ಹೊಸದಿಲ್ಲಿ : ಪೆಟ್ರೋಲ್ ಬೆಲೆಯಲ್ಲಿನ ಭಾರೀ ಹೆಚ್ಚಳ ಹಾಗೂ ದೇಶದ ಒಕ್ಕೂಟ ವ್ಯವಸ್ಥೆಯನ್ನು ಬುಡಮೇಲುಗೊಳಿಸ ಹೊರಟಿರುವ ಕೇಂದ್ರ ಸರಕಾರದ ನೀತಿಗಳನ್ನು ವಿರೋಧಿಸಿ, ಬಿಜೆಪಿ ದೇಶಾದ್ಯಂತ ಎರಡು ವಾರಗಳ ಕಾಲ ಸರಣಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲು ಬಿಜೆಪಿ ನಿರ್ಧರಿಸಿದೆ. ಜೂನ್ 7ರಿಂದ ಈ ಸರಣಿ ಪ್ರತಿಭಟನೆ ಆರಂಭಗೊಳ್ಳಲಿದ್ದು, ಜೂನ್ 22ರಂದು ಸ್ವಯಂಪ್ರೇರಿತ ಬಂಧನಕ್ಕೊಳಗಾಗುವ ಪ್ರತಿಭಟನೆಯೊಂದಿಗೆ ಮುಕ್ತಾಯಗೊಳ್ಳಲಿದೆ.ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ಪ್ರತಿನಿಧಿಗಳ ಸಭೆಯಲ್ಲಿ ಕೇಂದ್ರದ ಯುಪಿಎ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ 'ಜನಸಂಘರ್ಷ ಅಭಿಯಾನ'ವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್, ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಪೆಟ್ರೋಲ್ ಬೆಲೆಯಲ್ಲಿನ ಗರಿಷ್ಠ ಹೆಚ್ಚಳವನ್ನು ಖಂಡಿಸಿ, ಮೇ 30ರಂದು ಎನ್‌ಡಿಎ ಕರೆ ನೀಡಿದ್ದ ಭಾರತ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾದ ಹಿನ್ನೆಲೆಯಲ್ಲಿ , ಕೇಂದ್ರ ಸರಕಾರದ ಮೇಲೆ ಇನ್ನಷ್ಟು ಒತ್ತಡ ಹೇರುವ ಸಲುವಾಗಿ ಅಭಿಯಾನವನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ. ಹೋರಾಟವನ್ನು ಮುಂದುವರಿಸುವ ನಿಟ್ಟಿನಲ್ಲಿ ಜೂನ್ 7ರಿಂದ 22ರವರೆಗೆ ಯುಪಿಎ ಸರಕಾರದ ಕೆಟ್ಟ ಆಡಳಿತದ ವಿರುದ್ಧ ದೇಶಾದ್ಯಂತ ಜನಸಂಘರ್ಷ ಅಭಿಯಾನ ನಡೆಯಲಿದೆ ಎಂದು ಅನಂತ ಕುಮಾರ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.