ದೀಪಾವಳಿ: ಸಂಭ್ರಮ ಮತ್ತು ನಿರೀಕ್ಷೆಗಳಿಂದ ಕಾದಿರುವ ಹಬ್ಬ. ದೀಪಾವಳಿ ಅಂದರೆ ಅದು ಕೇವಲ ಹಬ್ಬವಲ್ಲ; ಅದು ಸಮಗ್ರ ಕುಟುಂಬಕ್ಕೆ ಆನಂದ ಮತ್ತು ಚೈತನ್ಯವನ್ನು ನೀಡುವ ಸಂದರ್ಭ. ಸಮಗ್ರ ಕುಟುಂಬವನ್ನು ತನ್ನ ಪರಿಸರದ ಜತೆ ಬೆಸೆದು ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವಂತೆ ಮಾಡುವ ಸಂದರ್ಭವೂ ಹೌದು.

ದೀಪಾವಳಿ ಅಂದರೆ ದೀಪ+ಆವಳಿ. ಬೆಳಕಿನ ಸರಣಿ ಎಂದರ್ಥ. ಆವಳಿ ಎಂದರೆ ಸಮೂಹ ಅಥವಾ ಸರಣಿ. ಇದು ದೀಪಗಳ ಹಬ್ಬ. ದೀಪ ಅನ್ನುವ ರೂಪಕವೇ ಅದ್ಭುತ. ಇದು ಕೇವಲ ಬೆಳಕನ್ನು ನೀಡುವ ದೀಪವಲ್ಲ. ಇದು ಬಾಳಿಗೆ ಬೆಳಕು ನೀಡುವ ಚೈತನ್ಯ ದೀಪ. ಇದು ಅಂಧಕಾರವನ್ನು ಕಳೆಯುವ ಬೆಳಕು. ಇದು ತಾನು ಬೆಳಗಿ ಜಗತ್ತಿಗೆ ಬೆಳಕನ್ನು ಹರಡುವ ದೀಪದ ಸಂಕೇತದ ವೈಭವ. ತಾನೂ ಆನಂದಪಟ್ಟು ಆ ಆನಂದವನ್ನು ಜಗತ್ತಿಗೂ ಹಂಚಬೇಕೆಂಬ ಸಂದೇಶವನ್ನು ಸಾರುವ ದಿವ್ಯಾನುಭವ. ಆದ್ದರಿಂದಲೇ, ದೀಪಾವಳಿಯ ಒಂದೊಂದು ಆಚರಣೆಯೂ ಪರಂಪರೆಯ ಅದ್ಭುತ ಆಚರಣೆ.

ದೀಪಾವಳಿ ಹಬ್ಬದ ಪರಿಕಲ್ಪನೆಯೇ ಅನನ್ಯ. ದೀಪಾವಳಿ ಆರಂಭವಾಗಿ ಸಂಪನ್ನಗೊಳ್ಳುವ ಕ್ಷಣದವರೆಗೂ ಈ ಪರಂಪರೆ ವಿಜೃಂಭಿಸುತ್ತದೆ. ಹಾಗಾಗಿಯೇ ದೀಪಾವಳಿಗೆ ಹಬ್ಬಗಳ ಸರಣಿಯಲ್ಲಿ ವಿಶಿಷ್ಠವಾದ ಸ್ಥಾನ. ದೀಪಾವಳಿಗೆ ಅಷ್ಟೊಂದು ಮಹತ್ವ.

