Wednesday, June 19, 2013
Last Updated: 5:25:16 AM IST
  • ನಾನೆಲ್ಲಿರುವೆ:
  • ಮುಖಪುಟ ಪ್ರಾದೇಶಿಕ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಶಾಲಾರಂಭದಲ್ಲೇ ಪಠ್ಯ ಪುಸ್ತಕ ಕೊರತೆ
      • * ಲಕ್ಷ್ಮೀ ಮಚ್ಚಿನ | May 30, 2012

        ಬೆಳ್ತಂಗಡಿ : ಶಾಲಾರಂಭದಲ್ಲಿಯೇ ಪಠ್ಯ ಪುಸ್ತಕಗಳ ಕೊರತೆ ಎದುರಾಗಿದೆ. ಫೆಬ್ರವರಿಯಿಂದ ಪಠ್ಯ ಪುಸ್ತಕಗಳ ಬೇಡಿಕೆ, ಸರಬರಾಜು ಆಗುತ್ತಿದ್ದರೂ ಇನ್ನೂ ಪುಸ್ತಕ ಬರುತ್ತಲೇ ಇದೆ. ಶಾಲೆಗಳಿಗೆ ಒಂದು ಹಂತದ ವಿತರಣೆ ಮಾಡಿ ಆಗಿದ್ದು ಇನ್ನು ಬಾಕಿ ಉಳಿದ ಪುಸ್ತಕಗಳು° ಸರಕಾರ ಕಳುಹಿಸಿ ಕೊಟ್ಟ ಮೇಲೆ ಇನ್ನೊಮ್ಮೆ ಪಡೆಯಬೇಕಿದೆ.

        ಶಾಲೆಗಳಿಗೆ ಸರಕಾರವೇ ಪಠ್ಯಪುಸ್ತಕ ಸರಬರಾಜು ಮಾಡುತ್ತದೆ. ಈ ಮೊದಲು ಖಾಸಗಿ ಪುಸ್ತಕದಂಗಡಿಗಳಲ್ಲಿ ಪಠ್ಯ ಪುಸ್ತಕಗಳು ದೊರೆಯುತ್ತಿತ್ತು. ಆದರೆ ಕೆಲವು ವರ್ಷದಿಂದ ಸರಕಾರವೇ ಶಿಕ್ಷಣ ಇಲಾಖೆೆ ಮುಖಾಂತರ ಸರಬರಾಜು ಮಾಡುತ್ತಿದ್ದು ಅನುದಾನ ರಹಿತ ಶಾಲೆಗಳಿಗೆ ಸರಕಾರವೇ ಪಠ್ಯಪುಸ್ತಕಗಳ ಮಾರಾಟ ಮಾಡುತ್ತಿದೆ. ತಾಲೂಕು ಗೋದಾಮಿನಲ್ಲಿ ಸಂಗ್ರಹಿಸಿದ ಪುಸ್ತಕಗಳನ್ನು ಆಯಾ ಶಾಲೆಗಳ ಮುಖ್ಯ ಶಿಕ್ಷಕರು ಪಡೆದುಕೊಳ್ಳಬೇಕಿದೆ.

        ಸಾಗಾಟ

        ಪಠ್ಯ ಪುಸ್ತಕಗಳನ್ನು ಕ್ಲಸ್ಟರ್‌ ಕೇಂದ್ರಗಳಿಗೆ ತಲುಪಿಸಿ ಅಲ್ಲಿಂದ ವಿವಿಧ ಶಾಲೆಗಳಿಗೆ ವಿತರಿಸಬೇಕೆಂಬ ನಿಯಮ ಇದೆ. ಬೆಳ್ತಂಗಡಿ ತಾಲೂಕಿನಲ್ಲಿ 19 ಕ್ಲಸ್ಟರ್‌ ಕೇಂದ್ರಗಳಿವೆ. ಇಲ್ಲಿಂದ 81 ಗ್ರಾಮಗಳ ಶಾಲೆಗಳಿಗೆ ವಿತರಣೆ ಆಗಬೇಕು. ಆದರೆ ಉಜಿರೆ ಸಮೀಪದ ಹಳೆಪೇಟೆ ಶಾಲೆಯಿಂದಲೇ ಅಷ್ಟೂ ಶಾಲೆಗಳಿಗೆ ವಿತರಿಸಲಾಗುತ್ತಿದೆ. ಕ್ಲಸ್ಟರ್‌ ಕೇಂದ್ರಗಳಿಗೆ ಸಾಗಾಟ ಮಾಡಿಕೊಡಬೇಕು ಎಂದು ಬರುವ ಹಣದ ಕಥೆಯೇನು ಎಂದು ಗೊತ್ತಿಲ್ಲ.

