ಹೊಸದಿಲ್ಲಿ: ಪೆಟ್ರೋಲ್ ಬೆಲೆಯ ತೀವ್ರ ಏರಿಕೆಗೆ ದೇಶಾದ್ಯಂತ ವ್ಯಕ್ತವಾದ ಕಟು ಟೀಕೆಯ ಬಳಿಕ ಪೆಟ್ರೋಲ್ ಬೆಲೆಯನ್ನು ಶನಿವಾರ ಲೀಟರ್‌ಗೆ 2 ರೂ. ಕಡಿತಗೊಳಿಸಲಾಯಿತು. ಒಂದು ವಾರದ ಹಿಂದೆ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 7.54 ರೂ. ಹೆಚ್ಚಿಸಲಾಗಿತ್ತು.ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಯಲ್ಲಿನ ಇಳಿಕೆಯನ್ನನುಸರಿಸಿ ಈ ಬೆಲೆ ಕಡಿತ ಪ್ರಕಟಿಸಲಾಗಿದೆ. ಇದರೊಂದಿಗೆ ದಿಲ್ಲಿಯಲ್ಲಿ ಶನಿವಾರ ಮಧ್ಯರಾತ್ರಿಯಿಂದ ಪೆಟ್ರೋಲ್ ಬೆಲೆ ಲೀಟರ್‌ಗೆ 73.18 ರೂ.ಗಳಿಂದ 71.18 ರೂ.ಗಳಿಗೆ ಇಳಿದಿದೆ.ತೈಲ ಮಾರಾಟ ಸಂಸ್ಥೆಗಳು ಪಾಕ್ಷಿಕವಾಗಿ ನಡೆಸುವ ಪುನರ್ವಿಮರ್ಶೆಯ ಬಳಿಕ ಹೊರಬಿದ್ದಿರುವ ಈ ನಿರ್ಧಾರದಿಂದಾಗಿ ಎರಡಂಕಿ ಹಣದುಬ್ಬರದಿಂದ ಕಂಗೆಟ್ಟಿರುವ ಗ್ರಾಹಕರಿಗೆ ಕೊಂಚ ನೆಮ್ಮದಿಯಾಗಿದೆ. ಮೇ 24ರ ಬೆಲೆ ಹೆಚ್ಚಳ ಗರಿಷ್ಠ ಪ್ರಮಾಣದ್ದಾಗಿತ್ತು ಮತ್ತು ವರ್ಷವೊಂದರಲ್ಲಿ ಎರಡು ಬಾರಿ ಹೆಚ್ಚಳವಾದ ಬಳಿಕ ಬಂದಿತ್ತು.ಮೇ 24ರ ಬೆಲೆ ಹೆಚ್ಚಳಕ್ಕೆ ಟಿಎಂಸಿ ಮತ್ತು ಡಿಎಂಕೆಯಂಥ ಮಿತ್ರಪಕ್ಷಗಳು ಹಾಗೂ ಯುಪಿಎಯ ಕೆಲ ಖಾತೆಗಳ ಸಹಿತ ಎಲ್ಲ ರಾಜಕೀಯ ಪಕ್ಷಗಳಿಂದ ಕಟು ಟೀಕೆ ವ್ಯಕ್ತವಾಗಿತ್ತು ಮತ್ತು ಬೆಲೆಯನ್ನು ಹಿಂದಿನ ಮಟ್ಟಕ್ಕೆ ತರುವಂತೆ ಸರ್ವತ್ರ ಬೇಡಿಕೆ ಕೇಳಿಬಂದಿತ್ತು. ಎಡಪಕ್ಷಗಳು ಹಾಗೂ ಎನ್‌ಡಿಎ ಬೆಲೆ ಹೆಚ್ಚಳವನ್ನು ವಿರೋಧಿಸಿ ಗುರುವಾರ ರಾಷ್ಟ್ರವ್ಯಾಪಿ ಮುಷ್ಕರ ನಡೆಸಿದ್ದವು.ಮಮತಾ ಆಗ್ರಹಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 2 ರೂ. ಕಡಿತಗೊಳಿಸಿರುವುದರಿಂದ ತೃಪ್ತಿ ಹೊಂದದ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮತ್ತು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಬೆಲೆಯನ್ನು ಹಿಂದಿನ ಮಟ್ಟಕ್ಕೆ ಇಳಿಸಬೇಕೆಂದು ಆಗ್ರಹಿಸಿದರು.'ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 2 ರೂ. ಕಡಿತಗೊಳಿಸಿದ್ದರಿಂದ ನನಗೆ ಸಮಾಧಾನವಾಗಿಲ್ಲ. ಇದು ಸಾಲದು. ಪೆಟ್ರೋಲ್ ಬೆಲೆ ಈಗಲೂ ಜನಸಾಮಾನ್ಯರ ಮೇಲೆ ಹೊರೆಯಾಗಿದೆ. ಬೆಲೆ ಏರಿಕೆಯನ್ನು ಸಂಪೂರ್ಣ ಹಿಂದೆಗೆದುಕೊಳ್ಳಬೇಕಾಗಿತ್ತು' ಎಂದವರು ಕೋಲ್ಕತದಲ್ಲಿ ಸುದ್ದಿಗಾರರೊದಿಗೆ ಹೇಳಿದರು.ಈ ಮುನ್ನ ಅವರು ನಗರಕ್ಕೆ ಮೂರು ತಾಸುಗಳ ಕಾಲ ಭೇಟಿಯಿತ್ತಿದ್ದ ಪ್ರಧಾನಿ ಮನಮೋಹನ್ ಸಿಂಗ್ ಅವರೊಂದಿಗೆ ವಿಷಯ ಪ್ರಸ್ತಾಪಿಸಿದ್ದರು ಮತ್ತು ಪೆಟ್ರೋಲ್ ಬೆಲೆಯನ್ನು ಪದೇ ಪದೇ ಹೆಚ್ಚಿಸುತ್ತಿರುವ ಕುರಿತು ಅಸಮಾಧಾನ ಸೂಚಿಸಿದ್ದರು.