Wednesday, June 19, 2013
Last Updated: 6:39:01 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಆರೋಗ್ಯವಾಣಿ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • "ಹೈ ರಿಸ್ಕ್' ಗರ್ಭಾವಸ್ಥೆ
    • "ಹೈ ರಿಸ್ಕ್'' ಗರ್ಭಾವಸ್ಥೆ.

      • ಡಾ| ಶ್ಯಾಮಲಾ ಜಿ. (ಸಹ ಪ್ರಾಧ್ಯಾಪಕರು), ಡಾ| ಲಾವಣ್ಯ ರೈ (ವಿಭಾಗ ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರು), ಪ್ರಸವ ಮತ್ತು | Jun 04, 2012

        ಗರ್ಭಾವಸ್ಥೆ ಎಂಬುದು ಸ್ತ್ರೀಯ ಜೀವನದಲ್ಲಿ ಒಂದು ಸಹಜ ಪ್ರಕ್ರಿಯೆ. ಭ್ರೂಣವು ಶಿಶುವಾಗಿ ಬೆಳೆದು, ಹೊರ ಜಗತ್ತಿನಲ್ಲಿ ಯಾವುದೇ ತೊಂದರೆಯಿಲ್ಲದೆ ತನ್ನ ದೇಹ ವ್ಯವಸ್ಥೆಯನ್ನು ಸಿದ್ಧಪಡಿಸಿಕೊಳ್ಳಲು ಸುಮಾರು 280 ದಿನಗಳ ಕಾಲ ಬೇಕಾಗುತ್ತದೆ. 80% ಸ್ತ್ರೀಯರಲ್ಲಿ ಗರ್ಭಾವಸ್ಥೆಯು ಯಾವುದೇ ತೊಂದರೆ ಇಲ್ಲದೆ ಕಳೆದು, ಶಿಶು ಜನನವಾಗುತ್ತದೆ. ಆದರೆ 20% ಗರ್ಭಿಣಿ ಸ್ತ್ರೀಯರಲ್ಲಿ, ಕೆಲವು ಸಂದರ್ಭದಲ್ಲಿ ತೊಂದರೆಗಳು ಬರಬಹುದಾದಂತಹ ಕೆಲವು ಅಂಶಗಳಿರಬಹುದು. ದಿನ ಸರಿದಂತೆ ಅವರಲ್ಲಿ ತೊಂದರೆಗಳು ಕಂಡು ಬರಬಹುದು. ಈ ತರಹದ ಬಸಿರಿಗೆ ಹೈ ರಿಸ್ಕ್-ಪ್ರಗ್ನೆನ್ಸಿ ಎಂದು ಹೇಳುತ್ತಾರೆ.

        ಗರ್ಭಿಣಿ ತಪಾಸಣೆ ಎಂಬುದು ಗರ್ಭಸ್ಥ ಮಹಿಳೆಯರನ್ನು  ವಿವಿಧ ಹಂತಗಳಲ್ಲಿ ತಪಾಸಣೆಗೊಳಪಡಿಸಲಿಕ್ಕಾಗಿ ಇರುವ ವ್ಯವಸ್ಥೆ. ಈ ರೀತಿಯ ತಪಾಸಣೆಗಳ ಸಂದರ್ಭಗಳಲ್ಲಿ, ಮಹಿಳೆ ಹೈ ರಿಸ್ಕ್ಗೆ ಸೇರಿದವಳ್ಳೋ ಅಥವಾ ಆ ರೀತಿಯ ಯಾವುದೇ ಋಣಾತ್ಮಕ ಅಂಶಗಳಿಲ್ಲದ ಲೋ -ರಿಸ್ಕ್ ಎಂಬ ಪಂಗಡಕ್ಕೆ ಸೇರಿದವಳ್ಳೋ ಎಂದು ಪತ್ತೆ ಮಾಡಲಾಗುತ್ತದೆ.

        ಗರ್ಭಿಣಿ ಸ್ತ್ರೀಯರಲ್ಲಿ
        ಹೈ-ರಿಸ್ಕ್ ಅಂಶಗಳು

        1. ವಯಸ್ಸು 18 ವರ್ಷಕ್ಕಿಂತ ಚಿಕ್ಕದಿರುವುದು ಅಥವಾ 35 ವರ್ಷಗಳಿಗಿಂತ ಜಾಸ್ತಿ ಇರುವುದು-ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರು ಬಸಿರಾಗುವುದನ್ನು ಮುಂದೂಡುತ್ತಿದ್ದು, ಮೂವತ್ತರ ಮೇಲ್ಪಟ್ಟ ಗರ್ಭಿಣಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರಲ್ಲಿ ವಯಸ್ಸಿಗೆ ಸಂಬಂಧಿಸಿದ ಕಾಯಿಲೆಗಳು ಗರ್ಭಾವಸ್ಥೆಗೆ ಮೊದಲೇ ಇರಬಹುದು.

        2. ಎತ್ತರ 140 ಸೆಂಟಿಮೀಟರ್‌ಗಿಂತ ಕಡಿಮೆ ಇರುವುದು- ಇವರಲ್ಲಿ ಹೆರಿಗೆ ಮಾರ್ಗ ಸುಗಮವಾಗಿಲ್ಲದಿರುವುದರಿಂದ ಹೆರಿಗೆ ಸಮಯದಲ್ಲಿ ತೊಂದರೆಯಾಗಬಹುದು.

        3. ಬೊಜ್ಜು-ಇಂತಹವರಲ್ಲಿ ರಕ್ತದೊತ್ತಡ, ಸಕ್ಕರೆ ಕಾಯಿಲೆಯಂತಹ ತೊಂದರೆಗಳು ಸಾಮಾನ್ಯ. ಅಲ್ಲದೆ, ಹೆರಿಗೆ  ಕಷ್ಟವಾಗಬಹುದು. ಸಿಸೇರಿಯನ್‌ ಹೆರಿಗೆಯೂ ಸುಲಭ ಸಾಧ್ಯವೇನಲ್ಲ; ಆಪರೇಶನ್‌ ಆದಲ್ಲಿ ಗಾಯ ಮಾಗುವ ಬಗ್ಗೆ ಚಿಂತೆ, ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿ   (thromboembolism), ಅದರಿಂದಾಗುವ ತೊಂದರೆಗಳ ಬಗ್ಗೆ ಚಿಂತೆ.

        4. ಈ ಮುಂಚೆ ಹಲವು ಬಾರಿ ಗರ್ಭಪಾತ-ಶಿಶು ಮರಣವಾಗಿರುವುದು.

        5. ಮಹಿಳೆಯರಲ್ಲಿ ರಕ್ತದೊತ್ತಡ, ಸಕ್ಕರೆಕಾಯಿಲೆ, ಉಬ್ಬಸ, ಹೃದಯದ ಕಾಯಿಲೆ, ಪಿತ್ತಕೋಶ, ಮೂತ್ರಕೋಶಗಳಿಗೆ ಸಂಬಂಧಿಸಿದ ಕಾಯಿಲೆಗಳು, ಮೂತ್ರದ ಸೋಂಕು, ರಕ್ತಹೀನತೆ ಇರುವುದು.


        6. ಅವಳಿ-ತ್ರಿವಳಿ ಮಕ್ಕಳ ಗರ್ಭ ಧರಿಸಿರುವುದು.

        7. ಈ ಮುಂಚೆ ಸಿಸೇರಿಯನ್‌ ಹೆರಿಗೆ ಅಥವಾ ಗರ್ಭಕೋಶದ ಗಡ್ಡೆಗಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾದವರು-ಇಂಥವರಲ್ಲಿ 1% ಮಹಿಳೆಯರಲ್ಲಿ ಹೆರಿಗೆ ಸಮಯದಲ್ಲಿ ಗರ್ಭಕೋಶ ಒಡೆದು ರಕ್ತ ಸ್ರಾವವಾಗುವುದಲ್ಲದೆ, ಶಿಶು ಮರಣವೂ ಆಗಬಹುದು. ಹಾಗಾಗಿ, ಸಾಮಾನ್ಯವಾಗಿ ಇವರಿಗೆ ಯೋಜಿತ ಸಿಸೇರಿಯನ್‌ ಹೆರಿಗೆ ನಡೆಸಲಾಗುವುದು.

        8. ಗರ್ಭಕೋಶಕ್ಕೆ ಸಂಬಂಧಿಸಿದ ನ್ಯೂನತೆಗಳು ಇರುವವರು, ಗರ್ಭಕೋಶದ ಗಡ್ಡೆ, ಜಾರುವಿಕೆ... ಇತ್ಯಾದಿ ತೊಂದರೆಗಳು ಇರುವವರು.

        9. ಮಗು ದಿನ ತುಂಬಿದರೂ ಅಡ್ಡವಾಗಿ ಮಲಗಿದ್ದಲ್ಲಿ (transverse lie)  ಮಗುವಿನ ಕಾಲು ಗರ್ಭಕೋಶದ ಕತ್ತಿನ ಕಡೆಗಿದ್ದು, ತಲೆ ಮೇಲಿದ್ದಲ್ಲಿ -ಸಾಧಾರಣ ಹೆರಿಗೆ ಸಾಧ್ಯವಿಲ್ಲ; ಅಥವಾ ಸಾಧ್ಯವಿದ್ದರೂ, ಹೆರಿಗೆ ಸಮಯದಲ್ಲಿ ಮಗುವಿಗೆ ಉಸಿರು ಕಟ್ಟುವ ಸಾಧ್ಯತೆಗಳು ಹಾಗೂ ಅದು ಮರಣವನ್ನಪ್ಪುವ ಸಾಧ್ಯತೆ ಜಾಸ್ತಿ.

        10. ಮಹಿಳೆ ಆರ್‌.ಎಚ್‌. ನೆಗೆಟಿವ್‌ ಎಂಬ ರಕ್ತದ ಗುಂಪಿಗೆ ಸೇರಿದವಳಾಗಿದ್ದು, ಅವಳ ಪತಿ ಆರ್‌.ಎಚ್‌. ಪೊಸಿಟಿವ್‌ ಗುಂಪಿನವರಾಗಿದ್ದಲ್ಲಿ.

        11. ಎಚ್‌ಐವಿ/ಕ್ಷಯ ಇತ್ಯಾದಿ ಸೋಂಕು ಬಾಧಿತಮಹಿಳೆ ಆಗಿದ್ದಲ್ಲಿ...ಇತ್ಯಾದಿ.
        ಗರ್ಭ ಧರಿಸಿದಾಗ ಇಲ್ಲದಿದ್ದರೂ, ಗರ್ಭಾವಸ್ಥೆಯ ಮುಂದಿನ ಹಂತಗಳಲ್ಲಿ ಕೆಳಕಂಡ ತೊಂದರೆಗಳು ಕಾಣಸಿಕೊಳ್ಳಬಹುದು. ಆವಾಗ ಕಡಿಮೆ ರಿಸ್ಕ್ ಎಂದು ಗುರುತಿಸಲ್ಪಟ್ಟಿದ್ದ ಮಹಿಳೆ ಈಗ ಹೈ ರಿಸ್ಕ್ ಗುಂಪಿಗೆ ಸೇರ್ಪಡೆಯಾಗಬಹುದು. ಗರ್ಭಿಣಿ ಸ್ತ್ರೀಯರಿಗೆ ಬರಬಹುದಾದ ತೊಂದರೆಗಳು ಯಾವುವೆಂದರೆ-

        1. ಅಧಿಕ ರಕ್ತದೊತ್ತಡ.

        2. ಸಕ್ಕರೆ ಕಾಯಿಲೆ.

        3. ರಕ್ತಹೀನತೆ.

        4. ಗರ್ಭಾವಸ್ಥೆಯಲ್ಲಿ ರಕ್ತಸ್ರಾವವಾಗುವುದು-ಮಾಸು ಗರ್ಭಕೋಶದ ಕೆಳಭಾಗದಲ್ಲಿರುವುದರಿಂದಾಗಿ, ಅಥವಾ ಹೆರಿಗೆ ಮುನ್ನವೇ ಮಾಸು ಕಳಚಿಕೊಳ್ಳುವುದು.

        5. ಆ್ಯಮ್ನಿಯಾಟಿಕ್‌ ದ್ರವ ಅತಿ ಜಾಸ್ತಿ ಅಥವಾ ಅತಿ ಕಡಿಮೆ ಆಗುವುದು.

        6. ಮಗುವಿನ ಕುಂಠಿತ ಬೆಳವಣಿಗೆ.

        7. ದಿನ ತುಂಬುವ ಮುಂಚೆ ನೀರು ಹೋಗುವುದು.

