Thursday, May 23, 2013
Last Updated: 5:22:14 PM IST
  • ನಾನೆಲ್ಲಿರುವೆ:
  • ಮುಖಪುಟ ಪ್ರಾದೇಶಿಕ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ದಕ್ಷ ಆಡಳಿತದ ರಾಜಕೀಯ ಇಚ್ಛಾಶಕ್ತಿ ಪ್ರದರ್ಶನ
    • ಸಭೆಯನ್ನು ಉದ್ದೇಶಿಸಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಮಾತನಾಡಿದರು.

      • Udayavani | Jun 02, 2012

        ಮಂಗಳೂರು : ನಮ್ಮೊಳಗೆ ಕೆಲವು ಬಾರಿ ಅಭಿಪ್ರಾಯ ಬೇಧಗಳು ಕಾಣಿಸಿಕೊಂಡಿರಬಹುದು. ಆದರೆ ಸರಕಾರ, ಅಭಿವೃದ್ಧಿ ಮತ್ತು ಸಂಘಟನೆ ವಿಚಾರ ಬಂದಾಗ ಒಮ್ಮತದಿಂದ ಕಾರ್ಯಾಚರಿಸಿದ್ದು, ದಕ್ಷ ಆಡಳಿತದ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿದ್ದೇವೆ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಹೇಳಿದರು.

        ಬಿಜೆಪಿ ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣಾ ಸಿದ್ಧತೆ ಕುರಿತಂತೆ ನಗರದಲ್ಲಿ ಆಯೋಜಿಸಿದ್ದ ದ.ಕ. ಜಿಲ್ಲಾ ಮಟ್ಟದ 8 ವಿಧಾನಸಭಾ ಕ್ಷೇತ್ರಗಳ ಪ್ರಮುಖರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

        ನಮ್ಮಲ್ಲಿನ ಅಂತರಿಕ ಭಿನ್ನಾಭಿಪ್ರಾಯಗಳು ಎಂದೂ ಆಡಳಿತದ ಮೇಲೆ ಪರಿಣಾಮ ಬೀರಿಲ್ಲ. ರಾಜ್ಯದ ಆಡಳಿತ ವ್ಯವಸ್ಥೆ ಮತ್ತು ಆರ್ಥಿಕ ನಿರ್ವಹಣೆಗೆ ಕೇಂದ್ರ ಯೋಜನಾ ಆಯೋಗದಿಂದ ಶ್ಲಾಘನೆ ವ್ಯಕ್ತವಾಗಿದೆ. ಹಲವಾರು ವಿನೂತನ ಅಭಿವೃದ್ಧಿ ಯೋಜನೆಗಳ ಮೂಲಕ ದೇಶದ ಗಮನ ಸೆಳೆದಿದೆ. ಪಕ್ಷ ಮತ್ತು ಸಂಘಟನೆ ವಿಚಾರ ಬಂದಾಗ ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಂದುಗೂಡಿªದೇವೆ. ಇತ್ತೀಚೆಗೆ ವಿಧಾನ ಪರಿಷತ್‌ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂದರ್ಭದಲ್ಲಿ ಇದು ಸಾಬೀತುಗೊಂಡಿದೆ ಎಂದರು.

        ವಿಪಕ್ಷಗಳ ಬಣ್ಣ ಬಯಲು

        ನಮ್ಮ ವಿರುದ್ಧ ಟೀಕೆ ಮಾಡುತ್ತಿದ್ದ ವಿಪಕ್ಷಗಳ ಬಣ್ಣ ಇದೀಗ ಬಯಲಾಗಿದೆ. ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಸಿದ್ದರಾಮಯ್ಯ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜೆಡಿಎಸ್‌ನಲ್ಲಿ ಹಾಲಿ ಸದಸ್ಯರೋರ್ವರು ರಾಜೀನಾಮೆ ಸಲ್ಲಿಸಿ ಪಕ್ಷದಿಂದ ಹೊರನಡೆದಿದ್ದಾರೆ ಎಂದವರು ಟೀಕಿಸಿದರು.

