ಉಡುಪಿ: ಉಡುಪಿ ಜನತೆ ಸ್ವರ್ಣಾ ನದಿ ತುಂಬಿ ಹರಿಯುವುದನ್ನು ಕಾಯುತ್ತಿದ್ದಾರೆ. ಸ್ವರ್ಣಾ ನದಿ ಮಳೆಯನ್ನು ನಿರೀಕ್ಷಿಸುತ್ತಿದೆ. ಮಳೆಯ ನಿರೀಕ್ಷೆ ಪ್ರತಿದಿನವೂ ಹುಸಿಯಾಗುತ್ತಲೇ ಇದೆ. ಮುಂದೇನು?ಈ ಪ್ರಶ್ನೆಗೆ ಸದ್ಯಕ್ಕೆ ಇಲ್ಲಿ ಉತ್ತರವಿಲ್ಲ. ಕುಡಿಯುವ ನೀರು ಪೂರೈಸುತ್ತಿರುವ ಟ್ಯಾಂಕ್‌ಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇಂತಹ ಟ್ಯಾಂಕ್‌ಗಳ ನೀರಿಗೆ ಬೇಡಿಕೆ ಕೂಡ. ಸ್ವರ್ಣಾ ನದಿಯಲ್ಲಿ ನೀರಿದೆ; ಆದರೆ ಅದರ ಹರಿವು ಬಹುತೇಕ ನಿಂತಿದೆ. ಈಗ ನೀರು ನಿಂತಿರುವ ಜಾಗದಿಂದ ಪಂಪ್ ಮಾಡುವ ಕೆಲಸ ನಡೆಯುತ್ತಿದೆ.ಬಂಡೆ ಒಡೆಯಿರಿ...ಹೂಳೆತ್ತಿರಿ...ಇನ್ನೂ 10-15 ದಿನ ಮಳೆ ಬಾರದಿದ್ದರೇನು? ಎಂಬ ಆತಂಕಿತ ಚರ್ಚೆ ಈಗ ಆರಂಭಗೊಂಡಿದೆ. ಸ್ವರ್ಣಾ ನದಿಗೆ ಮರುಜೀವ ನೀಡುವ ಯತ್ನ ಮಾಡಬಹುದೇ ಎಂಬುದು ಚರ್ಚೆಯ ವಸ್ತು. 'ಸ್ವರ್ಣೆಯ ಒಡಲಿನಲ್ಲಿರುವ ಬಂಡೆಯನ್ನು ಒಡೆಯಿರಿ. ಆಗ ಯಥೇತ್ಛ ನೀರು ದೊರೆಯುತ್ತದೆ' ಎನ್ನುವ ಸಲಹೆಗಳು ಒಂದೆಡೆಯಾದರೆ; 'ಹೂಳು ತುಂಬಿರುವುದರಿಂದ ನೀರಿನ ಒರತೆ ಕಡಿಮೆಯಾಗಿದೆ. ಹಾಗಾಗಿ ಹೂಳೆತ್ತಿ' ಎನ್ನುವುದು ಮತ್ತೂಂದು ಸಲಹೆ. ಆದರೆ ಬಂಡೆ ಒಡೆಯುವುದು ಸುಲಭಸಾಧ್ಯವೂ ಅಲ್ಲ, ಇದರಿಂದ ನೀರಿನ ಸೆಳೆ ಹೆಚ್ಚಬಹುದು ಎಂಬ ಗ್ಯಾರಂಟಿಯೂ ಇಲ್ಲ. ಇನ್ನು ಹೂಳೆತ್ತುವುದಕ್ಕೆ ಅಥವಾ ಮರಳು ತೆಗೆಯುವುದಕ್ಕೆ ಸರಕಾರದ ನಿಯಮವೂ ಅಡ್ಡಿ ಇದೆ. ಯಾಂತ್ರೀಕೃತವಾಗಿ ಮರಳು ತೆಗೆಯುವುದಕ್ಕೆ ಸರಕಾರದಿಂದ ಅನುಮತಿ ಇಲ್ಲವಾದುದರಿಂದ ಸಮಸ್ಯೆಯಾಗಿದೆ.ನಿಗದಿತ ದಿನ ಕಳೆದು ಹೋಗಿದೆ!ಸ್ವರ್ಣಾ ಮೊದಲ ಹಂತದ ಯೋಜನೆಯಂತೆ ನೀರಿನ ಹೊರ ಹರಿವು (ಅಣೆಕಟ್ಟಿನ ನಿರ್ದಿಷ್ಟ ಮಟ್ಟ ಮೀರಿ ಹರಿಯುವ ನೀರು) ನಿಂತ ಮೇಲೆ 45ರಿಂದ 60 ದಿನಗಳಿಗೆ ಮಾತ್ರ ನೀರು ದೊರೆಯುತ್ತಿತ್ತು. ಆದರೆ ಎರಡನೇ ಹಂತದ ಯೋಜನೆಯಿಂದ 90 ದಿನಗಳ ಕಾಲ ನೀರು ಒದಗಿಸುವ ಸಾಮರ್ಥ್ಯವನ್ನು ಹೊಂದಿತು. ಇದರಲ್ಲಿ 5 ಮೀಟರ್ ನೀರು ಸಂಗ್ರಹವಾಗುತ್ತದೆ. ಆದರೆ ಈ ವರ್ಷ ಈಗಾಗಲೇ ಈ 90 ದಿನಗಳ ಅವಧಿ ಮೀರಿದೆ. ಸಾಮಾನ್ಯವಾಗಿ ಮಾರ್ಚ್ 5 -6ರವರೆಗೆ ಹೊರ ಹರಿವು ಇರುತ್ತಿತ್ತು. ಈ ವರ್ಷ ಫೆ.5ನೇ ತಾರೀಖೀಗೆ ಹೊರಹರಿವು ನಿಂತಿದೆ. ಇದಕ್ಕೆ ಈ ವರ್ಷ ಕಾರಣ ಮಧ್ಯಂತರ ಮಳೆ ಬಾರದಿರುವುದು.ಒಂದು ಕಿ.ಮೀ.ಗಳವರೆಗೆ ಬಂಡೆಸ್ವರ್ಣ ನದಿಗೆ ಕಟ್ಟಲಾಗಿರುವ ಅಣೆಕಟ್ಟಿನ ಅಕ್ಕಪಕ್ಕ ಒಂದು ಕಿ.ಮೀ. ದೂರಕ್ಕೆ ಬಂಡೆಕಲ್ಲುಗಳದೇ ರಾಶಿ. ಹಾಗಾಗಿ ಇದು ನೀರಿನ ಹರಿವನ್ನು ತಡೆಯುತ್ತಿದೆ. ಬಂಡೆ ಒಡೆಯುವುದು ಸುಲಭಸಾಧ್ಯವಲ್ಲ. ಸಾಮಾನ್ಯವಾಗಿ ಅಣೆಕಟ್ಟುಗಳನ್ನು ಬಂಡೆಗಳ ಪಕ್ಕದಲ್ಲಿ ಕಟ್ಟಲಾಗುತ್ತದೆ. ಇದು ತಾಂತ್ರಿಕವಾಗಿ, ಭೌತಿಕವಾಗಿ ಹೆಚ್ಚು ಸುರಕ್ಷಿತ ಎಂದು ಪರಿಗಣಿಸಲ್ಪಡುತ್ತದೆ. ಇಲ್ಲಿಯೂ ಇದೇ ರೀತಿ ಮಾಡಲಾಗಿದೆ. ಅಣೆಕಟ್ಟಿನಿಂದ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿ ನಿಂತಿರುವ ನೀರು 30 ದಿನಗಳವರೆಗೆ ಸಾಕು ಎಂಬ ಲೆಕ್ಕಾಚಾರವಿದೆ. ಆದರೆ ಅದನ್ನು ಅಲ್ಲಿಂದ ಮುಖ್ಯ ಡ್ಯಾಂಗೆ ತಂದು ಅನಂತರ ಪಂಪ್ ಮಾಡಬೇಕಾಗಿದೆ.