ಅನುಸೂಯ ಶರ್ಮ | May 29, 2012
ಸುವರ್ಣ ಗೆಡ್ಡೆ ಬೆಳೆದರೆ ನಾನಾ ಲಾಭ. ಬಹಳ ದಿನ ಬಾಳಿಕೆ ಬರುವ ಗೆಡ್ಡೆಯಾದ್ದರಿಂದ, ಹೆಚ್ಚು ದಿನ ಇಟ್ಟು ಬಳಸಬಹುದು. ಕೆಲವು ಕೃಷಿಕರು ಇದನ್ನು ಏಕ ಬೆಳೆಯಾಗಿ ಬೆಳೆದಿದ್ದಾರೆ. ಇತ್ತೀಚೆಗೆ ಸಾವಯವ ಕೃಷಿಯಲ್ಲಿ ಅಂತರ ಬೆಳೆಯಾಗಿ ಸ್ಥಾನ ಗಳಿಸಿದೆ. ತೆಂಗಿನ, ಅಡಿಕೆ ತೋಟಗಳಲ್ಲಿ, ಬಾಳೆ ಮಧ್ಯೆ ಅಂತರ ಬೆಳೆಯಾಗಿ ಬೆಳೆಯುತ್ತಿದ್ದಾರೆ. ಇನ್ನು ನೀವು?
ಸುವರ್ಣ ಗೆಡ್ಡೆ ಹೂ ಬಿಡುವುದು ಅಪರೂಪ. ಬಿಡಟ್ಟರೆ ಹೂವಿನ ದುರ್ವಾಸನೆ ಸಹಿಸುವುದು ಕಷ್ಟ ಎಂಬುದು ಬೆಳೆದವರ ಅನುಭವ. ಗೆಡ್ಡೆ ಕೀಳದೆ ಬಿಟ್ಟರೆ ನಾಲ್ಕನೆಯ ವರ್ಷದಲ್ಲಿ ಹೂವು ಬಿಡಬಹುದು. ಚಿತ್ತಾಕರ್ಷಕ ಹೂವು ನೋಡಲು ಚೆನ್ನ. ಸಾಕಷ್ಟು ಎತ್ತರ ಬೆಳೆಯುವ ಗಿಡ. ಹೆಚ್ಚು ಹ್ಯೂಮಸ್ ಇರುವ, ಚೆನ್ನಾಗಿ ನೀರು ಬಸಿದು ಹೋಗುವಂತಿರುವ, ಮರಳು ಮಿಶ್ರಿತ ಮಣ್ಣು ಈ ಗಿಡದ ಬೆಳವಣಿಗೆಗೆ ಸೂಕ್ತ. ದೊಡ್ಡ ಗೆಡ್ಡೆಯ ಸಣ್ಣ ಚೂರುಗಳನ್ನು ನಾಟಿಗೆ ಬಳಸಬಹುದು. ಆದರೆ ಪ್ರತಿ ತುಂಡು 30-40 ಗ್ರಾಂಗಳಿಗಿಂತ ಕಮ್ಮಿ ಇರಬಾರದು. ಗಿಡಕ್ಕೆ ಹೆಚ್ಚಿನ ಆಧಾರವಾಗಲು ಸಹಾಯವಾಗುವಂತೆ ಗೆಡ್ಡೆಯ ತುಂಡನ್ನು ಆಳದಲ್ಲಿ ನಾಟಿ ಮಾಡಬೇಕು. ಕುಂಡಗಳಲ್ಲಿ ಚೀಲಗಳಲ್ಲಿ ಹಾಗೇ ಹಿತ್ತಲಿನಲ್ಲಿ ಬೆಳೆಯಬಹುದಾದ ಗಿಡ. ಬೆಳವಣಿಗೆಯ ಹಂತದಲ್ಲಿ ನೀರು ಬೇಕಾಗುತ್ತದೆ. ಆದರೆ ಗೆಡ್ಡೆxಗಳ ಸುಪ್ತಾವಸ್ಥೆಯ (ಡಾರ್ಮೆನ್ಸಿ) ಸಮಯದಲ್ಲಿ ನೀರಿನ ಅವಶ್ಯಕತೆ ಕಮ್ಮಿ. ಸಮ ಪ್ರಮಾಣದ ಗೊಬ್ಬರದಿಂದ ಗೆಡ್ಡೆ ದಪ್ಪವಾಗುತ್ತದೆ.

ಅಲ್ಲಲ್ಲೇ ಕಾಡಿನಲ್ಲಿ ಬೆಳೆಯುತ್ತಿದ್ದ ನಾಟಿ(ವೈಲ್ಡ್)ಗೆಡ್ಡೆಗಳ ಹೊರ ಮೈ ತುಂಬ ಒರಟು. ಆದರೆ ನಾಡಿನಲ್ಲಿ ಬೆಳೆಯುವ ಸುಧಾರಿತ ಗೆಡ್ಡೆಗಳು ನಯವಾಗಿಲ್ಲದಿದ್ದರೂ, ಸ್ವಲ್ಪಕಡಿಮೆ ಒರಟು. ಒಳಗೆ ಬಂಗಾರದ ಬಣ್ಣ, ಸಾಧಾರಣ ಒರಟು ಮೈ, ಇವೆಲ್ಲ ಸುಧಾರಿತ ಬೇಸಾಯ ಕ್ರಮಗಳ, ಗೊಬ್ಬರದ ಸೇರ್ಪಡೆಯಿಂದಾದ ಮಾರ್ಪಾಡುಗಳು. ಬೆಳೆಯುವ ಹಂತದಲ್ಲಿ ಹೆಚ್ಚು ಬಿಸಿಲಿದ್ದರೆ ಅನುಕೂಲ. ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲೂ , ನೀರಾವರಿಯಲ್ಲೂ ಬೆಳೆಯಬಹುದು. ಜೇಡಿ ಮಣ್ಣಿನಲ್ಲಿ ನೀರು ನಿಲ್ಲುವ ಸಂಭವ ಉಂಟು. ಗೆಡ್ಡೆ ಕೊಳೆಯುವ ಆತಂಕ ಸಹ ಇರುತ್ತದೆ. ಗಿಡದ ಸುತ್ತ ಕೈಯಾಡಿಸಿ ಮಣ್ಣು ಸಡಿಲ ಗೊಳಿಸಿದರೆ ಗಾಳಿಯಾಡಲು ಸಹಾಯಕವಾಗುತ್ತದೆ. ಮಣ್ಣು ಏರಿಹಾಕಿ, ಮುಚ್ಚಿಗೆ ಮಾಡುವುದು ಗಿಡದ ಬೆಳವಣಿಗೆಗೆ ಅನುಕೂಲ.
ಬಹಳ ದಿನ ಬಾಳಿಕೆ ಬರುವ ಗೆಡ್ಡೆಯಾದ್ದರಿಂದ, ಹೆಚ್ಚು ದಿನ ಇಟ್ಟು ಬಳಸಬಹುದು. ಕೆಲವು ಕೃಷಿಕರು ಇದನ್ನು ಏಕ ಬೆಳೆಯಾಗಿ ಬೆಳೆದಿದ್ದಾರೆ. ಇತ್ತೀಚೆಗೆ ಸಾವಯವ ಕೃಷಿಯಲ್ಲಿ ಅಂತರ ಬೆಳೆಯಾಗಿ ಸ್ಥಾನ ಗಳಿಸಿದೆ. ತೆಂಗಿನ, ಅಡಿಕೆಯ ತೋಟಗಳಲ್ಲಿ, ಬಾಳೆ ಮಧ್ಯೆ ಅಂತರ ಬೆಳೆಯಾಗಿ ಬೆಳೆಯುತ್ತಿದ್ದಾರೆ. ಈ ಗಿಡಕ್ಕಾಗಿ ಪ್ರತ್ಯೇಕ ಗೊಬ್ಬರ ನೀರು ಕೊಡಬೇಕಿಲ್ಲ. ಒಮ್ಮೆ ನಾಟಿ ಮಾಡಿದರೆ ನಾಲ್ಕು ವರ್ಷದ ವರೆಗೆ ಯೋಚನೆ ಇಲ್ಲದೆ ಬೆಳೆಯುತ್ತೆ. 8-12 ತಿಂಗಳ ಬೆಳೆಯಾದರೂ, ಮೊದಲೆರಡು ವರ್ಷ ಗೆಡ್ಡೆ ದಪ್ಪನಾಗಿರುವುದಿಲ್ಲ. ನಾಲ್ಕನೆಯ ವರ್ಷಕ್ಕೆ ಗೆಡ್ಡೆ ಸುಮಾರು 3-9 ಕೆಜಿಯಷ್ಟು ತೂಕ ಪಡೆದುಕೊಳ್ಳುತ್ತದೆ. ಗಿಡದ ಎಲೆಗಳು ಒಣಗಿ ಹಳದಿ ಬಣ್ಣಕ್ಕೆ ತಿರುಗಿದಾಗ, ಗೆಡ್ಡೆ ಕೀಳಬಹುದು. ಹಲವಾರು ತಿನಿಸುಗಳನ್ನು ಮಾಡ ಬಹುದಾದ ಈ ಗೆಡ್ಡೆ ನಿಮ್ಮಲ್ಲಿದ್ದರೆ ದಿಢೀರನೆ ಬರುವ ಅತಿಥಿಗಳನ್ನು ಸುಧಾರಿಸುವುದು ಸುಲಭ. ತಮಿಳುನಾಡಿನವರು ಮಾಡುವ ಅವೈಲ್‌ಗೆ ಈ ಗೆಡ್ಡೆ ಇರಲೇ ಬೇಕು. ಪೊರಿಯಲ್ ಸಹ ಬಹು ಬೇಡಿಕೆಯುಳ್ಳದ್ದು.
ನಮ್ಮಲ್ಲಿ (ಋತುಪರ್ಣ ಸಾವಯವ ತೋಟ, ಅರಳು ಮಲ್ಲಿಗೆ) ಬೆಳೆದಿದ್ದ ಒಂದು ಗೆಡ್ಡೆ ಬಹಳ ದೊಡ್ಡದಾಗಿದ್ದರಿಂದ ನಂತರ ಬಳಸಬಹುದೆಂದು ಗೂಡಿನಲ್ಲಿ ಇಟ್ಟಿದ್ದೆವು. ಭರಣಿ ಮಳೆ ಬಿದ್ದ ಮಾರನೆಯ ದಿನ ಆಕಸ್ಮಿಕವಾಗಿ ನೋಡಿದಾಗ ಅದರಿಂದ ದಪ್ಪನಾದ ಮೊಳಕೆ ಹೊರಟಂತೆ ಕಾಣಿಸಿತು. ಆದರೆ ಒಂದೇ ದಿನದಲ್ಲಿ ಅದು ಮೊಳಕೆಯಲ್ಲ ಹೂವು ಎಂದು ತಿಳಿದಾಗ ಆಶ್ಚರ್ಯ, ಸಂತಸ ಎರೆಡೂ ಆಗಿದ್ದಂತೂ ನಿಜ. ಸಂಪೂರ್ಣವಾಗಿ ಅರಳಲು ಹದಿನಾರು ದಿನಗಳು ಬೇಕಾಯಿತು. ಈ ಅರಳುವಿಕೆಯನ್ನು ಪ್ರತಿನಿತ್ಯ ಕ್ಯಾಮರದಲ್ಲಿ ಸೆರೆಹಿಡಿಯಲಾಯಿತು. ಆಗುತ್ತಿದ್ದ ಬದಲಾವಣೆಗಳು ಚಿತ್ತಾಕರ್ಷಕ. ಎಲ್ಲರೂ ಅದನ್ನು ಕಾಣಬೇಕೆಂಬ ಸದಾಶಯ.
ಸುವರ್ಣ ಗೆಡ್ಡೆಯ ಕಶಾಯವನ್ನು ಶಿಲೀಂದ್ರ ನಾಶಕವಾಗಿ ಸಾವಯವ ಕೃಷಿಕರು ಬಳಸುತ್ತಾರೆ. ವೆನಿಲ್ಲ ಕೋಡುಗಳು ಉದುರುವುದನ್ನು ನಿಯಂತ್ರಿಸಲು ಈ ಕಶಾಯ ಸಿಂಪಡಣೆ ಸೂಕ್ತ. ಶುಂಠಿ ಬೆಳೆಯ ಜೊತೆಯಲ್ಲಿ ಈ ಬೆಳೆ ಇದ್ದರೆ ಗೆಡ್ಡೆ ಕೊಳೆ ಕಡಿಮೆಯಾಗಿರುವುದನ್ನು ಕೆಂಪು ಲಿಂಗನ ಹಳ್ಳಿಯ ಯುವ ಸಾವಯವ ಕೃಷಿಕ, ಹನುಮಂತ ರಾಜು ಗಮನಿಸಿದ್ದಾರೆ. ಇನ್ನು ನೀವುಂಟು, ಸುವರ್ಣಗಡ್ಡೆ ಉಂಟು.