ಸ್ನಾನದ ಹಬ್ಬದಿಂದ ಆರಂಭವಾಗುತ್ತದೆ ದೀಪಾವಳಿ. ಸ್ನಾನಕ್ಕೆ ಪೂರ್ವಭಾವಿಯಾಗಿ ಹಿಂದಿನ ರಾತ್ರಿ ಸ್ನಾನಪಾತ್ರೆಗಳಿಗೆ ನೀರು ತುಂಬುವುದು ಕೂಡಾ ಹಬ್ಬ. ಗ್ರಾಮೀಣ ಮತ್ತು ಸ್ವಲ್ಪಂಶ ನಗರ ಪ್ರದೇಶಗಳಲ್ಲಿ ಗುಡಾಣಕ್ಕೆ ನೀರು ತುಂಬಲಾಗುತ್ತದೆ. ಗುಡಾಣ ಮತ್ತು ಜತೆಗಿನ ಪಾತ್ರೆಗಳಿಗೆಲ್ಲ ಹೂಗಳ ಶೃಂಗಾರ! ನೀರು ತುಂಬುವ ಪ್ರಕ್ರಿಯೆಯೇ ಒಂದು ಹಬ್ಬ. ಜಾಗಟೆಯ ಸದ್ದಿನ ಹಿನ್ನೆಲೆಯಲ್ಲಿ ನಡೆಯುತ್ತದೆ ಈ ಪ್ರಕ್ರಿಯೆ. ಮಕ್ಕಳಿಗಂತೂ ಇದು ಕುತೂಹಲ ಸಹಿತವಾದ ಆಸಕ್ತಿಯ ಸಂದರ್ಭ. ಮರುದಿನ ಮುಂಜಾನೆ ಎಣ್ಣೆ ಸ್ನಾನ. ಎಣ್ಣೆಯನ್ನು ಹಚ್ಚಿಕೊಳ್ಳುವುದು ಕೂಡಾ ದೇವರ ಕೋಣೆಯಲ್ಲಿ. ಮನೆಯ ಹಿರಿಯರಿಂದ ಚಾಲನೆ. ತೈಲಾಭ್ಯಂಜನವಂತೂ ಆಹ್ಲಾದಕರವಾದ ಪ್ರಕ್ರಿಯೆ. ಹಾಗೆ ನೋಡಿದರೆ, ಇದು ಕೇವಲ ಮಜ್ಜನವಲ್ಲ; ಇದು ಸಂಭ್ರಮದ ಹಬ್ಬಕ್ಕೆ ಸಂಭ್ರಮದ ಸಿದ್ಧತೆ. ಕೊಳೆ ಕಳೆದು ನಿರ್ಮಲವಾಗುವ ಪ್ರಕ್ರಿಯೆಯೇ ಸಂಕೇತ. ಹಬ್ಬವೆಂದರೆ ಇದೇ ಅಲ್ಲವೇ ? ಎಲ್ಲರೂ ಪರಿಶುಭದ್ರ. ಆಚರಣೆಯಂತೆ ಮನಸ್ಸು ಕೂಡಾ.

ದೀಪಾವಳಿಯ ಆಚರಣೆಗೆ ಇದು ಮುನ್ನುಡಿ. ನೀರು ತುಂಬುವ ರಾತ್ರಿಯ ಮರುದಿನದ ಮುಂಜಾನೆ ಈ ಸ್ನಾನದ ಹಬ್ಬ. ಸುತ್ತಮುತ್ತಲೂ ಸುಡುಮದ್ದಿನ ಧ್ವನಿ-ಬೆಳಕಿನ ವೈವಿಧ್ಯ. ನರಕಚತುರ್ದಶಿ ಎಂಬ ಆಚರಣೆ. ಇದಕ್ಕೆ ಪೂರಕವಾಗಿ ಪುರಾಣ, ಮಹಾಕಾವ್ಯಗಳ ಕಥಾನಕ. ಅದರ ಮರುದಿನ ಬಲಿಪಾಡ್ಯಮಿ- ಬಲೀಂದ್ರ ಪೂಜೆ. ಈ ಪೂಜೆಯು ಬಹುನಂಬಿಕೆಗಳ ಆಚರಣೆ. ಫಲವಂತಿಕೆಯ ಆರಾಧನೆಯ ಜತೆಯಲ್ಲಿ ಭೂಮಿತಾಯಿಗೂ ಪೂಜೆ ಸಲ್ಲಿಸುವ ರೀತಿಯ ಪರಂಪರೆ. ಧಾನ್ಯ ಸಮೃದ್ಧಿ ನೀಡಿದ ಭೂಮಿಗೆ ವಂದನೆ. ಪೂರಕವಾಗಿ ಬಲೀಂದ್ರನ ಕಥಾನಕ. ದೀಪಾವಳಿಯ ಸಂದರ್ಭದಲ್ಲಿ ಲಕ್ಷ್ಮಿಪೂಜೆಯ ಸಂಭ್ರಮ-ಧನಲಕ್ಷ್ಮಿಯ ಆರಾಧನೆ. ಹೀಗೆ ಧನ-ಧಾನ್ಯ ಲಕ್ಷ್ಮಿಯವರಿಗೆ ಪೂಜೆ. ಜತೆಯಲ್ಲಿ ಗೋಪೂಜೆ. ಅನಾದಿ ಕಾಲದಿಂದಲೂ ಭಾರತದಲ್ಲಿ ಗೋಮಾತೆ ಎಂಬ ನೆಲೆಯಲ್ಲಿ ಪೂಜೆ ಸಲ್ಲಿಸುತ್ತಾ ಬರಲಾಗಿದೆ. ಆದ್ದರಿಂದಲೇ, ದೀಪಾವಳಿಯ ಆಚರಣೆಗಳು ಬಹುಮುಖೀ. ಮಾನವ ತನ್ನ ಸಂತಸದ ಬದುಕಿಗೆ ಕಾರಣವಾಗಿರುವ ಸರ್ವಸ್ವಗಳನ್ನೂ ಪೂಜಿಸಿ, ಕೃತಜ್ಞತೆ ವ್ಯಕ್ತಪಡಿಸಿ, ಮತ್ತಷ್ಟು ಶ್ರೇಯೋಭಿವೃದ್ಧಿಯನ್ನು ಕೋರುವ ಸಂದರ್ಭ.

ಈ ಆಚರಣೆಯು ಮುಂದೆ ತುಳಸೀ ಹಬ್ಬದವರೆಗೆ ಸಾಗುತ್ತದೆ. ಇಲ್ಲಿಯೂ ಪೌರಾಣಿಕ ಕಥಾನಕಗಳ ಹಿನ್ನೆಲೆ ಇದೆ. ದೀಪಾವಳಿಯ ಪ್ರತಿಯೊಂದು ಆಚರಣೆಯೂ ತನ್ನದೇ ಆದ ವೈಶಿಷ್ಠÂಗಳನ್ನು ಹೊಂದಿರುತ್ತದೆ. ಬಗೆಬಗೆಯ ಗೂಡುದೀಪಗಳಿಂದ ಮತ್ತಷ್ಟು ಅಲಂಕಾರ.
** ** ** **
ದೀಪಾವಳಿ ಸರ್ವರ ಪಾಲಿಗೆ ಸಂಭ್ರಮದ ಹಬ್ಬ. ಎಳೆಯರಿಗಂತೂ ಎಲ್ಲಿಲ್ಲದ ಸಂಭ್ರಮ. ಈ ಸಂಭ್ರಮಕ್ಕೆ ವಿಶೇಷ ಕಾರಣ: ಪಟಾಕಿ ಇತ್ಯಾದಿ ಸುಡುಮದ್ದುಗಳು. ದೀಪಾವಳಿ ಎಂದರೆ ಬೆಳಕಿನ ಹಬ್ಬ. ಆದ್ದರಿಂದಲೇ ಸುಡುಮದ್ದುಗಳಿಗೆ ಆದ್ಯತೆ.
ನಮ್ಮ ಬಾಲ್ಯಕಾಲದಲ್ಲಿ ಕೇಪು ಎಂಬ ಕೆಂಪಗಿನ, ಬಿಂದಿಯಷ್ಟು ಪುಟ್ಟ ಗಾತ್ರದ ಸುಡುಮದ್ದಿನಿಂದ ಈ ಶ್ರೇಣಿ ಆರಂಭ. ಪುಟ್ಟ ಪೇಪರ್ ಕರಡಿಗೆಯಲ್ಲಿ ಇದು ಲಭ್ಯ. ಒಂದೊಂದನ್ನೇ ಕಲ್ಲಿನ ಮೇಲಿಟ್ಟು ಇನ್ನೊಂದು ಕಲ್ಲಿನಿಂದ ಜಜ್ಜಿ ಇದನ್ನು ಹೊಡೆಯುವಾಗ ಕೇಪು ಒಡೆದು ಶಬ್ಧ. ಆ ಕಾಲಕ್ಕೆ ಈ ಸದ್ದು ಕೂಡಾ ರೋಮಾಂಚಕಾರಿ! ಸುತ್ತೆಯಿಂದ ಹೊಡೆದು ಒಡೆಯುವುದೂ ಇತ್ತು. ಅನೇಕ ಬಾರಿ ಕೇಪುವಿನ ಗುರಿ ತಪ್ಪಿ ಕೈಗೇ ಹೊಡೆದುಕೊಂಡು ಕೇಪುವಿಗಿಂತ ಅನೇಕ ಪಟ್ಟು ಜೋರಾದ ಬೊಬ್ಬೆ ಹೊಡೆದು ಸದ್ದು ಮಾಡುವುದೂ ಇತ್ತು!