        ಈ ಬಾರಿ 5 ಮತ್ತು 8ನೇ ತರಗತಿಗೆ ಪಠ್ಯ ಪುಸ್ತಕ ಬದಲಾಗಿದೆ. ಇಲ್ಲಿ ಕಳೆದ ವರ್ಷದ ಪುಸ್ತಕ ಸಂಗ್ರಹವೂ ಇದ್ದು ಅದನ್ನು ಶಾಲಾ ಲೈಬ್ರರಿಗೆ ಎಂದು ನೀಡಲಾಗುತ್ತಿದೆ. ಸರಕಾರಿ ಶಾಲೆಗಳ ವಿತರಣೆಗೆ ಶೇ. 60ರಷ್ಟು ಪುಸ್ತಕಗಳು ಬಂದಿದೆ. ಖಾಸಗಿ ಶಾಲೆಗಳಿಗೆ ನೀಡುವ ಶೇ. 80ರಷ್ಟು ಪುಸ್ತಕಗಳು ಬಂದಿವೆ. ಸರಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಸರಕಾರದ ವತಿಯಿಂದ ಉಚಿತವಾಗಿ 1,11,063 ಪುಸ್ತಕಗಳನ್ನು ತಾಲೂಕಿನಲ್ಲಿ ಮಂಗಳವಾರದ ವರೆಗೆ ವಿತರಿಸಲಾಗಿದೆ. ಖಾಸಗಿ ಶಾಲೆಗಳಿಗೆ 30,629 ಪುಸ್ತಕಗಳನ್ನು ಬುಧವಾರದವರೆಗೆ ವಿತರಿಸಲಾಗಿದ್ದು 9500 ಪುಸ್ತಕಗಳ ಕೊರತೆ ಇದೆ.

        ಕೊರತೆ

        ಒಂದನೇ ತರಗತಿಯ ಆಂಗ್ಲಮಾಧ್ಯಮದ ಇಂಗ್ಲಿಷ್‌ ರೀಡರ್‌, ಕನ್ನಡ ಕಲಿ ನಲಿ, 5ನೇ ತರಗತಿಯ ಆಂಗ್ಲ ಮಾಧ್ಯಮದ ಪ್ರಥಮ ಭಾಷೆ ಇಂಗ್ಲಿಷ್‌, ಇಂಗ್ಲಿಷ್‌ ಕೋರ್‌ ಸಬೆjಕ್ಟ್, 7ನೇ ತರಗತಿಯ ಪ್ರಥಮ ಭಾಷೆ ಕನ್ನಡ, 8ನೇ ತರಗತಿಯ ಕನ್ನಡ ಮಾಧ್ಯಮದ ಗಣಿತ, ಸಂಸ್ಕೃತ, 9ನೇ ತರಗತಿಯ ದ್ವಿತೀಯ ಭಾಷೆ ಕನ್ನಡ, ಆಂಗ್ಲ ಮಾಧ್ಯಮ ಗಣಿತ, ಆಂಗ್ಲ ಮಾಧ್ಯಮದ ವಿಜ್ಞಾನ, ಪ್ರಥಮ ಭಾಷೆ ಸಂಸ್ಕೃತ, 10ನೇ ತರಗತಿಯ ದ್ವಿತೀಯ ಭಾಷೆ ಕನ್ನಡ, ದ್ವಿತೀಯ ಭಾಷೆ ಇಂಗ್ಲಿಷ್‌ ಪಠ್ಯ ಪುಸ್ತಕಗಳ ಕೊರತೆ ಇದೆ.

        ದೈಹಿಕ ಶಿಕ್ಷಣ ಪಠ್ಯ

        6ನೇ ತರಗತಿಯ ದೈಹಿಕ ಶಿಕ್ಷಣ ಪಠ್ಯ ಪುಸ್ತಕದ ಕೊರತೆ ತೀವ್ರವಾಗಿದೆ. ತರಗತಿಗೆ ಎರಡು ಪುಸ್ತಕಗಳಂತೆ ವಿತರಿಸಲಾಗುತ್ತಿದೆ. ಇಷ್ಟಕ್ಕೂ ದೈಹಿಕ ಶಿಕ್ಷಣ ಪಠ್ಯ ಪುಸ್ತಕಗಳನ್ನು ಹೊರ ತಂದಿರುವ ಸರಕಾರ ಇದನ್ನು ಬೋಧಿಸಲು ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸಿಲ್ಲ. 200 ವಿದ್ಯಾರ್ಥಿಗಳಿಗಿಂತ ಕಡಿಮೆ ಇರುವ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆ ಹೆಚ್ಚುವರಿ ಎಂದು ಮಾಡಲಾಗಿದೆ. ಅದನ್ನು ರದ್ದು ಮಾಡಲಾಗುತ್ತಿದೆ. ಹಾಗಾದರೆ 175, 150, 125 ಹೀಗೆ ಇದ್ದರೆ ಆ ಶಾಲೆಯ ಮಕ್ಕಳಿಗೆ ದೈಹಿಕ ಶಿಕ್ಷಣದ ಪಠ್ಯ ಬೋಧನೆ ಇಲ್ಲ ಎಂದಾಯಿತು. ಈ ಮಕ್ಕಳಿಗೆ 8ನೇ ತರಗತಿಗೆ ನೇರವಾಗಿ ದೈಹಿಕ ಶಿಕ್ಷಣದ ಪಠ್ಯ ಬೋಧನೆ ಇದೆ. ಹೇಗೆ ಅರಗಿಸಿಕೊಳ್ಳಬೇಕೆಂದು ಮಕ್ಕಳಿಗೂ ಗೊತ್ತಿಲ್ಲ, ಕಲಿಸುವವರಿಗೂ ಗೊತ್ತಿಲ್ಲ.

