ಹೊಸದಿಲ್ಲಿ: ಬಿಜೆಪಿಯಲ್ಲಿನ ನಾಯಕತ್ವಗೊಂದಲಗಳು ಹೆಚ್ಚುತ್ತಿರುವ ಬೆನ್ನಲ್ಲೇ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಪಕ್ಷದ ಹಿರಿಯ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ ಹಾಗೂ ಲಾಲ್‌ಕೃಷ್ಣ ಆಡ್ವಾಣಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.ಕಳೆದ ಕೆಲವು ವರ್ಷಗಳಿಂದ ಕಾಯಿಲೆಯಿಂದ ಬಳಲುತ್ತಿರುವ ಮಾಜಿ ಪ್ರಧಾನಿ ಹಾಗೂ ಬಿಜೆಪಿಯ ಹಿರಿಯ ಮುಖಂಡ ವಾಜಪೇಯಿ ಅವರನ್ನು ಭೇಟಿಯಾದ ನರೇಂದ್ರ ಮೋದಿ, ಅವರ ಯೋಗಕ್ಷೇಮ ವಿಚಾರಿಸಿದರಲ್ಲದೆ ಅವರಿಂದ ಆಶೀರ್ವಾದ ಪಡೆದರು ಎಂದು ಮೂಲಗಳು ತಿಳಿಸಿವೆ.ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಾನು ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ಹೊರಹೊಮ್ಮುವ ಸಾಧ್ಯತೆಗಳು ಗರಿಗೆದರಿರುವಂತೆಯೇ ನರೇಂದ್ರ ಮೋದಿ ಅವರ ಈ ಭೇಟಿ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ.ಅಹಮದಾಬಾದ್‌ಗೆ ಹಿಂದಿರುಗುವ ಮುನ್ನ ನರೇಂದ್ರ ಮೋದಿ ಅವರು ಪಕ್ಷದ ಇನ್ನೋರ್ವ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಅವರನ್ನು ಭೇಟಿ ಮಾಡಿದರು. ಆಡ್ವಾಣಿ ಅವರು ತಮ್ಮ ಬ್ಲಾಗ್‌ನಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರ ಕಾರ್ಯ ವೈಖರಿಯ ಬಗೆಗೆ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಮೋದಿ ಅವರ ಆಡ್ವಾಣಿ ಭೇಟಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಆಡ್ವಾಣಿ ಅವರು, ಉತ್ತರ ಪ್ರದೇಶ ಚುನಾವಣೆ ಸಂದರ್ಭ ಗಡ್ಕರಿ ಅವರ ಕಾರ್ಯಶೈಲಿ ಹಾಗೂ ಕರ್ನಾಟಕ ಮತ್ತು ಜಾರ್ಖಂಡ್‌ಗಳಲ್ಲಿ ಪಕ್ಷದ ನಾಯಕತ್ವ ಸಮಸ್ಯೆಯನ್ನು ನಿಭಾಯಿಸಿದ ರೀತಿಯ ಬಗೆಗೆ ತಮ್ಮ ಅಸಹನೆ ವ್ಯಕ್ತಪಡಿಸಿದ್ದರು. ಆಡ್ವಾಣಿ ಅವರು ಗಾಂಧೀನಗರದ ಸಂಸದರಾಗಿದ್ದು, ಮೋದಿ ಅವರೊಂದಿಗೆ ಅನೇಕ ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದಾರೆ. ಇದರ ಹೊರತಾಗಿಯೂ ಆಡ್ವಾಣಿ ಅವರು ಮೋದಿ ಅವರನ್ನು ತಮ್ಮ ಬ್ಲಾಗ್ ಹಾಗೂ ಭಾಷಣಗಳಲ್ಲಿ ಅನೇಕ ಬಾರಿ ಹೊಗಳಿದ್ದಾರಲ್ಲದೆ, ಅವರ ಆಡಳಿತ ವೈಖರಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.ನರೇಂದ್ರ ಮೋದಿ ಅವರ ಈ ಎರಡೂ ಭೇಟಿಗಳು, ರಾಜಕೀಯ ವಲಯದಲ್ಲಿ ಅದರಲ್ಲೂ ಪ್ರಮುಖವಾಗಿ ಪ್ರಧಾನಿ ಗಾದಿಗಾಗಿ ಈಗಾಗಲೇ ಕಿತ್ತಾಟದಲ್ಲಿ ತೊಡಗಿಕೊಂಡಿರುವ ಬಿಜೆಪಿ ಪಾಳಯದಲ್ಲಿ ಹಲವು ಜಿಜ್ಞಾಸೆಗಳನ್ನು ಹುಟ್ಟು ಹಾಕಿವೆ.