ಉಡುಪಿ : ಕಾಲ ಬದಲಾಗಿದೆ. ಕಥಕ್ಕಳಿ, ಶಾಸ್ತ್ರೀಯ ಸಂಗೀತಕ್ಕೆ ಹೆಚ್ಚಾಗಿ ಸಿಗುತ್ತಿದ್ದ ಪ್ರಶಸ್ತಿಗಳು ಈಗ ಯಕ್ಷಗಾನ ಕಲಾವಿದರಿಗೆ ಸಿಗುತ್ತಿವೆ. ಕಲಾವಿದರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಮುಂದೆ ಕಲಾವಿದರಿಗೆ ಪದ್ಮ, ಭಾರತರತ್ನದಂತಹ ಪ್ರಶಸ್ತಿಗಳು ಸಿಗಲಿ ಎಂದು ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಹಾರೈಸಿದರು.ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜೂ. 2ರಂದು ಜರಗಿದ ಯಕ್ಷಗಾನ ಕಲಾರಂಗದ ಅಂಗ ಸಂಸ್ಥೆ ಯಕ್ಷನಿಧಿಯ 13ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಸಮ್ಮಾನಿತರಾಗಿ ಮಾತನಾಡಿದರು.ವಾರ್ಷಿಕ ಮಹಾಸಭೆಯ ಸಮಾರೋಪ ಸಮಾರಂಭದಲ್ಲಿ ಪರ್ಯಾಯ ಶ್ರೀ ಸೋದೆ ವಾದಿರಾಜ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಅತಿಥಿಗಳಾಗಿ ಹರಿನಾರಾಯಣ ಅಸ್ರಣ್ಣ, ಕಟೀಲು ಮೇಳದ ವ್ಯವಸ್ಥಾಪಕ ದೇವಿಪ್ರಸಾದ್ ಶೆಟ್ಟಿ, ಕುಂಬಳೆ ಸುಂದರ ರಾವ್, ಡಾ| ಎಂ. ಪ್ರಭಾಕರ ಜೋಷಿ, ಉದ್ಯಮಿ ಭುವನೇಂದ್ರ ಕಿದಿಯೂರು ಪಾಲುಗೊಂಡರು. ಇದೇ ಸಂದರ್ಭದಲ್ಲಿ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ| ಎಂ.ಎಲ್. ಸಾಮಗರನ್ನು ಅಭಿನಂದಿಸಲಾಯಿತು.ಸಂಸ್ಥೆಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿ ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರ್ವಹಿಸಿದರು.