Saturday, May 25, 2013
Last Updated: 9:23:04 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಆರೋಗ್ಯವಾಣಿ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಸಿಜೊಫ್ರೇನಿಯಾ
    • ಸಿಜೊಫ್ರೇನಿಯಾ.

      • ಡಾ| ಸುಪ್ರಿಯಾ ಹೆಗ್ಡೆ, ಮನೋರೋಗ ಚಿಕಿತ್ಸಾ ವಿಭಾಗ | May 22, 2012

        ಸಿಜೊಫ್ರೇನಿಯಾ ಒಂದು ಮಾನಸಿಕ ಕಾಯಿಲೆಯಾಗಿದ್ದು, ಅದರ ಪ್ರಮುಖ ಲಕ್ಷಣಗಳೆಂದರೆ - ಕಿವಿಯಲ್ಲಿ ವಿಚಿತ್ರ ಧ್ವನಿಗಳು ಕೇಳಿಸುವ ಭ್ರಮೆ, ವಿಚಿತ್ರ ಭಾÅಂತಿಗಳು ಅಥವಾ ಸುಸಂಬದ್ಧವಲ್ಲದ ಮಾತು -ಯೋಚನೆ ಮತ್ತು ಇವೆಲ್ಲದರ ಪರಿಣಾಮವಾಗಿ ಕಂಡು ಬರುವ ಸಾಮಾಜಿಕ - ವೃತ್ತಿ ಸಂಬಂಧಿ
        ವೈಕಲ್ಯಗಳು. ಹೆಚ್ಚಾಗಿ ಈ ಲಕ್ಷಣಗಳು ಎಳೆಯ ವಯಸ್ಸಿನಲ್ಲಿ ಕಂಡುಬಂದು, ಸುಮಾರು 0.3-0.7% ಮಂದಿಯನ್ನು ಜೀವನದಾದ್ಯಂತ ಕಾಡುತ್ತವೆ. ವಿಶ್ವದಾದ್ಯಂತ ಸುಮಾರು 5.1 ಕೋಟಿ ಮಂದಿ ಸಿಜೊಫ್ರೇನಿಯಾದಿಂದ ಬಳಲುತ್ತಿದ್ದು, ಭಾರತವೊಂದರಲ್ಲೆ ಅಂತಹವರ ಸಂಖ್ಯೆ 70-80 ಲಕ್ಷಗಳಷ್ಟಿದೆ. ರೋಗಿಯ ವರ್ತನೆಗಳು ಮತ್ತು ಅವರು ವರದಿ ಮಾಡುವ ತೊಂದರೆಯ ವಿವರಗಳನ್ನಾಧರಿಸಿ, ಈ ರೋಗವನ್ನು ಪತ್ತೆ  ಮಾಡಬೇಕಾಗುತ್ತದೆ. ಹದಿಹರೆಯ ಸಿಜೊಫ್ರೇನಿಯಾ ಹೆಚ್ಚಾಗಿ ಕಾಣಿಸಿಕೊಳ್ಳುವ ಅವಧಿ
        ಈ ಅವಧಿಯು ಎಳೆಯರಲ್ಲಿ ಸಾಮಾಜಿಕವಾಗಿ, ವೃತ್ತಿಪರವಾಗಿ ಬೆಳೆಯುವಲ್ಲಿ ಮಹತ್ವದ ಅವಧಿಯೂ ಹೌದು.

        ಲಕ್ಷಣಗಳು

        ಸಿಜೊಫ್ರೇನಿಯಾ ಪತ್ತೆ ಆಗಿರುವ ವ್ಯಕ್ತಿಯಲ್ಲಿ ಭ್ರಮೆ (ಹೆಚ್ಚಾಗಿ ತಮಗೆ ವಿಚಿತ್ರ ಧ್ವನಿಗಳು ಕೇಳಿಸುತ್ತಿರುವ ಬಗ್ಗೆ ಹೇಳುತ್ತಾರೆ), ಭಾÅಂತಿ (ವಿಚಿತ್ರವಾದ ಅಥವಾ ಭಯಾನಕವಾದ, ಅವರಿಗೆ ಮಾತ್ರ ಅರಿವಿಗೆ ಬರುವ ಅನುಭವಗಳು) ಮತ್ತು ಸುಸಂಬದ್ಧವಲ್ಲದ ಯೋಚನೆ - ಮಾತುಗಳು ಇರುತ್ತವೆ. ತೀವ್ರ ತೊಂದರೆ ಇರುವವರಲ್ಲಿ ತುಂಡು ತುಂಡಾದ ಯೋಚನಾಲಹರಿ, ಅರ್ಥವಿಲ್ಲದ ಮಾತುಗಳು ಸೇರಿ, ಅವರ ಮಾತುಗಳು ಮಾತಿನ ಸಲಾಡ್‌ ಆಗಿರುತ್ತವೆೆ. ಸಮಾಜ ವಿಮುಖತೆ, ಬಟ್ಟೆ - ಶುಚಿತ್ವಗಳ ಬಗ್ಗೆ ಗಮನ ಇಲ್ಲದಿರುವಿಕೆ, ಪ್ರೇರಣೆ ಮತ್ತು ನಿರ್ಧಾರ ಶಕ್ತಿ ಇಲ್ಲದಿರುವುದು ಕೂಡ ಸಿಜೊಫ್ರೇನಿಯಾ ರೋಗಿಗಳಲ್ಲಿ ಸಾಮಾನ್ಯ. ಅವರಲ್ಲಿ ಗಮನಾರ್ಹವಾದ ಭಾವನಾತ್ಮಕ ಕಷ್ಟಗಳ ವಿನ್ಯಾಸ ಇರುತ್ತದೆ. ಉದಾಹರಣೆಗೆ ಪ್ರತಿಕ್ರಿಯೆ ನೀಡದಿರುವಿಕೆ ಅಥವಾ ನಿರಾಸಕ್ತಿ. ಕೆಲವರಲ್ಲಿ ಯಾರಿಗೂ ಬೇಡದವರು ತಾವೆಂಬ ಚಿಂತೆ ಮತ್ತು ಸಾಮಾಜಿಕವಾಗಿ ಏಕಾಕಿತನ ಇರಬಹದು. ಕೆಲಸದಲ್ಲಿ ತೊಂದರೆ ಹಾಗೂ ದೀರ್ಘ‌ಕಾಲಿಕ ನೆನಪಿನ ಶಕ್ತಿಯ ಕೊರತೆ, ಗಮನ- ಸಂಸ್ಕರಣಾ ಸಾಮರ್ಥ್ಯಗಳಲ್ಲಿ ತೊಂದರೆ ಕಂಡುಬರಬಹುದು. ಈ ತೊಂದರೆಯ ಒಂದು ವಿಧದಲ್ಲಿ ರೋಗಿ ಮೌನವಾಗಿ, ವಿಚಿತ್ರ ಭಂಗಿಗಳಲ್ಲಿ ಚಲನೆ ಇಲ್ಲದೆ ಇದ್ದುಬಿಡಬಹುದು. ಅನಗತ್ಯ ಕೆರಳುವಿಕೆಯಂತಹ ಅನಿಯಂತ್ರಿತ ಚಲನೆಯ (ಕೆಟಟೋನಿಯಾ) ಲಕ್ಷಣಗಳನ್ನು ತೋರಿಸಬಹುದು.
        ಈ ತೊಂದರೆ ರೋಗಿಗಳಲ್ಲಿ ವಿಭಿನ್ನ ರೀತಿಯಲ್ಲಿ, ವಿಭಿನ್ನ ತೀವ್ರತೆಗಳೊಂದಿಗೆ ಕಂಡುಬರಬಹುದು. ಇದಕ್ಕೆ ಅವರಲ್ಲಿ ರೋಗ ಕಾಣಿಸಿಕೊಂಡ ಪ್ರಾಯ, ಅವರ ಕೌಟುಂಬಿಕ ಹಿನ್ನೆಲೆ, ಮಾದಕ ದ್ರವ್ಯಗಳ ಬಳಕೆ, ಶೈಕ್ಷಣಿಕ - ವೃತ್ತಿಪರ ಸಾಧನೆಗಳು - ಹೀಗೆ ಹಲವಾರು ಕಾರಣಗಳಿರಬಹುದು. ಕೆಲವು ಪ್ರಕರಣಗಳ ಮೂಲಕ ಇದನ್ನು ಗಮನಿಸೋಣ (ಗಮನಿಸಿ: ಇಲ್ಲಿ ಕೊಡಲಾಗಿರುವ ಎಲ್ಲ ವಿವರಗಳು ಮತ್ತು ಪ್ರಕರಣಗಳು ಕಾಲ್ಪನಿಕ).

        15 ವರ್ಷದ, 10ನೇ ತರಗತಿಯ ಹುಡುಗಿಯೊಬ್ಬಳನ್ನು ಅವಳ ಹೆತ್ತವರು ವೈದ್ಯರ ಬಳಿ ಕರೆತಂದರು. ಆಕೆ ತನ್ನಲ್ಲೇ ಲೀನವಾಗಿ, ತನ್ನಷ್ಟಕ್ಕೆ ನಗುತ್ತಾ, ಕನ್ನಡಿಯಲ್ಲಿ ತನ್ನ ಬಿಂಬವನ್ನು ನೋಡಿಕೊಳ್ಳುತ್ತಾ ಗಂಟೆಗಟ್ಟಲೆ ಕಳೆಯುತ್ತಿದ್ದಳು. ಒಂದು ದಿನ ಆಕೆ ಬಾವಿಯ ಅಂಚಿನಲ್ಲಿ ಕುಳಿತು ವ್ಯಗ್ರಗೊಂಡು, ಯಾರಿಗೋ ಬೈಯುತ್ತಿರುವುದನ್ನು ಕಂಡ ಹೆತ್ತವರು ಅಲ್ಲಿ ಹೋಗಿ ನೋಡಿದಾಗ, ಅಲ್ಲಿ ಯಾರೂ ಇರಲಿಲ್ಲ. ಕ್ರಮೇಣ ಆಕೆ ಶಾಲೆಗೆ ಹೋಗುವುದನ್ನು ನಿಲ್ಲಿಸಿದಳು ಮತ್ತು ಇಡೀ ದಿನ ಮನೆಯಲ್ಲೇ ಕಳೆಯುತ್ತಾ , ಏನು ಮಾಡುತ್ತಿದ್ದಿ ಎಂದರೆ ಯೋಚಿಸುತ್ತಿದ್ದೇನೆ ಅನ್ನುತ್ತಿದ್ದಳು. ವೈದ್ಯರು ವಿವರ ಕೇಳಿದಾಗ, ಆಕೆ ತನಗೆ ವಿಚಿತ್ರ ಸ್ವರಗಳು ಕೇಳಿಸುತ್ತಿದ್ದು, ಬಾವಿಗೆ ಹಾರಲು ಹೇಳುತ್ತಿವೆ ಅಂದಳು. ಆ ಸ್ವರಗಳು ನಿಜವೆಂದು ನಂಬಿದ್ದ ಆಕೆ, ಅವಕ್ಕೆಲ್ಲ ಕಡ್ಡಾಯವಾಗಿ ಉತ್ತರಿಸುವ, ಇಲ್ಲದಿದ್ದರೆ, ಅವು ತನಗೆ ಹಾನಿ ಮಾಡಬಹುದೆಂಬ ಭೀತಿಯ ಸ್ಥಿತಿ ತಲುಪಿದ್ದಳು. ರಾತ್ರಿಯಲ್ಲಿ ಆಕೆಗೆ ನೆರಳುಗಳು ಕಾಣಿಸುತ್ತಿದ್ದು, ಅವನ್ನು ಆಕೆ ಊರಲ್ಲಿ ಮೃತಪಟ್ಟವರ ಭೂತಗಳೆಂದು ನಂಬಿದ್ದಳು. ಆಕೆಯ ತಾಯಿಯ ತಂಗಿಯೊಬ್ಬರು ಹಲವು ವರ್ಷಗಳ ಹಿಂದೆ ಇಂತಹದೇ ತೊಂದರೆ ಇದ್ದು, ನೇಣು ಹಾಕಿಕೊಂಡಿದ್ದ ಬಗ್ಗೆ ಆಕೆಯ ಹೆತ್ತವರು ವೈದ್ಯರಿಗೆ ತಿಳಿಸಿದ್ದರು. ಮಾಟ, ಮಂತ್ರ, ತಾಯತ ಎಂದು ಸುಮಾರು ಪ್ರಯತ್ನಿಸಿದರೂ ಅವರಿಗೆ ಯಾವುದೇ ಪ್ರತಿಫಲ ಸಿಕ್ಕಿರಲಿಲ್ಲ. ಇದೊಂದು ಗುಣಪಡಿಸಬಹುದಾದ ಮಾನಸಿಕ ಕಾಯಿಲೆ ಎಂಬುದು ಅವರಿಗೆ ತಿಳಿದಿರಲೇ ಇಲ್ಲ. ಒಬ್ಬರು ಪುರೋಹಿತರು ಅವಳನ್ನು ಮನೋವೈದ್ಯರ ಬಳಿಗೆ ಕಳುಹಿಸಿದ್ದರೂ, ಅಲ್ಲಿ ಆಕೆ ಔಷಧಿಸೇವಿಸಲು ಒಪ್ಪಿರಲಿಲ್ಲ. ಯಾಕೆಂದರೆ, ಅವಳಿಗೆ ಕೇಳಿಸುವ ಧ್ವನಿಗಳು ಮದ್ದು ಸೇವಿಸದಂತೆ ಅವಳಿಗೆ ಆಜ್ಞಾಪಿಸುತ್ತಿದ್ದವು.

        ಈ ಪ್ರಕರಣದಲ್ಲಿ ಹಲವಾರು ಸವಾಲುಗಳಿದ್ದವು. ರೋಗಿಗೆ ತೊಂದರೆ ಬೇಗ ಆರಂಭವಾಗಿದ್ದು, ಕೌಟುಂಬಿಕ ಹಿನ್ನೆಲೆಯೂ ಇತ್ತು. ದೀರ್ಘ‌ಕಾಲಿಕ ಚಿಕಿತ್ಸಾ ರಹಿತ ಮಾನಸಿಕ ತೊಂದರೆಯ ಜೊತೆ ಆತ್ಮಹತ್ಯೆಗೆ ಪ್ರಯತ್ನ ಕೂಡ ಇತ್ತು. ಆದರೆ ಚಿಕಿತ್ಸೆಯ ಬಳಿಕ ರೋಗಿಯ ಸ್ಥಿತಿ ಸುಧಾರಿಸಿತು. ಆಕೆಗೆ ತಿಂಗಳಿಗೊಮ್ಮೆ ಚುಚ್ಚುಮದ್ದು ರೂಪದಲ್ಲಿ ಔಷಧಿನೀಡಲಾಗುತ್ತಿತ್ತು.

        ಕೆರಳಿಕೆಯ ತೊಂದರೆ ಇದ್ದ 22 ವರ್ಷ ಪ್ರಾಯದ ಯುವಕನೊಬ್ಬನನ್ನು ಆತನ ಪೇಯಿಂಗ್‌ ಗೆಸ್ಟ್‌ ವಸತಿಯ ಸಹವಾಸಿ ವೈದ್ಯರ ಬಳಿಗೆ ಕರೆದು ತಂದಿದ್ದು, ಆತ 2 ತಿಂಗಳಿಂದ ಕೆರಳಿದ ಸ್ಥಿತಿಯಲ್ಲಿದ್ದು, ಚಡಪಡಿಕೆ, ಬೈಗಳು ಇತ್ತು. ಮತ್ತು ಸಿಬಿಐ ಹಾಗೂ ಪೊಲೀಸರು ತನ್ನನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆತ ಹಲುಬುತ್ತಿದ್ದ. ಆತನ ಮನದಲ್ಲಿ ತಾನು ಯಾವುದೊ ವಿಶೇಷ ಕಾರ್ಯ ಪಡೆಯ ಸದಸ್ಯನಾಗಿದ್ದು, ಟಿವಿಯಲ್ಲಿ  ಕ್ರೈಂ ಸೀರಿಯಲ್‌ಗ‌ಳನ್ನು ನೋಡುವ ಮೂಲಕ ನಗರದ ಎಲ್ಲ ಕ್ರೈಂಗಳ ಪತ್ತೆದಾರಿ ಕೆಲಸ ಮಾಡುತ್ತಿದ್ದೇನೆ ಎಂದು ನಾಟಿತ್ತು. ತನ್ನಲ್ಲಿ ವಿಶೇಷ ಶಕ್ತಿಗಳಿವೆ, ಆದರೆ ಯಾರೋ ತನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆಂದು ಆತ ನಂಬಿದ್ದ. ಆತನಿಗೆ ಅಪರೂಪಕ್ಕೆ ಮಾದಕ ದ್ರವ್ಯ ಸೇವಿಸಿದ ಹಿನ್ನೆಲೆ ಇತ್ತು ಮತ್ತು ಧೂಮಪಾನದ ಚಟ ಇತ್ತು. ಆತನ ತಾಯಿ ಕೂಡ ಮಾನಸಿಕ ತೊಂದರೆಗೆ ಚಿಕಿತ್ಸೆ ಪಡೆಯುತ್ತಿದ್ದರು. ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿಕೊಂಡು, ಕೆರಳಿಕೆ ಶಮನಕ್ಕೆ ಔಷಧಿಗಳನ್ನು ನೀಡಲಾಯಿತು. ಆತನಿಗೆ ಕ್ಷಿಪ್ರವಾಗಿ ಹಿಂದಿರುಗಿ, ಯಾವುದೋ ಕಂಪೆನಿಯಲ್ಲಿ ಉದ್ಯೋಗ ಪಡೆಯಬೇಕಾಗಿದ್ದುದರಿಂದ, ಇಲೆಕ್ಟ್ರೋ ಕನ್ವಲ್ಸಿವ್‌ ತೆರಪಿ ನೀಡಲಾಯಿತು. ರೋಗಿಗೆ ಮತ್ತೆ ಗಾಂಜಾ, ಧೂಮಪಾನಗಳಿಂದ ದೂರ ಇರುವಂತೆ ಸೂಚಿಸಲಾಯಿತು. ಆತ ಯಶಸ್ವಿಯಾಗಿ ಚಿಕಿತ್ಸೆ ಪಡೆದು, ಈಗ ಉದ್ಯೋಗದಲ್ಲಿದ್ದಾನೆ.

        45 ವರ್ಷ ಪ್ರಾಯದ ಬ್ಯಾಂಕ್‌ ಉದ್ಯೋಗಿಯೊಬ್ಬರು 2 ತಿಂಗಳಿಂದ ಭಯಭೀತರಾಗಿದ್ದರು. ತನ್ನ ಸಹೋದ್ಯೋಗಿಯೊಬ್ಬರು ತನ್ನನ್ನು ನಿಯಂತ್ರಿಸಲು, ತನ್ನ ತಲೆಯೊಳಗೆ ಮೈಕ್ರೊಚಿಪ್‌ಗ್ಳನ್ನು ಅಳವಡಿಸಿದ್ದಾರೆ ಮತ್ತು ತನ್ನ ಬಗ್ಗೆ ಸುದ್ದಿಗಳನ್ನು ಸ್ಥಳೀಯ ಮಾಧ್ಯಮಗಳ ಮೂಲಕ ಪ್ರಸಾರ ಮಾಡುತ್ತಿದ್ದಾರೆ ಎಂಬುದು ಅವರ ನಂಬಿಕೆಯಾಗಿತ್ತು. ತನ್ನ ಪರಿಸರದ ಎಲ್ಲ ಜನರೂ ಈ ತನ್ನ ಸಹೋದ್ಯೋಗಿಯ ಸಂಚಿನಲ್ಲಿ ಪಾಲುದಾರರಾಗಿದ್ದು, ತನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಎಂದಾತ ನಂಬಿದ್ದರು. ಆತನ ಪತ್ನಿ ಆತನನ್ನು ಆಸ್ಪತ್ರೆಗೆ ಕರೆತಂದಿದ್ದರು. ಬ್ಯಾಂಕಿನಲ್ಲಿ ಇತ್ತೀಚೆಗೆ ಸಾಫ್ಟ್‌ ವೇರ್‌ ಬದಲಾಗಿ, ಕೆಲಸದ ಒತ್ತಡ ಹೆಚ್ಚಾದ ಬಳಿಕ ಈ ತೊಂದರೆ ಕಾಣಿಸಿಕೊಂಡಿದೆ ಎಂಬುದು ಆಕೆಯ ಲೆಕ್ಕಾಚಾರವಾಗಿತ್ತು. ಈ ಪ್ರಕರಣದಲ್ಲಿ ಕೌಟುಂಬಿಕ ಹಿನ್ನೆಲೆ ಯಾಗಲೀ, ಮಾದಕ ದ್ರವ್ಯ ಬಳಕೆಯ ಹಿನ್ನೆಲೆಯಾಗಲೀ ಇರಲಿಲ್ಲ;  ಮತ್ತು ರೋಗಿ ತೊಂದರೆಗೆ ಮೊದಲು ಸುಸೂತ್ರವಾಗಿ ಉದ್ಯೋಗದಲ್ಲಿ ತೊಡಗಿಕೊಂಡಿದ್ದರು. ಎಲ್ಲ ಸರಿಯಾಗಿರಬೇಕೆಂದು ಬಯಸುವ ಸ್ವಭಾವದ ಅವರಿಗೆ, ಅಲ್ಲಿಯ ತನಕ ಹೊಂದಿಕೊಂಡು ಹೋಗುವುದೂ ಸಾಧ್ಯವಿತ್ತು. ಅವರಿಗೆ ಚಿಕಿತ್ಸೆ ನೀಡಿ, ಔಷಧಿಗಳ ಜೊತೆಗೆ ಉದ್ಯೋಗ ಸಂಬಂಧಿ ಒತ್ತಡಗಳ ನಿವಾರಣೆಗೆ ಆಪ್ತ ಸಲಹೆಗಳನ್ನು ನೀಡಲಾಯಿತು. ರೋಗಿ ತನ್ನ ಹಿಂದಿನ ಬದುಕಿಗೆ ಚೆನ್ನಾಗಿ ಹೊಂದಿಕೊಳ್ಳುವುದು ಸಾಧ್ಯವಾಯಿತಲ್ಲದೇ, ಮನೆಯವರು ರೋಗಿಯ ಔಷಧಿ- ಆರೈಕೆಗಳಲ್ಲಿ  ಚೆನ್ನಾಗಿ ಸಹಕರಿಸಿದ್ದರಿಂದ, ರೋಗಿ ಸುಲಭವಾಗಿ ಚೇತರಿಸಿಕೊಳ್ಳುವಂತಾಯಿತು.

        55 ಮತ್ತು 23 ವರ್ಷದ ತಾಯಿ-ಮಗಳಿಬ್ಬರೂ ತಮಗೆ ತಮ್ಮ ಆಸುಪಾಸಿನವರು ಮಾಟ ಮಾಡಿದ್ದಾರೆಂದು ನಂಬಿದ್ದರು. ಕುಟುಂಬದ ಇತರ ಸದಸ್ಯರಿಗೆ ಇದರಲ್ಲಿ ನಂಬಿಕೆ ಇಲ್ಲದಿದ್ದರೂ, ಅವರಿಬ್ಬರು ಇದನ್ನು ಗಾಢವಾಗಿ ನಂಬಿದ್ದರು. ತಾಯಿ ಮೈಮೇಲೆ ಕೆಸರೆರಚಿಕೊಂಡು, ಇದು ತನಗೆ ಮಾಟದಿಂದ ರಕ್ಷಣೆ ಕೊಡುತ್ತಿದೆ ಎನ್ನುತ್ತಿದ್ದಳು. ಮಗಳು ಪದೇ ಪದೇ ಆಸುಪಾಸಿನವರ ಜೊತೆ ಜಗಳಕ್ಕೆ ನಿಂತು, ತಮಗೆ ತೊಂದರೆ ಕೊಡಬೇಡಿ ಅನ್ನುತ್ತಿದ್ದಳು. ಅವರು ರಾತ್ರಿಯಿಡೀ ನಿದ್ದೆ ಮಾಡದೆ ಗೊಣಗಾಡುತ್ತಿರುತ್ತಿದ್ದರು. ಸ್ನಾನಕ್ಕೆ ಅವರನ್ನು ಒತ್ತಾಯ ಮಾಡಬೇಕಾಗುತ್ತಿತ್ತು, ಆಹಾರ ತಿನ್ನಲು ಅದಕ್ಕೆ ವಿಷ ಹಾಕಲಾಗಿದೆ ಎಂದವರು ಭಯ ಪಡುತ್ತಿದ್ದರು. ಅವರಿಗೆ ಚಿಕಿತ್ಸೆ ನೀಡಲು ದೀರ್ಘ‌ಕಾಲ ಆಸ್ಪತ್ರೆ ವಾಸ, ಬಾಯಿಯ ಮೂಲಕ ಔಷಧಿಗಳು, ಚಟುವಟಿಕೆಗಳ ಸಮಯ ನಿರ್ಧಾರ ಅಗತ್ಯವಿತ್ತು. ತಾಯಿ, ಮಗಳು ಪರಸ್ಪರ ಸುಳ್ಳು ನಂಬಿಕೆಗಳನ್ನು ನಂಬುತ್ತಿದ್ದುದರಿಂದ, ಸ್ವಲ್ಪ ಸಮಯ ಅವರನ್ನು ಪ್ರತ್ಯೇಕವಾಗಿರಿಸಲಾಯಿತು.

        40 ವರ್ಷದ ವ್ಯಕ್ತಿಯೊಬ್ಬರು ಹಿಂಸ್ರಸ್ವರೂಪ ತಳೆದದ್ದರಿಂದ ಅವರನ್ನು ಕಟ್ಟಿಹಾಕಿ ಆಸ್ಪತ್ರೆಗೆ ತರಲಾಗಿತ್ತು. ಒಂದು ತಿಂಗಳ ಹಿಂದೆ ಮುಂಬಯಿಯಲ್ಲಿ ಕಾಣೆ ಆಗಿದ್ದ ಅವರನ್ನು, ಪೊಲೀಸರು ದಯನೀಯ ಸ್ಥಿತಿಯಲ್ಲಿ ಪತ್ತೆ ಹಚ್ಚಿದ್ದರು. ಕೊಳಚೆ ಗುಂಡಿಯಲ್ಲಿ ಆಹಾರ ಆಯ್ದು ತಿನ್ನುತ್ತಿದ್ದ ಆತ, ಸ್ನಾನ ಕಾಣದೆ ಬಹಳ ದಿನಗಳಾಗಿತ್ತು. ಆತ ಮಾತನಾಡಿದ್ದು ಯಾರಿಗೂ ಅರ್ಥ ಆಗುವಂತಿರಲಿಲ್ಲ. ಆತ ತನ್ನ ಕುಟುಂಬದ ಯಾರನ್ನೂ ಗುರುತಿಸುತ್ತಿರಲಿಲ್ಲ ಮತ್ತು ತನ್ನನ್ನು ಹಿಡಿಯಲು ಬಂದ ತನ್ನ ಅಣ್ಣನ ಮೇಲೆ ಹಲ್ಲೆ ನಡೆಸಿದ್ದ. ಆತ ದೀರ್ಘ‌ ಕಾಲ ವಿಚಿತ್ರ ಭಂಗಿಗಳಲ್ಲಿ ನಿಂತು, ಕುಳಿತು ಎವೆಯಿಕ್ಕದೆ ದೃಷ್ಟಿ ಹಾಯಿಸುತ್ತಿದ್ದ. ಅವರನ್ನು ಒಳರೋಗಿಯಾಗಿ ದಾಖಲಿಸಿಕೊಂಡು, ಎಲೆಕ್ಟ್ರೊಕನ್ವಲ್ಸಿವ್‌ ತೆರಪಿ ನೀಡಲಾಯಿತು ಮತ್ತು ಔಷಧಿ
        ಆರಂಭಿಸಲಾಯಿತು. ಕ್ರಮೇಣ ರೋಗಿ ಸುಧಾರಿಸುತ್ತಾ ಬಂದರು. ಕುಟುಂಬದ ಸದಸ್ಯರು ಆತನ ಔಷಧಿ
        ಚಿಕಿತ್ಸೆಯ ಜವಾಬ್ದಾರಿ ಹೊತ್ತರು. ಕ್ರಮೇಣ ಆತ ಕುಟುಂಬದ ಕೃಷಿ ಚಟುವಟಿಕೆಗಳನ್ನು ನೋಡಿಕೊಳ್ಳಲು ಸಮರ್ಥರಾದರು.

        ಸಿಜೊಫ್ರೇನಿಯಾ
        ರೋಗದ ಹಿನ್ನೆಲೆ

        ಸಿಜೊಫ್ರೇನಿಯಾ ಚಿಕಿತ್ಸೆಯಲ್ಲಿ ಮಹತ್ವದ ಸವಾಲು ಎಂದರೆ, ಅದಕ್ಕೆ ಕಾರಣಗಳಿನ್ನೂ ಸ್ಪಷ್ಟವಾಗಿ ಅರ್ಥವಾಗದಿರುವುದು. ಜೀನು ಸಂಬಂಧಿ, ನರ, ಜೈವಿಕ, ಪರಿಸರ ಸಂಬಂಧಿವಿಚಾರಗಳು ಒಟ್ಟು ಸಮಗ್ರ ರೂಪದಲ್ಲಿ ಈ ತೊಂದರೆಗೆ ಕಾರಣವಾಗುತ್ತವೆಂದು ನಂಬಲಾಗಿದೆ. ಒಂದು ವೈದ್ಯಕೀಯ ವಿಚಾರಧಾರೆಯ ಪ್ರಕಾರ, ಮೆದುಳಿಗೆ ಸಂಜ್ಞೆಗಳನ್ನು ಪ್ರೇಷಿಸುವ ನರ ರಾಸಾಯನಿಕ ಡೋಪಮೈನ್‌ ಪ್ರಮಾಣದಲ್ಲಿ ಹೆಚ್ಚಳವಾದಾಗ ಹೀಗಾಗುತ್ತದೆ. ಸಿಜೊಫ್ರೇನಿಯಾದಲ್ಲಿ ಜೀನು ಸಂಬಂಧಿ ಅಂಶಗಳೂ ಬಹುಮುಖ್ಯ ಪಾತ್ರ ವಹಿಸುತ್ತವೆ. ಪ್ರಥಮ ದರ್ಜೆಯ ಸಂಬಂಧಿಗಳಲ್ಲಿ ಈ ತೊಂದರೆ ಇದ್ದರೆ, ರೋಗಿಗೆ ಈ ತೊಂದರೆ ಬರುವ ಸಾಧ್ಯತೆ 10 ಪಾಲು ಹೆಚ್ಚೆಂದು ಕಂಡುಕೊಳ್ಳಲಾಗಿದೆ. ಈ ರೋಗಕ್ಕೆ ನಿರ್ದಿಷ್ಟವಾದ ಜೈವಿಕ ತಳಹದಿ ಇದೆ ಎಂಬುದನ್ನು ಮೆದುಳಿನ ನರವಾಹಿ ಬಿಂಬಗಳು ಖಚಿತ ಪಡಿಸಿವೆ. ರೋಗಿ ಮತ್ತು ರೋಗಿಯ ಸಂಬಂಧಿಕರು ಈ ವಿಚಾರವನ್ನು ತಿಳಿದಿದ್ದು, ನರಸಂಬಂಧಿ ಜೈವಿಕ ತೊಂದರೆಯಾಗಿರುವ ಈ ತೊಂದರೆಗೆ ಚಿಕಿತ್ಸೆ ಅಗತ್ಯ ಎಂದು ಮನವರಿಕೆ ಮಾಡಿಕೊಳ್ಳುವುದು ಅತ್ಯಗತ್ಯ.

