ಮಂಗಳೂರು: ಪೆಟ್ರೋಲ್ ಬೆಲೆ ಏರಿಕೆಯನ್ನು ವಿರೋಧಿಸಿ ಗುರುವಾರ ಕರೆ ನೀಡಲಾಗಿರುವ ಭಾರತ್ ಬಂದ್ ಚಳವಳಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.ಖಾಸಗಿ ಸರ್ವಿಸ್ ಬಸ್‌ಗಳನ್ನು ಪ್ರತಿನಿಧಿಸುವ ಕೆನರಾ ಬಸ್ ಮಾಲಕರ ಸಂಘ ಮತ್ತು ಮಂಗಳೂರಿನ ಸಿಟಿ ಬಸ್‌ಗಳನ್ನು ಪ್ರತಿನಿಧಿಸುವ ದಕ್ಷಿಣ ಕನ್ನಡ ಬಸ್ ಮಾಲಕರ ಸಂಘ, ಸಿಐಟಿಯು ಸಂಯೋಜಿತ ಫೆಡರೇಶನ್ ಆಫ್ ಕರ್ನಾಟಕ ಆಟೋ ಡ್ರೈವರ್ ಯೂನಿಯನ್‌ನ ದ.ಕ. ಜಿಲ್ಲಾ ಘಟಕ, ಬಿ.ಎಂ.ಎಸ್. ಸಂಘಟನೆ, ಸಹಕಾರ ಭಾರತಿ ಮತ್ತಿತರ ಸಂಘಟನೆಗಳು ಬೆಂಬಲ ಸೂಚಿಸಿವೆ.ಸಿಪಿಐಎಂ ಜಿಲ್ಲಾ ಸಮಿತಿಯು ಹರತಾಳ ಮತ್ತು ಪ್ರತಿಭಟನಾ ಪ್ರದರ್ಶನ ನಡೆಸಲು ನಿರ್ಧರಿಸಿದ್ದು, ಬೆಳಗ್ಗೆ 10 ಗಂಟೆಗೆ ನಗರದಲ್ಲಿ ಈ ಕಾರ್ಯಕ್ರಮ ನಡೆಯುವುದು ಎಂದು ಪಕ್ಷದ ನಾಯಕ ಕೆ.ಆರ್. ಶ್ರೀಯಾನ್ ತಿಳಿಸಿದ್ದಾರೆ.ಬಿಜೆಪಿ ಈಗಾಗಲೇ ಬಂದ್‌ಗೆ ಬಹಿರಂಗ ಬೆಂಬಲ ಸೂಚಿಸಿದೆ. ಸ್ವಯಂ ಪ್ರೇರಿತ ಬಂದ್ ಆಚರಿಸುವಂತೆ ಬುಧವಾರ ಸಂಜೆ ಬಿಜೆಪಿ ಕಾರ್ಯಕರ್ತರು ನಗರದ ವಿವಿಧೆಡೆ ತೆರಳಿ ಮನವಿ ಮಾಡಿದ್ದಾರೆ.ಕೆನರಾ ಬಸ್ ಮಾಲಕರ ಸಂಘಗುರುವಾರ ಕರೆ ನೀಡಲಾಗಿರುವ ಭಾರತ್ ಬಂದ್‌ಗೆ ಕೆನರಾ ಬಸ್ ಮಾಲಕರ ಸಂಘ ಬೆಂಬಲ ಸೂಚಿಸುತ್ತದೆ ಎಂದು ಸಂಘದ ಅಧ್ಯಕ್ಷ ಕೆ. ರಾಜವರ್ಮ ಬಲ್ಲಾಳ್ ಮತ್ತು ಪ್ರಧಾನ ಕಾರ್ಯದರ್ಶಿ ಭಾಸ್ಕರ ಸಾಲಿಯಾನ್ ತಿಳಿಸಿದ್ದಾರೆ.ಆಗಿಂದಾಗ್ಗೆ ಡೀಸೆಲ್ ಬೆಲೆ ಏರಿಕೆ, ರಾಜ್ಯದಲ್ಲಿ ಸ್ಪೀಡ್ ಗವರ್ನನ್ ಕಡ್ಡಾಯ ಮಾಡಿರುವುದು ಹಾಗೂ ಖಾಸಗಿ ಬಸ್ ಮಾರ್ಗಗಳನ್ನು ರಾಷ್ಟ್ರೀಕರಿಸಲು ಯತ್ನ ನಡೆಸುತ್ತಿರುವುದನ್ನು ವಿರೋಧಿಸಿ ಸಂಘವು ಈ ಬಂದ್ ಚಳವಳಿಯನ್ನು ಬೆಂಬಲಿಸುತ್ತದೆ ಎಂದವರು ವಿವರಿಸಿದ್ದಾರೆ.ಡೀಸೆಲ್ ಬೆಲೆಯನ್ನು ಈಗ ಏರಿಕೆ ಮಾಡಿಲ್ಲ; ಆದರೆ ಆಗಿಂದಾಗ್ಗೆ ಏರಿಸಲಾಗುತ್ತದೆ. ಈ ಕ್ರಮವನ್ನು ತಾವು ವಿರೋಧಿಸುತ್ತಿದ್ದೇವೆ ಎಂದವರು ತಿಳಿಸಿದ್ದಾರೆ. ದಕ್ಷಿಣ ಕನ್ನಡ ಬಸ್ ಮಾಲಕರ ಸಂಘ ಕೂಡಾ ಬಂದ್ ಚಳವಳಿಯಲ್ಲಿ ಭಾಗವಹಿಸಲಿದೆ ಎಂದು ಸಂಘದ ಅಧ್ಯಕ್ಷ ಜಯರಾಮ ಶೇಖ ತಿಳಿಸಿದ್ದಾರೆ.