        8. ದಿನ ತುಂಬುವ ಮುಂಚೆ ಹೆರಿಗೆ ನೋವು ಕಾಣಿಸಿಕೊಳ್ಳುವುದು.

        9. ಗರ್ಭದೊಳಗೆ ಶಿಶು ಮರಣ ಇತ್ಯಾದಿ...

        ಹೈರಿಸ್ಕ್ ಗುಂಪಿನ ಗರ್ಭಿಣಿ ಸ್ತ್ರೀಯರನ್ನು ಗುರುತಿಸಿದಾಗ, ಅವರು ಹೆಚ್ಚುವರಿ ತಪಾಸಣೆಗಳಿಗೆ ಒಳಗಾಗಬೇಕಾಗುತ್ತದೆ. ಅವರಿಗೆ ಹೆಚ್ಚಿನ ಆರೈಕೆಯ ಅಗತ್ಯವಿರುತ್ತದೆ. ಅವರ ಹೆರಿಗೆಯನ್ನು ಸುಸಜ್ಜಿತ ಆಸ್ಪತ್ರೆಗಳಲ್ಲಿ ನಡೆಸಬೇಕಾಗುತ್ತದೆ. ಯಾಕೆಂದರೆ ಹೆರಿಗೆ ಸಮಯದಲ್ಲಿ ಅಂಥವರಲ್ಲಿ ಕೆಲವರಿಗೆ ರಕ್ತದ ಅಗತ್ಯ ಕಂಡು ಬರಬಹುದು. ಸಿಸೇರಿಯನ್‌ ಹೆರಿಗೆಯ ಅಗತ್ಯ ಕಾಣಬಹುದು. ಇನ್ನೂ ಕೆಲವರಲ್ಲಿ ಹುಟ್ಟಿದ ಮಗುವಿಗೆ ಕೂಡಲೇ ತೀವ್ರ ನಿಗಾ ಘಟಕದಲ್ಲಿ ಶುಶ್ರೂಷೆ ಬೇಕಾಗಬಹುದು. ಹಾಗಾಗಿ ಆರೋಗ್ಯ ಕೇಂದ್ರಗಳಲ್ಲಿ ಹೈ ರಿಸ್ಕ್ ಗರ್ಭಾವಸ್ಥೆ  ಪತ್ತೆಯಾದಲ್ಲಿ, ಅಂಥ ಮಹಿಳೆಯನ್ನು ದೊಡ್ಡ ಆಸ್ಪತ್ರೆಗೆ ಕರೆದೊಯ್ದು ತಪಾಸಣೆಗೆ/ಶುಶ್ರೂಷೆಗೆ ಒಳಪಡಿಸಲಾಗುವುದು.

        ಹೈ ರಿಸ್ಕ್ ಮಹಿಳೆಯರಿಗೆ ಅವರ ರಿಸ್ಕ್ ನ ಅಂಶವನ್ನು ಹೊಂದಿಕೊಂಡು ಹೆಚ್ಚಿನ ತಪಾಸಣೆಗಳನ್ನು  ಈ ರೀತಿಯಾಗಿ ನೀಡಲಾಗುತ್ತದೆ.

        1. ತಪಾಸಣೆಗಳ ಅಂತರವನ್ನು ಕಡಿಮೆ ಮಾಡಿ, ಆಗಾಗ್ಗೆ ಅವರನ್ನು ಪರೀಕ್ಷೆಗೆ ಒಳಪಡಿಸಿ, ತೊಂದರೆ ಜಾಸ್ತಿಯಾಗಿದೆಯೇ, ಹಾಗೆಯೇ ಇದೆಯೇ ಎಂದು ನೋಡಿಕೊಳ್ಳುವುದು.

        2. ತೀವ್ರ ಶುಶ್ರೂಷೆಯ ಅಗತ್ಯ ಬಂದಾಗ ಅವರನ್ನು ದಾಖಲಿಸಿಕೊಂಡು, ದಿನ ನಿತ್ಯ ತಪಾಸಣೆ-ಶುಶ್ರೂಷೆಗೆ ಒಳಪಡಿಸುವುದು.

        ತೀವ್ರ ತಪಾಸಣೆ ಎಂದರೆ, ತಾಯಿ ಹಾಗೂ ಬೆಳೆಯುವ ಶಿಶು ಇಬ್ಬರ ಆರೋಗ್ಯದ ತಪಾಸಣೆ. ಉದಾಹರಣೆಗೆ; ಅಧಿಕ ರಕ್ತದೊತ್ತಡವಿರುವ ಮಹಿಳೆಯಲ್ಲಿ ರಕ್ತದೊತ್ತಡವನ್ನು ದಿನಕ್ಕೆ ಕೆಲವು ಬಾರಿ ಅಳೆಯಬೇಕಾಗುತ್ತದೆ. ರಕ್ತದೊತ್ತಡದಿಂದಾಗಿ ಮೂತ್ರಕೋಶ, ಲಿವರ್‌, ಕಣ್ಣಿನ ಒಳಪೊರೆ (ರೆಟಿನಾ) ಇತ್ಯಾದಿ ಅಂಗಳಿಗೆ ಹಾನಿಯಾಗಿದೆಯೇ ಎಂದು ತಿಳಿಯಬೇಕಾಗುತ್ತದೆ. ಹಾನಿ ಶುರುವಾಗಿದ್ದಲ್ಲಿ, ಅದು ಜಾಸ್ತಿಯಾಗುತ್ತಿದೆಯೇ, ಹತೋಟಿಯಲ್ಲಿದೆಯೇ ಎಂದು ಆಗಾಗ್ಗೆ ನೋಡಬೇಕಾಗುತ್ತದೆ. ಹಾನಿ ಜಾಸ್ತಿಯಾಗುತ್ತಿದ್ದಲ್ಲಿ, ಫಿಟ್ಸ್‌ ಬರಬಹುದಾದ ಲಕ್ಷಣವಿದ್ದಲ್ಲಿ, ಕೂಡಲೇ ಹೆರಿಗೆ ಮಾಡಿಸಬೇಕಾದ ಅಗತ್ಯವೂ ಬರಬಹುದು. ಇಷ್ಟೇ ಅಲ್ಲ; ರಕ್ತದೊತ್ತಡದಿಂದಾಗಿ ಮಗುವಿನ ಬೆಳವಣಿಗೆ ಕುಂಠಿತವಾಗಿದ್ದು, ಮಗುವಿನ ರಕ್ತ ಸಂಚಾರದಲ್ಲೂ ತೊಡಕು ಉಂಟಾಗಬಹುದು. ಈ ಬಗ್ಗೆ ತಿಳಿಯಲು ಅಲ್ಟ್ರಾ ಸೌಂಡ್‌ ಸ್ಕ್ಯಾನಿಂಗ್‌ ನಡೆಸಿ, ಮಗುವಿನ ಬೆಳವಣಿಗೆಯ ಮಟ್ಟವನ್ನು, ಮಗುವಿನ ಆರೋಗ್ಯವನ್ನು ಮಾಪನ ಮಾಡಲಾಗುತ್ತದೆ. ಡಾಪ್ಲರ್‌ ಅಲ್ಟ್ರಾ ಸೌಂಡ್‌ ಎಂಬ ವಿಶೇಷ ಬಗೆಯ ಸ್ಕ್ಯಾನಿಂಗ್‌ ನಡೆಸಿ, ಮಗುವಿನಲ್ಲಿ ರಕ್ತ ಸಂಚಾರಕ್ಕೆ ತೊಡಕಾಗಿದೆಯೇ, ಕೂಡಲೇ ಹೆರಿಗೆ ಮಾಡಿಸಬೇಕಾದ ಅಗತ್ಯವಿದೆಯೇ ಎಂದು ನಿರ್ಧರಿಸಲಾಗುತ್ತದೆ.
        ರಕ್ತದೊತ್ತಡದಿಂದಾಗಿ ಮೆದುಳಿನಲ್ಲಿ ಊತವಿದ್ದಲ್ಲಿ, ಅಥವಾ ರಕ್ತ ಸ್ರಾವವಾದಲ್ಲಿ ಗರ್ಭಸ್ಥ ಮಗುವಿಗೆ ಅಪಸ್ಮಾರ (ಫಿಟ್ಸ್‌) ಬರಬಹುದು. ಇದನ್ನು  (Eclampsia)  ಎನ್ನುತ್ತಾರೆ. ಫಿಟ್ಸ್‌ ಬರುವುದಕ್ಕೆ ಮುಂಚೆ ಈ ಮಹಿಳೆಯರಲ್ಲಿ ಅತಿಯಾದ ತಲೆನೋವು, ಕಣ್ಣು ಮಂಜಾಗುವಿಕೆ, ಹೊಟ್ಟೆಯ ಮೇಲು ಭಾಗದಲ್ಲಿ ನೋವು, ಮೂತ್ರ ಕಡಿಮೆಯಾಗುವುದು, ಮೈಯಲ್ಲಿ ಒಮ್ಮೆಗೆ ನೀರು ತುಂಬಿಕೊಂಡು ಊದಿಕೊಂಡಂತಾಗುವುದು-ಮುಂತಾದ ಲಕ್ಷಣಗಳು ಇರಬಹುದು. ಹಾಗಾದಲ್ಲಿ, ಯಾವುದೇ ತಿಂಗಳಿರಲಿ, ಶಿಶು ಇನ್ನೂ ಬೆಳೆದಿರದಿದ್ದರೂ ತಾಯಿಯ ಜೀವವನ್ನು ಉಳಿಸಲಿಕ್ಕಾಗಿ ಹೆರಿಗೆ ಮಾಡಿಸಬೇಕಾಗುತ್ತದೆ. ರಕ್ತದೊತ್ತಡದಿಂದಾಗಿ ಮೂತ್ರಕೋಶದ ಕಾರ್ಯಕ್ಷಮತೆ ಕುಂಠಿತವಾಗಬಹುದು. ಪಿತ್ತಕೋಶದ ತೊಂದರೆಯಿಂದಾಗಿ ಕಾಮಾಲೆ (ಜಾಂಡೀಸ್‌) ಬರಬಹುದು.HELLP Syndrome (ಕೆಂಪು ರಕ್ತ ಕಣಗಳ ನಾಶವಾಗುವಿಕೆ-ಪಿತ್ತ ಕೋಶದ ಕಾರ್ಯ ಕುಂಠಿತವಾಗುವಿಕೆ-ಪ್ಲೇಟ್‌ಲೆಟ್‌ ಕಣಗಳ ಕೊರತೆ) ಎನ್ನುವುದು ಇನ್ನೊಂದು ಮುಖ್ಯವಾದ ತೊಂದರೆ.

        ಹೆರಿಗೆ ಸಮಯದಲ್ಲಿ ಇಂತಹ ಮಹಿಳೆಯರಲ್ಲಿ ಅಧಿಕ ರಕ್ತಸ್ರಾವವಾಗುವ ಸಾಧ್ಯತೆ ಜಾಸ್ತಿ. ಕೂಡಲೇ ರಕ್ತವನ್ನು ಅವಳಿಗೆ ಒದಗಿಸದಿದ್ದಲ್ಲಿ, ರಕ್ತ ಸ್ರಾವವನ್ನು ತಡೆಯದಿದ್ದಲ್ಲಿ  ಮಹಿಳೆ ಪ್ರಜ್ಞೆ ಕಳೆದುಕೊಳ್ಳಬಹುದು. ಅವಳ ಎಲ್ಲಾ ಅಂಗಾಂಗಗಳು ಕಾರ್ಯಕ್ಷಮತೆಯನ್ನು ಕಳೆದುಕೊಳ್ಳಬಹುದು. ರಕ್ತ ಹೆಪ್ಪುಗಟ್ಟಲು ಬೇಕಾಗುವ ಅಂಶಗಳ ಕೊರತೆಯಿಂದಾಗಿ ಶರೀರದ ಎಲ್ಲೆಲ್ಲೂ ರಕ್ತ ಸ್ರಾವವಾಗತೊಡಗಿದರೆ, ಅವಳ ಜೀವಕ್ಕೆ ಬಲು ಅಪಾಯ.

