Udayavani | Jun 08, 2012
ನಾಯಕ ಶ್ರವಂತ್ ತಂದೆ ನನಗೆ ತುಂಬಾ ಹತ್ತಿರದ ಪರಿಚಯ. ಹಾಗಾಗಿ ಶ್ರವಂತ್‌ನನ್ನು ನಾನು ಚಿಕ್ಕವಯಸ್ಸಿನಿಂದ ನೋಡಿದ್ದೇನೆ. ಮನೀಶ್ ಕೂಡಾ ತುಂಬಾ ಉತ್ಸಾಹದ ಯುವಕ. ಇಬ್ಬರೂ ಸೇರಿ ಈಗ ನಾವಿಕ ಎಂಬ ಸಿನಿಮಾ ಮಾಡಿದ್ದಾರೆ. ಈ ಹುಡುಗರ ಉತ್ಸಾಹಕ್ಕೆ ಫಲ ಸಿಗಲಿ' ಎಂದು ಹಾರೈಸಿದರು ಸಾ.ರಾ. ಗೋವಿಂದು.
ಕಳೆದ ವಾರವಷ್ಟೇ ನಿರ್ದೇಶಕ ಸೇನ್ ಪ್ರಕಾಶ್ ಅವರ "ಅಂಬರ' ಚಿತ್ರದ ಮುಹೂರ್ತ ನಡೆದಿತ್ತು. ಈ ವಾರ "ನಾವಿಕ'. ಇದು ಕೂಡಾ ಅವರದ್ದೇ ನಿರ್ದೇಶನದ ಚಿತ್ರ. ಸದ್ದಿಲ್ಲದೇ ಸೆಟ್ಟೇರಿದೆ. ಇತ್ತೀಚೆಗೆ ಚಿತ್ರದ ಧ್ವನಿಸುರುಳಿ ಬಿಡುಗಡೆಯಾಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಬಹುತೇಕರನ್ನು ಅಲ್ಲಿಗೆ ಆಹ್ವಾನಿಸಲಾಗಿತ್ತು. ಮಂಡಳಿ ಅಧ್ಯಕ್ಷ ಕೆ.ವಿ.ಚಂದ್ರಶೇಖರ್, ಸಾ.ರಾ.ಗೋವಿಂದು, ಜೋಸೆಫ್.. ಹೀಗೆ ಎಲ್ಲಾ ಜೊತೆಯಾಗಿ ಸೇರಿ ಧ್ವನಿಸುರುಳಿ ಬಿಡುಗಡೆ ಮಾಡಿದರು. "ನಾಯಕ ಶ್ರವಂತ್ ತಂದೆ ನನಗೆ ತುಂಬಾ ಹತ್ತಿರದ ಪರಿಚಯ. ಹಾಗಾಗಿ ಶ್ರವಂತ್‌ನನ್ನು ನಾನು ಚಿಕ್ಕವಯಸ್ಸಿನಿಂದ ನೋಡಿದ್ದೇನೆ. ಮನೀಶ್ ಕೂಡಾ ತುಂಬಾ ಉತ್ಸಾಹದ ಯುವಕ. ಇಬ್ಬರೂ ಸೇರಿ ಈಗ ನಾವಿಕ ಎಂಬ ಸಿನಿಮಾ ಮಾಡಿದ್ದಾರೆ. ಈ ಹುಡುಗರ ಉತ್ಸಾಹಕ್ಕೆ ಫಲ ಸಿಗಲಿ' ಎಂದು ಹಾರೈಸಿದರು ಸಾ.ರಾ. ಗೋವಿಂದು. ನಿರ್ದೇಶಕ ಸೇನ್ ಪ್ರಕಾಶ್ ಅಂದು ಜಾಸ್ತಿ ಮಾತನಾಡಲಿಲ್ಲ. "ಅಂಬರ ನನ್ನ ಎರಡನೇ ಸಿನಿಮಾ. ಅದಕ್ಕೂ ಮೊದಲೇ ನಾವಿಕ ಆರಂಭಿಸಿದ್ದೆ. ಈಗ ಅದರ ಬಿಡುಗಡೆಗೆ ಸಿದ್ಧತೆಗಳು ನಡೆಯುತ್ತಿವೆ' ಎಂದಷ್ಟೇ ಹೇಳಿ ಮಾತು ಮುಗಿಸಿದರು.
ಅಂದಹಾಗೆ, ಕಿರುತೆರೆ ನಿರೂಪಕರಾದ ಶ್ರವಂತ್ ಹಾಗೂ ಮನೀಶ್ ಈ ಚಿತ್ರದ ನಾಯಕರು. ಈಗಾಗಲೇ ಒಂದೆರಡು ಚಿತ್ರಗಳಲ್ಲಿ ಇವರಿಬ್ಬರು ನಟಿಸಿದ್ದರೂ ಅದೃಷ್ಟ ಕೈ ಹಿಡಿದಿರಲಿಲ್ಲ. ಈಗ "ನಾವಿಕ' ಮೂಲಕ ಮತ್ತೂಮ್ಮೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಶ್ರವಂತ್ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಅದಕ್ಕೆ ಕಾರಣ ಮನೀಶ್ ಎಂಬುದು ಶ್ರವಂತ್ ಮಾತು. ಮನೀಶ್ ನೆಗಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. "ನಾವಿಕ' ಚಿತ್ರಕ್ಕೆ ಸಂಗೀತ ರಾಜ್ ನಾರಾಯಣ್ ಸಂಗೀತ ನೀಡಿದ್ದಾರೆ. ಇಂದಿನ ಪ್ರೇಕ್ಷಕ ವರ್ಗ ಇಷ್ಟಪಡುವ ಹಾಡುಗಳು ಈ ಚಿತ್ರದಲ್ಲಿದ್ದು ನಿರ್ದೇಶಕರು ತುಂಬಾ ಸಹಕರಿಸಿದ್ದರು ಎಂಬುದು ಅವರ ಮಾತು. ಉಳಿದಂತೆ ಗ್ರೀನ್‌ಹೌಸ್‌ನಲ್ಲಿ ಜನಜಾತ್ರೆ ನೆರೆದಿತ್ತು. ಚಿತ್ರತಂಡಕ್ಕೆ ಸಂಬಂಧಿಸಿದ ಎಲ್ಲರೂ ಕುಟುಂಬ ಸಮೇತರಾಗಿ ಬಂದಂತ್ತಿತ್ತು. ನಾಯಕರಿಬ್ಬರೂ ಮೂಲತಃ ನಿರೂಪಕರಾಗಿದ್ದರಿಂದ ಮಾತು ಮಾತು ಮತ್ತು ಮಾತು.