ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಕೈಲಿದ್ದ ಪಂದ್ಯವನ್ನು ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಕಸಿದರು ಎಂಬುದಾಗಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹರ್ಭಜನ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.ಬೆಂಗಳೂರಿನಲ್ಲಿ ಬುಧವಾರ ರಾತ್ರಿ ಸಾಗಿದ 5ನೇ ಐಪಿಎಲ್‌ನ ಎಲಿಮಿನೇಟರ್ ಪಂದ್ಯವನ್ನು 38 ರನ್ನುಗಳಿಂದ ಕಳೆದುಕೊಂಡ ಬಳಿಕ ಭಜ್ಜಿ ಈ ಹೇಳಿಕೆ ನೀಡಿದರು.ಒಂದು ರನ್ನಿಗೆ 2 ವಿಕೆಟ್ ಕಳೆದುಕೊಂಡು ತತ್ತರಿಸಿದ್ದ ಚೆನ್ನೈ, ನಾಯಕ ಧೋನಿ ಅವರ ಆಕ್ರಮಣಕಾರಿ ಆಟದ ನೆರವಿನಿಂದ 5 ವಿಕೆಟಿಗೆ 187 ರನ್ ಸೂರೆಗೈದಿತು. ಜವಾಬಿತ್ತ ಮುಂಬೈ 9 ವಿಕೆಟಿಗೆ 149 ರನ್ ಮಾತ್ರ ಗಳಿಸಿ ಟೂರ್ನಿಯಿಂದ ಹೊರಬಿತ್ತು.ಮುಂಬೈ ಸರದಿಯಲ್ಲಿ ಮತ್ತೆ ಆರಂಭಿಕನಾಗಿ ಕಾಣಿಸಿಕೊಂಡ ಡ್ವೇಯ್ನ ಸ್ಮಿತ್ ಸರ್ವಾಧಿಕ 38 ರನ್ ಹೊಡೆದರು (22 ಎಸೆತ, 5 ಬೌಂಡರಿ, 2 ಸಿಕ್ಸರ್). ಉಳಿದವರ್ಯಾರೂ ಇಪ್ಪತ್ತರ ಗಡಿಯನ್ನೂ ತಲುಪಲಿಲ್ಲ. 17 ರನ್ ಮಾಡಿದ ಲಸಿತ ಮಾಲಿಂಗ ಅವರದೇ ಅನಂತರದ ಹೆಚ್ಚಿನ ಗಳಿಕೆ.ಚೆನ್ನೈ ಸಾಂ ಕ ಬೌಲಿಂಗ್ ಮೂಲಕ ಯಶಸ್ಸು ಕಂಡಿತು. ದಾಳಿಗಿಳಿದ ಎಲ್ಲ 6 ಮಂದಿ ಬೌಲರ್‌ಗಳೂ ವಿಕೆಟ್ ಪಡೆಯುವಲ್ಲಿ ಸಫಲರಾದರು. ಇವರಲ್ಲಿ 10 ರನ್ನಿಗೆ 2 ವಿಕೆಟ್ ಕಿತ್ತ ಡ್ವೇಯ್ನ ಬ್ರಾವೊ ಹೆಚ್ಚಿನ ಯಶಸ್ಸು ಲಭಿಸಿತು. ಬ್ಯಾಟಿಂಗ್‌ನಲ್ಲೂ ಮಿಂಚಿದ ಬ್ರಾವೊ 14 ಎಸೆತಗಳಿಮದ ಅಜೇಯ 33 ರನ್ ಸಿಡಿಸಿದ್ದರು (3 ಬೌಂಡರಿ, 2 ಸಿಕ್ಸರ್).'ಧೋನಿಯ ಸ್ಫೋಟಕ ಬ್ಯಾಟಿಂಗ್ ಈ ಪಂದ್ಯದ ಟರ್ನಿಂಗ್ ಪಾಯಿಂಟ್. ಅವರ 50 ಪ್ಲಸ್ ರನ್ ಪಂದ್ಯವನ್ನು ನಮ್ಮಿಂದ ದೂರಕ್ಕೊಯ್ದಿತು. ಅವರನ್ನು ಬಹಳ ಬೇಗನೆ ಔಟ್ ಮಾಡಿದ್ದರೆ ಪಂದ್ಯ ಮುಂಬೈ ಪಾಲಾಗುತ್ತಿತ್ತು...' ಎಂದು ಹರ್ಭಜನ್ ಅಭಿಪ್ರಾಯಪಟ್ಟರು.16ನೇ ಓವರಿನ ಆರಂಭದಲ್ಲಿ 5ಕ್ಕೆ 114 ರನ್ ಮಾಡಿ ಕುಂಟುತ್ತಿದ್ದ ಚೆನ್ನೈಗೆ ಧೋನಿ ಪ್ರವೇಶ ಎನ್ನುವುದು ಹೊಸ ಉತ್ಸಾಹ ಉಕ್ಕಿಸಿತು. ಧೋನಿ-ಬ್ರಾವೊ 4.5 ಓವರ್‌ಗಳಿಂದ 73 ರನ್ ಸೂರೆಗೈದು ಮುಂಬೈ ದಾಳಿಯನ್ನು ಪುಡಿಗುಟ್ಟಿದರು. ಇದರಲ್ಲಿ ಪಂದ್ಯಶ್ರೇಷ್ಠ ಧೋನಿ ಪಾಲು 20 ಎಸೆತಗಳಿಂದ ಅಜೇಯ 51 ರನ್. ಸ್ಟ್ರೈಕ್‌ರೇಟ್ 255.00. ಈ ಸಿಡಿಲಬ್ಬರದ ಬ್ಯಾಟಿಂಗ್ ವೇಳೆ ಅವರು 6 ಬೌಂಡರಿ, 2 ಸಿಕ್ಸರ್ ಬಾರಿಸಿದರು.ಇನ್ನೊಂದು ಲೆಕ್ಕಾಚಾರದ ಪ್ರಕಾರ ಹೇಳುವುದಾದರೆ, ಮೊದಲ 9 ಓವರ್‌ಗಳಲ್ಲಿ ಚೆನ್ನೈ ಗಳಿಸಿದ್ದು ಬರೀ 47 ರನ್. ಉಳಿದ 11 ಓವರ್‌ಗಳಲ್ಲಿ ಹರಿದು ಬಂದದ್ದು 140 ರನ್!ಬ್ಯಾಟಿಂಗ್ ಕುಸಿತವೂ ಕಾರಣಮುಂಬೈ ಬ್ಯಾಟಿಂಗ್ ಕುಸಿತವೂ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿತು ಎಂಬುದಾಗಿ ಹರ್ಭಜನ್ ಹೇಳಿದರು. 'ತೆಂಡುಲ್ಕರ್ ಮತ್ತು ಸ್ಮಿತ್ ಅವರನ್ನು 2 ಓವರ್‌ಗಳ ಅಂತರದಲ್ಲಿ ಕಳೆದುಕೊಂಡೆವು. ಮುಂದಿನ ಕೆಲವು ಓವರ್‌ಗಳಲ್ಲಿ ರೋಹಿತ್ ಶರ್ಮ, ದಿನೇಶ್ ಕಾರ್ತಿಕ್ ವಿಕೆಟ್ ಕೂಡ ಉರುಳಿತು. ಹೀಗಾಗಿ ತಂಡ ತೀವ್ರ ಒತ್ತಡಕ್ಕೆ ಸಿಲುಕಿತು. ಮೊದಲ 13 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಳ್ಳದೇ ಹೋದರೆ, ರೋಹಿತ್ ಶರ್ಮ ಕನಿಷ್ಠ 18ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡಿದ್ದರೆ ಗೆಲುವು ಒಲಿದೀತೆಂಬ ವಿಶ್ವಾಸ ನಮ್ಮದಾಗಿತ್ತು. ಏಕೆಂದರೆ ಇದೇ ಅಂಗಳದಲ್ಲಿ ಬೆಂಗಳೂರ್ ವಿರುದ್ಧ 170 ಪ್ಲಸ್ ಮೊತ್ತವನ್ನು ನಾವು ಯಶಸ್ವಿಯಾಗಿ ಬೆನ್ನಟ್ಟಿದ್ದೆವು...' ಎಂದೂ ಭಜ್ಜಿ ನುಡಿದರು.'ಒಟ್ಟಾರೆ ಹೇಳುವುದಾದರೆ ನಾವು ಉತ್ತಮ ಪ್ರದರ್ಶನ ನೀಡಲಿಲ್ಲ. ಚೆನ್ನೈ ನಮಗಿಂತ ಎಷ್ಟೋ ಉತ್ತಮವಾಗಿ ಆಡಿ ಪಂದ್ಯವನ್ನು ಜಯಿಸಿತು. ಟಾಸ್‌ನಿಂದಾಗಿ ಯಾವುದೇ ಪರಿಣಾಮ ಉಂಟಾಗಲಿಲ್ಲ. ತಾನು ಟಾಸ್ ಜಯಿಸಿದ್ದರೂ ಮೊದಲು ಬೌಲಿಂಗ್ ಆಯ್ದುಕೊಳ್ಳುತ್ತಿದ್ದೆ ಎಂದು ಧೋನಿ ಕೂಡ ಹೇಳಿದ್ದರು...' ಎಂಬುದಾಗಿ ಹರ್ಭಜನ್ ಸಿಂಗ್ ಸೇರಿಸಿದರು.