        ನೀರಿನ ಅಂಶ ಕಡಿಮೆ ಇದ್ದಾಗ, ಬೆಳವಣಿಗೆ ಕುಂಠಿತವಾಗಿದ್ದಾಗ, ಹೆರಿಗೆ ಸಮಯದಲ್ಲಿ ರಕ್ತ ಸಂಚಾರಕ್ಕೆ ತಡೆಯುಂಟಾಗಿ ಮಗುವಿಗೆ ತೊಂದರೆಯಾಗಬಹುದು. ಹೆರಿಗೆ ಸಮಯ ಅದು ಮರಣ ಹೊಂದಬಹುದು ಅಥವಾ ಹುಟ್ಟಿದಾಗ ಜೀವ ಮಿಸುಕಾಡುತ್ತಿದ್ದು, ಅನಂತರ ಮರಣವನ್ನಪ್ಪಬಹುದು. ತಾಯಿಯ ತೊಂದರೆಗಳು ತೀವ್ರವಾಗಿದ್ದಾಗ, ಸರಿಯಾಗಿ ಬೆಳೆದ ಶಿಶುವಿಗೂ ತೊಂದರೆಯುಂಟಾಗಿ ಮರಣ ಹೊಂದಬಹುದು. ಇಂಥ ಸಂದರ್ಭಗಳಲ್ಲಿ ಹೆರಿಗೆಯಾಗುವಾಗ ಮಗುವಿನ ಎದೆ ಬಡಿತವನ್ನು ಸತತವಾಗಿ ಪರಿಶೀಲಿಸುತ್ತಿದ್ದು, ತೊಂದರೆ ಇದೆ ಎಂದು ಕಂಡು ಬಂದಲ್ಲಿ ಕೂಡಲೇ ಸಿಸೇರಿಯನ್‌ ಹೆರಿಗೆ ಮಾಡಿಸಲಾಗುವುದು.

        ಹೆರಿಗೆ ಅನಂತರವೂ ಈ ಮಹಿಳೆಯರು ಪೂರ್ತಿಯಾಗಿ ನಿರಾಳವಾಗಿರಲು ಸಾಧ್ಯವಿಲ್ಲ. ಅವರಲ್ಲಿ ಅಧಿಕ ರಕ್ತಸ್ರಾವ, ಹೆರಿಗೆ ಅನಂತರದ ನಂಜು, ರಕ್ತದೊತ್ತಡ ಇನ್ನೂ ಅಧಿಕವಾಗಿದ್ದು, ಅಪಸ್ಮಾರ (ಫಿಟ್ಸ್‌) ಬರುವ ಸಾಧ್ಯತೆ... ಎಲ್ಲವೂ ಇದೆ. ಹಾಗಾಗಿ ಹೆರಿಗೆ ನಂತರವೂ ಇವರ ನಿಗಾ ಅತೀ ಅಗತ್ಯ.
        ಸಕ್ಕರೆ ಕಾಯಿಲೆ ಪಿಡುಗಿನ ದೇಶಗಳ ಪೈಕಿ ನಮ್ಮ ದೇಶ ಮುಂಚೂಣಿಯಲ್ಲಿದೆ. ಹಾಗಾಗಿ, ಗರ್ಭಿಣಿ ಸ್ತ್ರೀಯರಲ್ಲೂ ಇತ್ತೀಚೆಗೆ ಸಕ್ಕರೆ ಕಾಯಿಲೆ ಸಾಮಾನ್ಯ. ಇದರಿಂದಾಗಿ ಮಗು ಅಗತ್ಯಕ್ಕಿಂತ ಜಾಸ್ತಿ ತೂಕದ್ದಾಗಿ ಬೆಳೆದರೂ, ಅದರ ಶ್ವಾಸಕೋಶ ಬೆಳವಣಿಗೆಯಾಗುವುದು ತಡವಾಗುವುದು. ಹುಟ್ಟಿದಾಗ ಈ ಮಗುವಿಗೆ ಉಸಿರಾಟ ತೊಂದರೆ, ಸಕ್ಕರೆ ಅಂಶದ ಕೊರತೆ-ಈ ಕಾರಣಗಳಿಂದಾಗಿ ಫಿಟ್ಸ್‌ ಬರಬಹುದು. ಕೆಲವೊಮ್ಮೆ ಶಿಶು ಮರಣವೂ ಆಗಬಹುದು. ಗರ್ಭಾವಸ್ಥೆಯಲ್ಲಿಯೂ ಇಂಥವರಲ್ಲಿ ಹೊಟ್ಟೆಯೊಳಗಡೆ ಶಿಶು ಮರಣ ಹೊಂದುವ ಪ್ರಸಂಗಗಳಿವೆ. ಅಲ್ಲದೆ, ತಾಯಿಯಲ್ಲಿ ಮೂತ್ರ ಸೋಂಕು, ಯೋನಿ ಮಾರ್ಗದ ಸೋಂಕುಗಳು, ಪ್ರಿಮೆಚೂರ್‌ ಹೆರಿಗೆ, ಆ್ಯಮ್ನಿಯೋಟಿಕ್‌ ದ್ರವ ಸೋರುವುದು-ಇತ್ಯಾದಿ ತೊಂದರೆಗಳು ಜಾಸ್ತಿ.

        ರಕ್ತಹೀನತೆ ಎನ್ನುವುದು ನಮ್ಮ ದೇಶದ 2/3ಕ್ಕಿಂತ ಹೆಚ್ಚು ಗರ್ಭಿಣಿ ಮಹಿಳೆಯರಲ್ಲಿ ಇರುವ ತೊಂದರೆ. ಇಂಥವರಲ್ಲಿ ಮಗುವಿನ ಬೆಳವಣಿಗೆಯಲ್ಲಿ ತೊಡಕಾಗಬಹುದು. ತಾಯಿಯೂ ಸಹ ಸಾಮಾನ್ಯವಾಗಿ ಹೆರಿಗೆ ಸಂದರ್ಭದಲ್ಲಾಗುವ ರಕ್ತ ಸ್ರಾವವನ್ನು ತಾಳಲಾರಳು. ಅವಳಿಗೆ ರಕ್ತದಾನ ಅಗತ್ಯತೆ ಇರಬಹುದು. ತೀವ್ರ ರಕ್ತಹೀನತೆ ಇದ್ದಲ್ಲಿ, ತಾಯಿಗೆ ಹೃದಯ ವೈಫ‌ಲ್ಯವೂ ಆಗಬಹುದು.

        ಗರ್ಭಾವಸ್ಥೆಯಲ್ಲಿ ಸಮಾಧಾನಕರ ತಪಾಸಣೆಯಿದ್ದು (ಎಲ್ಲವೂ ಸರಿಯಾಗಿದ್ದು), ಮಹಿಳೆ ಕಡಿಮೆ ರಿಸ್ಕ್ನವಳಾಗಿದ್ದರೂ ಒಮ್ಮೆಗೇ ಮಾಸು ಕಳಚಿ ರಕ್ತಸ್ರಾವವಾಗಿ ಮಗು ಗರ್ಭದೊಳಗೆ ಮರಣ ಹೊಂದುವುದಕ್ಕೆ   Placental abruption ಎನ್ನುತ್ತಾರೆ. ಇದನ್ನು ತಡೆಯುವುದು ಸರಿಸುಮಾರಾಗಿ ಅಸಾಧ್ಯದ ಸಂಗತಿ.

          ಎಂಬುದು ಇತ್ತೀಚಿನ ವರ್ಷಗಳಲ್ಲಿ ಕಾಣಿಸಿಕೊಂಡ ವೈರಸ್‌ಗೆ ಸಂಬಂಧಿಸಿದ ರೋಗ. ಗರ್ಭಿಣಿ ಸ್ತ್ರೀಗೆ ಈ ರೋಗ ತಗಲಿದ್ದಲ್ಲಿ, ಬಲು ಅಪಾಯ. ಇದು ಶ್ವಾಸಕೋಶಕ್ಕೆ ಸಂಬಂಧಿಸಿದ ಸೋಂಕು ಆಗಿದ್ದು, ರೋಗಿಗೆ ನೆಗಡಿ, ಕೆಮ್ಮು, ಜ್ವರ ಇದ್ದು ಗರ್ಭಿಣಿ ಮಹಿಳೆಯರಲ್ಲಿ ಇದು ಬಲು ಬೇಗ ಉಲ್ಬಣಗೊಳ್ಳುತ್ತದೆ. ಹಾಗಾಗಿ, ಗರ್ಭಿಣಿಯರು ಈ ರೀತಿ ಚಿಹ್ನೆಗಳಿದ್ದಲ್ಲಿ ತಾವೇ ಔಷಧಿ ಮಾಡುವ ಬದಲು ಕೂಡಲೆ ತಜ್ಞ ವೈದ್ಯರನ್ನು ಸಂಪರ್ಕಿಸಬೇಕು.

        ಹೈ ರಿಸ್ಕ್ ಗರ್ಭಿಣಿಯರಲ್ಲಿ ಹೆರಿಗೆ ಮಾಡಿಸಬೇಕಾದ ಅಗತ್ಯ ಬಂದಾಗ ಸಿಸೇರಿಯನ್‌ ಹೆರಿಗೆಯ ಅಗತ್ಯತೆ ಜಾಸ್ತಿ. ಮಗು ತುಂಬ  ಚಿಕ್ಕದಿದ್ದು, ಹೆರಿಗೆ ನೋವನ್ನು ತಾಳಲಾರದ ಪರಿಸ್ಥಿತಿ ಇದ್ದಲ್ಲಿ, ಅತೀ ಬೇಗ ಮಗುವನ್ನು ಹೊರಗೆ ತೆಗೆಯಬೇಕಾಗಿದ್ದು, ಹೆರಿಗೆ ನೋವು ಬಂದು ಹೆರಿಗೆಯಾಗುವಷ್ಟು ಹೊತ್ತು ಕಾಯಲು ಅವಕಾಶವಿಲ್ಲದಿದ್ದಲ್ಲಿ ಪ್ರಿಮೇಚೂರ್‌ ಹೆರಿಗೆ ಮಾಡಿಸಬೇಕಾಗಿದ್ದಲ್ಲಿ-ಹೀಗೆ ಒಂದಲ್ಲೊಂದು ಕಾರಣಕ್ಕೋಸ್ಕರ ಸಿಸೇರಿಯನ್‌ ಹೆರಿಗೆ ಬೇಕಾಗಬಹುದು.

        ಗರ್ಭಾವಸ್ಥೆಯಲ್ಲಿ ಬರುವ
        ತೊಂದರೆಗಳನ್ನು ತಡೆಯುವ ಬಗೆಗಳು

        1. ಗರ್ಭಿಣಿಯಾಗುವುದನ್ನು ವಯಸ್ಸು ಏರುವ ವರೆಗೆ ಮುಂದೂಡದೆ, 20-30 ವರ್ಷಗಳ ಮಧ್ಯೆ ಯೋಜಿಸುವುದು.

        2. ಬಸಿರಾಗುವುದನ್ನು ನಿರ್ಧರಿಸಿದಾಗ, ದಂಪತಿಗಳು ಒಂದು ಬಾರಿ ವೈದ್ಯರನ್ನು ಕಂಡು ಸಲಹೆ ಪಡೆದುಕೊಳ್ಳುವುದು. ಯಾವುದಾದರೂ ಹೈ ರಿಸ್ಕ್ (ಉದಾ: ಸಕ್ಕರೆ ಕಾಯಿಲೆ, ಬಿಪಿ, ಥೈರಾಯ್ಡ ತೊಂದರೆ, ಅಪಸ್ಮಾರ) ಅಂಶ ಇದೆಯೆಂದು ಕಂಡು ಬಂದಲ್ಲಿ, ಗರ್ಭ ಧರಿಸುವ ಮುಂಚೆಯೇ ಅದನ್ನು ತಹಬಂದಿಗೆ ತರಬೇಕು.

        3. ಬಸಿರಾಗುವ ಕೆಲವು ತಿಂಗಳುಗಳ ಮುಂಚೆ ರುಬೆಲ್ಲಾ, ಹೆಪಾಟೈಟಸ್‌ ಮುಂತಾದ ರೋಗಗಳ ತಡೆಗಾಗಿ ಇರುವ ಲಸಿಕೆಯನ್ನು ಹಾಕಿಸಿಕೊಳ್ಳಬಹುದು.

        4. ಬಸಿರಾಗುವುದನ್ನು ಯೋಜಿಸುವಾಗ, ಫೋಲಿಕ್‌ ಆ್ಯಸಿಡ್‌ ಮಾತ್ರೆಯನ್ನು ತೆಗೆದುಕೊಳ್ಳುವುದರಿಂದ, ಮಗುವಿಗೆ ಬರಬಹುದಾದ ಕೆಲವು ಅಂಗವಿಕಾರಗಳನ್ನು ತಡೆಯಬಹುದು.

        5. ಮುಖ್ಯವಾಗಿ, ಗರ್ಭಿಣಿಯಾದೊಡನೆ ತಪಾಸಣೆಗೆ ಹೋಗಿ, ಆ ಮೇಲೆ ಕಾಲ ಕಾಲಕ್ಕೆ ಗರ್ಭಿಣಿ ತಪಾಸಣೆ ಮಾಡಿಸಿಕೊಳ್ಳಬೇಕು.

        6. ಕಬ್ಬಿಣ ಸತ್ವ  ಹಾಗೂ ಕ್ಯಾಲ್ಸಿಯಂ ಅಂಶದ ಮಾತ್ರೆಗಳನ್ನು ಸರಿಯಾಗಿ ತೆಗೆದುಕೊಳ್ಳುತ್ತಿರಬೇಕು.

        7. ಮೊದಲ ತಪಾಸಣೆಯ ಸಮಯದಲ್ಲಿ, ತಮಗೆ ಯಾವುದಾದರೂ ಕಾಯಿಲೆ ಇದ್ದು, ಈಗಾಗಲೇ ಔಷಧಿ ತೆಗೆದುಕೊಳ್ಳುತ್ತಿದ್ದಲ್ಲಿ  ಅದರ ವಿವರಗಳನ್ನು ಒದಗಿಸಬೇಕು.

        8. ಆಸ್ಪತ್ರೆ - ಹೆರಿಗೆಯನ್ನು ಯೋಜಿಸಿಕೊಳ್ಳಬೇಕು.

        9. ಗರ್ಭಿಣಿ ಸ್ತ್ರೀಯರು ಸಾಧ್ಯವಾದಷ್ಟು ಕೆಮ್ಮು, ಜ್ವರ, ದಡಾರ, ಕೋಟ್ಲೆ ಇರುವವರ ಬಳಿ ಹೋಗಕೂಡದು.

        ತಾಯ್ತನದ ವೇಳೆ ಮರಣ ಎಂಬುದು ತಡೆಯಲೇಬೇಕಾದ ಒಂದು ಪಿಡುಗು. SRS (sample registration system 2007-2009) ಅಂಕಿ ಅಂಶಗಳ ಪ್ರಕಾರ, ಭಾರತದಲ್ಲಿ ಸರಾಸರಿ ತಾಯ್ತನದ ಮರಣ ಒಂದು ಲಕ್ಷ ಸಜೀವ ಶಿಶುಗಳಿಗೆ 212. ದಕ್ಷಿಣ ರಾಜ್ಯಗಳ ಪೈಕಿ ನಮ್ಮ  ರಾಜ್ಯವನ್ನು ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳು ಈ ಪ್ರಮಾಣವನ್ನು 100/100000 ಸಜೀವ ಶಿಶು ಹೆರಿಗೆಗಿಂತ ಕಡಿಮೆ ಮಟ್ಟಕ್ಕೆ ಇಳಿಸಿವೆ. ನಮ್ಮ ರಾಜ್ಯ (178/100000 ಸಜೀವ ಶಿಶು ಹೆರಿಗೆ) ಇದರಲ್ಲಿ ಸಾಕಷ್ಟು ಹಿಂದುಳಿದಿದೆ. ಸರಿಯಾಗಿ ತಪಾಸಣೆಗೆ ಒಳಗಾಗದಿರುವುದು ತಾಯ್ತನದ ಮರಣಕ್ಕೆ ಒಂದು ಮುಖ್ಯ ಕಾರಣವೆಂಬುದು ಸಾಬೀತಾದ ವಿಷಯ. ಗರ್ಭಿಣಿ ಸ್ತ್ರೀಯರ ತಪಾಸಣೆ  (antenatal careಎಂಬ ವ್ಯವಸ್ಥೆ-ಗರ್ಭಿಣಿ ಸ್ತ್ರೀಯರು ಖಂಡಿತವಾಗಿಯೂ ಒಳಗಾಗಲೇಬೇಕಾದ ತಪಾಸಣೆ. ಸುಮಾರು 7 ತಿಂಗಳ ಕಾಲ ತಿಂಗಳಿಗೊಮ್ಮೆ ತಪಾಸಣೆ ಮಾಡುತ್ತಿದ್ದು, ಅನಂತರ 2 ವಾರಕ್ಕೊಮ್ಮೆ ಹಾಗೂ ಕೊನೆಯ ತಿಂಗಳಲ್ಲಿ ವಾರಕ್ಕೊಮ್ಮೆ ಗರ್ಭಿಣಿ ಸ್ತ್ರೀಯರು ತಪಾಸಣೆ ನಡೆಸಿಕೊಳ್ಳಬೇಕು. ಮೊದಲೇ ಹೇಳಿದಂತೆ, ಹೈರಿಸ್ಕ್ನವರ ತಪಾಸಣೆ ಇನ್ನೂ ಜಾಸ್ತಿ ಬಾರಿ ನಡೆಯಬೇಕಾಗಬಹುದು. ಆರೋಗ್ಯ ಕೇಂದ್ರಗಳಲ್ಲಿ ಹೈ ರಿಸ್ಕ್ ಎಂದು ಗುರುತಿಸಲ್ಪಟ್ಟಿದ್ದರೆ, ನಿಗದಿತ ತಿಂಗಳುಗಳಲ್ಲಿ ಸುಸಜ್ಜಿತ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು. ಅಗತ್ಯ ಬಿದ್ದಾಗ ಅಲ್ಲಿಯೇ ತಪಾಸಣೆ ಮುಂದುವರಿಸಬೇಕು ಹಾಗೂ ದಾಖಲಾತಿಯ ಸಂದರ್ಭಗಳು ಬಂದರೆ ಅದಕ್ಕೂ ತಯಾರಾಗಿರಬೇಕು.

        ತಮ್ಮ ಗರ್ಭಾವಸ್ಥೆಯ ಸರಿಯಾದ ನಿರ್ವಹಣೆಯಲ್ಲಿ ಗರ್ಭಿಣಿ ಸ್ತ್ರೀಯರ ಪಾತ್ರವೂ ಬಲು ಮುಖ್ಯ. ಸಮಯಕ್ಕೆ ಸರಿಯಾಗಿ ತಪಾಸಣೆಗೆ ಒಳಗಾಗದಿದ್ದರೆ, ತೊಂದರೆಗಳಿದ್ದಲ್ಲಿ ಅವು ಪತ್ತೆಯಾಗುವುದು
        ನಿಧಾನವಾಗಬಹುದು. ಕೊನೆಯ 3 ತಿಂಗಳುಗಳಲ್ಲಿ ಗರ್ಭಿಣಿ ಸ್ತ್ರೀಯರು ಗರ್ಭಾವಸ್ಥೆಯ ಎಚ್ಚರಿಕೆಯ ಚಿಹ್ನೆಗಳ ಬಗ್ಗೆ ಅರಿತಿದ್ದು, ಆ ಬಗ್ಗೆ ಗಮನವಿಟ್ಟಿರಬೇಕು.

        ಗರ್ಭಿಣಿ ಸ್ತ್ರೀಯರ ತಪಾಸಣೆಯನ್ನು ಹೆಚ್ಚಿಸುವುದು, ಸಾಂಸ್ಥಿಕ ಹೆರಿಗೆಗಳ ಮಟ್ಟವನ್ನು ವೃದ್ಧಿಸುವುದು, ನುರಿತ ದಾದಿಯರ ಸಂಖ್ಯೆಯನ್ನು ಹೆಚ್ಚಿಸುವುದು-ಈ ಮುಂತಾದ ಉದ್ದೇಶಗಳನ್ನು ಇಟ್ಟುಕೊಂಡು ಸರಕಾರವು ಜನನಿ ಸುರಕ್ಷಾ ಯೋಜನೆ, ತಾಯಿ ಭಾಗ್ಯ, ಮಡಿಲು ಯೋಜನೆ... ಇತ್ಯಾದಿ ಯೋಜನೆಗಳನ್ನು ಹಮ್ಮಿಕೊಂಡಿದೆ. ತಾಯ್ತನದ

        ಮರಣ ಪ್ರಮಾಣವನ್ನು ಕಡಿಮೆಗೊಳಿಸಲು ಸರಕಾರ ಹಾಗೂ ಸರಕಾರೇತರ ಸಂಸ್ಥೆಗಳು ಪ್ರಯತ್ನಿಸುತ್ತಲೇ ಇವೆ. ಸಮಾಜವೂ ಅದಕ್ಕೆ ಸ್ಪಂದಿಸಿ ಈ ಕಾರ್ಯಕ್ರಮಗಳು ಫ‌ಲಕಾರಿಯಾಗಲು ಸಹಕಾರಿಯಾದಲ್ಲಿ ಅದು ಬಹಳ ಪರಿಣಾಮಕಾರಿಯಾಗಬಲ್ಲದು.

        ಗರ್ಭಾವಸ್ಥೆಯಲ್ಲಿ
        ಗಮನವಿರಿಸಬೇಕಾದಂಥ
        ಎಚ್ಚರಿಕೆಯ ಚಿಹ್ನೆಗಳು:


        1. ಮಗುವಿನ ಚಲನೆ ಕಡಿಮೆ ಯಾಗುವುದು.

        2. ಹೊಟ್ಟೆನೋವು ಕಾಣಿಸಿಕೊಳ್ಳುವುದು.

        3. ರಕ್ತಸ್ರಾವ.

        4. ನೀರು ಸ್ರಾವವಾಗುವುದು (ಆ್ಯಮ್ನಿಯಾಟಿಕ್‌ ಚೀಲ ಒಡೆದು ಸ್ರಾವವಾಗುವುದು)

        5. ಅತಿಯಾದ ತಲೆನೋವು, ಕಣ್ಣು ಮಂಜಾಗುವಿಕೆ, ಹೊಟ್ಟೆಯ ಮೇಲು ಭಾಗದಲ್ಲಿ ನೋವು, ಮೂತ್ರ ಕಡಿಮೆಯಾಗುವುದು, ಮೈಯಲ್ಲಿ ಒಮ್ಮೆಗೇ ನೀರು ತುಂಬಿಕೊಂಡು ಊದಿಕೊಂಡಂತಾಗುವುದು.

        ಗರ್ಭಸ್ಥ ಶಿಶುವಿನ ಚಲನ
        ವಲನಗಳನ್ನು
        ನೋಡಿಕೊಳ್ಳುವ ಬಗ್ಗೆ

        -ಗರ್ಭಾವಸ್ಥೆಯ 7 ತಿಂಗಳುಗಳ ನಂತರ, ಮಹಿಳೆ ಶಿಶುವಿನ ಚಲನೆಯ ಕಡೆ ಕೂಡ ಗಮನವಿರಿಸಬೇಕು. ಮೂರು ಹೊತ್ತು ಊಟವಾದ ಮೇಲೆ ಒಂದೊಂದು ಗಂಟೆ ಕಾಲ ಎಷ್ಟು ಚಲನೆಯಾಗಿದೆ ಎಂದು ಗುರುತಿಡಬೇಕು. ಒಂದು ಗಂಟೆಯಲ್ಲಿ 3-4 ಚಲನೆಯಾಗಿದ್ದು, ದಿನದಲ್ಲಿ ಕನಿಷ್ಠ 10 ಬಾರಿ ಮಗುವಿನ ಚಲನೆಯಾದಲ್ಲಿ ಅದು ಸಮಾಧಾನಕಾರಿ. ಚಲನೆ ಕಡಿಮೆ ಎಂದೆನಿಸಿದಲ್ಲಿ, ಕೂಡಲೇ ತಪಾಸಣೆ ಮಾಡಿಸಿಕೊಳ್ಳಬೇಕು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      ಪೋಸ್ಟ್‌ ಹಪೆìಟಿಕ್‌ ನ್ಯುರಾಲ್ಜಿಯಾ ಅಂದರೆ, ಸರ್ಪಸುತ್ತಿನ ನಂತರ ನರಗಳಲ್ಲಿ ಕಾಣಿಸಿಕೊಳ್ಳುವ ನೋವು. ಇದನ್ನು ಸರ್ಪಸುತ್ತಿನ ನಂತರದ ನರವೇದನೆ ಎಂದು ಕರೆಯಬಹುದು..
      • ಈ ವಿಭಾಗದಲ್ಲಿಯೂ ಇದೆ
      • picಆರೋಗ್ಯಶಾಲಿ ಹೃದಯ - ಆನಂದಮಯ ಹೃದಯ
        ಜಗತ್ತಿನಾದ್ಯಂತ ಲಕ್ಷಾಂತರ ಸ್ತ್ರೀ-ಪುರುಷರ ಮರಣಕ್ಕೆ ಕಾರಣವಾಗುತ್ತಿರುವ ಹೃದಯದ ಕಾಯಿಲೆಗಳನ್ನು ತಗ್ಗಿಸುವಲ್ಲಿ ಆರೋಗ್ಯಕರ ಆಹಾರಗಳ ಆಯ್ಕೆಯು ಗಮನಾರ್ಹ ಪಾತ್ರವನ್ನು ವಹಿಸಬಹುದು..
      • Copyright @ 2009 Udayavani.All rights reserved.
      • Designed & Hosted By 4cplus