Udayavani | May 24, 2012
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆಗೆ ಒಟ್ಟು 29,728 ಮಂದಿ ಹಾಜರಾಗಿದ್ದು, ಈ ಪೈಕಿ 25,476 ಮಂದಿ ಉತ್ತೀರ್ಣರಾಗಿದ್ದಾರೆ. ಪಾಸಾದವರಲ್ಲಿ ನಗರ ಪ್ರದೇಶದ ಅಭ್ಯರ್ಥಿಗಳೇ ಅಧಿಕ.
ಪರೀಕ್ಷೆ ಬರೆದವರಲ್ಲಿ 25,438 ಮೊದಲ ಬಾರಿ ಪರೀಕ್ಷೆ ಎದುರಿಸಿದವರಾಗಿದ್ದು, ಅವರಲ್ಲಿ 23,568 (ಶೇ. 92.65) ಮಂದಿ ಪಾಸಾಗಿದ್ದಾರೆ. 2,572 ಖಾಸಗಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 1,337 ಜನ (ಶೇ. 51.98) ಉತ್ತೀರ್ಣರಾಗಿದ್ದಾರೆ. 1,718 ಪುನರಾವರ್ತಿತ ಅಭ್ಯರ್ಥಿಗಳ ಪೈಕಿ 571 ಮಂದಿ (ಶೇ. 33.24) ತೇರ್ಗಡೆ ಹೊಂದಿದ್ದಾರೆ.
ಪರೀಕ್ಷೆಗೆ ಹಾಜರಾದ ಹುಡುಗರ ಸಂಖ್ಯೆ 14,424. ಉತ್ತೀರ್ಣರಾದವರು 11,790 (ಶೇ. 81.74). 15,304 ಮಂದಿ ಹುಡುಗಿಯರು ಪರೀಕ್ಷೆ ಬರೆದಿದ್ದು, ಅವರಲ್ಲಿ 13,686 (ಶೇ.89.43) ಮಂದಿ ಪಾಸಾಗಿದ್ದಾರೆ.
ಕಲಾ ವಿಭಾಗದಲ್ಲಿ 7,617 ಮಂದಿ ಹಾಜರಾಗಿದ್ದು, 6,163 (ಶೇ. 80.91) ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 12,736 ಮಂದಿ ಪರೀಕ್ಷೆ ಬರೆದಿದ್ದು, 10,879 ಮಂದಿ (ಶೇ 85.41) ತೇರ್ಗಡೆಯಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 9,373 ಜನ ಪರೀಕ್ಷೆಗೆ ಹಾಜರಾಗಿದ್ದು, 8,434 ಮಂದಿ (ಶೇ. 89.98) ಪಾಸಾಗಿದ್ದಾರೆ.
ನಗರ ಪ್ರದೇಶದಿಂದ ಹಾಜರಾದ 19,015 ಮಂದಿ ವಿದ್ಯಾರ್ಥಿಗಳ ಪೈಕಿ 16,841 (ಶೇ. 88.57) ಹಾಗೂ ಗ್ರಾಮೀಣ ಪ್ರದೇಶದಿಂದ ಪರೀಕ್ಷೆ ಬರೆದ 10,713 ವಿದ್ಯಾರ್ಥಿಗಳ ಪೈಕಿ 8,635 (ಶೇ. 80.6) ಮಂದಿ ಉತ್ತೀರ್ಣರಾಗಿದ್ದಾರೆ.
11 ಕಾಲೇಜುಗಳಿಗೆ ಶೇ. 100 ಫಲಿತಾಂಶ
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 5 ಸರಕಾರಿ ಕಾಲೇಜುಗಳ ಸಹಿತ ಜಿಲ್ಲೆಯ ಒಟ್ಟು 11 ಪದವಿಪೂರ್ವ ಕಾಲೇಜುಗಳಿಗೆ ಶೇ. 100 ಫಲಿತಾಂಶ ಬಂದಿದೆ.
ಅವುಗಳ ವಿವರ : ಮಂಗಳೂರು ತಾಲೂಕಿನ ಮುತ್ತೂರು, ತೆಂಕ ಮಿಜಾರು ಮತ್ತು ಚೇಳಾಯರು ಸರಕಾರಿ ಪ.ಪೂ. ಕಾಲೇಜು; ಬಂಟ್ವಾಳ ತಾಲೂಕಿನ ಮೊಂಟೆಪದವು ಸರಕಾರಿ ಪ.ಪೂ. ಕಾಲೇಜು, ಬೆಳ್ತಂಗಡಿ ತಾಲೂಕಿನ ಅರಸಿನ ಮಕ್ಕಿ ಸರಕಾರಿ ಪ.ಪೂ. ಕಾಲೇಜು, ಕಾಟಿಪಳ್ಳದ ನಾರಾಯಣಗುರು ಪ.ಪೂ. ಕಾಲೇಜು, ಅಳಿಕೆ ಸತ್ಯಸಾಯಿ ಪ.ಪೂ. ಕಾಲೇಜು, ಪುತ್ತೂರು ತಾಲೂಕಿನ ಅಲಂಗಾರು ದುರ್ಗಾಂಬಾ ಪ.ಪೂ. ಕಾಲೇಜು, ಮಂಗಳೂರಿನ ಬಿಜಿಎಸ್ ಪ.ಪೂ. ಕಾಲೇಜು, ಸುಳ್ಯದ ಅಲೆಟ್ಟಿಯ ರೋಟರಿ ಪ.ಪೂ. ಕಾಲೇಜು ಮತ್ತು ಕಾಟಿಪಳ್ಳದ ಹಸನಬ್ಬ ಮಾಸ್ಟರ್ ಪ.ಪೂ. ಕಾಲೇಜು ಕಾಟಿಪಳ್ಳ.