        ತ್ರಿಶಂಕು ಶಾಲೆಗಳು

        ತಾಲೂಕಿನ 8 ಶಾಲೆಗಳು ಉನ್ನತೀಕರಣಗೊಂಡಿವೆ. 7ನೇ ತರಗತಿವರೆಗೆ ಕಲಿಸುತ್ತಿದ್ದ ಹಿರಿಯ ಪ್ರಾಥಮಿಕ ಶಾಲೆಗಳು ಈ ಶೈಕ್ಷಣಿಕ ವರ್ಷದಿಂದ 8ನೇ ತರಗತಿ ಪ್ರಾರಂಭಿಸಿ ಬೋಧಿಸಲಿವೆ. ಇಲ್ಲೂ ಇಲಾಖೆಯ ಎಡವಟ್ಟೇ ಎದ್ದು ಕಾಣುತ್ತಿದೆ. ಪ್ರೌಢಶಾಲೆ 50ಮೀ. ಅಂತರದಲ್ಲಿಯೇ ಇದ್ದರೂ ಅಂತಹ ಪ್ರಾಥಮಿಕ ಶಾಲೆಯನ್ನು ಉನ್ನತೀಕರಿಸಲಾಗಿದೆ. ಆಗ ಪ್ರೌಢಶಾಲೆಯ 8ನೇ ತರಗತಿಗೆ ಮಕ್ಕಳ ದಾಖಲಾತಿಯೇ ಇರುವುದಿಲ್ಲ. ಇದಕ್ಕೆ ಬದಲಾಗಿ ಅಗತ್ಯವಿರುವ ಬೇರೆ ಶಾಲೆಗಳನ್ನಾದರೂ ಮಾಡಬಹುದಿತ್ತು. ಶಾಲಾ ಉನ್ನತೀಕರಣಕ್ಕೆ ಶಿಫಾರಸು ಮಾಡುವಾಗ ಇಲಾಖೆ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸಿದ್ದರ ಫಲವಾಗಿ ಇಂದು ಕೆಲವು ಪ್ರೌಢಶಾಲೆಗಳಲ್ಲಿ 8ನೇ ತರಗತಿಯನ್ನು ಖಾಲಿಯಾಗಿ ಇಡುವ ಪರಿಸ್ಥಿತಿ ಬಂದಿದೆ. ಇಂತಹ ಪ್ರೌಢಶಾಲೆಗಳಲ್ಲಿ 9 ಹಾಗೂ 10ನೇ ತರಗತಿ ಮಾತ್ರ. ತಾಲೂಕಿನ ಮಚ್ಚಿನ, ಉಜಿರೆ ಹಳೆಪೇಟೆ, ಪಡಂಗಡಿ, ಬಂಗಾಡಿ ಕನ್ಯಾಡಿ, ಪುಂಜಾಲಕಟ್ಟೆ, ಕೊರಂಜ, ಮುಂಡಾಜೆ ಶಾಲೆಗಳಲ್ಲಿ 8ನೇ ತರಗತಿ ಪ್ರಾರಂಭಿಸಲು ಆದೇಶ ಬಂದಿದ್ದು ಬಹುತೇಕ ಶಾಲೆಗಳ ಪಕ್ಕದಲ್ಲಿಯೇ ಪ್ರೌಢಶಾಲೆಗಳಿವೆ. ಒಂದೆಡೆ ಸರಕಾರಿ ಶಾಲೆಗಳಿಗೆ ದಾಖಲಾತಿ ಕಡಿಮೆ ಎಂಬ ಗೋಳು ಕೇಳಿ ಬರುತ್ತಿದ್ದರೆ ಇನ್ನೊಂದೆಡೆ ಸರಕಾರವೇ ಇಂತಹ ಇಕ್ಕಳದ ಸ್ಥಿತಿ ತಂದಿಟ್ಟು ಮಜಾ ನೋಡುತ್ತಿದೆ. ಬಳಿಕ ಶಾಲಾ ದಾಖಲಾತಿ ಕಡಿಮೆ ಎಂದು ವಿಲೀನ ಮಾಡುವುದು, ರದ್ದು ಮಾಡುವುದು ಎಂಬ ಕೆಲಸಗಳಿಗೆ ಕೈ ಹಾಕಲಾಗುತ್ತದೆ.

        ಕೆಟ್ಟ ಮೇಲೆ ಬುದ್ದಿ ಕಲಿಯುವುದು ಉತ್ತಮರ ಲಕ್ಷಣವೇ ಎಂದು ಗೊತ್ತಿಲ್ಲ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus