Udayavani | Jun 02, 2012
ಮಂಗಳೂರು : ಕರ್ನಾಟಕದಲ್ಲಿ ತಲೆದೋರಿರುವ ತೀವ್ರ ಬರಗಾಲದಲ್ಲಿ ರಾಜಕೀಯ ಮಾಡಬೇಡಿ. ಪರಿಹಾರ ಬಿಡುಗಡೆ ಮಾಡಿ ಸಂಕಷ್ಟಕ್ಕೆ ಸ್ಪಂದಿಸಿ ಎಂಬುದಾಗಿ ಯುಪಿಎ ಹಾಗೂ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್ ಅವರು ಆಗ್ರಹಿಸಿದರು.
ನೈಋತ್ಯ ಪದವೀಧರ ಹಾಗೂ ಶಿಕ್ಷಕ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕರ್ನಾಟಕದಲ್ಲಿ 23 ಜಿಲ್ಲೆಗಳ 126 ತಾಲೂಕುಗಳಲ್ಲಿ ತೀವ್ರತರವಾದ ಬರಗಾಲ ಉಂಟಾಗಿದ್ದು ಸುಮಾರು 6,000 ಕೋ.ರೂ. ಹಾನಿ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ. ಬರಪರಿಹಾರಕ್ಕೆ 1,500 ಕೋ.ರೂ. ವಿಶೇಷ ಪ್ಯಾಕೇಜ್, 3 ಲಕ್ಷ ಮೆ.ಟನ್ ಅಕ್ಕಿ ಹಾಗೂ 57,000 ಮೆ.ಟನ್ ಗೋಧಿ ನೀಡುವಂತೆ ಕೇಂದ್ರ ಸರಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಇದರಲ್ಲಿ ಈವರೆಗೆ ಒಂದೇ ಒಂದು ಅಕ್ಕಿ ಕಾಳು ಆಗಲಿ, ಗೋಧಿ ಕಾಳು ಆಗಲಿ ಬಿಡುಗಡೆಯಾಗಿಲ್ಲ. ಬರೇ 280 ಕೋ.ರೂ. ಮಂಜೂರು ಮಾಡಿ 70 ಕೋ.ರೂ.ಮಾತ್ರ ಈವರೆಗೆ ಬಿಡುಗಡೆ ಮಾಡಿ ಕೇಂದ್ರ ಸರಕಾರ ಕೈತೊಳೆದುಕೊಂಡಿದೆ ಎಂದು ಟೀಕಿಸಿದರು.
ಇಲ್ಲೇ ಘೋಷಣೆ: ರಾಹುಲ್‌ಗೆ ಆಗ್ರಹ
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರು ಎರಡು ದಿನಗಳ ಕರ್ನಾಟಕ ಭೇಟಿಗೆ ಶನಿವಾರ ಆಗಮಿಸಿದ್ದಾರೆ. ಅವರು ಕರ್ನಾಟಕಕ್ಕೆ ಬಂದಿರುವುದು ರಾಜಕಾರಣ ಮಾಡಲೋ ಅಥವಾ ಬರಪರಿಹಾರಕ್ಕೆ ಸ್ಪಂದಿಸಲೋ ಎಂಬುದು ಸ್ಪಷ್ಟವಾಗಬೇಕಾಗಿದೆ. ಸುಮಾರು ಒಂದೂವರೆ ತಿಂಗಳಿನ ಹಿಂದೆ ಸೋನಿಯಾ ಗಾಂಧಿ ಅವರು ಕರ್ನಾಟಕ್ಕೆ ಆಗಮಿಸಿ ಬರವೀಕ್ಷಣೆ ಮಾಡಿ ತೆರಳಿದ್ದರು. ಯುಪಿಎ ಅಧ್ಯಕ್ಷರಾಗಿರುವ ಅವರು ಪ್ರಧಾನಿ, ಗೃಹಸಚಿವರು, ಹಣಕಾಸು ಸಚಿವರಲ್ಲಿ ಚರ್ಚಿಸಿ ಬರ ಪರಿಹಾರಕ್ಕೆ ರಾಜ್ಯಕ್ಕೆ ಹೆಚ್ಚಿನ ಹಣ ಬಿಡುಗಡೆ ಮಾಡಿಸುತ್ತಾರೆ ಎಂಬು ನಿರೀಕ್ಷೆ ಇತ್ತು. ಇದು ಹುಸಿಯಾಗಿದೆ. ರಾಜ್ಯಕ್ಕೆ ಯಾವುದೇ ಪ್ರಯೋಜನವಾಗಲಿಲ್ಲ ಎಂದ ಅವರು ಈಗ ರಾಹುಲ್ ಗಾಂಧಿ ಬಂದಿದ್ದಾರೆ. ಬರದಲ್ಲಿ ರಾಜಕಾರಣ ಮಾಡುವುದು ಬೇಡ. ಪರಿಸ್ಥಿತಿಗೆ ಸ್ಪಂದಿಸಿ. ರಾಜ್ಯದಿಂದ ತೆರಳುವ ಮುನ್ನ ಪರಿಹಾರದ ಬಗ್ಗೆ ಸ್ಪಷ್ಟ ಘೋಷಣೆ ಮಾಡಿ ಎಂಬುದು ನನ್ನ ಆಗ್ರಹವಾಗಿದೆ ಎಂದರು.