ಹೂಳೆತ್ತಲು ವಿಶೇಷ ಪರವಾನಿಗೆ'ಈ ಹಿಂದಿನ ವರ್ಷಗಳಲ್ಲಿ ಇಲ್ಲಿ ಮರಳುಗಾರಿಕೆ ನಡೆಯುತ್ತಿತ್ತು. ಆದರೆ ಸರಕಾರದ ನಿಯಮದಿಂದಾಗಿ ಈಗ ಮರಳುಗಾರಿಕೆಗೆ ಅನುಮತಿ ನೀಡಲು ಸಾಧ್ಯವಾಗುತ್ತಿಲ್ಲ. ಹೂಳೆತ್ತಲು ಸರಕಾರದಿಂದ ವಿಶೇಷ ಪರವಾನಿಗೆ ಪಡೆಯಲಾಗುವುದು. ಮುಂದಿನ ವರ್ಷದಿಂದ ಹೂಳೆತ್ತಲು ನಿರ್ಧರಿಸಲಾಗುವುದು' ಎಂದು ನಗರಸಭೆ ಆಯುಕ್ತ ಗೋಕುಲ್‌ದಾಸ್ ನಾಯಕ್ ಹೇಳುತ್ತಾರೆ.'ನೀರಿನ ಸಮಸ್ಯೆಗೆ ಪರಿಹಾರವೇನು?' ಎಂಬ ಪ್ರಶ್ನೆಗೆ ಆಕಾಶದತ್ತ ನೋಡಿ ಉತ್ತರ ಹೇಳಬೇಕಾದ ಸ್ಥಿತಿ ನಿರ್ಮಾಣವಾಗಿದೆ!.30 ಮಿಲಿಯನ್ ಲೀಟರ್ ಅಗತ್ಯತೆ- ದಿನವೊಂದಕ್ಕೆ ಸ್ವರ್ಣೆ ನದಿಯಿಂದ ಪಡೆಯುವ ನೀರಿನ ಪ್ರಮಾಣ 30 ಮಿಲಿಯನ್ ಲೀಟರ್.- ನಗರಸಭೆ ವ್ಯಾಪ್ತಿಯ 20,000 ಮನೆಗಳ ಸಂಪರ್ಕ, ಇತರೆ ವಸತಿ ಸಂಕೀರ್ಣ ಕಟ್ಟಡ, ಅಲ್ಲದೆ ಅಕ್ಕಪಕ್ಕದ 8 ಗ್ರಾ.ಪಂ.ಗಳ ವ್ಯಾಪ್ತಿಯ ಜನರಿಗೂ ಉಡುಪಿ ನಗರಸಭೆ ಯಥೇತ್ಛವಾಗಿ ನೀರು ನೀಡುತ್ತಿತ್ತು.- ಈಗ ನಗರದ ಅರ್ಧಭಾಗಕ್ಕೆ ಒಂದು ದಿನ ಮತ್ತು ಉಳಿದರ್ಧ ಭಾಗಕ್ಕೆ ಮತ್ತೂಂದು ದಿನ ನೀರು ಒದಗಿಸಲಾಗುತ್ತಿದೆ. 12 ಮಿಲಿಯನ್ ಲೀಟರ್ ನೀರು ಪೂರೈಸುತ್ತಿದೆ.- ಸ್ವರ್ಣಾ ಮೂರನೇ ಹಂತದ ಯೋಜನೆ ಮಾಡಿ ಮುಂದಿನ ವರ್ಷಗಳಲ್ಲಿ ಹೆಚ್ಚಾಗುವ ನೀರಿನ ಬೇಡಿಕೆ ಪೂರೈಸುವ ಯೋಜನೆ ನಗರಸಭೆಯದ್ದು.- ವಿಪರೀತವಾಗಿ ಹೆಚ್ಚಾಗಿರುವ ನೀರಿನ ಬೇಡಿಕೆ ಮತ್ತು ಈ ವರ್ಷ ಮಳೆಯ ಮುನಿಸು ಹಾಗೂ ಇದುವರೆಗೆ ನಗರಸಭೆ ಯಥೇತ್ಛವಾಗಿ ನೀರು ಪೂರೈಸಿರುವುದು - ಇವು ಈಗ ಉಡುಪಿಯಲ್ಲಿ ನೀರಿನ ಬವಣೆ ಉಂಟಾಗಲು ಕಾರಣವಾಗಿರುವ ಅಂಶಗಳು.