕ್ಷರು ಯಾರು ಎಂಬುದನ್ನು ಪ್ರತ್ಯೇಕಿಸುವ ಮಾನದಂಡ ಯಾವುದು ಎಂಬ ಪ್ರಶ್ನೆ ಏಳುತ್ತದೆ. ಆದರೆ, ಸರ್ಕಾರಿ ವಲಯದಲ್ಲಿ ಅನಧಿಕೃತವಾಗಿಯಾದರೂ ದಕ್ಷ ಅಧಿಕಾರಿಗಳ ಪಟ್ಟಿಯೊಂದಿರುತ್ತದೆ. ಅದು ಮಂತ್ರಿಗಳಿಗೂ, ಪೊಲೀಸ್‌ ಮುಖ್ಯಸ್ಥರಿಗೂ ಚೆನ್ನಾಗಿ ತಿಳಿದಿರುತ್ತದೆ. ಹೀಗಾಗಿ ಪ್ರಾಣಾಪಾಯ ಎದುರಿಸುತ್ತಿರುವ ಅಧಿಕಾರಿಗಳಿಗೆ ರಕ್ಷಣೆ ಒದಗಿಸಬೇಕು ಎಂದು ನಿರ್ಧರಿಸಿದರೆ ಅದೇನೂ ಕಷ್ಟದ ಕೆಲಸವಲ್ಲ. ಅನಗತ್ಯವಾಗಿ ರಾಜಕಾರಣಿಗಳು ಹಾಗೂ ಪೊಲೀಸ್‌ ಇಲಾಖೆಯಲ್ಲಿನ ಉನ್ನತ ಅಧಿಕಾರಿಗಳ ಸೇವೆಗೆ ನಿಯೋಜಿಸಿರುವ ಸಿಬ್ಬಂದಿಯನ್ನು ಕಡಿತಗೊಳಿಸಬೇಕಾಗುತ್ತದೆ ಅಷ್ಟೆ.
        ಸರ್ಕಾರಿ ವ್ಯವಸ್ಥೆಯೊಳಗೆ ಪ್ರಾಮಾಣಿಕರು ಅಮೂಲ್ಯ ಆಸ್ತಿ. ಆ ಸಂತತಿ ಅಳಿವಿನಂಚಿನಲ್ಲಿದೆ. ಅದನ್ನು ಉಳಿಸಿಕೊಳ್ಳಲು ಹುಲಿ ಸಂರಕ್ಷಣೆ ಯೋಜನೆಯಂತಹ ಬೃಹತ್‌ ಕಾರ್ಯಕ್ರಮವನ್ನೇ ಹಮ್ಮಿಕೊಳ್ಳಬೇಕಾದೀತು !


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus