Udayavani | May 30, 2012
ಕುಮಟಾ: ಪರಿಚಿತರ ಮನೆಯಲ್ಲಿ ತೆಂಗಿನ ಕಾಯಿ ಕಿತ್ತು, ಗರಿ ಹೆಣೆದು, ಅಡಿಕೆ ಸುಲಿದು, ಸುಣ್ಣಬಣ್ಣ ಹಚ್ಚಿ, ಮನೆಪಾಠ ಹೇಳಿ ಪಿಯು ವಾಣಿಜ್ಯ ವಿಭಾಗದಲ್ಲಿ ಶೇ. 91.66 ಅಂಕ ಪಡೆದ ವಿದ್ಯಾರ್ಥಿಯೋರ್ವ ತನ್ನ ಮುಂದಿನ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ಸಹಾಯ ಮಾಡುವಂತೆ ಕೋರಿದ್ದಾನೆ.
ತಾಲೂಕಿನ ಹಂದಿಗೋಣದ ಭಾಗ್ಬತಕೇರಿಯ ಪವನ ವಿನಾಯಕ ಭಟ್ಟ ನೆಲ್ಲಿಕೇರಿ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಪಿಯು ವಾಣಿಜ್ಯ ವಿಭಾಗದಲ್ಲಿ ಶೇ 91.66 ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದಾನೆ.
ಪವನ ಭಟ್ಟ ಕುಟುಂಬ ಆರ್ಥಿಕವಾಗಿ ತೀರಾ ದುರ್ಬಲವಾಗಿದೆ. ತನ್ನ ಪಠ್ಯ ಪುಸ್ತಕ, ಬಟ್ಟೆ ಕೊಳ್ಳಲು ಪವನ ಪರಿಚಿತರ ಮನೆಯಲ್ಲಿ ಅನೇಕ ಕೆಲಸಗಳನ್ನು ಮಾಡುತ್ತಿದ್ದಾನೆ. ಈತನಿಗೆ ಬಿಕಾಂ, ಸಿಎ ಮಾಡುವ ಗುರಿಯಿದೆ.
ಪ್ರತಿನಿತ್ಯ ಕುಮಟಾ ಕಾಲೇಜಿಗೆ ಬಂದು ಹೋಗಲು ಬಸ್ ಪಾಸ್ ಪಡೆಯುವುದಕ್ಕೂ ಹಣದ ಕೊರತೆ ಈತನಿಗಿದೆ. ತಂದೆ ಯಾರಿಂದಲೋ ಕೊಡಿಸಿದ ಸೈಕಲ್ಲನ್ನೇ ಪ್ರತಿನಿತ್ಯ 6 ಕಿಮೀ ದೂರದ ಕಾಲೇಜು ವರೆಗೆ ತೆಗೆದುಕೊಂಡು ಹೋಗುತ್ತಿದ್ದಾನೆ. ಪರೀಕ್ಷೆಯ ಆಸುಪಾಸಿನ ದಿನದಲ್ಲೂ ಸಹಪಾಠಿಗಳಿಗೆ ಟ್ಯೂಷನ್ ಹೇಳಿ ಪ್ರತಿವರ್ಷ ಶೇ.90ಕ್ಕೂ ಹೆಚ್ಚು ಅಂಕ ಗಳಿಸುತ್ತಾ ಬಂದಿದ್ದಾನೆ.
ಬಿ.ಕಾಂ.ಗಾಗಿ ಡಾ| ಬಾಳಿಗಾ ಕಾಲೇಜಿಗೆ ಪ್ರವೇಶ ಪಡೆಯುವ ಹಂತದಲ್ಲಿದ್ದು, ಅಲ್ಲಿನ ಶುಲ್ಕ, ಪಠ್ಯಪುಸ್ತಕ ಹಾಗೂ ಇತರ ಖರ್ಚುಗಳು ಸಮಸ್ಯೆಯಾಗಿದೆ. ಈತನ ತಂದೆ ವಿನಾಯಕ ಭಟ್ಟ ಪಟ್ಟಣದ ಡಾ| ಪಂಡಿತ ಆಸ್ಪತ್ರೆಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದಾರೆ. ಡಿಎಡ್ ಮಾಡುತ್ತಿರುವ ಅಣ್ಣ ವಿನಯ ಭಟ್ಟ, ಮೂಡುಬಿದಿರೆಯ ಅಳ್ವಾಸ್ ಶಾಲೆಗೆ ಆಯ್ಕೆಯಾಗಿ ಪ್ರವೇಶ ಪಡೆದಿರುವ ತಂಗಿ ಸಹನಾ ಕಲಿಕೆಯ ಖರ್ಚುವೆಚ್ಚದ ನಡುವೆ ಮಗನ ಕಲಿಕೆಗೆ ತೊಂದರೆಯಾಗದಿರಲಿ ಎನ್ನುವುದು ತಂದೆ ಹಾಗೂ ತಾಯಿ ಸಾವಿತ್ರಿ ಭಟ್ಟ ಅವರ ಕಳಕಳಿ.
ಪವನ ಭಟ್ಟನ ಭವಿಷ್ಯಕ್ಕಾಗಿ ಸಹೃದಯಿಗಳು, ಸಂಘಟನೆಗಳು, ಸಂಸ್ಥೆಗಳು, ಸಹಾಯ ಮಾಡಲಿಚ್ಛಿಸುವವರು ಮೊಬೈಲ್ ಸಂಖ್ಯೆ 9738968808 (ವಿನಾಯಕ ಭಟ್ಟ)ಗೆ ಸಂಪರ್ಕಿಸಬಹುದು. ಇಲ್ಲವೆ ಕರ್ನಾಟಕ ಬ್ಯಾಂಕ ಖಾತೆ 4162500109977401ಕ್ಕೆ ಧನಸಹಾಯ ಸಂದಾಯ ಮಾಡಬಹುದು ಎಂದು ಕೋರಲಾಗಿದೆ.