        ಅಭಿವೃದ್ಧಿ ಕಾರ್ಯಕ್ಕೆ ಶಕ್ತಿ ತುಂಬಲಿದೆ

        ಮೇಲ್ಮನೆ ಚುನಾವಣೆಗಳಲ್ಲಿ ಬಿಜೆಪಿ ಸದಾ ಮೇಲುಗೈ ಸಾಧಿಸುತ್ತಾ ಬಂದಿದೆ. ಕಳೆದ ನಾಲ್ಕು ಅವಧಿಗಳಲ್ಲಿ ಪದವೀಧರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಹಿರಿಯ ನಾಯಕ ಡಿ.ಎಚ್‌. ಶಂಕರ ಮೂರ್ತಿ ಅವರು ಈ ಬಾರಿಯೂ ಸ್ಪರ್ಧಿಸುತ್ತಿದ್ದಾರೆ. ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕ್ಯಾ| ಗಣೇಶ್‌ ಕಾರ್ನಿಕ್‌ ಎರಡನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಪಕ್ಷದ ಅಭ್ಯರ್ಥಿಗಳು ಅತ್ಯಧಿಕ ಮತಗಳಿಂದ ಆರಿಸಿಬರುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕಾಗಿದೆ ಎಂದವರು ಹೇಳಿದರು.

        ವಿಧಾನ ಪರಿಷತ್‌ ಚುನಾವಣೆ ಸರಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅದರೆ ವಿದ್ಯಾವಂತರ ತೀರ್ಪು ನಮ್ಮ ಪರವಾಗಿ ಬಂದರೆ ಸರಕಾರದ ಅಭಿವೃದ್ಧಿ ಕಾರ್ಯಗಳಿಗೆ ಇನ್ನಷ್ಟು ಪ್ರೇರಣೆ ಸಿಗುತ್ತದೆ ಎಂದು ಡಿ.ವಿ. ಸದಾನಂದ ಗೌಡ ಅವರು ಹೇಳಿದರು.

        ಜನಸಂಘರ್ಷ ಅಭಿಯಾನ : ಅನಂತ ಕುಮಾರ್‌

        ಬಿಜೆಪಿ ಅಂದರೆ ವಿಕಾಸ. ಕಾಂಗ್ರೆಸ್‌ ಅಂದರೆ ವಿನಾಶ. ರಾಜ್ಯ, ರಾಷ್ಟ್ರ ಅಭಿವೃದ್ಧಿಗಾಗಿ ಬಿಜೆಪಿಯವನ್ನು ಶಕ್ತಿಶಾಲಿಯಾಗಿ ಸಂಘಟಿಸಲು ಕಾರ್ಯಕರ್ತರು ಶ್ರಮ ವಹಿಸಬೇಕು ಎಂದು ಪಕ್ಷ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್‌ ಅವರು ಕರೆ ನೀಡಿದರು.

        ಕೇಂದ್ರ ಸರಕಾರ ಆಡಳಿತ ವೈಫಲ್ಯ, ಬೆಲೆಯೇರಿಕೆ, ಪೆಟ್ರೋಲ್‌ ದರ ಹೆಚ್ಚಳ ಖಂಡಿಸಿ ಜು. 7 ರಿಂದ 22ರ ವರೆಗೆ ಬಿಜೆಪಿ ವತಿಯಿಂದ ಜನಸಂಘರ್ಷ ಅಭಿಯಾನ ಕೈಗೊಳ್ಳಲಾಗಿದೆ. ಪಕ್ಷದ ಕಾರ್ಯಕರ್ತರಿಂದ ಜೈಲುಭರೋ ನಡೆಯಲಿದೆ ಎಂದವರು ಹೇಳಿದರು.

