Udayavani | Jun 02, 2012
ಮಂಗಳೂರು : ನಗರದ ನಾಲ್ಕು ಪ್ರಮುಖ ಹೋಟೇಲ್‌ಗಳಿಗೆ ಮಂಗಳೂರು ಮಹಾನಗರ ಪಾಲಿಕೆಯ ಜಂಟೀ ಆಯುಕ್ತ ಶ್ರೀಕಾಂತ್ ರಾವ್ ನೇತೃತ್ವದ ತಂಡ ಶನಿವಾರ ದಾಳಿ ನಡೆಸಿ, ಹೊಟೇಲಿನ ಸ್ವಚ್ಚತೆ ಪರಿಶೀಲಿಸಿತು.
ಇವುಗಳಲ್ಲಿ ಕಾನೂನು ಬದ್ಧ ಸ್ವಚ್ಚತೆ ಪಾಲಿಸದ ಮೂರು ಹೊಟೇಲ್‌ಗಳಿಗೆ ನೋಟೀಸ್ ನೀಡಲಾಗಿದ್ದು, 10 ದಿನಗಳ ಒಳಗೆ ಉತ್ತರಿಸುವಂತೆ ಅವರು ಸೂಚಿಸಿದರು.
ಪಾಲಿಕೆ ತಂಡ ದಾಳಿ ನಡೆಸಿದ ಸಂದರ್ಭ ಹೋಟೇಲಿನಲ್ಲಿ ಕೊಳೆತ ಹಣ್ಣು, ತರಕಾರಿಗಳು ದೊರಕಿವೆ. ಜೊತೆಗೆ ತಿಂಡಿ ತಯಾರಿ ಸ್ಥಳದಲ್ಲಿ ಸ್ವಚ್ಚತೆ ಪಾಲಿಸದ ಕಾರಣ ಹೊಟೇಲ್ ಮಾಲಿಕರನ್ನು ಅಧಿಕಾರಿಗಳು ತರಾಟೆಗೆ ತೆಗೆದುಕೊಂಡರು. ತಯಾರಿಸಿದ ತಿಂಡಿಗಳನ್ನು ತೆರೆದು ಇಟ್ಟಿರುವುದು, ಹೊಟೇಲ್ ಕಾರ್ಮಿಕರಿಗೆ ಆರೋಗ್ಯ ಪ್ರಮಾಣಪತ್ರ ಇಲ್ಲದಿರುವ ಕುರಿತು ಅಧಿಕಾರಿಗಳು ಮಾಲಕರನ್ನು ಪ್ರಶ್ನಿಸಿದರು.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ ಹೋಟೇಲ್‌ಗಳು ಸೇರಿದಂತೆ ಆಹಾರ ತಯಾರಿಕಾ ಕೇಂದ್ರಗಳು ಸ್ವಚ್ಚತೆ ಪಾಲಿಸದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸೋಮವಾರದಿಂದ ಈ ಹಿನ್ನೆಲೆಯಲ್ಲಿ ನಗರದ ವಿವಿಧ ಹೋಟೇಲ್‌ಗಳಿಗೆ ದಾಳಿ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಂಡದಲ್ಲಿ ಪಾಲಿಕೆಯ ಪರಿಸರ ಅಭಿಯಂತರರಾದ ಮಂಜುನಾಥ್ ಆರ್. ಶೆಟ್ಟಿ, ಆರೋಗ್ಯ ಅಧಿಕಾರಿ ರಘುನಾಥ್, ಆರೋಗ್ಯ ನಿರೀಕ್ಷಕ ಯಶವಂತ್, ಭರತ್, ಕರುಣಾಕರ್, ಸುಶಾಂತ್, ಸಂತೋಷ್, ಬಸವರಾಜ್ ಮೊದಲಾದವರು ಇದ್ದರು.