ಮಲತಾಯಿ ಧೋರಣೆ
ಕೇಂದ್ರ ಸರಕಾರ ಬರಪರಿಹಾರ ಬಿಡುಗಡೆ ವಿಚಾರದಲ್ಲಿ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಮಹಾರಾಷ್ಟÅದ ವಿದರ್ಭಕ್ಕೆ ಬರಪರಿಹಾರಕ್ಕೆ ವಿಶೇಷ ಪ್ಯಾಕೇಜಿನಡಿಯಲ್ಲಿ 1,200 ಕೋ.ರೂ. ಬಿಡುಗಡೆ ಮಾಡಿದೆ. ರಾಹುಲ್ ಗಾಂಧಿ ಅವರು ಉತ್ತರ ಪ್ರದೇಶದ ಬುಂದೇಲ್ ಖಂಡ್‌ಗೆ ವಿಶೇಷ ಪ್ಯಾಕೇಜಿನಡಿಯಲ್ಲಿ ಪರಿಹಾರ ಬಿಡುಗಡೆ ಮಾಡಿಸಿದ್ದರು. ಇದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಕರ್ನಾಟಕಕ್ಕೆ 1,500 ಕೋ.ರೂಪಾಯಿಯ ವಿಶೇಷ ಪ್ಯಾಕೇಜ್ ನೀಡುವಂತೆ ಮಾಡಿದ ಬೇಡಿಕೆಗೆ ಕೇಂದ್ರ ಸರಕಾರ ಬಿಡುಗಡೆ ಮಾಡಿದ್ದು ಕೇವಲ 70 ಕೋ.ರೂ. ಇದು ಕರ್ನಾಟಕದ ಪಾಲಿಗೆ ಮಾಡಿರುವ ಅನ್ಯಾಯವಾಗಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರಕಾರ ಬರ ಪರಿಹಾರಕ್ಕೆ ಈಗಾಗಲೇ ತನ್ನ ಬೊಕ್ಕಸದಿಂದ 600 ಕೋ.ರೂ. ವಿನಿಯೋಗಿಸಿದೆ. ಮುುುಖ್ಯಮಂತ್ರಿಯವರು, ಸಚಿವರು, ಬಿಜೆಪಿ ಸಂಸದರು, ರಾಜ್ಯ ಸರಕಾರದ ಅಧಿಕಾರಿಗಳು ಬರಪರಿಹಾರ ಪ್ರದೇಶಗಳಿಗೆ ಹಲವು ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಸತ್‌ನಲ್ಲಿ ನಮ್ಮ ಸಂಸದರು ಹಲವಾರು ಬರಪರಿಸ್ಥಿತಿಯನ್ನು ಪ್ರಸ್ತಾವಿಸಿ ಪರಿಹಾರಕ್ಕೆ ಆಗ್ರಹಿಸಿದ್ದೇವೆ ಎಂದರು.
ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಮನವಿ :
ವಿಧಾನ ಪರಿಷತ್‌ಗೆ ನೈರುತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿಯಿಂದ ಡಿ.ಎಚ್. ಶಂಕರಮೂರ್ತಿ ಅವರು 5ನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಹಿಂದೆ 4 ಬಾರಿ ಸತತವಾಗಿ ಈ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಶಿಕ್ಷಕರ ಕ್ಷೇತ್ರದಿಂದ ಕ್ಯಾ| ಗಣೇಶ್ ಕಾರ್ನಿಕ್ ಅವರು ಎರಡನೇ ಬಾರಿಗೆ ಸ್ಪರ್ದಿಸುತ್ತಿದ್ದಾರೆ. ಅವರ ಪರವಾಗಿ ಪ್ರಚಾರಕ್ಕೆ ಇಲ್ಲಿಗೆ ಆಗಮಿಸಿದ್ದೆವೆ. ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕೆಂದು ಮನವಿ ಮಾಡುತ್ತಿದ್ದೇವೆ ಎಂದವರು ಹೇಳಿದರು.
ರಾಜ್ಯಸಭಾ ಸದಸ್ಯ ಹಾಗೂ ಪಕ್ಷದ ಮುಖ್ಯ ವಕ್ತಾರ ಆಯನೂರು ಮಂಜುನಾಥ್, ರಾಜ್ಯ ಗೃಹ ನಿರ್ಮಾಣ ಮಂಡಳಿ ಅಧ್ಯಕ್ಷ ಜಿ.ಟಿ. ದೇವೇಗೌಡ, ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ, ಮೀನುಗಾರಿಕಾ ನಿಗಮದ ಅಧ್ಯಕ್ಷ ನಿತಿನ ಕುಮಾರ್, ಮೂಡಾ ಅಧ್ಯಕ್ಷ ರಮೇಶ್ ಎಸ್., ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜೀವ ಮಟಂದೂರು ಮತ್ತಿತರರು ಉಪಸ್ಥಿತರಿದ್ದರು.