        ಡಿ.ವಿ. ಆಡಳಿತಕ್ಕೆ ಅನಂತ್‌ ಶ್ಲಾಘನೆ

        ಡಿ.ವಿ. ಸದಾನಂದ ಗೌಡ ಅವರು ರಾಜ್ಯದಲ್ಲಿ ಉತ್ತಮ ಆಡಳಿತ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ ಎಂದು ಅನಂತ ಕುಮಾರ್‌ ಹೇಳಿದರು.

        ಸದಾನಂದ ಗೌಡರೆ ಬರ ಪರಿಹಾರ ಸೇರಿದಂತೆ ಕೇಂದ್ರ ಸರಕಾರ ಕರ್ನಾಟಕ ರಾಜ್ಯದ ಬಗ್ಗೆ ತೋರುತ್ತಿರುವ ಮಲತಾಯಿ ಧೋರಣೆಯ ವಿರುದ್ಧ ನಿಮ್ಮ ಹೋರಾಟ ಮುಂದುವರಿಸಿ. ಬಿಜೆಪಿ ರಾಷ್ಟ್ರ ನಾಯಕರು, ಸಂಸದೀಯ ಮಂಡಳಿ ನಿಮ್ಮ ಬೆಂಬಲಕ್ಕಿದೆ ಎಂದವರು ಹೇಳಿದರು.

        ಮುಂಬರುವ ಕೇಂದ್ರ ಹಾಗೂ ರಾಜ್ಯ ಚುನಾವಣೆಗಳಿಗೆ ಪ್ರಸ್ತುತ ನಡೆಯುತ್ತಿರುವ ವಿಧಾನ ಪರಿಷತ್‌ ಚುನಾವಣೆ ಒಂದು ಸೆಮಿಫೈನಲ್‌. ಆರು ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳು ಅತ್ಯಧಿಕ ಮತಗಳನ್ನು ಗೆಲ್ಲುವಂತೆ ಮಾಡಿ ಪ್ರತಿಪಕ್ಷಗಳಿಗೆ ತಕ್ಕ ಉತ್ತರವನ್ನು ಕಾರ್ಯಕರ್ತರು ನೀಡಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ರಾಮದಾಸ್‌ ಹೇಳಿದರು.

        ಪಕ್ಷದ ರಾಜ್ಯ ಮುಖ್ಯ ವಕ್ತಾರ ಆಯನೂರು ಮಂಜುನಾಥ್‌ ಅವರು ಮಾತನಾಡಿ, ಶಂಕರಮೂರ್ತಿ ಅವರು ಅತ್ಯಂತ ಹಿರಿಯ ನಾಯಕ. ಬಿ.ಎಸ್‌. ಯಡಿಯೂರಪ್ಪ, ಈಶ್ವರಪ್ಪ ಮುಂತಾದ ನಾಯಕರು ಶಂಕರಮೂರ್ತಿ ಅವರಿಗಿಂತ ಬಹಳ ಸಮಯದ ಬಳಿಕ ರಾಜಕೀಯಕ್ಕೆ ಬಂದವರು ಎಂದರು.

        ಜಿ.ಟಿ. ದೇವೇಗೌಡ, ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಮಾತನಾಡಿ, ಪಕ್ಷದ ಅಭ್ಯರ್ಥಿಗಳನ್ನು ಅತ್ಯಧಿಕ ಬಹುಮತಗಳಿಂದ ಗೆಲ್ಲಿಸುವಂತೆ ಮನವಿ ಮಾಡಿದರು.

        ವಿಧಾನ ಸಭಾ ಉಪ ಸಭಾಧ್ಯಕ್ಷ ಎನ್‌. ಯೋಗೀಶ್‌ ಭಟ್‌, ಶಾಸಕರಾದ ಜೆ. ಕೃಷ್ಣ ಪಾಲೆಮಾರ್‌, ಅಂಗಾರ, ಮಲ್ಲಿಕಾ ಪ್ರಸಾದ್‌, ವಿಧಾನ ಪರಿಷತ್‌ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ, ಬಾಲ ಭವನ ಸಮಿತಿ ಅಧ್ಯಕ್ಷೆ ಸುಲೋಚನಾ ಭಟ್‌, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ , ಜಿ.ಪಂ. ಅಧ್ಯಕ್ಷೆ ಶೈಲಜಾ ಭಟ್‌, ಉಪಮೇಯರ್‌ ಅಮಿತಾ ಕಲಾ ಮತ್ತಿತರರು ಉಪಸ್ಥಿತರಿದ್ದರು.

        ಬಿಜೆಪಿ ಜಿಲ್ಲಾ ಪ್ರಭಾರಿ ಪ್ರತಾಪಸಿಂಹ ನಾಯಕ್‌ ಹಾಗೂ ಬಿಜೆಪಿ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ ಸ್ವಾಗತಿಸಿದರು. ಪ್ರ. ಕಾರ್ಯದರ್ಶಿ ದೇವದಾಸ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

        ಸಕಾಲದಲ್ಲಿ 15.34 ಲಕ್ಷ ಅರ್ಜಿಗಳು ವಿಲೇವಾರಿ

        ರಾಜ್ಯ ಸರಕಾರ ಜಾರಿಗೆ ತಂದಿರುವ ಸಕಾಲ ಯೋಜನೆಯಲ್ಲಿ ಒಂದು ತಿಂಗಳ ಅವಧಿಯಲ್ಲಿ 18.5 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, ಇದರಲ್ಲಿ 15.34 ಲಕ್ಷ ಅರ್ಜಿಗಳು ವಿಲೇವಾರಿಯಾಗಿವೆ. ಇದು 151 ಸೇವೆಗಳನ್ನು ಒಳಗೊಂಡಿದ್ದು, ರಾಷ್ಟ್ರದಲ್ಲೇ ಪ್ರಥಮ ಸ್ಥಾನದಲ್ಲಿದೆ. ಮುಂದಿನ ಹಂತದಲ್ಲಿ ಸಚಿವಾಲಯವನ್ನು ಕೂಡಾ ಇದರಲ್ಲಿ ಸೇರಿಸಲು ಸರಕಾರ ನಿರ್ಧರಿಸಿದೆ ಎಂದು ಡಿ.ವಿ. ಸದಾನಂದ ಗೌಡ ಅವರು ಹೇಳಿದರು.

        ಕಬಡ್ಡಿ, ಅಂಗಿ ಎಳೆಯುವುದು

        ನಮ್ಮಲ್ಲಿ ಕಬಡ್ಡಿ, ಅಂಗಿ ಎಳೆಯುವುದು, ಕೈಕಾಲು ಎಳೆಯವುದು ಮುಂತಾದ ವ್ಯತ್ಯಾಸಗಳು ನಡೆದಿರಬಹುದು. ಇದು ಕಾರ್ಯಕರ್ತರ ಮನಸ್ಸಿನಲ್ಲಿ ಪರಿಣಾಮ ಬೀರಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಇದನ್ನು ಸರಿಪಡಿಸಿಕೊಳ್ಳುತ್ತಿದ್ದೇವೆ. ಇಲ್ಲದಿದ್ದರೆ ನೀವು (ಕಾರ್ಯಕರ್ತರು ) ನಮಗೆ ಬುದ್ಧಿ ಕಲಿಸುತ್ತೀರಿ ಎಂದು ಸದಾನಂದ ಗೌಡ ಅವರು ಪಕ್ಷದೊಳಗಿನ ಆಂತರಿಕ ಭಿನ್ನಮತವನ್ನು ಮಾರ್ಮಿಕವಾಗಿ ಉಲ್ಲೇಖೀಸಿ ನುಡಿದರು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus