ದುಬಾೖ: 2011ರ ವಿಶ್ವಕಪ್ ವೇಳೆ ಹಂಬಟೋಟಾದಲ್ಲಿ ನಡೆದ ಪಾಕಿಸ್ಥಾನ ವಿರುದ್ಧದ ಪಂದ್ಯದಲ್ಲಿ ಕೀನ್ಯಾದ ಆಟಗಾರನೊಬ್ಬ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿರುವ ಬಗ್ಗೆ ಐಸಿಸಿ ಶಂಕೆ ವ್ಯಕ್ತಪಡಿಸಿದ್ದು, ವಿಚಾರಣೆ ಆರಂಭಿಸಿದೆ.ವಿಶ್ವಕಪ್ ಪಂದ್ಯದಲ್ಲಿ ಕೀನ್ಯಾ ತಂಡವನ್ನು 112 ರನ್‌ಗಳಿಗೆ ಆಲೌಟ್ ಮಾಡಿದ ಪಾಕಿಸ್ಥಾನ ತಂಡ 205 ರನ್‌ಗಳ ಭಾರೀ ಜಯ ಸಾಧಿಸಿತ್ತು. ಕೀನ್ಯಾ ಬೌಲರ್‌ಗಳು ಎಕ್ಸ್‌ಟ್ರಾ ರೂಪದಲ್ಲಿ 37 ರನ್ ಬಿಟ್ಟುಕೊಟ್ಟು ವಿಶ್ವದಾಖಲೆಯನ್ನು ಸರಿಗಟ್ಟಿದ್ದರು.ಈ ಹಿನ್ನೆಲೆಯಲ್ಲಿ ಐಸಿಸಿ ಕೀನ್ಯಾ ಆಟಗಾರನ ವಿಚಾರಣೆ ನಡೆಸಲಿದೆ. ಆದರೆ ಈ ಸಂಬಂಧ ಆಟಗಾರನ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡದಂತೆ ಐಸಿಸಿ ಕೀನ್ಯಾ ಕ್ರಿಕೆಟ್ ಮಂಡಳಿಗೆ ಸೂಚಿಸಿದೆ ಎಂದು ಹೇಳಲಾಗಿದೆ.ಕೀನ್ಯಾ ತಂಡ ವಿಶ್ವಕಪ್‌ನಲ್ಲಿ ಒಂದೂ ಪಂದ್ಯ ಗೆಲ್ಲದೇ ಅಭಿಯಾನ ಪೂರ್ಣಗೊಳಿಸಿತ್ತು. ಇದರಿಂದ ಕೀನ್ಯಾ ತಂಡದ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಅಲ್ಲದೆ ತಂಡದ ಕೆಲವು ಹಿರಿಯ ಆಟಗಾರರಿಗೆ ಕೀನ್ಯಾ ಗುತ್ತಿಗೆ ಒಪ್ಪಂದದಿಂದಲೂ ವಜಾ ಮಾಡಿತ್ತು.ಟೂರ್ನಿಯ ವೇಳೆ ಕೆಲವು ಆಟಗಾರರನ್ನು ಬುಕ್ಕಿಗಳು ಸಂಪರ್ಕಿಸಿದ ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಐಸಿಸಿ ಭ್ರಷ್ಟಾಚಾರ ನಿಯಂತ್ರಣ ಘಟಕ ತನಿಖೆ ಆರಂಭಿಸಿದೆ.