        ಸಿಜೊಫ್ರೇನಿಯಾ ನಿರ್ವಹಣೆ

        ಸಿಜೊಫ್ರೇನಿಯಾವು ಬೆಳವಣಿಗೆಗೆ ಅಡ್ಡಿ ಆಗದಂತೆ ತಡೆಯುವ ನಿಟ್ಟಿನಲ್ಲಿ ಹಲವು ಸಂಶೋಧನೆಗಳು ನಡೆದಿದ್ದು, ಆರಂಭಿಕ ಹಂತದಲ್ಲೇ ರೋಗವನ್ನು ಗುರುತಿಸಿ ಚಿಕಿತ್ಸೆ ಕೊಡಿಸುವ ನಿಟ್ಟಿನಲ್ಲಿ  ಹಲವಾರು ಸಂಶೋಧನೆಗಳಾಗಿವೆ. ಇದರಿಂದಾಗಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುವ 30 ತಿಂಗಳುಗಳ ಮೊದಲೇ ತೊಂದರೆಯನ್ನು ಗುರುತಿಸುವುದು ಇಂದು ಸಾಧ್ಯವಾಗಿದೆ. ಚಿಕಿತ್ಸೆ ಬೇಗ ಆರಂಭವಾದಷ್ಟು, ರೋಗಿ ಸುಧಾರಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚೆಂಬುದನ್ನು ಕಂಡುಕೊಳ್ಳಲಾಗಿದೆ.

        ಈ ತೊಂದರೆಗೆ ಮೂಲಭೂತ ಚಿಕಿತ್ಸೆ ಎಂದರೆ, ಮನೋರೋಗ ನಿವಾರಕ ಔಷಧಿಗಳು. ಇಂದು ಹಲವಾರು ಔಷಧಿಆಯ್ಕೆಗಳು ಲಭ್ಯ. ಅವುಗಳಲ್ಲಿ  ಪೆಂಟೊಥಿಯಾಜೈಡ್‌ ಸಂಯುಕ್ತಗಳ ವರ್ಗಕ್ಕೆ ಸೇರಿದ ಅಲಿಫಾಟಿಕ್‌ ಡೆರಿವೇಟಿವ್ಸ್‌ (ಉದಾ: ಥಿಯೊರಿಪಾಜೈನ್‌), ಪಿಪೆರಾಜೈನ್‌ ಡೆರಿವೇಟಿವ್ಸ್‌ (ಉದಾ: ಪುÉಪೆನಾಜೈನ್‌); ಥಿಲೊಕ್ಯಾಂತೈನ್‌ ಸಂಯುಕ್ತಗಳ ವರ್ಗಕ್ಕೆ ಸೇರಿದ ಥಿಯೋಥಿಕ್ಸೆ„ನ್‌, ಬುಟಿರೊಫೆನಾನ್ಸ್‌; ಹಾಲೊಪೆರಿಡಾಲ್‌ಗ‌ಳು ಸೇರಿವೆ. ಇದಲ್ಲದೆ ಸಾಮಾನ್ಯವಾಗಿ ಬಳಕೆಯಲ್ಲಿರದ ಔಷಧಿಗಳಾದ ಒಲಾಂಜಾಪೈನ್‌, ಕ್ವೆ„ಟಾಪೈನ್‌, ಕ್ಲೊಜಾಪೈನ್‌, ರಿಸ್ಪೆರಿಡಾನ್‌, ಇಲೊಪೆರಿಡಾನ್‌, ಅಸೆನಾಪೈನ್‌ ಮತ್ತು ಅರಿಪಿರಾಜೋಲ್‌ಗ‌ಳೂ ಸೇರಿವೆ.

        ಈ ತೊಂದರೆ ಇರುವ ರೋಗಿಗೆ ಮನೋಸಾಮಾಜಿಕ ಹಸ್ತಕ್ಷೇಪಗಳೂ ಬಹಳ ಮುಖ್ಯವಾಗುತ್ತವೆ. ಮಾನಸಿಕ ಶಿಕ್ಷಣ ಇವುಗಳಲ್ಲಿ ಪ್ರಮುಖವಾದುದಾಗಿದ್ದು ರೋಗಿ ಮತ್ತು ರೋಗಿಯ ಮನೆಯವರಿಬ್ಬರೂ ಇದನ್ನು ಪಡೆದಿರಬೇಕಾಗುತ್ತದೆ. ಇದೊಂದು ರೋಗ ಮತ್ತು ಇದಕ್ಕೆ ಚಿಕಿತ್ಸೆ ಅಗತ್ಯವಿದೆ ಎಂಬುದನ್ನವರು ಅರಿತಿರಬೇಕು. ಈ ಔಷಧಿಗಳನ್ನು ನೀಡುವಾಗ ಮೇಲ್ವಿಚಾರಣೆ ಅಗತ್ಯ. ರೋಗಿ ತನ್ನ ಚಟುವಟಿಕೆಗಳನ್ನು ಉದ್ದೇಶಪೂರ್ವಕ ಮಾಡುತ್ತಿಲ್ಲ; ಅವು ರೋಗ ಲಕ್ಷಣಗಳು ಎಂದು ನಾವು ಅರಿತಿರಬೇಕು. ರೋಗಿಯ ಚಟುವಟಿಕೆಗಳು ಸುಧಾರಿಸಲು ವರ್ತನಾ ಚಿಕಿತ್ಸೆ ಮತ್ತು ಚಟುವಟಿಕೆಗಳ ವೇಳಾಪಟ್ಟಿ ಪಾಲನೆ ಅಗತ್ಯವಿರುತ್ತದೆ. ಸಾಮಾಜಿಕ ಸಂವಹನಗಳ ತೊಂದರೆ ಇರುವವರಿಗೆ ಸಾಮಾಜಿಕ ಕೌಶಲಗಳ ತರಬೇತಿಗಳೂ ಅಗತ್ಯವಿರಬಹುದು. ರೋಗಿಯ ಬೆಂಬಲಕ್ಕೆ ಕುಟುಂಬದ ಸಹಕಾರವೂ ಅತ್ಯಗತ್ಯ. ನಿಕೋಟಿನ್‌ ವ್ಯಸನದ ನಿರ್ವಹಣೆ ಇವರಲ್ಲಿ ಸಾಮಾನ್ಯ ಆವಶ್ಯಕತೆ ಆಗಿರುತ್ತದೆ. ಇವರಿಗೆ ಒಳನೋಟಗಳನ್ನು ತಡೆಯುವ ತರಬೇತಿ ಕೂಡ ಅಗತ್ಯವಿರುತ್ತದೆ.

        ಒಟ್ಟಿನಲ್ಲಿ ಸಿಜೊಫ್ರೇನಿಯಾ ದೊಡ್ಡ ಸವಾಲಿನ ಸ್ವರೂಪದ ಮಾನಸಿಕ ಕಾಯಿಲೆಯಾಗಿದ್ದು, ರೋಗಿಗೆ ತೀವ್ರ ವೈಕಲ್ಯ ಮತ್ತು ಕುಟುಂಬಿಕರಿಗೆ ತೀವ್ರ ಹತಾಶೆ ತರಬಲ್ಲ ತೊಂದರೆ ಇದಾಗಿದೆ. ಇಂದು ಲಭ್ಯವಿರುವ ಔಷಧಿ
        ಗಳ ಪರಿಣಾಮಕಾರಿ ಬಳಕೆಯಿಂದ ಧನಾತ್ಮಕ ರೋಗ ಚಿಹ್ನೆಗಳಾದ ಭಾÅಂತಿ, ಭ್ರಮೆಗಳಂತಹ ತೊಂದರೆಗಳಿಂದ ಗಮನಾರ್ಹ ಮುಕ್ತಿ ಸಾಧ್ಯವಿದೆ.

        ಋಣಾತ್ಮಕ ರೋಗ ಚಿಹ್ನೆ ಗಳಾದ ಪ್ರೇರಣಾ ರಾಹಿತ್ಯ, ಅನೆ ಡೋನಿಯಾದಂತಹ ಸ್ಥಿತಿಗಳು ರೋಗಿ, ಕುಟುಂಬಿಕರು ಮತ್ತು ಚಿಕಿತ್ಸೆ ನೀಡುವ ವೈದ್ಯರಿಗೂ ಸವಾಲಾಗಬಲ್ಲ ಸ್ಥಿತಿಗಳಾಗಿವೆ. ಇವುಗಳಿಗೂ ಇಂದು ಹೊಸ ವಿಧದ ಚಿಕಿತ್ಸೆಗಳು (ಗುÉಟಾಮೇಟ್‌ ಇನ್‌ಹಿಬಿಟರ್ ಮತ್ತು ಕ್ಲೈಸೀನ್‌ ಟ್ರಾನ್ಸ್‌ ಪೋರ್ಟರ್) ಲಭ್ಯವಿವೆ. ಇವುಗಳ ಪರಿಣಾಮಕಾರಿತನ ದೀರ್ಘ‌ಕಾಲಿಕವಾಗಿ ಇನ್ನಷ್ಟೇ ಸಾಬೀತಾಗಬೇಕಾಗಿದೆ. ಸಿಜೊಫ್ರೇನಿಯಾ ರೋಗಿಗಳಿಗೆ ಸಕಾಲದಲ್ಲಿ ಮಾನಸಿಕ ಚಿಕಿತ್ಸೆಯ ನೆರವು ನೀಡಿ, ಅವರ ಚಿಕಿತ್ಸೆಗೆ ವೈಜ್ಞಾನಿಕ ಹಾದಿಯಲ್ಲಿ ಮುನ್ನಡೆಯಬೇಕಾದುದು ಬಹಳ ಮುಖ್ಯ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಕೆಲವು ಔಷಧಿಗಳು, ಕೆಲವು ಕಾಯಿಲೆಗಳು, ಅಧಿಕ ಮದ್ಯಪಾನ ಸೇವನೆ, ಮತ್ತು ಬ್ಯಾಕ್ಟೀರಿಯಾ ಹಾಗೂ ವೈರಸ್‌ ಸೋಂಕುಗಳ ಕಾರಣದಿಂದ ಹೆಪಾಟೈಟಿಸ್‌ ಬರಬಹುದು...
      • ಈ ವಿಭಾಗದಲ್ಲಿಯೂ ಇದೆ
      • Copyright @ 2009 Udayavani.All rights reserved.
      • Designed & Hosted By 4cplus