ಕೆಎಸ್‌ಆರ್‌ಟಿಸಿ ಬೆಂಬಲ ಇಲ್ಲಕೆಎಸ್ಆರ್ಟಿಸಿ ಬಂದ್‌ನಲ್ಲಿ ಭಾಗವಹಿಸುವುದಿಲ್ಲ; ಸಂಸ್ಥೆಯ ಬಸ್‌ಗಳು ಓಡಾಟ ನಡೆಸಲಿವೆ ಎಂದು ಮಂಗಳೂರಿನ ಕೆಎಸ್‌ಆರ್‌ಟಿಸಿ ಮೂಲಗಳು ತಿಳಿಸಿವೆ.ಗುರುವಾರ ಹಲವಾರು ಶುಭ ಕಾರ್ಯಗಳು ನಿಗದಿಯಾಗಿವೆ. ಬಂದ್‌ಗೆ ಕರೆ ನೀಡಿರುವ ಪ್ರಮುಖ ರಾಜಕೀಯ ಪಕ್ಷ ಬಿಜೆಪಿ ಶುಭ ಸಮಾರಂಭಗಳಿಗೆ ತೆರಳುವ ವಾಹನಗಳಿಗೆ ಬಂದ್‌ನಿಂದ ವಿನಾಯಿತಿ ನೀಡಲಾಗುವುದು ಎಂದು ತಿಳಿಸಿದೆ.'ಸ್ವಂತ ವಾಹನಗಳಿದ್ದವರು ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳಬಹುದು. ಆದರೆ ಬಸ್‌ಗಳನ್ನೇ ಅವಲಂಬಿಸಿರರುವ ಬಡ ಮತ್ತು ಮಧ್ಯಮ ವರ್ಗದವರು ಹಾಜರಾಗುವುದು ಹೇಗೆ? ಹೀಗೆಂದು ನಮಗೆ ಹಲವಾರು ಜನರಿಂದ ದೂರವಾಣಿ ಕರೆಗಳು ಬಂದಿವೆ. ನಮಗೆ ಬಸ್‌ಗಳನ್ನು ಓಡಿಸಲು ಮನಸ್ಸಿದೆ. ಆದರೆ ಬಂದ್ ಕರೆ ಹಿನ್ನೆಲೆಯಲ್ಲಿ ಬಸ್‌ಗಳಿಗೆ ಎಲ್ಲಿ ಕಲ್ಲುಗಳು ಬೀಳುವುದೋ ಎಂಬ ಭಯ ಕಾಡುತ್ತಿದೆ. ಹಾಗಾಗಿ ಬಸ್‌ಗಳನ್ನು ಓಡಿಸದಿರಲು ತೀರ್ಮಾನಿಸಲಾಗಿದೆ' ಎಂದು ದಕ್ಷಿಣ ಕನ್ನಡ ಬಸ್ ಮಾಲಕರ ಸಂಘದ ಅಧ್ಯಕ್ಷ ಜಯರಾಮ ಶೇಖ ತಿಳಿಸಿದ್ದಾರೆ.ಬಂದ್ ಕರೆ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಸಾಕಷ್ಟು ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.ತೊಂದರೆಯಾದರೆ ಸಂಪರ್ಕಿಸಿಬಂದ್ ಸಂದರ್ಭದಲ್ಲಿ ಶುಭ ಕಾರ್ಯಗಳಿಗೆ ಹೋಗುವ ವಾಹನಗಳಿಗೆ ವಿನಾಯಿತಿ ನೀಡಲಾಗಿದ್ದು, ಈ ಸಂದರ್ಭದಲ್ಲಿ ಯಾರಿಂದಲಾದರೂ ಅಡ್ಡಿ ಉಂಟಾದಲ್ಲಿ ಮಂಗಳೂರಿನ ಬಿಜೆಪಿ ಕಚೇರಿಯನ್ನು (0824-2444319/ 2421570) ಸಂಪರ್ಕಿಸಬಹುದು ಎಂದು ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಅಧ್ಯಕ್ಷ ಶ್ರೀಕರ ಪ್ರಭು ತಿಳಿಸಿದ್ದಾರೆ.