ಮುಂದೆ ರೀಲ್‌ಕ್ಯಾಪ್ ಎಂಬ ಹೆಸರಿನಲ್ಲಿ ರೀಲ್‌ನಲ್ಲಿ ಸರಣಿ ಸುತ್ತಿದ ಹತ್ತಿಪ್ಪತ್ತು ಕೇಪುಗಳು ಬಂದವು. ಅದನ್ನು ಒಡೆಯಲು ಪುಟ್ಟ ಪಿಸ್ತೂಲ್! ಈ ಪಿಸ್ತೂಲನ್ನು ಸೊಂಟಕ್ಕೆ ಸಿಕ್ಕಿಸಿ ಅನೇಕ ಪುಟಾಣಿಗಳು ಮಿಲಿಟರಿಯವರ ಶೈಲಿಯಲ್ಲಿ ಓಡಾಡುವುದು ನಮ್ಮ ಬಾಲ್ಯ ಕಾಲದಲ್ಲಿ ನಮ್ಮ ಹಳ್ಳಿಯಲ್ಲಿ ಕಂಡು ಬರುತ್ತಿತ್ತು. ಆದರೆ, ಕಲ್ಲಿನಿಂದ ಕೇಪು ಒಡೆಯುವುದೇ ಮಿತವ್ಯಯಕಾರಿಯಾಗಿತ್ತು!
ಇದರ ಮುಂದಿನ ಹಂತ ನೆಲಗುಮ್ಮ. ನಮ್ಮ ಊರಾದ ಯರ್ಲಪಾಡಿ ಗ್ರಾಮದ ಗೋವಿಂದೂರುಪೇಟೆಯಲ್ಲಿ (ನನ್ನ ಕರ್ವಾಲು ಮನೆಯಿಂದ ಅರ್ಧ ಕಿ.ಮೀ.) ಒಂದು ಕುಟುಂಬ ಸುಡುಮದ್ದು ತಯಾರಿಯ ಕಾರ್ಯನಿರತವಾಗಿತ್ತು. ಆ ಕಾಲಕ್ಕೆ ಪರಿಸರದ ಹತ್ತಿಪ್ಪತ್ತು ಗ್ರಾಮಗಳ ಎಲ್ಲಾ ಉತ್ಸವಗಳಿಗೆ ಅವರೇ ಬಗೆಬಗೆಯ ಸುಡುಮದ್ದು ತಯಾರಿಸಿಕೊಡುತ್ತಿದ್ದರು. ಗರ್ನಾಲು, ಕದೊಣಿಯಿಂದ ತಿರುಗುವ ಕುದುರೆ ಇತ್ಯಾದಿಗಳವರೆಗೂ ಅವರು ತಯಾರಿ ನಡೆಸುತ್ತಿದ್ದರು. ಈ ಮನೆಯಲ್ಲಿ ನಮಗೆ ಬೇಕಾದ ಚಿಕ್ಕಪಟ್ಟ ಪಟಾಕಿಗಳು ದೊರೆಯುತ್ತಿದ್ದವು. ಅದರಲ್ಲಿ ನೆಲಗುಮ್ಮ ಕೂಡಾ ಒಂದು.

ಈ ನೆಲಗುಮ್ಮ ಎಂಬುದು ಕೇಪು (ಕ್ಯಾಪ್) ಎಂಬ ಚಿಕಣಿಯ ಸುಧಾರಿತ ತಾಂತ್ರಿಕ ಸ್ವರೂಪ ಆಗಿದ್ದಿರಬಹುದು. ಅದರ ಜುಟ್ಟು ಹಿಡಿದು ನೆಲಕ್ಕೆ, ಗೋಡೆಗೆ ಬಡಿದರೆ ಢಂ! ಅನೇಕ ಬಾರಿ ಇದು ಟುಸ್ ಆಗುವುದೂ ಇದೆ. ಎದುರಲ್ಲಿ ಯಾರಾದರೂ ನಡೆದುಕೊಂಡು ಹೋಗುತ್ತಿದ್ದರೆ, ಅವರಿಗೆ ಗೊತ್ತಾಗದಂತೆ ಹಿಂದಿನಿಂದ ಬಡಿದಾಗ ಅವರು ಬೆಚ್ಚಿ ಬಿದ್ದರೆ ನಮಗೆಲ್ಲಾ ಎಂತಹ ಸಂಭ್ರಮ.. ಅವರಿಂದ ಎರಡು ಬೈಗುಳ ದೊರೆತರೂ ಪರವಾಗಿಲ್ಲ. ಅವರನ್ನು ಹೆದರಿಸಿದ ಸಂತೃಪ್ತಿಯಲ್ಲಿ ಈ ಬೈಗುಳಗಳು ನಗಣ್ಯ!
ನೆಲಗುಮ್ಮದ ನಂತರದ ಹಂತ ಓಲೆ ಪಟಾಕಿ. ಗರಿಯಲ್ಲಿ ಅಂದರೆ ತುಳುವಿನ ಒಲಿಯಲ್ಲಿ ಸುತ್ತಿದ ಪಟಾಕಿ ಇದು.
ಪಟಾಕಿ ಸಿಡಿಸುವ ಎಲ್ ಬೋರ್ಡಿನವರಿಗೆ ಇದು ಅನುಕೂಲಕರ. ಒಲಿ ಪಟಾಕಿ ಅಪಾಯಕಾರಿಯಲ್ಲ. ಬಳಿಕ ನಿಜ ಅರ್ಥದ ಪಟಾಕಿ. ಸೀಮೆ ಎಣ್ಣೆ ದೀಪ ಅಥವಾ ಕ್ಯಾಂಡಲ್ ಉರಿಸಿ ಅಲ್ಲಿಂದ ಈ ಪಟಾಕಿಯ ಮದ್ದಿನಭಾಗಕ್ಕೆ ಬೆಂಕಿ ಕೊಟ್ಟು ಎಸೆಯಬೇಕು. ಅನೇಕ ಬಾರಿ ಇದು ಕೈಯಲ್ಲಿ ಸಿಡಿಯುವ ಅಪಾಯವಿದೆ. ಕೆಲವು ಬಾರಿ ಸೀಮೆಎಣ್ಣೆ ದೀಪವೂ ಒಡೆದ ಸಂದರ್ಭವಿದೆ. ರಕ್ಷಣಾತ್ಮಕ ಕ್ರಮವಾಗಿ: ದೂರದಲ್ಲಿ ಈ ಪಟಾಕಿಯನ್ನು ಇಟ್ಟು ಉದ್ದನೆಯ ಕೋಲಿನ ತುದಿಗೆ ಬತ್ತಿಯನ್ನು ಇರಿಸಿ, ಮೊದಲು ಬತ್ತಿಯನ್ನು ಉರಿಸಿ, ಆ ಬೆಂಕಿಯಿಂದ ಪಟಾಕಿಯ ಬಾಲವನ್ನು ಸುಡುವ ತಾಂತ್ರಿಕತೆಯನ್ನು ಆ ಕಾಲಕ್ಕೇ ಅನುಸರಿಸಲಾಗುತ್ತಿತ್ತು. ಈಗಲೂ ಇದು ಚಾಲ್ತಿಯಲ್ಲಿದೆ. ಮುಂದಿನ ಹಂತ ಮಾಲೆ ಪಟಾಕಿ. ಇದನ್ನು ಸಡುವವನಿಗೆ ಆ ಪರಿಸರದಲ್ಲಿ ಧೈರ್ಯವಂತ ಎಂಬ ಬಿರುದು ಇತ್ತು. ಈಗೀಗ ಮೀಟರುಗಟ್ಟಲೆ ಉದ್ದದ ಮಾಲೆ ಪಟಾಕಿ ಇದೆ. ಮೆರವಣಿಗೆ, ವಿಜಯೋತ್ಸವ, ಪ್ರತಿಭಟನೆ.. ಇತ್ಯಾದಿಗಳಲ್ಲಿ ಇದನ್ನು ಸುಟ್ಟು ವಿಜೃಂಭಿಸುವವರಿದ್ದಾರೆ. ಪೆಟ್ರೋಲ್ ಪಂಪ್‌ಗ್ಳ ಬಳಿಯೂ ಇದನ್ನು ಸುಡುವವರ ಧಾಘÂìಕ್ಕೆ ಮತ್ತು ಹೊಣೆಗೇಡಿತನಕ್ಕೆ ಏನನ್ನಬೇಕೋ ತಿಳಿಯುವುದಿಲ್ಲ. (ಇದು ಈಗ ಮೂಡಿರುವ ಚಿಂತನೆ. ಬಾಲ್ಯದಲ್ಲಿ ಇಂತಹ ದೃಶ್ಯಗಳನ್ನು ನೋಡಿಲ್ಲ. ಏಕೆಂದರೆ, ನಮ್ಮ ಊರಲ್ಲಿ ಪೆಟ್ರೋಲ್ ಪಂಪ್ ಇರಲಿಲ್ಲ).

ಮುಂದೆ ಆಟಂಬಾಂಬ್ ಎಂಬ ದೊಡ್ಡ ಪಟಾಕಿ ಅಂಗಡಿಗಳಲ್ಲಿ ದೊರೆಯಲಾರಂಭಿಸಿತು. ಗಾತ್ರವೂ ದೊಡ್ಡದು; ಶಬ್ಧವೂ ದೊಡ್ಡದು! ಈಗ ಪಟಾಕಿ ಇತ್ಯಾದಿಗಳೆಲ್ಲವೂ ತಾಂತ್ರೀಕರಣಗೊಂಡಿದೆ.
ಇತ್ತೀಚೆಗಿನ ವರ್ಷಗಳಲ್ಲಿ ಪಟಾಕಿ ಸಿಡಿಸುವ ಸಂದರ್ಭದ ಅನೇಕ ಅನಾಹುತಗಳ ಬಗ್ಗೆ ವರದಿಯಾಗುತ್ತಿದೆ. ಆದ್ದರಿಂದ, ಸುಡುಮದ್ದುಗಳಿಗೆ ಸಂಬಂಧಿಸಿದಂತೆ ಮುಂಜಾಗೃತೆಯನ್ನು ಎಳೆಯರು, ಯುವಕರು, ಹಿರಿಯರೆನ್ನದೆ ಸರ್ವರೂ ವಹಿಸಿಕೊಳ್ಳಲೇಬೇಕು. ಹಬ್ಬಗಳ ಸಂದರ್ಭದ ಸುಡುಮದ್ದುಗಳನ್ನು ನಾವು ಸುಡಬೇಕೇ ಹೊರತು ಅವುಗಳು ನಮ್ಮನ್ನು ಸುಡುವಂತಾಗಬಾರದು.
ಇನ್ನು ನಕ್ಷತ್ರ ಕಡ್ಡಿ, ನೆಲಚಕ್ರ, ವಿಷ್ಣುಚಕ್ರ ಇತ್ಯಾದಿ ಶಬ್ಧರಹಿತ-ಬೆಳಕು ಸಹಿತ ಪರಿಕರಗಳ ಬಗ್ಗೆ ಮುಂದೆ ಮಾಹಿತಿಗಳನ್ನು ಹಂಚಿಕೊಳ್ಳೋಣ. ದೀಪಾವಳಿಯ ಶುಭಾಶಯಗಳು.
ಚಿತ್ರಗಳು - ಸತೀಶ್ ಇರಾ